ಸ್ವಾತಂತ್ರ್ಯ ಸೇನಾನಿಗಳನ್ನು ನೆನೆಯೋಣ!

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು

ಎಪ್ಪತ್ತನಾಲ್ಕು ವರ್ಷಗಳನ್ನು ಪೂರೈಸಿ ಎಪ್ಪತ್ತೈದನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಸಂಭ್ರಮದಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾನಿಗಳನ್ನು ನೆನೆಯಬೇಕಾದುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯು ಹೌದು. ಇಂದು ನಾವು ಸ್ವತಂತ್ರವಾಗಿ ಬದುಕಿದ್ದರೆ ಅದರ ಹಿಂದೆ ಸಾವಿರಾರು ಮಂದಿಯ ಬಲಿದಾನ, ತ್ಯಾಗವಿದೆ. ಸಂಘಟನಾತ್ಮಕ ಹೋರಾಟವಿದೆ. ನಮ್ಮ ಹಿರಿಯರ ಐತಿಹಾಸಿಕ ವಿಜಯದ ಕೊಡುಗೆಯೇ ನಮ್ಮ ವರ್ತಮಾನದ ಸಂಭ್ರಮ. ಆ ಕಾಲದಲ್ಲಿ ನಮ್ಮ ಹಿರಿಯರು ಮಾಡಿದ ತ್ಯಾಗ ಎಷ್ಟಿತ್ತು, ಅವರ ಬದುಕಿನ ಸುಖ – ದುಃಖ, ಬವಣೆ ಇತ್ಯಾದಿಗಳೆಲ್ಲ ಹೇಗಿತ್ತು ಎನ್ನುವುದನ್ನು ತಿಳಿದುಕೊಳ್ಳದಿದ್ದರೆ ಇಂದಿನ ಸುಖಕ್ಕೆ ಬೆಲೆಯೇ ಇರುವುದಿಲ್ಲ.
ಏ ಮೇರೇ ವತನ್ ಕೆ ಲೋಗೋ
ತುಮ್‌ಕೂಬ್ ಲಗಾಲೋ ನಾರಾ
ಯೇ ಶೂಭ್ ದಿನ್ ಹೈ ಹಮ್ ಸಬ್ ಕಾ
ಲಹಾರಾ ಲೋ ತಿರಂಗ ಪ್ಯಾರಾ…
ಏ ಮೇರೆ ವತನ್ ಕೆ ಲೋಗೋ
ಜರಾ ಆಂಖ್ ಮೆ ಭರ್ ಲೋಪಾನಿ
ಜೋ ಶಹೀದ್ ಹುವೇ ಹೇ ಉನ್‌ಕೀ
ಜರಾ ಯಾದ್ ಕರೊ ಕುರಬಾನಿ…

(ಓ ನನ್ನ ದೇಶವಾಸಿಗಳೇ, ನೀವು ಜೋರಾಗಿ ಹೇಳಿರಿ ಜೈಕಾರ. ಇದು ಶುಭದಿನವಾಗಿದೆ ನಮ್ಮೆಲ್ಲರಿಗೆ. ಪ್ರೀತಿಯಿಂದ ತ್ರಿವರ್ಣ ಧ್ವಜವ ಹಾರಿಸಿರಿ…ಓ ನನ್ನ ದೇಶವಾಸಿಗಳೇ ನಿಮ್ಮ ಕಣ್ಣಂಚಲಿ ನಾಲ್ಕು ಹನಿ ನೀರು ತುಂಬಲಿ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಆ ವೀರರ ಬಲಿದಾನವನ್ನು ಸ್ಮರಿಸೋಣ)
ಕವಿ ಪ್ರದೀಪ್‌ರವರು ರಚಿಸಿದ ಈ ಹಾಡು ಜನಸಾಮಾನ್ಯರಲ್ಲೂ ದೇಶಪ್ರೇಮ ಉಕ್ಕಿಸಿತು. ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರಿಗೆ ಗೌರವ ಸಲ್ಲಿಸಲು ರಚಿಸಿದ ಈ ಹಾಡನ್ನು ಸೈನಿಕರೊಂದಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣಾರ್ಪಣೆ ಮಾಡಿದ ನಮ್ಮ ಹಿರಿಯರಿಗೂ ಸಮರ್ಪಿಸಲು ನಾನು ಬಯಸುತ್ತೇನೆ.
೧೯೪೭ರ ಹಿಂದೆ ಬ್ರಿಟಿಷರ ಆಡಳಿತ ಕಾಲದಲ್ಲಿ ಸರಿಸಮಾನವಾಗಿ ಕೆಲವು ಕಡೆ ಫ್ರೆಂಚರು, ಪೋರ್ಚುಗೀಸರು ಇತರೆ ರಾಜರು ಆಡಳಿತ ಮಾಡುತ್ತಿದ್ದರು. ಭಾರತ ದೇಶದಲ್ಲಿ ರಾಜರ ಆಡಳಿತದಲ್ಲಿ ಸಣ್ಣ ಹಾಗೂ ದೊಡ್ಡ ರಾಜ್ಯಗಳು ಇದ್ದವು. ಹೈದರಾಬಾದ್, ಜಯಪುರ, ಕಾಶ್ಮೀರ ಮುಂತಾದ ರಾಜ್ಯಗಳಲ್ಲಿ ಪ್ರಬಲವಾದ ರಾಜರಿದ್ದರು. ಆದರೆ ಅವರನ್ನು ಬ್ರಿಟಿಷರು ಮೆಟ್ಟಿ ನಿಂತು ಅವರಿಗೆ ಸರಿಯಾಗಿ ರಾಜ್ಯಭಾರ ಮಾಡಲು ಅವಕಾಶ ಕೊಡಲಿಲ್ಲ. ಕರ್ನಾಟಕದ ಮೈಸೂರಿನ ಜಯಚಾಮರಾಜ ಒಡೆಯರ್ ಅವರಿಗೂ ಸ್ವತಂತ್ರವಾಗಿ ಆಡಳಿತವನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಹಿಂದಿನ ತಲೆಮಾರಿನ ವಸ್ತುಸ್ಥಿತಿಯನ್ನು ಇಂದಿನ ಸಮಾಜ ತಿಳಿದುಕೊಳ್ಳುವ ಅಗತ್ಯ ಇದೆ.
ಸಾವಿರಾರು ವರ್ಷಗಳಲ್ಲಿ ನಮ್ಮ ದೇಶ ಬಹಳ ಹೀನ ಪರಿಸ್ಥಿತಿಯಲ್ಲಿ ಕಳೆದಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ರೀತಿಯ ಪ್ರಗತಿಯನ್ನು ಕಾಣುವ ಸಂದರ್ಭ ಇರಲಿಲ್ಲ. ಮತ್ತು ಅನೇಕ ಹಳ್ಳಿಗಳಲ್ಲಿ ಉಡಲು ಬಟ್ಟೆ, ಉಣ್ಣಲು ಅನ್ನ ಮತ್ತು ಶಿಕ್ಷಣ ಈ ಮೂರರ ಕೊರತೆಯಿತ್ತು. ಹಾಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಚಿಂತನೆಗೆ ಅವಕಾಶ ಇರಲಿಲ್ಲ. ಹೆಚ್ಚಿನ ಕುಟುಂಬಗಳಲ್ಲಿ ಕುಲಕಸುಬನ್ನು ಮಾಡುತ್ತಿದ್ದರು. ಅವರ ಸುತ್ತಮುತ್ತಲಿದ್ದ ಸೀಮಿತ ಪ್ರದೇಶದಲ್ಲಿ ಅವರು ಕುಶಲತೆ, ಜಾಣ್ಮೆಯಿಂದ ಮಾಡಿದ ಕೆಲಸವನ್ನು ಮಾರಾಟ ಮಾಡುತ್ತಿದ್ದರು. ಅಥವಾ ಬದಲಿಗೆ ಕೊಡುತ್ತಿದ್ದರು. ಹಾಗಾಗಿ ಹೊಸ ಚಿಂತನೆಯ ಕುರಿತಾಗಿ ಅವಕಾಶ ಇರಲಿಲ್ಲ. ಮಾರುಕಟ್ಟೆಯ ವಿಸ್ತಾರ ಕಲ್ಪನೆ, ವ್ಯಾಪಾರ – ವ್ಯವಹಾರಗಳ ತಂತ್ರಗಾರಿಕೆಗಳು ಇರಲಿಲ್ಲ. ಕೃಷಿಕರಿಗೆ ಕೃಷಿಯ ವಸ್ತುಗಳಿಗೆ ಬೆಲೆ ಇರಲಿಲ್ಲ. ಮತ್ತು ಯಾವುದೇ ವಸ್ತುವನ್ನು ತಯಾರಿಸುವಂತಹ ಗುಡಿ ಕೈಗಾರಿಕೆಗಳಿಗೂ ಅವಕಾಶ ಇರಲಿಲ್ಲ. ಒಂದು ಮುಡಿ (೪೨ ಕಿಲೋ) ಅಕ್ಕಿಗೆ ಒಂದು, ಎರಡು ರೂಪಾಯಿ ಇತ್ತು ಅನ್ನುವಂತಹ ಮಾತುಗಳನ್ನು ನಾವು ಕೇಳಿದ್ದೇವೆ. ಸಂಬಳವೂ ಕಡಿಮೆ ಇತ್ತು. ಹಿರಿಯರು ಕಷ್ಟದ ದಿನಗಳನ್ನು ಕಳೆದಿದ್ದಾರೆ.
ಆಡಳಿತಾತ್ಮಕ ವ್ಯವಹಾರ, ಸಂಪತ್ತಿನ ವಿಚಾರಕ್ಕೆ ಬಂದರೆ ಬ್ರಿಟಿಷರಿಗೆ ಭಾರತದಲ್ಲಿ ದೊರೆತಷ್ಟು ಹಿಡಿತ ಬೇರೆಲ್ಲಿಯೂ ಸಿಗಲಿಲ್ಲ. ಇದಕ್ಕೆ ಕಾರಣ ಏನೆಂದರೆ ಭಾರತ ಎನ್ನುವಂತಹದ್ದು ಒಂದು ದೇಶ ಎನ್ನುವ ಕಲ್ಪನೆ ಇಲ್ಲಿನ ಜನರಲ್ಲಿರಲಿಲ್ಲ. ಏನಿದ್ದರೂ ರಾಜ್ಯದ ಕಲ್ಪನೆ ಮಾತ್ರ ಇಲ್ಲಿತ್ತು. ಅರಬರು, ಮೊಘಲರು ದೇಶದ ಅನೇಕ ಕಡೆಗಳಲ್ಲಿದ್ದ ರಾಜರ ಮೇಲೆಲ್ಲ ಯುದ್ಧ ಸಾರಿ, ಸಂಪತ್ತನ್ನು ಲೂಟಿ ಮಾಡಿದಾಗಲೂ ಆಯಾ ರಾಜ್ಯದ ರಾಜರುಗಳು ಹೋರಾಟ ಮಾಡಿದ್ದರೇ ವಿನಃ ಸಂಘಟಿತರಾಗಿ ಹೋರಾಟ, ದೇಶವಾಸಿಗಳ ಹೋರಾಟ ಇಲ್ಲಿ ನಡೆದಿರಲಿಲ್ಲ. ಹಾಗಾಗಿ ಭಾರತ ದೇಶವನ್ನು ಬ್ರಿಟಿಷರು ಚೆನ್ನಾಗಿ ಲೂಟಿ ಮಾಡಿದರು. ಇಲ್ಲಿ ದೊರೆಯುವ ಎಲ್ಲ ಸಂಪನ್ಮೂಲಗಳನ್ನು ದೋಚಿ ತಮ್ಮ ದೇಶಕ್ಕೆ ಕೊಂಡೊಯ್ದರು. ಕ್ರಿ.ಶ. ೧೯೩೦ರ ಸುಮಾರು ಬ್ರಿಟಿಷರ ವಿರುದ್ಧ ಸಿಡಿದೆದ್ದ ಅನೇಕ ಪ್ರತಿಭಟನಾಕಾರರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಚಂದ್ರಶೇಖರ ಆಜಾದ್‌ರಂಥವರು ಹುತಾತ್ಮರಾದರು. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನೆಹರೂ, ವಲ್ಲಭಭಾಯ್ ಪಟೇಲ್, ಬಾಲಗಂಗಾಧರ ತಿಲಕ್ ಮುಂತಾದವರ ಮುಂದಾಳತ್ವದಲ್ಲಿ, ದೇಶಾದ್ಯಂತ ಸ್ವಾತಂತ್ರ‍್ಯ ಹೋರಾಟ ಉಗ್ರರೂಪ ತಾಳಿತು. ಗಣೇಶೋತ್ಸವ ಆಚರಣೆಯ ಮೂಲಕ ಜನರನ್ನು ಒಗ್ಗೂಡಿಸಿ, ನಾವೆಲ್ಲರೂ ಒಂದು ಎನ್ನುವ ಜಾಗೃತಿ ಮೂಡಿಸಿ ದೇಶ ಪ್ರೇಮದ ಭಾವನೆಯನ್ನು ಬಿತ್ತಿದರು. ದೇಶವನ್ನು ಸಂಘಟಿಸಬೇಕು, ಪ್ರತಿಯೊಬ್ಬ ಪ್ರಜೆಗೂ ತಾನು ದೇಶದ ಪ್ರಜೆ ಎಂದು ಅನ್ನಿಸಿದರೆ ನಮ್ಮ ಧ್ವನಿಗೆ ಶಕ್ತಿ ಬರುತ್ತದೆ ಎಂದು ಇಡೀ ಭಾರತ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಆಂದೋಲನ ನಡೆಯಿತು.
ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರನ್ನು ಒಗ್ಗೂಡಿಸಿ ಭಾರತದ ಶಕ್ತಿಯನ್ನು ಅನಾವರಣ ಮಾಡುವ ಕಿಚ್ಚನ್ನು ಹಚ್ಚಿದವರು ರಾಷ್ಟçಪಿತ ಮಹಾತ್ಮ ಗಾಂಧೀಜಿ. ಒಡೆದು ಆಳುವ ನೀತಿಯಲ್ಲಿ ಆಳ್ವಿಕೆ ನಡೆಸಿದ ಆಂಗ್ಲರ ವಿರುದ್ಧ ಒಗ್ಗಟ್ಟಿನ ಮಂತ್ರವನ್ನು ಅನುರಣಿಸುವಂತೆ ಮಾಡಿದ ಗಾಂಧೀಜಿ ಸ್ವಾತಂತ್ರ್ಯ ಸಂಗ್ರಾಮದ ದಿಕ್ಕನ್ನೇ ಬದಲಿಸಿ ಇನ್ನಷ್ಟು ವೇಗ ನೀಡಿದರು. ಅಹಿಂಸೆಯ ತತ್ವ, ಅಸಹಕಾರದ ಚಳುವಳಿಗಳ ಮೂಲಕ ಬ್ರಿಟಿಷರ ಆಕ್ರಮಣ ನೀತಿಯನ್ನು ಶಾಂತಿಯಿ0ದ ಬಗ್ಗು ಬಡಿಯಬಹುದು ಎಂಬ ಸಂದೇಶ ಸಾರಿದರು. ಒಂದೆಡೆ ಶಾಂತಿಯಿ0ದ ಬ್ರಿಟಿಷರ ವಿರುದ್ಧ ಅಸಹಕಾರ ಕಿಡಿ ದೇಶದಾದ್ಯಂತ ಗುಪ್ತಗಾಮಿನಿಯಾಗಿ ಸಂಚರಿಸಿ ಭಾರತೀಯರಲ್ಲಿ ಒಗ್ಗಟ್ಟು ಹಾಗೂ ದೇಶಪ್ರೇಮ ಉಕ್ಕಿಸಿದರೆ, ಭಗತ್ ಸಿಂಗ್, ಸುಭಾಶ್ಚಂದ್ರ ಬೋಸ್‌ರಂತವರು ಕ್ರಾಂತಿಕಾರಿ ನಡೆಯ ಮೂಲಕ ಬ್ರಿಟಿಷರ ಅಹಂಕಾರ, ಸೊಕ್ಕನ್ನು ಅಡಗಿಸಲು ಯತ್ನಿಸಿದ್ದರು. ಸ್ವಾತಂತ್ರ್ಯ ಪಡೆಯಲೇಬೇಕು ಎಂಬ ಕಿಚ್ಚಿಗೆ ಮತ್ತಷ್ಟು ಆವೇಶ ತುಂಬಿದ್ದರು. ಸಂಪರ್ಕ ಹಾಗೂ ಸಂವಹನಗಳೆಲ್ಲ ಅತಿ ಕಷ್ಟಕರವಾಗಿದ್ದ ಸಂದರ್ಭದಲ್ಲಿ ಜಪಾನ್, ಚೀನಾ ರಾಷ್ಟçದ ಜೊತೆ ಮಾತುಕತೆ ನಡೆಸಿ, ಬ್ರಿಟಿಷರ ವಿರುದ್ಧ ಹೋರಾಡಲು ಐಎನ್‌ಎ ಶಸ್ತ್ರಾಸ್ತ್ರವುಳ್ಳ ಸೈನಿಕರ ಸೈನ್ಯವನ್ನು ಕಟ್ಟಿದರು. ಹಾಗೂ ಹಲವು ಕಡೆಗಳಲ್ಲಿ ಬ್ರಿಟಿಷರ ವಿರುದ್ಧ ಶಸ್ತ್ರಾಸ್ತ್ರ ಹೋರಾಟವನ್ನೂ ಮಾಡಿದರು.
ಅಹಿಂಸೆಯ ಹೋರಾಟದಲ್ಲಿ ಲಿಂಗ, ವಯಸ್ಸು, ಭೇದವಿಲ್ಲದೆ ಎಲ್ಲರೂ ಭಾಗಿಯಾಗಿದರು. ಬಹುಶಃ ಮಹಿಳೆಯರು ಪುರುಷರಿಗೆ ಸಮನಾಗಿ ಹೋರಾಟದಲ್ಲಿ ಭಾಗಿಯಾದ ಪ್ರಥಮ ಸಂದರ್ಭವೆ0ದು ಸ್ವಾತಂತ್ರ್ಯ ಹೋರಾಟವನ್ನು ಪರಿಗಣಿಸಬಹುದು. ಗಾಂಧೀಜಿ ಸ್ವಾತಂತ್ರ್ಯ ಹೋರಾಟಕ್ಕೆ ಹೊರಟಾಗ ಕೌಮುದಿ ಎಂಬ ಪುಟ್ಟ ಹುಡುಗಿ ತನ್ನಲ್ಲಿದ್ದ ಚಿನ್ನದ ಆಭರಣವನ್ನು ಬಿಚ್ಚಿ ಗಾಂಧೀಜಿಯವರ ಕೈಗಿತ್ತಳಂತೆ. ಅದು ಪುಟ್ಟ ಹುಡುಗಿಯ ದೊಡ್ಡ ಸೇವೆಯಲ್ಲವೇ? ಸ್ವಾತಂತ್ರ್ಯ ಪ್ರಾಪ್ತಿಯ ಬಳಿಕ ಸಾಕಷ್ಟು ಮಹನೀಯರು ಹಗಲು ರಾತ್ರಿ ಎನ್ನದೆ ಶ್ರಮಿಸಿದ ಫಲವೇ ಇಂದಿನ ಸಶಕ್ತ ಭಾರತ. ಈ ಪ್ರಗತಿ ಸಾಧಿಸಲು ಕಾರಣಕರ್ತರಾದವರನ್ನು, ಬಲಿದಾನವನ್ನು ಮಾಡಿದ ನಮ್ಮ ಪೂರ್ವಜರನ್ನು ನಾವು ಎಂದಿಗೂ ಮರೆಯಬಾರದು. ಸ್ವಾತಂತ್ರ್ಯ ಭಾರತದ ಕನಸು ಕಂಡು, ಬ್ರಿಟಿಷರನ್ನು ಈ ದೇಶದಿಂದ ಓಡಿಸಬೇಕು, ನಮ್ಮ ದೇಶದ ಆಡಳಿತವನ್ನು ಪ್ರಜೆಗಳೇ ವಹಿಸಿಕೊಳ್ಳಬೇಕು ಮುಂದೆ ಪ್ರಜಾಪ್ರಭುತ್ವ ಇರಬೇಕು, ಪ್ರಜಾಪ್ರಭುತ್ವದಿಂದ ಜನರ ಆಶೋತ್ತರಗಳು ಈಡೇರಬೇಕು, ಜನತೆಗೆ ಸ್ವಾತಂತ್ರ ಬೇಕು, ಸ್ವಾತಂತ್ರ್ಯದಿ0ದ ಮಾತ್ರ ದೇಶದ ಪ್ರಗತಿ, ಪ್ರಜೆಗಳ ಪ್ರಗತಿ ಸಾಧ್ಯ ಎನ್ನುವುದನ್ನು ಪ್ರತಿಪಾದಿಸಿದವರು ಸ್ವಾತಂತ್ರ್ಯ ಭಾರತದ ಮೊದಲನೇ ತಲೆಮಾರಿನವರು. ಜನರ ನಿರೀಕ್ಷೆಗಳೇನು? ಜನರ ಬದುಕಿಗೆ ಬೇಕಾದಂತ ವ್ಯವಹಾರಗಳನ್ನು ಅವರೇ ನಿರ್ವಹಿಸುವುದು ಹೇಗೆ? ಅನ್ನುವುದನ್ನು ಜ್ಞಾನ ಪಡೆದ ಅನೇಕ ಮಹನೀಯರು ಹೇಳಿಕೊಟ್ಟರು, ದಾರಿ ತೋರಿದರು. ತಮ್ಮ ಜ್ಞಾನವನ್ನು ಮುಂದಿನ ಪೀಳಿಗೆಗಾಗಿ ಧಾರೆ ಎರೆದರು.
ಇಂದು ಭಾರತವು ಪ್ರಗತಿಯ ಪಥದಲ್ಲಿ ಅನೇಕ ಏಳು – ಬೀಳುಗಳನ್ನು ಕಂಡಿದ್ದು, ಪ್ರಸ್ತುತ ಜಾಗತಿಕ ಮಟ್ಟದಲ್ಲಿ ತನ್ನದೇ ಛಾಪು ಹೊಂದಿದೆ. ವೈರಿ ರಾಷ್ಟ್ರಗಳನ್ನು ಎದುರಿಸುವುದರ ಜೊತೆಗೆ ಭಯೋತ್ಪಾದನೆ, ಉಗ್ರಗಾಮಿ ಕೃತ್ಯಗಳನ್ನು ತಡೆಯಲು ಸಶಕ್ತವಾದ ಸೇನಾಬಲವನ್ನು ಹೊಂದಿದೆ. ಕಾರ್ಗಿಲ್ ಯುದ್ಧವನ್ನು ಜಯಿಸಿ ನಮ್ಮ ಸೇನಾ ಬಲದ ತಾಕತ್ತೇನು ಎಂದು ವೈರಿ ರಾಷ್ಟ್ರಗಳಿಗೆ ಮನದಟ್ಟು ಮಾಡಿಸಿದೆ. ಅನೇಕ ಆಂತರಿಕ ಕಲಹ, ಸಮಸ್ಯೆಗಳನ್ನು ಬಗೆಹರಿಸಿಕೊಂಡು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಉತ್ತಮ ಪ್ರಜಾಪ್ರಭುತ್ವ ನಾಡೆಂಬ ಹೆಗ್ಗಳಿಕೆ ಪಾತ್ರವಾಗಿದೆ. ೨೧ನೇ ಶತಮಾನದ ವೇಳೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕು ಎಂಬುದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಕನಸಾಗಿತ್ತು. ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಭಾರತವು ವಿಜ್ಞಾನ, ತಂತ್ರಜ್ಞಾನ, ಕೃಷಿ, ವ್ಯಾಪಾರ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆ ಮಾಡುತ್ತಿದ್ದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ.
ದೇಶದಲ್ಲಿ ಕೃಷಿ, ಉದ್ಯೋಗ, ವ್ಯಾಪಾರ – ವ್ಯವಹಾರ ಇತ್ಯಾದಿಗಳಿಗೆಲ್ಲ ಸಾಕಷ್ಟು ಅವಕಾಶವಿದೆ. ಈ ಎಲ್ಲ ಅಂಶಗಳನ್ನು ಸ್ಮರಿಸಿ ನಾವು ಹಿಂದಿನ ತಲೆಮಾರುಗಳಿಗೆ ಗೌರವ ನೀಡಬೇಕು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates