ಬೇವಿಗೆ ಕಾಡುವ ಬಹುಭಕ್ಷಕ ಕೀಟಕ್ಕೆ ಪರಿಹಾರವೇನು?

ಬೇವು ಔಷಧೀಯ ಗುಣಗಳಿಂದಾಗಿ ಅನೇಕ ರೋಗಗಳ ನಿರ್ವಹಣೆಗೆ ಸಹಕಾರಿಯಾಗಿದೆ. ಬೇವನ್ನು ‘ಆರೋಗ್ಯ ಸಂಜೀವಿನಿ’ ಎಂದು ಕರೆಯಲಾಗುತ್ತದೆ. ಬಹಳಷ್ಟು ಉಪಯೋಗಗಳನ್ನು ಹೊಂದಿರುವ ಬೇವಿಗೆ ಇತ್ತೀಚಿನ ವರ್ಷಗಳಲ್ಲಿ ಚಹಾ ಸೊಳ್ಳೆಯ (Tea mosquito bug) ಬಾಧೆಯು ಸಮಸ್ಯೆಯಾಗಿದೆ. ಈ ಕೀಟಬಾಧೆಯನ್ನು ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಣಿಸಿಕೊಂಡಿದೆ. ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಇದರ ಬಾಧೆಯನ್ನು ಗುರುತಿಸಲಾಗಿದೆ. ಪ್ರಸ್ತುತ ವರ್ಷ ಈ ಕೀಟಬಾಧೆಯ ತೀವ್ರತೆ ಹೆಚ್ಚಾಗಿ ಕಂಡುಬ0ದಿದೆ.
ಈ ಕೀಟವು ಬಹುಭಕ್ಷಕ ಕೀಟವಾಗಿದ್ದು ಬೇವು ಮಾತ್ರವಲ್ಲದೆ ಗೋಡಂಬಿ, ಬಾಳೆ, ದ್ರಾಕ್ಷಿ, ಮಾವು, ಹತ್ತಿ, ಮಹಾಗನಿ, ಕಳೆ ಸಸ್ಯಗಳನ್ನೂ ಬಾಧಿಸುತ್ತದೆ. ಹಾಗಾಗಿ ಈ ಕೀಟಕ್ಕೆ ಬಹುಭಕ್ಷಕ ಕೀಟವೆಂದೂ ಕರೆಯಲಾಗುತ್ತಿದೆ. ಕೀಟದಲ್ಲಿ ಮೂರು ಹಂತಗಳನ್ನು ಕಾಣಬಹುದು. ಮೊಟ್ಟೆ (Egg), ಅಪ್ಸರೆ ಕೀಟ (Nymph) ಮತ್ತು ಪ್ರೌಢಕೀಟ (Adult). ಪ್ರೌಢಕೀಟ ತೆಳುವಾಗಿದ್ದು ಸುಮಾರು 3 ರಿಂದ 6 ಮಿ. ಮೀ. ಉದ್ದವಿರುತ್ತದೆ. ದೇಹವು ಕೆಂಪು – ಕಂದು ಮಿಶ್ರಣದಿಂದ ಕೂಡಿ ತಲೆಯ ಭಾಗ ಕಪ್ಪಾಗಿರುತ್ತದೆ. ಎದೆಯ ಭಾಗವು ಕೆಂಪಾಗಿದ್ದು ಎದೆಯ ಮೇಲ್ಭಾಗದಲ್ಲಿ ಸೂಜಿ ಆಕಾರದ ರಚನೆ ಇರುತ್ತದೆ. ಹೊಟ್ಟೆಯ ಕೆಳ ಭಾಗದಲ್ಲಿ ಬಿಳಿ ಪಟ್ಟೆಗಳಿರುತ್ತವೆ. ಹವಾಮಾನ ವೈಪರೀತ್ಯ ಮತ್ತು ಅವುಗಳಿಗೆ ಸೂಕ್ತ ವಾತಾವರಣದ ಕಾರಣದಿಂದ ಈ ಕೀಟದ ಸಂತತಿ ಹೆಚ್ಚಾಗುತ್ತಿದೆ. ಈ ಕೀಟವು ಸುಮಾರು 50 ರಿಂದ 60 ಮೊಟ್ಟೆಗಳನ್ನಿಡುತ್ತದೆ. ಇದರ ಮೊಟ್ಟೆಯು ಬಿಳಿಯಾಗಿದ್ದು ಎರಡು ತುದಿಯಲ್ಲಿ ಕೂದಲೆಳೆಯಂತಹ ಬಿಳಿ ತಂತುಗಳಿರುತ್ತವೆ. ಮೊಟ್ಟೆಯಿಂದ ಅಪ್ಸರೆ ಕೀಟವು ಸುಮಾರು 9 ರಿಂದ 15 ದಿನಗಳ ನಂತರ ಹೊರಬರುತ್ತದೆ. ಹೊರಬಂದ0ತಹ ಅಪ್ಸರೆ ಕೀಟವು ತನ್ನ ಜೀವಿತಾವಧಿಯಲ್ಲಿ ನಾಲ್ಕು ಬಾರಿ ಜ್ವರಕ್ಕೆ ಹೋಗಿ ಪ್ರೌಢ ಕೀಟವಾಗಿ ಹೊರಬರುತ್ತದೆ. ಈ ಕೀಟವು ತನ್ನ ಒಂದು ಸಂತತಿಯನ್ನು ಪೂರ್ಣಗೊಳಿಸಲು 24 ರಿಂದ 30 ದಿನಗಳನ್ನು ತೆಗೆದುಕೊಳ್ಳುತ್ತದೆ.
ಹಂತ ಹಂತವಾಗಿ ಹಾನಿ :
ಅಪ್ಸರೆ ಮತ್ತು ಪ್ರೌಢಕೀಟ ಹಂತಗಳಲ್ಲಿ ಮರದ ಚಿಗುರುಗಳಿಂದ ರಸವನ್ನು ಹೀರುತ್ತದೆ. ರಸವನ್ನು ಹೀರುವಾಗ ಪಾಲಿಫೀನಾಲ್ ಆಕ್ಸಿಡೇಸ್ ಲಾಲಾರಸ ಕಿಣ್ವಗಳನ್ನು ಅಂಗಾ0ಶಗಳಿಗೆ ಸೇರಿಸುತ್ತದೆ. ಇದರ ಪರಿಣಾಮವಾಗಿ ಎಳೆ ಚಿಗುರುಗಳು ಬಾಡಿ ಸಾಯುವಂತಹ ಚಿಹ್ನೆಗಳನ್ನು ಕಾಣಬಹುದಾಗಿದೆ. ಹೀಗೆ ತುದಿಯಿಂದ ಹಿಂದಕ್ಕೆ ಸಾಯುತ್ತ ಬರುವುದರಿಂದ ಡೈ ಬ್ಯಾಕ್ ಎಂದು ಕರೆಯಲಾಗುತ್ತದೆ. ಇದರ ಬಾಧೆ ತೀವ್ರವಾದಾಗ ಮರವೇ ಸುಟ್ಟಂತೆ ಕಾಣುತ್ತದೆ. ಇದಲ್ಲದೆ, ಬಾಧೆಗೊಳಗಾದ ಭಾಗದಿಂದ ಅಂಟ0ಟಾದ ಪದಾರ್ಥವು ಹೊರಬರುವುದರಿಂದ ಇಲ್ಲಿ ಹಲವು ಶಿಲೀಂಧ್ರಗಳು ವಾಸಿಸುತ್ತವೆ. ಈ ಕೀಟವು ಎಲ್ಲಾ ಹಂತದ ಬೇವಿನ ಮರಗಳನ್ನು ಬಾಧಿಸುತ್ತದೆ.
ನಿರ್ವಹಣೆ : ಬೇವಿಗೆ ಬಂದಿರುವ ಈ ಕೀಟವನ್ನು ಪ್ರಾಥಮಿಕ ಹಂತದಲ್ಲಿ ನಿರ್ವಹಣೆ ಮಾಡದಿದ್ದರೆ ಮುಂದೆ ಮನುಷ್ಯ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಈ ಕೀಟದ ಹತೋಟಿಗೆ ಮೊದಲು ಬಾಧೆಯಿಂದ ಒಣಗಿದ ಸಣ್ಣ ಕೊಂಬೆಯನ್ನು ಕತ್ತರಿಸಿ ಸುಡುವುದು ಹಾಗೆ ಕತ್ತರಿಸಿದ ಭಾಗಕ್ಕೆ ಬೋರ್ಡಾಕ್ಸ್ ದ್ರಾವಣ ಲೇಪನ ಮಾಡುವುದರಿಂದ ಶಿಲೀಂಧ್ರದ ಬೆಳವಣಿಗೆಯನ್ನು ತಡೆಯಬಹುದು. ಸದ್ಯ ಈ ಕೀಟಕ್ಕೆ ಯಾವುದೇ ಕೀಟನಾಶಕಗಳನ್ನು ಶಿಫಾರಸ್ಸು ಮಾಡದಿರುವುದರಿಂದ, ಗೋಡಂಬಿ ಬೆಳೆಯಲ್ಲಿ ಶಿಫಾರಸ್ಸು ಮಾಡಿರುವ ಕೀಟನಾಶಕಗಳನ್ನು ಇದರಲ್ಲೂ ಸಹ ತಾತ್ಕಾಲಿಕವಾಗಿ ಬಳಸಬಹುದಾಗಿದೆ. ಆದರೆ ಬೇವಿನ ಮರಗಳ ವಿಸ್ತಾರ ವಿಶಾಲವಾಗಿರುವುದರಿಂದ ಹೆಚ್ಚಿನ ಕೀಟನಾಶಕಗಳನ್ನು ಬಳಸುವ ಮುನ್ನ ಪರಿಸರದ ಬಗ್ಗೆ ಕಾಳಜಿ ಇಟ್ಟುಕೊಂಡು ಮುಂಜಾಗ್ರತಾ ಕ್ರಮದೊಂದಿಗೆ ಹತೋಟಿ ಕ್ರಮ ಕೈಗೊಳ್ಳಬೇಕು. ಮೊದಲನೆಯ ಸಿಂಪರಣೆಯಾಗಿ ಸ್ಪರ್ಶ ಕೀಟನಾಶಕವಾದ (Contact insecticide) ಲಾಮ್ಡಾಸೈಲೋಥ್ರೀನ್ 0.6 ಮಿ. ಲೀ ಅಥವಾ ಪ್ರೋಫೆನೊಪಾಸ್ 1.5 ಮಿ.ಲೀ. ಮತ್ತು ಅಂತರ್ವ್ಯಾಪಿ ಕೀಟನಾಶಕವಾದ (Systemic insecticide) ಇಮಿಡಾಕ್ಲೋಪ್ರಿಡ್ 0.6 ಮಿ.ಲೀ. ಅಥವಾ ಅಸಿಟಾಮಿಪ್ರಿಡ್ 0.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬಹುದು. ಎರಡನೇ ಸಿಂಪರಣೆಯಾಗಿ ಲಾಮ್ಡಾಸೈಲೋಥ್ರೀನ್ 0.6 ಮಿ.ಲೀ. ಪ್ರತಿ ಲೀಟರ್ ನೀರಿಗೆ ಮತ್ತು ಮೂರನೇ ಸಿಂಪರಣೆಯಾಗಿ ಲಾಮ್ಡಾಸೈಲೋಥ್ರೀನ್ 0.6 ಮಿ.ಲೀ. ಅಥವಾ ಪ್ರೋಫೆನೊಪಾಸ್ 1.5ಮಿ. ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬಹುದು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates