ಭಾರತದಲ್ಲಿ ಅವಕಾಶಗಳು

ಬರಹ : ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು

ಭಾರತವು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಬಡತನ, ನಿರುದ್ಯೋಗ, ಅನಕ್ಷರತೆ, ಬಾಲ್ಯವಿವಾಹ ಮುಂತಾದ ಹತ್ತು ಹಲವು ಸಾಮಾಜಿಕ ಪಿಡುಗುಗಳಿಂದ ನಲುಗಿತ್ತು. ಕೆಲವರನ್ನು ಬಿಟ್ಟರೆ ಉಳಿದವರಿಗೆ ಶಿಕ್ಷಣ ಗಗನ ಕುಸುಮವೇ ಆಗಿತ್ತು. ಜಿಲ್ಲೆಯಲ್ಲಿ ಒಂದೆರಡು ಕಾಲೇಜುಗಳು, ಬೆರಳೆಣಿಕೆಯಷ್ಟು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕೇಂದ್ರಗಳಿದ್ದವು. ಕ್ರಮೇಣ ಸರಕಾರ ಹಾಗೂ ಅನೇಕ ಗಣ್ಯ ಮಹನೀಯರು ಅಲ್ಲಲ್ಲಿ ಶಾಲಾ – ಕಾಲೇಜುಗಳನ್ನು ಪ್ರಾರಂಭಿಸಿದರು. ಮುಖ್ಯವಾಗಿ ಉಳ್ಳವರಿಗೆ ಮಾತ್ರ ಎಂಬತಿದ್ದ ಶಿಕ್ಷಣ ಸಾರ್ವತ್ರೀಕರಣಗೊಂಡು ಕಡು ಬಡವರು ಕೂಡಾ ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯವಾಯಿತು.

ನನಗೆ ಈಗಲೂ ನೆನಪಿದೆ. ನನ್ನ ತಂದೆ ರತ್ನವರ್ಮ ಹೆಗ್ಗಡೆಯವರು ಶಾಲೆಗಳನ್ನು ಆರಂಭಿಸಿದಾಗ ಅನೇಕರು ಶಿಕ್ಷಣ ಪಡೆಯುವುದಕ್ಕಾಗಿ ಸಹಾಯ ಕೋರಿ ಬೀಡಿಗೆ ಬರುತ್ತಿದ್ದರು. ಶಿಕ್ಷಣಾರ್ಥಿಗಳ ಅಧ್ಯಯನ ವಿಷಯಕ್ಕೆ ಅನುಗುಣವಾಗಿ ಸಹಾಯವನ್ನೂ ಮಾಡಲಾಗುತ್ತಿತ್ತು. ಅನೇಕರು ದಿನಕ್ಕೆ ಒಂದೇ ಹೊತ್ತು ಊಟ ಮಾಡಿಕೊಂಡು ಬಹಳ ಕಷ್ಟದಿಂದ ಶಿಕ್ಷಣವನ್ನು ಪಡೆದಿದ್ದರು. ಅದೆಷ್ಟೋ ಜನರಿಗೆ ಶಾಲೆ – ಕಾಲೇಜಿಗೆ ತೆರಳುವಾಗ ತೊಡಲು ಸರಿಯಾದ ಬಟ್ಟೆ ಇರಲಿಲ್ಲ. ಇವೆಲ್ಲವನ್ನು ಕಂಡು ಐದು ದಶಕಗಳ ಹಿಂದೆಯೇ ಮುಖ್ಯವಾಗಿ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆoಬ ಕಾರಣಕ್ಕಾಗಿ ಶ್ರೀಕ್ಷೇತ್ರದ ವತಿಯಿಂದ ಹಳ್ಳಿಯಾಗಿದ್ದ ಉಜಿರೆಯಲ್ಲಿ ಶಿಕ್ಷಣ ಕೇಂದ್ರಗಳನ್ನು ಆರಂಭಿಸಿದೆವು. ಹೀಗೆಯೇ ನಾಡಿನೆಲ್ಲೆಡೆ ಅನೇಕ ಶಿಕ್ಷಣ ಸಂಸ್ಥೆಗಳು ಆರಂಭಗೊoಡು ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದವು.


ಮುಖ್ಯವಾಗಿ ಇಂಜಿನಿಯರಿoಗ್, ವೈದ್ಯಕೀಯ, ಕಾನೂನು ಮುಂತಾದ ಶಿಕ್ಷಣಗಳಿಗಾಗಿ ನಗರಗಳಿಗೆ ಅಥವಾ ದೂರದ ಮದ್ರಾಸು, ಬನಾರಸ್ (ಕಾಶಿ) ಮುಂತಾದ ಕಡೆ ಹೋಗಬೇಕಿತ್ತು. ಅನುಕೂಲಸ್ಥರು ಮಾತ್ರವೇ ಇಂತಹ ಶಿಕ್ಷಣ ಪಡೆಯಲು ಸಾಧ್ಯವಾಗಿತ್ತು. ಆದರೆ ಇಂದು ಸರಕಾರ ಮತ್ತು ಖಾಸಗಿಯವರ ಸಹಕಾರದಿಂದ ಉನ್ನತ ಶಿಕ್ಷಣಾಭ್ಯಾಸವು ನಮ್ಮ ನಾಡಿನಲ್ಲೇ ದೊರೆಯುವಂತೆ ಆಯಿತು. ಮಾತ್ರವಲ್ಲದೆ ತರಕಾರಿ ಮಾರುವವರ ಮಕ್ಕಳು, ಕೃಷಿಕರು, ಕೂಲಿ ಕಾರ್ಮಿಕರು ಮುಂತಾದ ಮಧ್ಯಮ, ಬಡ ಆರ್ಥಿಕ ವರ್ಗದ ಜನರ ಮಕ್ಕಳೂ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಯಿತಲ್ಲದೆ ರ‍್ಯಾಂಕ್‌ಗಳನ್ನು ಪಡೆಯುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ.


ಶಿಕ್ಷಣದಿಂದಾಗಿ ಅವಕಾಶಗಳು ನಿರ್ಮಾಣವಾದುವು. ಹಾಗೆಯೇ ಅವಕಾಶಗಳ ನಿರ್ಮಾಣ ಎಂಬುದು ಬರೀ ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಉದ್ಯೋಗ, ವ್ಯವಹಾರ, ವ್ಯಾಪಾರ, ತಂತ್ರಜ್ಞಾನ, ಸಂಶೋಧನೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸರಕಾರ ಹಾಗೂ ಖಾಸಗಿಯಾಗಿ ಅವಕಾಶಗಳು ಸೃಷ್ಟಿಯಾಗುತ್ತಿವೆ. ಸ್ವ ಉದ್ಯೋಗಗಳಿಗೆ ಸಾಲ, ಪ್ರೋತ್ಸಾಹಧನ, ಸಹಾಯಧನ ನೀಡುವ ಮೂಲಕ ಬಲ ತುಂಬಲಾಗುತ್ತಿದೆ. ದೊಡ್ಡ ದೊಡ್ಡ ಉದ್ಯಮಿಗಳಿಗೆ ಉದ್ಯೋಗಗಳನ್ನು ಸೃಷ್ಟಿಸಲು ಅವಕಾಶಗಳನ್ನು, ಪೂರಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹೀಗೆ ಒಂದಕ್ಕೊoದು ಪೂರಕವಾಗಿ ಅವಕಾಶಗಳು ನಿರ್ಮಾಣವಾಗುತ್ತಾ ಅಭಿವೃದ್ಧಿಗೆ ಸಹಾಯಕವಾಗಿವೆ.


ಇಂದಿನ ದಿನಗಳಲ್ಲಿ ಜನರಲ್ಲಿ ಸಾಕಷ್ಟು ಅರಿವು ಮೂಡಿದ್ದು, ಚಿಕ್ಕ ಕುಟುಂಬ ಹೊಂದುವ ಮೂಲಕ ಸುಖೀ ಕುಟುಂಬವನ್ನು ನಡೆಸುತ್ತಿದ್ದಾರೆ. ಪುರುಷರು ಮತ್ತು ಮಹಿಳೆಯರು ಸಮನಾಗಿ ದೇಶದ ಅಭಿವೃದ್ಧಿಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತೊಡಗಿಕೊಂಡಿದ್ದಾರೆ. ಮಹಿಳೆಯರು ಕೂಡ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಇಂಜಿನಿಯರಿoಗ್, ಕೃಷಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮಿಂಚುತ್ತಿದ್ದಾರೆ. ಮುಖ್ಯವಾಗಿ ಮಹಿಳೆಯರು ಸಬಲರಾಗುತ್ತಿದ್ದಾರೆ. ಗಂಡಿಗೆ ಸಮನಾಗಿ ಹೆಣ್ಣು ಮನೆಯ ನಿರ್ವಹಣೆ ಮಾಡಬಲ್ಲಳು, ಆರ್ಥಿಕ ವ್ಯವಹಾರ ನಡೆಸಬಲ್ಲಳು, ಸ್ವತಂತ್ರವಾಗಿ ಬಾಳಬಲ್ಲಳು. ಸ್ವಾತಂತ್ರ್ಯ ಪಡೆದ ಕಾಲದಲ್ಲಿ ಬಾಲ್ಯ ವಿವಾಹ ಹೆಣ್ಣು ಮಕ್ಕಳಿಗೆ ಕಂಟಕವಾಗಿ ಪರಿಣಮಿಸಿತ್ತು. ಶಿಕ್ಷಣವಂತೂ ಮರೀಚಿಕೆಯೇ ಆಗಿತ್ತು. ಮನೆಯಲ್ಲಾಗಲಿ, ಸಮಾಜದಲ್ಲಾಗಲಿ ಮಹಿಳೆಗೆ ಗೌರವಾದರಗಳು, ಮನ್ನಣೆಗಳು ದೊರೆಯುತ್ತಿರಲಿಲ್ಲ. ಅಂತಹ ಸ್ಥಿತಿ ಹೊಂದಿದ್ದ ಭಾರತದಲ್ಲಿ ಇಂದು ರಾಷ್ಟçದ ಪ್ರಥಮ ಪ್ರಜೆಯಾಗಿ ಮಹಿಳೆಯೇ ನೇಮಕವಾಗಿರುವುದು ಹೆಮ್ಮೆಯ ಸಂಗತಿ.


ದೇಶದ ಅಭಿವೃದ್ಧಿ, ಅವಕಾಶಗಳ ನಿರ್ಮಾಣದಲ್ಲಿ ಸಂವಹನ ಹಾಗೂ ಮಾಧ್ಯಮಗಳೂ ಮಹತ್ವದ ಪಾತ್ರ ವಹಿಸಿವೆ. ಸ್ವಾತಂತ್ರ್ಯಪಡೆಯುವಲ್ಲಿಯೂ ಪತ್ರಿಕೆಗಳು ವಿಶೇಷ ಪಾತ್ರ ವಹಿಸಿವೆ. ಜನರಲ್ಲಿ ಸ್ವಾತಂತ್ರ್ಯಕಿಚ್ಚಿಗೆ ಪ್ರೇರಣೆ ನೀಡಿದ್ದವು. ದೇಶದ ನಾಗರಿಕರನ್ನು ಒಟ್ಟುಗೂಡಿಸಿದ್ದವು. ರಾಷ್ಟç ನಾಯಕರ ಸಂದೇಶಗಳನ್ನು ಜನಮಾನಸದಲ್ಲಿ ಬಿತ್ತಿ ದೇಶಭಕ್ತಿಯನ್ನು ತುಂಬಿದ್ದವು. ಪತ್ರಿಕೆ, ದೃಶ್ಯ ಮಾಧ್ಯಮ ಮತ್ತು ಸಂಪರ್ಕ ಕ್ರಾಂತಿಯಿoದಾಗಿ ಸರಕಾರದ ಸೌಲಭ್ಯ, ಸೌಕರ್ಯ, ಯೋಜನೆಗಳ ಮಾಹಿತಿಗಳೆಲ್ಲ ಸುಲಭವಾಗಿ ಫಲಾನುಭವಿಗಳಿಗೆ ದೊರೆಯಿತು. ಮನೆ, ಗ್ರಾಮಗಳಿಗೆ ಸೀಮಿತಗೊಂಡಿದ್ದ ಜನರು ಹೊರಪ್ರಪಂಚವನ್ನು ಕಾಣುವಂತಾದರು. ಶಿಕ್ಷಣ, ಉದ್ಯೋಗ, ಸೇವೆ ಮುಂತಾದ ಕಾರಣಗಳಿಗಾಗಿ ದೇಶಾದ್ಯಂತ ಪ್ರಯಾಣಿಸತೊಡಗಿದರು. ವಿವಿಧ ರಾಜ್ಯ, ಪ್ರದೇಶಗಳಲ್ಲಿ ನೆಲೆಸತೊಡಗಿದರು. ಈ ಮೂಲಕವಾಗಿ ಅನ್ಯ ಪ್ರದೇಶಗಳ ಬಗ್ಗೆ ಇದ್ದ ಭಯದ ವಾತಾವರಣ ದೂರವಾಗಿ ನಮ್ಮ ದೇಶವೆಂಬ ಅತ್ಯಾಪ್ತ ಭಾವನೆ ಬೆಳೆಯಿತು. ಇದರಿಂದಾಗಿ ಸಾಕಷ್ಟು ಅವಕಾಶಗಳು ಸೃಷ್ಟಿಯಾದವು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates