ಸ್ವಸಹಾಯ ಸಂಘಗಳ ಜನಪ್ರಿಯ ಮಾಸಪತ್ರಿಕೆ – ನಿರಂತರ ಪ್ರಗತಿ

ಪೂಜ್ಯರು ಸ್ಥಾಪಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಯನ್ನು ದಾಟಿ ಘಟ್ಟವನ್ನೇರಿ ಬಯಲು ಸೀಮೆಗೆ ತಲುಪಿದಾಗ ಪೂಜ್ಯರ ಆಶಯಗಳನ್ನು, ಯೋಜನೆಯ ಕಾರ್ಯಕ್ರಮಗಳನ್ನು ಎಲ್ಲ ಸ್ವಸಹಾಯ ಸಂಘಗಳ ಸದಸ್ಯರಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಮುಟ್ಟಿಸಲು ಹುಟ್ಟಿಕೊಂಡ ಮಾಧ್ಯಮವೇ ನಿರಂತರ ಪ್ರಗತಿ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಿಕ ಪತ್ರಿಕೆಯಾಗಿ ನೋಂದಣೆಗೊಂಡ ನಿರಂತರ ಪ್ರಗತಿಯು ತನ್ನ ಪ್ರಥಮ ಸಂಚಿಕೆಯನ್ನು ಫೆಬ್ರವರಿ 2003ರಂದು ಬಿಡುಗಡೆ ಮಾಡಿತು. ಮುಖ್ಯವಾಗಿ ಯೋಜನೆಯ ಹೊಸ ಹೊಸ ಕಾರ್ಯಕ್ರಮಗಳ ವಿವರ, ಜನಸಾಮಾನ್ಯರಿಗೆ ವಿವಿಧ ಕಾರ್ಯಕ್ರಮಗಳ ಕುರಿತಂತೆ ಪೂಜ್ಯರು ನೀಡುವ ಸಂದೇಶ, ಸ್ವಸಹಾಯ ಸಂಘಗಳ ಸದಸ್ಯರಿಗೆ ಹೇಮಾವತಿ ವೀ. ಹೆಗ್ಗಡೆಯವರು ನೀಡುವ ಮಾರ್ಗದರ್ಶನ, ಸದಸ್ಯರ ಯಶೋಗಾಥೆಗಳು, ಸಾಧಕ ಕೃಷಿಕರ ಪರಿಚಯಗಳು, ಕೃಷಿ ಪದ್ಧತಿಗಳ ಕುರಿತಂತೆ ವಿವರಣೆಗಳು, ಮನರಂಜನೆಗಾಗಿ ಪದಬಂಧ, ಪ್ರಶ್ನೋತ್ತರಗಳು, ಕಾರ್ಯನಿರ್ವಾಹಕ ನಿರ್ದೇಶಕರ ಅಭಿಪ್ರಾಯಗಳು, ಸಾಧಕ ಕಾರ್ಯಕರ್ತರ ಪರಿಚಯ ಹೀಗೆ ಹಲವಾರು ಹೂರಣಗಳುಳ್ಳ ಈ ಪತ್ರಿಕೆಯು ಆರಂಭದಲ್ಲಿ 20 ಪುಟಗಳಿಂದ ಆರಂಭಗೊಂಡು ಇಂದಿಗೆ 44 ಪುಟಗಳ ಸಂಗ್ರಹಯೋಗ್ಯ ಸಂಚಿಕೆಯಾಗಿ ಹೊರಬರುತ್ತಿದೆ.


ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಗೌರವ ಸಂಪಾದಕರಾಗಿದ್ದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಧಾನ ಸಂಪಾದಕರಾಗಿ, ಓರ್ವ ಪೂರ್ಣಕಾಲಿಕ ಸಂಪಾದಕರು ಇರುತ್ತಾರೆ. ಪತ್ರಿಕೆಯ ಎಲ್ಲ ಲೇಖನಗಳನ್ನು ಪೂಜ್ಯರು ಖುದ್ದು ಪರಿಶೀಲಿಸುತ್ತಾರೆ ಮತ್ತು ಪ್ರಕಟಣೆಗೆ ಮೊದಲೇ ವಿಮರ್ಶಿಸುತ್ತಾರೆ. ಯೋಜನೆಯ ಕಾರ್ಯಕ್ರಮಗಳಿಗೆ ತನ್ಮುಖೇನ ದುರ್ಬಲರ ಬದುಕಿನ ಕುರಿತಾಗಿ ಪೂಜ್ಯರು ವಹಿಸುವ ಆಸ್ಥೆಯ ಪ್ರತೀಕವಾಗಿ ಈ ಪತ್ರಿಕೆಯನ್ನು ಬಿಂಬಿಸಬಹುದಾಗಿದೆ. ದಿನ ಕಳೆದಂತೆ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡಿರುವ ಈ ಪತ್ರಿಕೆಯು ಪ್ರಸರಣದಲ್ಲಿಯೂ ವಿಸ್ತಾರವನ್ನು ಕಂಡಿದೆ. ಮೊದಲ ಸಂಚಿಕೆಗಾಗಿ 5,000 ಪ್ರತಿಗಳನ್ನು ಮುದ್ರಿಸಿದ್ದರೆ, ಇಂದು ಪ್ರತಿ ತಿಂಗಳು 8.50 ಲಕ್ಷ ಪ್ರತಿಗಳನ್ನು ಮುದ್ರಿಸಲಾಗುತ್ತಿದೆ ಎಂದರೆ ಇದರ ಜನಪ್ರಿಯತೆಯನ್ನು ಅಳೆಯಬಹುದಾಗಿದೆ. ಪತ್ರಿಕೆಯ ಬೆಲೆಯನ್ನು ಎಲ್ಲರ ಕೈಗಟಕುವಂತೆ ಪ್ರತಿಯೊಂದರ ರೂ.15/-ಕ್ಕೆ ನಿಗದಿಗೊಳಿಸಲಾಗಿದ್ದು, ವಾರ್ಷಿಕ ಚಂದಾ ರೂ. 170/-ಕ್ಕೆ 12 ಪ್ರತಿಗಳನ್ನು ಒದಗಿಸಲಾಗುತ್ತಿದೆ.


ಸಪ್ಟೆಂಬರ್ 2019ರಿಂದ ನಿರಂತರ ಪ್ರಗತಿಯ 44 ಪುಟಗಳು ವರ್ಣರಂಜಿತವಾಗಿದೆ. ಅಗತ್ಯವಿದ್ದಾಗಲೆಲ್ಲ ಹೆಚ್ಚುವರಿ ವರ್ಣರಂಜಿತ ಪುಟಗಳನ್ನು ಸೇರಿಸಲಾಗಿದೆ. ಪ್ರತಿ ತಿಂಗಳ ಲೇಖನ ಮಾಲಿಕೆಯಲ್ಲಿ ಒಂದು ಮುಖಪುಟ ಲೇಖನವನ್ನು ಪ್ರಸ್ತುತಪಡಿಸಲಾಗುತ್ತದೆ. ಪೂಜ್ಯರ ಕನಸಿಗೆ ತಕ್ಕಂತೆ ‘ನಿರಂತರ ಪ್ರಗತಿ’ ಪತ್ರಿಕೆಗಳಲ್ಲಿ ಹಲವಾರು ಸ್ಥಿರ ಅಂಕಣಗಳನ್ನು ಅಳವಡಿಸಿಕೊಳ್ಳಲಾಗಿದೆ. (ಸ್ಥಿರ ಅಂಕಣಗಳು : ನಿರ್ದೇಶಕರ ನಿವೇದನೆ, ಅಧ್ಯಕ್ಷರ ನಲ್ನುಡಿ, ಸುತ್ತಮುತ್ತ, ಯಶೋಗಾಥೆ, ನಮ್ಮೂರು-ನಿಮ್ಮೂರು, ಕನಸು-ನನಸು, ಇವರು ನಮ್ಮವರು, ಹಿತ್ತಲಗಿಡ, ಆರೋಗ್ಯ, ಜ್ಞಾನಕೇಂದ್ರ, ಕೃಷಿಮಿತ್ರ, ಜಾಣಜಾಣೆಯರ ಜ್ಞಾನಕ್ಕೆ, ಒಗಟಿನ ಗುಟ್ಟು, ಪದಬಂಧ, ಗೆಳತಿ, ಗಾದೆಗೊಂಚಲು, ಕವಿ ಹೃದಯ, ಸಮಾಜ ಸೇವಕರು (ನಾಡಿನ ವಿವಿಧೆಡೆಗಳಿಂದ), ತಿಂಗಳ ಸಾಧಕರು (ಯೋಜನೆಯ ಕಾರ್ಯಕರ್ತರು), ಕುಟುಂಬ ವಿಭಾಗ (ಯೋಜನೆಯ ಕಾರ್ಯಕರ್ತರ ಕುಟುಂಬ), ವಿಷಯ ವಿಸ್ಮಯ, ವಿಸ್ಮಯ ಪ್ರಪಂಚ, ಸರಕಾರಿ ಸವಲತ್ತು, ಮಹಿಳಾ ಸಾಧಕರು, ಕೃಷಿ ಖುಷಿ, ವಧು – ವರರ ವೇದಿಕೆ, ಥಿಂಕ್, ಇನ್‍ಬ್ವಾಕ್ಸ್, ಕಥೆ, ಮಕ್ಕಳ ಕಥೆ, ಮಾರುಕಟ್ಟೆ, ಸ್ಪೋಟ್ರ್ಸ್, ಜೀವಿವೈವಿಧ್ಯ, ಶಿಕ್ಷಣ, ಸಾಧನೆ, ಫೋಟೋ ಕ್ಯಾಪ್ಷನ್, ಫುಡ್‍ಸರ್ಕಲ್, ನ್ಯೂಸ್, ಜಾಗೃತಿ, ಯಂತ್ರ – ತಂತ್ರ, ಪ್ರಗತಿ ಚಿತ್ತಾರ, ಲಘುಬರಹ, ಮಹಿಳಾ ಸಾಧಕಿಯರು ಪೂಜ್ಯರು ಹೊಸದಾಗಿ ಕಲ್ಪಿಸಿಕೊಂಡಿರುವ ‘ಭೂಮಿತಾಯಿಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ’ಗಾಗಿಯೇ ವಿಶೇಷ ಅಂಕಣವೊಂದನ್ನು ರಚಿಸಿ, ಇದರಲ್ಲಿ ಸಾವಯವ ಸಾಧಕರು, ಪರಿಸರ ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ಕಾರ್ಯಕರ್ತರು ಮತ್ತು ಅವರ ಸಾಧನೆಯನ್ನು ವಿವರಿಸಲಾಗುತ್ತಿದೆ. ‘ನಿರಂತರ ಪ್ರಗತಿ’ಯು ಅನೇಕ ಉದಯೋನ್ಮುಖ ಬರಹಗಾರರಿಗೆ, ಉತ್ಸಾಹಿ ಚಿಂತಕರಿಗೆ ವೇದಿಕೆಯನ್ನು ಒದಗಿಸಿದೆ. ಪ್ರಕಟವಾದ ಎಲ್ಲ ಬರಹಗಳಿಗೂ ಗೌರವಧನವನ್ನು ನೀಡಲಾಗುತ್ತಿದೆ. ಪ್ರತಿ ಸಂಚಿಕೆಯಲ್ಲಿ 40ಕ್ಕಿಂತಲೂ ಅಧಿಕ ಅಂಕಣಗಳು ಇವೆ.
ಪತ್ರಿಕೆಯ ಇಂದಿನ ಸಂಪಾದಕೀಯ ಮಂಡಳಿಯಲ್ಲಿ ಯುವ ಪತ್ರಿಕೋದ್ಯಮಿ ಚಂದ್ರಹಾಸ ಚಾರ್ಮಾಡಿಯವರು ಸಂಪಾದಕರಾಗಿದ್ದಾರೆ. ಅವರೊಂದಿಗೆ ಐದು ಮಂದಿ ಕಾರ್ಯಕರ್ತರ ಬದ್ಧ ತಂಡವೊಂದು ಕೆಲಸ ಮಾಡುತ್ತಿದೆ.

ಪೂಜ್ಯರಿಂದ ಪ್ರಾಯೋಜಿಸಲ್ಪಟ್ಟ ಪ್ರಕಾಶನ ಸಂಸ್ಥೆಯಾದ ‘ಶ್ರೀ ಮಂಜುಶ್ರೀ’ ಪ್ರಿಂಟರ್ಸ್‍ನಲ್ಲಿ ಮುದ್ರಣಗೊಳ್ಳುತ್ತಿರುವ ಈ ಪತ್ರಿಕೆಯು ಸಮಯಕ್ಕೆ ಸರಿಯಾಗಿ ಮುದ್ರಿತವಾಗುವುದಲ್ಲದೇ, ನಿಗದಿತ ಅವಧಿಯೊಳಗೆ ಜನರ ಕೈಸೇರುತ್ತದೆ. ಇದಕ್ಕಾಗಿ ಆಸಕ್ತ ಯೋಜನೆಯ ಕಾರ್ಯಕರ್ತರನ್ನೇ ಪತ್ರಿಕೆಯ ಏಜೆಂಟರನ್ನಾಗಿ ಮಾಡಿ ಪ್ರತಿ ತಿಂಗಳು ಅವರಿಗೆ ಪತ್ರಿಕೆಗಳನ್ನು ಕಳುಹಿಸಲಾಗುತ್ತದೆ. ಇವರು ಚಂದಾದಾರರುಗಳಿಗೆ ಯೋಜನೆಯಿಂದ ಪ್ರಾಯೋಜಿಸಲ್ಪಟ್ಟಿರುವ ಗ್ರಾಹಕ ಸೇವಾ ಕೇಂದ್ರಗಳ ಮೂಲಕ ಪತ್ರಿಕೆಯನ್ನು ವಿತರಣೆ ಮಾಡುತ್ತಾರೆ. ಹೀಗಾಗಿ ಪ್ರತಿ ತಿಂಗಳು ಯಾವುದೇ ತಕರಾರಿಲ್ಲದೆ 8.50 ಲಕ್ಷ ಪ್ರತಿಗಳು ಜನರನ್ನು ತಲುಪುತ್ತಿವೆ. ಪತ್ರಿಕೆಯು ವಾರ್ಷಿಕ ಚಂದಾ ಸಂಗ್ರಹಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು, ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಯೋಜನೆಯ ಸೇವಾಪ್ರತಿನಿಧಿಗಳ ಮುಖೇನ ಚಂದಾದಾರರನ್ನು ಸಂಪರ್ಕಿಸಲಾಗುತ್ತದೆ. ಸೇವಾಪ್ರತಿನಿಧಿಗಳಿಗೆ ಚಂದಾದಾರರನ್ನು ಮಾಡಿಕೊಟ್ಟದ್ದಕ್ಕೆ ಸೂಕ್ತ ಗೌರವಧನವನ್ನು ನೀಡಲಾಗುತ್ತದೆ. ಬಂದ ಚಂದಾ ಹಣದಿಂದ ಪತ್ರಿಕೆಯ ಖರ್ಚನ್ನು ವ್ಯವಸ್ಥಿತವಾಗಿ, ಸುಸ್ಥಿರವಾಗಿ ನಿಭಾಯಿಸಲಾಗುತ್ತದೆ.

ನಿರಂತರ ಬಳಗವು ಪತ್ರಿಕೆಯನ್ನು ಜನಪ್ರಿಯಗೊಳಿಸಲು ಅನೇಕ ಯೋಜನೆಗಳನ್ನು ರೂಪಿಸಿಕೊಂಡಿದ್ದು, ಬೇರೆಬೇರೆ ಸಮಾವೇಶಗಳಲ್ಲಿ ಮಳಿಗೆಗಳನ್ನು ಹಾಕುವುದು, ಯೋಜನೆಯ ಪುಸ್ತಕಗಳನ್ನು ಮಾರಾಟ ಮಾಡುವುದು, ಸಣ್ಣಪುಟ್ಟ ಸ್ಪರ್ಧೆಗಳನ್ನು ಏರ್ಪಡಿಸುವುದು, ಲೇಖನಗಳು ಆಕರ್ಷಕವಾಗಿರುವಂತೆ ನೋಡಿಕೊಳ್ಳುವುದು, ಕರ್ನಾಟಕದ ವಿವಿಧ ಭಾಗದ ಜನರಿಗೆ ಅನುಕೂಲವಾಗುವಂತಹ ಲೇಖನಗಳನ್ನು ಪ್ರಕಟಿಸುವುದು, ಜ್ವಲಂತ ವಿಚಾರಗಳಿಗೆ ಆದ್ಯತೆ ನೀಡುವುದು ಇವೇ ಮುಂತಾದ ಕ್ರಮಗಳನ್ನು ಅನುಸರಿಸುತ್ತದೆ. ಪತ್ರಿಕೆಯಲ್ಲಿ ಜಾಹೀರಾತಿನ ಪುಟಗಳು ಬಹಳಷ್ಟು ಕಡಿಮೆ, ಲೇಖನಗಳಿಗೆ ಹೆಚ್ಚು ಪ್ರಾಧಾನ್ಯತೆ. ‘ಪಾಸಿಟಿವ್ ಪತ್ರಿಕೋದ್ಯಮ ಹರಿಕಾರ’ ಇದು ಪತ್ರಿಕೆಯ ಧ್ಯೇಯವಾಗಿದೆ. ನವೆಂಬರ್ 2018ರಲ್ಲಿ ಕರ್ನಾಟಕ ರಾಜ್ಯ ‘ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಗೆ’ ಪತ್ರಿಕೆಯನ್ನು ಸೇರಿಸಲಾಗಿದೆ. ನಿರಂತರಕ್ಕೆ 2019ರ ಫೆಬ್ರವರಿ ತಿಂಗಳಲ್ಲಿ ಅಂತಾರಾಷ್ಟ್ರೀಯ ಮಾನ್ಯತೆ ISSಓ ದೊರೆತಿರುತ್ತದೆ.


ಪ್ರತಿ ತಿಂಗಳು ಓದುಗರಿಂದ ಅಭಿಪ್ರಾಯಗಳನ್ನು ಪಡೆದುಕೊಳ್ಳಲಾಗುತ್ತದೆ. ಜನಸಾಮಾನ್ಯರಿಂದ ಮೆಚ್ಚಲ್ಪಟ್ಟ ಪತ್ರಿಕೆಯಾಗಿ ‘ನಿರಂತರ ಪ್ರಗತಿ’ಯು ರೂಪುಗೊಂಡಿದೆ. ಇದಕ್ಕೆ ಮುಖ್ಯ ಕಾರಣ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಆಸಕ್ತಿ, ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನ, ಪತ್ರಿಕಾ ಬಳಗದ ಕಠಿಣ ಪರಿಶ್ರಮ, ಮಂಜುಶ್ರೀ ಪ್ರಿಂಟರ್ಸ್‍ನ ವತಿಯಿಂದ ಅದರ ಮುಖ್ಯಸ್ಥರಾದ ಶೇಖರ್‍ರವರನ್ನೊಳಗೊಂಡಂತೆ ಅವರ ಕಾರ್ಯಕರ್ತರ ಸಹಕಾರ, ಯೋಜನೆಯ ಕಾರ್ಯಕರ್ತರ ಸಹಕಾರ ಮತ್ತು ಪ್ರಯತ್ನಗಳು. ಇದರೊಂದಿಗೆ ನುರಿತ ಲೇಖಕರಿಂದ ಆಕರ್ಷಕ ಲೇಖನಗಳು ಹಾಗೂ ಎಲ್ಲ ಸಹೃದಯ ಓದುಗರ ಪ್ರೋತ್ಸಾಹವನ್ನು ಸ್ಮರಿಸಬಹುದು. ಒಟ್ಟಾರೆಯಾಗಿ ‘ನಿರಂತರ’ ಕನ್ನಡ ನಾಡಿನ ಎಲ್ಲ ಜನಸಾಮಾನ್ಯರನ್ನು ತಲುಪುವ ಪತ್ರಿಕೆಯಾಗಿ ರೂಪುಗೊಂಡಿದೆ.

ಡಾ| ಎಲ್.ಎಚ್. ಮಂಜುನಾಥ್

ಕಾರ್ಯನಿರ್ವಾಹಕ ನಿರ್ದೇಶಕರು