ಕಲಿಕೆ ನಿರಂತರವಾಗಿರಲಿ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು

ವಿದ್ಯೆ ಎಂದರೆ ಜ್ಞಾನ. ಅದು ಕೇವಲ ಶಾಲೆಗಳಿಗೆ, ಫಲಿತಾಂಶಕ್ಕೆ ಸೀಮಿತವಾದುದಲ್ಲ. ಬದುಕಿನಲ್ಲಿ ಪ್ರತಿಕ್ಷಣವೂ ವಿದ್ಯೆಯನ್ನು ಪಡೆದುಕೊಳ್ಳುತ್ತಾ ಹೋಗುತ್ತೇವೆ. ಮನೆಯೇ ಮೊದಲ ಪಾಠಶಾಲೆ ಎಂಬಂತೆ ತಂದೆ-ತಾಯಿಯಿಂದ ಮೊದಲ್ಗೊಂಡು, ನೆರೆ-ಹೊರೆ ಸಮಾಜದ ಮೂಲಕವಾಗಿ ಜ್ಞಾನವನ್ನು ಪಡೆಯಲಾರಂಭಿಸುತ್ತೇವೆ. ಈ ಜ್ಞಾನವೆಲ್ಲ ನಮ್ಮ ಪೂರ್ವಜರ ಆಸ್ತಿ. ಅವೆಲ್ಲವೂ ಆಯಾ ಕಾಲಕ್ಕೆ ಅನುಗುಣವಾಗಿ ಮಾರ್ಪಾಡಾಗುತ್ತಾ, ಸುಧಾರಣೆಗೊಳ್ಳುತ್ತಾ ತಲತಲಾಂತರದಿಂದ ನಮಗೆ ಬಳುವಳಿಯಾಗಿ ಬಂದಿದೆ. ಉದಾಹರಣೆಗೆ ಕೃಷಿಕನಾದರೆ ಯಾವಾಗ, ಏನು ಬೆಳೆ ಬೆಳೆಯಬೇಕು? ಯಾವ ಗೊಬ್ಬರ ಹಾಕಬೇಕು? ಹೇಗೆ ನಿರ್ವಹಣೆ ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ಅಜ್ಜ ತನ್ನ ಮಗನಿಗೆ, ಆತನು ಅವನ ಮಗನಿಗೆ ತಿಳಿಸುತ್ತಾನೆ. ಅಕ್ಕಸಾಲಿಗನಾದರೆ ಬಂಗಾರವನ್ನು ತಿಕ್ಕಿ ಶುದ್ಧತೆಯನ್ನು ಪರೀಕ್ಷಿಸುವುದು ಹೇಗೆ? ಹಿಂದಿನ ವಿನ್ಯಾಸಗಳು ಏನು? ಈಗ ಜನ ಯಾವ ವಿನ್ಯಾಸ ಬಯಸುತ್ತಾರೆ, ಹೇಗೆ ಆಭರಣ ತಯಾರಿಸಬಹುದು, ಗ್ರಾಹಕರ ಜೊತೆ ವ್ಯವಹಾರ ಹೇಗಿರಬೇಕು ಎಂಬಿತ್ಯಾದಿ ವಿಚಾರಗಳನ್ನು ತಂದೆ ಮಗನಿಗೆ, ಮಗ ಅವನ ಮಗನಿಗೆ ವರ್ಗಾಯಿಸುತ್ತಾನೆ. ಆದರೆ ಇಂದಿನ ಪ್ರಸಕ್ತ ಜೀವನಶೈಲಿಗೆ ಒಪ್ಪುವಂತಹ ವಿನ್ಯಾಸ ಮತ್ತು ಆಕರ್ಷಣೆಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ತಾನೇ ಅರಿತು ಬೆಳೆಸಬೇಕಾಗುತ್ತದೆ. ಅಂದರೆ ಆಧುನಿಕ ಸಮಾಜದ ಬೇಕು – ಬೇಡಗಳನ್ನು ಅರಿತುಕೊಳ್ಳುವ ಕೌಶಲವನ್ನು ಹೊಂದಿರಬೇಕಾದುದು ಅವಶ್ಯ. ಯಾವುದೇ ಕ್ಷೇತ್ರವಿರಲಿ ಅದರ ಬಗ್ಗೆ ಬರೀ ಜ್ಞಾನವಿದ್ದರೆ ಸಾಲದು, ಜ್ಞಾನವನ್ನು ಬಳಸುವ ಕೌಶಲವೂ ಅಷ್ಟೇ ಅಗತ್ಯ. ಪ್ರಸ್ತುತ ಸಂದರ್ಭದಲ್ಲಿ ತಮ್ಮ – ತಮ್ಮ ಬುದ್ಧಿಶಕ್ತಿ, ಆಸಕ್ತಿಗಳಿಗೆ ಅನುಸಾರವಾಗಿ ಯಾರು ಯಾವ ಕಾರ್ಯವನ್ನು ಬೇಕಾದರೂ ಮಾಡಬಹುದು. ಕೃಷಿಕನ ಮಗ ಉದ್ಯಮಿಯಾಗಬಹುದು. ಉದ್ಯಮಿಯ ಮಗ ಕೃಷಿಯಲ್ಲಿ ತೊಡಗಿಕೊಳ್ಳಬಹುದು. ಅವರವರ ಇಚ್ಛೆಯನುಸಾರ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಅದಕ್ಕಾಗಿ ವ್ಯವಸ್ಥಿತವಾದ ಶಿಕ್ಷಣವನ್ನು ವಿವಿಧ ಹಂತಗಳಲ್ಲಿ ನೀಡಲಾಗುತ್ತಿದೆ. ಇನ್ನೂ ಮುಂದುವರೆದು, ಶಿಕ್ಷಣದ ಜೊತೆಗೆ ಕೌಶಲವನ್ನೂ ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸಲಾಗುತ್ತಿದೆ.
‘ಕಲಿಕೆ’ ಎಂಬುದು ಪ್ರತಿ ಕ್ಷಣವೂ ಇರುತ್ತದೆ. ಯಾರೊಂದಿಗಾದರೂ ಮಾತನಾಡುತ್ತಾ ಇರುವಾಗ ಎಷ್ಟೋ ಹೊಸ ವಿಷಯಗಳು ದೊರಕುತ್ತವೆ. ನೋಡುವ ದೃಶ್ಯಗಳು ಸ್ಮೃತಿಪಟಲದಲ್ಲಿ ಅಚ್ಚಾಗುತ್ತವೆ. ಕೇಳುವ ವಿಚಾರಧಾರೆಗಳು ನೆನಪಿನಲ್ಲೂ ಉಳಿಯುತ್ತವೆ. ಎಲ್ಲವೂ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಲಾಗದು. ಆಸಕ್ತಿಕರವಾದ ವಿಷಯಗಳು ಹೆಚ್ಚು ಸ್ಮರಣೆಯಲ್ಲಿರುತ್ತವೆ. ಉಳಿದವೆಲ್ಲ ಮೆರತುಹೋಗುತ್ತವೆ. ಉದಾಹರಣೆಗೆ ಚಿಣ್ಣರು ತಮಗೆ ಇಷ್ಟವಾದ ಕಥೆಗಳನ್ನು, ಟಿ.ವಿ.ಯಲ್ಲಿ ಬರುವ ಹಾಡು, ನೃತ್ಯಗಳನ್ನು ಚೆನ್ನಾಗಿ ನೆನಪಿಟ್ಟುಕೊಳ್ಳುತ್ತಾರೆ. ಆದರೆ ಪಾಠದ ವಿಚಾರಕ್ಕೆ ಬಂದಾಗ ಇದಕ್ಕೆ ತದ್ವಿರುದ್ಧ. ಓದಿದ್ದು ಮಾತ್ರ ನಿನಗೆ ನೆನಪು ಉಳಿಯುವುದಿಲ್ಲ ಆದರೆ ಸಿನಿಮಾದಲ್ಲಿ ನೋಡಿದ್ದು ಅಥವಾ ಟಿ.ವಿ.ಯಲ್ಲಿ ನೋಡಿದ್ದು ಎಲ್ಲವೂ ನೆನಪಿರುತ್ತದೆ ಎಂದು ಮಕ್ಕಳಿಗೆ ಎಷ್ಟೋ ಸಂದರ್ಭ ಹಾಸ್ಯ ಮಾಡುವುದುಂಟು. ಹೆಚ್ಚಾಗಿ ಆಸಕ್ತಿಕರ ವಿಚಾರಗಳಾದ ಕ್ರಿಕೆಟ್, ಸಿನಿಮಾ ಇತ್ಯಾದಿಗಳ ಬಗ್ಗೆ ಮಕ್ಕಳು ಪ್ರತಿಯೊಂದು ವಿಷಯವನ್ನು ಬಿಟ್ಟೂಬಿಡದೆ ಅರಿತುಕೊಳ್ಳುತ್ತಾರೆ. ಈಗಂತೂ ತರಗತಿ ಮಾತ್ರವಲ್ಲದೆ ಪತ್ರಿಕೆ, ಟಿ.ವಿ., ಮೊಬೈಲ್ ಇನ್ನಿತರ ಮಾಧ್ಯಮಗಳಲ್ಲಿ ಕ್ಷಣ-ಕ್ಷಣಕ್ಕೂ ಮಾಹಿತಿ ಲಭಿಸುತ್ತದೆ. ಅವುಗಳಲ್ಲಿ ಆಸಕ್ತಿದಾಯಕವಾದವುಗಳನ್ನು ಮಾತ್ರ ಮೆದುಳು ದಾಖಲಿಸಿಕೊಳ್ಳುತ್ತದೆ. ಮಾತ್ರವಲ್ಲ ಎಷ್ಟೋ ವರ್ಷಗಳ ಮೇಲೆ ಕೂಡ ಸ್ಮರಣೆಯಲ್ಲಿರುತ್ತದೆ.
ಜ್ಞಾನದಲ್ಲಿ ಕೆಟ್ಟದ್ದು ಮತ್ತು ಒಳ್ಳೆಯದು ಎಂಬ ವಿಂಗಡನೆ ಸಲ್ಲದು. ಅವೆಲ್ಲವೂ ಒಟ್ಟಾಗಿ ಮಾಹಿತಿ. ಈ ಮಾಹಿತಿಯಿಂದಲೇ ಎಲ್ಲವೂ ಆರಂಭಗೊಳ್ಳುತ್ತದೆ ಮತ್ತು ವಿಕಸನಗೊಳ್ಳುತ್ತದೆ. ಜ್ಞಾನವು ಮಾಹಿತಿಯಿಂದಲೇ ಬೆಳೆಯುತ್ತದೆ.
ನಾವು ಕಂಡ ಹಾಗೆ ಈ ವಿಶ್ವದಲ್ಲಿ ಎಲ್ಲಾ ರಂಗದಲ್ಲಿ ಆಗಿರುವಂತಹ ಪ್ರಗತಿಯು ಕ್ಷಣ-ಕ್ಷಣಕ್ಕೂ ಸಂಗ್ರಹಿಸಿದ ಜ್ಞಾನದಿಂದಾಗಿದೆ. ಈ ಜ್ಞಾನದ ಜೊತೆಗೆ ಕೌಶಲಗಳು ಬೆರೆತಾಗ ಮತ್ತಷ್ಟು ಸಂಶೋಧನೆ, ಅಭಿವೃದ್ಧಿ, ಪ್ರಗತಿಗಳಾಗಿರುವುದನ್ನು ನಾವು ಕಾಣಬಹುದು. ಉದಾಹರಣೆಗೆ ಒಂದು ಚಕ್ರ ಉರುಳುತ್ತೆ ಎಂಬುದನ್ನು ಮೊದಲಿಗೆ ಕಂಡುಕೊಂಡರು. ಚಕ್ರದ ಕುರಿತಾದ ಜ್ಞಾನ ವಿಸ್ತಾರಗೊಂಡಂತೆ ಕೌಶಲಗಳನ್ನು ಉಪಯೋಗಿಸಿ ಚಕ್ರಗಳನ್ನು ವಾಹನಕ್ಕೆ, ರಾಟೆ, ವಿವಿಧ ಯಂತ್ರೋಪಕರಣ ಸೇರಿದಂತೆ ನಾನಾ ಬಗೆಯಲ್ಲಿ ಬಳಕೆ ಮಾಡಿಕೊಂಡರು. ಇವತ್ತು ನಾವು ಕಂಡ ಹಾಗೆ ಚಕ್ರದಿಂದ ಅನೇಕ ಸಂಶೋಧನೆಗಳು, ವಸ್ತುಗಳು ಮತ್ತು ಸಾಧನೆಗಳಾಗಿವೆ. ಊಹಿಸಿದರೆ ಅದು ಕಲ್ಪನಾತೀತವಾದದ್ದು. ಹೀಗೆ ಸಾಧಿಸಿದ ಪ್ರಗತಿ ಕೂಡ ಒಂದೇ ದಿನದಲ್ಲಿ ಆಗಿದ್ದಲ್ಲ. ಕ್ಷಣ-ಕ್ಷಣದಲ್ಲಿ ವಿದ್ಯೆಯನ್ನು ಕಣ-ಕಣವಾಗಿ ಸಂಗ್ರಹಿಸಿದ್ದರಿಂದಲೆ ಆಗಿದೆ.
ಶಾಲಾ – ಕಾಲೇಜುಗಳಲ್ಲಿ ಕಲಿತು ಪ್ರಮಾಣಪತ್ರ ಪಡೆದರಷ್ಟೇ ಸಾಲದು. ಅಂಕ ಪಡೆಯುವುದರ ಜೊತೆಗೆ ಕೌಶಲವನ್ನು ಹೊಂದುವುದೂ ಅಷ್ಟೇ ಮುಖ್ಯ. ಹೆಚ್ಚು ಅಂಕಗಳನ್ನು ಗಳಿಸಿದವರಿಗಷ್ಟೇ ಉನ್ನತ ವ್ಯಾಸಂಗ ಮಾಡಲು ಅವಕಾಶವನ್ನು ಶಿಕ್ಷಣ ಸಂಸ್ಥೆಗಳು ನೀಡುತ್ತವೆ. ಶೇಕಡಾ ನೂರರಲ್ಲಿ ಶೇ.95-90 ಅಂಕ ಪಡೆದವರಿಗೆ ಮಾತ್ರ ಉನ್ನತ ವಿದ್ಯಾಭ್ಯಾಸಕ್ಕೆಅವಕಾಶ ಎಂದೆನ್ನುತ್ತಾರೆ. ಅಂತೆಯೇ ಅಂಕಗಳ ಜೊತೆಗೆ ಕೌಶಲ ಉಳ್ಳವರಿಗೆ ಪ್ರಾಶಸ್ತ್ಯ ಎನ್ನುವುದು ಉದ್ಯೋಗ ಕ್ಷೇತ್ರದ ನಿಲುವು. ಶೈಕ್ಷಣಿಕ ಸಂಸ್ಥೆಗಳು ಕೇವಲ ಶಿಕ್ಷಣವನ್ನಷ್ಟೇ ನೀಡುವ ಕೇಂದ್ರವಾಗದೆ ವಿದ್ಯಾರ್ಥಿಗಳನ್ನು ಕೌಶಲಭರಿತರನ್ನಾಗಿಸಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ಹೆಚ್ಚು ಅರ್ಥಪೂರ್ಣ. ಇಂದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ, ಅಭಿವೃದ್ಧಿಗೆ, ಸಾಧನೆ ಮಾಡಲು ಶಿಕ್ಷಣ ಸಂಸ್ಥೆಗಳು ಪ್ರೇರಣಾಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ಮತ್ತು ಸುಧಾರಣೆಯ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕೆಯ ದೃಷ್ಟಿಕೋನವು ಹೊಸ ಹುರುಪು ನೀಡಿದೆ. ಸಂಶೋಧನೆ ಮತ್ತು ಕೇಸ್ ಸ್ಟಡಿ, ಉದ್ಯಮ ಮತ್ತು ಕಾರ್ಪೊರೇಟ್ ಮಾದರಿಯ ಪ್ರಾಯೋಗಿಕ ಕಲಿಕೆಗಳನ್ನು ಅಳವಡಿಸಿಕೊಂಡು ಕೌಶಲಭರಿತರನ್ನಾಗಿಸುವ ಪ್ರಯತ್ನ ಸಾಗಿದೆ. ಉದ್ಯೋಗ ವಲಯವೂ ಕೂಡ ಕೌಶಲವುಳ್ಳ ಉದ್ಯೋಗಾರ್ಥಿಗಳಿಗೆ ಮಣೆ ಹಾಕುತ್ತದೆ. ಹಾಗೂ ಆತ/ಆಕೆಯಿಂದ ಬಹಳಷ್ಟು ನಿರೀಕ್ಷಿಸುತ್ತದೆ.
ಒಮ್ಮೆ ಊರಿನ ನಾಯಕನೊಬ್ಬ ತನ್ನ ನಂತರದ ನಾಯಕನಿಗಾಗಿ ತಲಾಶ್ ನಡೆಸುತ್ತಿದ್ದ. ವಿವಿಧ ಪರೀಕ್ಷೆಗಳನ್ನು ಒಡ್ಡುತ್ತಿದ್ದ. ಒಮ್ಮೆ ತಲಾ ನಾಲ್ಕು ಜನರಿರುವ ಎರಡು ತಂಡಗಳನ್ನು ಮಾಡಿ ಅವರ ಕೈಯಲ್ಲಿ ಒಂದೊಂದು ಕೊಡವನ್ನು ನೀಡಲಾಯಿತು. ಬಳಿಕ ಅವರನ್ನುದ್ದೇಶಿಸಿ ನಾಳೆ ಬೆಳಗ್ಗೆ 10 ಗಂಟೆಯೊಳಗೆ ಈ ಕೊಡದ ತುಂಬಾ ನೀರನ್ನು ತುಂಬಿಸಬೇಕು ಎಂದು ಆದೇಶವನ್ನು ಕೊಡಲಾಯಿತು. ಹಾಗೂ ಅವರನ್ನು ಹುಲ್ಲುಗಾವಲಿರುವ ಪ್ರದೇಶದಲ್ಲಿ ಬಿಡಲಾಯಿತು. ತಂಡಗಳಲ್ಲಿ ಇದ್ದವರ ಬಳಿ ಉಟ್ಟ ಬಟ್ಟೆಯ ಹೊರತು ಬೇರಾವುದೇ ಸಲಕರಣೆ, ವ್ಯವಸ್ಥೆಗಳಿರಲಿಲ್ಲ. ಇದ್ದದ್ದು ಮಾತ್ರ ಒಂದೊಂದು ಕೊಡ. ‘ಎ’ ತಂಡದ ನಾಲ್ವರು ಕುಳಿತು ಚರ್ಚಿಸಿ ನೀರನ್ನು ಹೇಗೆ ತುಂಬುವುದೆಂದು ಯೋಚನೆ ಮಾಡಿದರು. ತಲೆಗೊಬ್ಬರಂತೆ ಒಂದೊಂದು ಹೇಳಿದರು. ಅಲ್ಲಿನವರ ಮಾತು ಯಾರಿಗೂ ಸಮ್ಮತವಾಗದೇ ಇದ್ದಾಗ ಬಾವಿ ಸಿಗುತ್ತದೋ, ಕೊಳ ಸಿಗುತ್ತದೋ ಎಂದು ಹುಲ್ಲುಗಾವಲಿನಲ್ಲಿ ಅಲೆಯತೊಡಗಿದರು. ತಂಡ ‘ಬಿ’ ಯವರು ಕೂಡ ಕುಳಿತು ಸಮಾಲೋಚಿಸಿದರು. ಒಬ್ಬೊಬ್ಬರಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಅದರಲ್ಲಿ ಒಬ್ಬ ಆ ಮೂವರನ್ನುದ್ದೇಶಿಸಿ ಇಲ್ಲಿ ಯಾವುದೇ ಕೆರೆ, ಬಾವಿಗಳು ಇರುವಂತೆ ತೋಚುತ್ತಿಲ್ಲ. ನಾಳೆ ಬೆಳಗ್ಗೆ 10 ಗಂಟೆಗೆ ಕೊಡದ ತುಂಬಾ ನೀರು ತುಂಬಬೇಕು. ಅದಕ್ಕಾಗಿ ರಾತ್ರಿಯಾದ ಮೇಲೆ ಹುಲ್ಲಿನ ಮೇಲೆ ಇಬ್ಬನಿ ಮೂಡುತ್ತದೆ ಅದನ್ನು ಸಂಗ್ರಹಿಸಬಹುದು. ಅದನ್ನು ಸಂಗ್ರಹಿಸಲು ನಮ್ಮ ಬಳಿ ಯಾವುದೇ ಸಾಧನಗಳಿಲ್ಲ. ಹಾಗಾಗಿ ನಮ್ಮ ಬಳಿಯಿರುವ ಅಂಗಿಯನ್ನು ಹುಲ್ಲಿನ ಮೇಲೆ ಸವರುತ್ತಾ ಹೋದಾಗ ನೀರಿನಾಂಶವನ್ನು ಬಟ್ಟೆ ಹೀರುತ್ತದೆ. ಬಟ್ಟೆಯನ್ನು ಹಿಂಡಿದಾಗ ನೀರು ದೊರೆಯುತ್ತದೆ ಎಂದ. ಆ ಮೂವರನ್ನು ಆ ಕಾರ್ಯಕ್ಕೆ ಒಪ್ಪಿಸಿ ಕೆಲಸವನ್ನು ಹಂಚಿಕೆ ಮಾಡಿದ. ಮರುದಿನ ಊರಿನ ನಾಯಕ ಬಂದಾಗ ‘ಬಿ’ ತಂಡದವರಲ್ಲಿ ತುಂಬಿದ ಕೊಡವಿತ್ತು. ‘ಎ’ ತಂಡದವರು ಖಾಲಿ ಕೊಡದೊಂದಿಗೆ ಮರಳಿದ್ದರು. ‘ಬಿ’ ತಂಡದಲ್ಲಿ ನಾಯಕನಂತೆ ಇದ್ದ ಯುವಕ ತಾವು ಹೇಗೆ ನೀರನ್ನು ಸಂಗ್ರಹಿಸಿದೆವು ಎಂಬೆಲ್ಲ ವಿಚಾರಗಳನ್ನು ವಿಸ್ತøತವಾಗಿ ತಿಳಿಸಿದ. ಊರ ನಾಯಕ ಯುವಕನ ಜಾಣ್ಮೆ ಹಾಗೂ ನಾಯಕತ್ವ ಗುಣವನ್ನು ಮೆಚ್ಚಿಕೊಂಡ. ಇದು ಒಂದು ಉದಾಹರಣೆಯಷ್ಟೇ.
ಹೀಗೆ ಕಲಿಕೆ ಮತ್ತು ಜ್ಞಾನ ಎರಡೂ ನಮ್ಮಲ್ಲಿದ್ದಾಗ ಉದ್ಯೋಗ ದೊರೆಯುವುದು ಸುಲಭವಾಗುತ್ತದೆ. ಬದುಕು ಸುಂದರವಾಗುತ್ತದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *