ಬದುಕಿನಲ್ಲಿ ಗೆಲ್ಲುವುದು ಹೇಗೆ?

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು

ಗೆಲ್ಲಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಯಾವ ಮಾರ್ಗದ ಮೂಲಕ, ಹೇಗೆ ಗೆಲ್ಲಬೇಕೆಂಬ ಅರಿವು ಕೆಲವರಲ್ಲಿ ಇರುವುದಿಲ್ಲ. ಪ್ರತಿ ವರ್ಷವು ಹೊಸ ವರುಷದ ಆರಂಭದಲ್ಲಿ ಮುಂಬರುವ ವರ್ಷದಲ್ಲಿ ಬದುಕಿನಲ್ಲಿ ಗೆಲ್ಲುವ ಆಶಯಗಳೊಂದಿಗೆ ಹೆಚ್ಚಿನವರು ಹಲವಾರು ಪ್ರತಿಜ್ಞೆಗಳನ್ನು ಕೈಗೊಳ್ಳುತ್ತಾರೆ. ದೇವರ ಮೊರೆಯೂ ಹೋಗುತ್ತಾರೆ. ಆದರೆ ದಿನಕಳೆದಂತೆ ಬದುಕಿನಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುವುದಿಲ್ಲ.
‘‘ಹೇ ಭಗವಂತ, ನಾನೊಂದು ಸತ್ಕಾರ್ಯವನ್ನು ಆರಂಭಿಸಿದ್ದೇನೆ. ಇದರ ಮೇಲೆ ನಿಮ್ಮ ಅನುಗ್ರಹವಿರಲಿ’’ ಎಂಬುದಾಗಿ ಯಾವುದಾದರೊಂದು ಉತ್ತಮ ಕಾರ್ಯವನ್ನು ಆರಂಭಿಸುವ ಮೊದಲು ದೇವರನ್ನು ಪ್ರಾರ್ಥಿಸುವುದು ಭಾರತೀಯರ ಸಂಪ್ರದಾಯ. ಕಾರ್ಯಾರಂಭದಲ್ಲಿ ಭಗವತ್ ಸನ್ನಿಧಿಯಲ್ಲಿ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಗಳು ಸರ್ವತ್ರ ಯಶಸ್ವಿಯಾಗಿ ಪೂರ್ಣವಾಗುತ್ತಿವೆ. ಅಕಸ್ಮಾತ್ತಾಗಿ ಯಶಸ್ವಿಯಾಗಲಿಲ್ಲವೆಂದಾದರೆ ಅದಕ್ಕೆ ಕಾರಣವೇನೆಂದು ವಿಶ್ಲೇಷಣೆ ಮಾಡಿದಾಗ, ಕಾರಣಗಳು ಗೋಚರಿಸುತ್ತವೆ. ಅಂತಹ ಒಂದು ಸುಂದರ ಪ್ರಸಂಗವು ಇಲ್ಲಿ ನಿರೂಪಿತವಾಗಿದೆ.
ಓರ್ವ ಪ್ರಭಾವಶಾಲಿಯೂ, ಮಹಾಜ್ಞಾನಿಯೂ ಆದ ಸಂತರಿದ್ದರು. ಅವರ ಆಶ್ರಮದ ಅಕ್ಕಪಕ್ಕದಲ್ಲೇ ಎರಡು ರಾಜ್ಯಗಳಿದ್ದವು. ಅಲ್ಲಿನ ಇಬ್ಬರು ರಾಜರೂ ಆ ಸಂತರ ಪರಮಭಕ್ತರಾಗಿದ್ದರು. ಆದರೆ ಅವರಿಬ್ಬರು ಪರಸ್ಪರ ಕಡು ವೈರಿಗಳಾಗಿದ್ದರು. ಯುದ್ಧ ಸಿದ್ಧತೆಯಲ್ಲಿಯೂ ಇದ್ದರು. ಬೇರೆ ಬೇರೆ ಸಮಯದಲ್ಲಿ ಸಂತರೊಡನೆ ಆಶೀರ್ವಾದ ಕೇಳಲೆಂದು ಆಗಮಿಸಿದರು. ಮೊದಲು ಬಂದಿದ್ದ ರಾಜ ತುಸು ಅಹಂಕಾರಿಯಾಗಿದ್ದನು. ರಾಜನು ಸಂತರಿಗೆ ಭಕ್ತಿಯಿಂದ ಹಣ್ಣು ಹಂಪಲುಗಳ ಕಾಣಿಕೆಯೊಪ್ಪಿಸಿ ಆಶೀರ್ವಾದ ಬೇಡಿದಾಗ ಸಂತರು “ಸಕಲ ಕಾರ್ಯ ಸಿದ್ಧಿರಸ್ತು. ನೀನು ಖಂಡಿತವಾಗಿಯೂ ವಿಜಯಶಾಲಿಯಾಗುತ್ತೀಯಾ’’ ಎಂದು ಹರಸಿದರು. ರಾಜನಿಗೆ ಬಹಳ ಸಂತಸವಾಯಿತು.
ತುಸು ಹೊತ್ತಿನ ಬಳಿಕ ಮೊದಲು ಆಶೀರ್ವಾದವನ್ನು ಪಡೆದು ಹೋದ ರಾಜನ ವಿರುದ್ಧ ಹೋರಾಡಲಿರುವ ನೆರೆಯ ರಾಜ್ಯದ ರಾಜನು ಸಂತರ ಅನುಮತಿ – ಆಶೀರ್ವಾದ ಯಾಚಿಸಲು ಬಂದನು. ಆಗ ಸಂತರು, “ಯುದ್ಧದಲ್ಲಿ ನೀನು ಗೆಲ್ಲುವುದು ಕಷ್ಟಸಾಧ್ಯ’’ ಎಂದರು. ಆದರೆ ರಾಜ ಸಂತರ ವಚನದಿಂದ ಗಾಬರಿಯಾಗಲಿಲ್ಲ. ತನ್ನ ಸೇನಾಪತಿಯನ್ನು ಕರೆದು, “ನಾವು ಈ ಬಾರಿ ಇಮ್ಮಡಿ ಪ್ರಯತ್ನ ನಡೆಸಬೇಕು. ಪ್ರಾಣಾರ್ಪಣೆಗೂ ಸಿದ್ಧರೆಂಬಲ್ಲಿಯವರೆಗೆ ಸಿದ್ಧತೆ ನಡೆಯಲಿ’’ ಎಂದಾಗ ಅದೇ ರೀತಿ ಯುದ್ಧ ಸಿದ್ಧತೆ ನಡೆಯಿತು.
ಮೊದಲು ಆಶೀರ್ವಾದ ಪಡೆದ ರಾಜನು ಬಹಳ ಸಂತಸದಿoದ ಇದ್ದನು. ಅವನೂ, ಸೇನಾಪತಿಯೂ, ಸೈನಿಕರೂ ನಿಶ್ಚಿಂತೆಯಿoದ ಸಂತರ ಆಶೀರ್ವಾದವನ್ನೇ ನಂಬಿ, ಆನಂದ ಕ್ರೀಡೆಗಳಲ್ಲಿ ಮಗ್ನರಾಗಿ, ತಮ್ಮ ಕರ್ತವ್ಯಗಳನ್ನೇ ಮರೆತುಬಿಟ್ಟರು. ಆ ಬಳಿಕ ನಡೆದ ಯುದ್ಧದಲ್ಲಿ ರಾತ್ರಿ – ಹಗಲೆನ್ನದೆ ಸಿದ್ಧತೆ ನಡೆಸಿದ ರಾಜನ ಸೇನೆ ಗೆದ್ದಿತು. ಆಶೀರ್ವಾದವನ್ನೇ ನಂಬಿ ಯುದ್ಧ ಸಿದ್ಧತೆ ನಡೆಸದೆ ಸೋತ ರಾಜನು ಸಂತರ ಬಳಿ ದೂರು ನೀಡಿದ. ‘ಸಂತ ಮಹಾರಾಜ್, ನೀವು ನಮ್ಮನ್ನೂ ಆಶೀರ್ವದಿಸಿದಿರಿ. ಆದರೆ ಗೆಲುವು ಅವನಿಗೆ ಕೊಡಿಸಿದಿರಿ’ ಎಂದಾಗ ಸಂತರು ಸಮಾಧಾನಚಿತ್ತರಾಗಿ ಮುಗುಳುನಗುತ್ತಾ ನುಡಿದರು. ‘ಹೇ ರಾಜನ್, ಚಿಂತಿಸದಿರು. ನೀನು ಗೆಲ್ಲುವುದು ನಿಶ್ಚಿತವಾಗಿತ್ತು. ಆದರೆ ಪರಿಶ್ರಮ ಮತ್ತು ಪುರುಷಾರ್ಥದ ಬಲವಿದ್ದವರಿಗೆ ವಿಜಯ ನಿಶ್ಚಿತ. ಅಂಥ ಪ್ರಯತ್ನವನ್ನೇ ಮಾಡದೆ ನೀನು ಸೋಲನ್ನು ಬರಮಾಡಿಕೊಂಡೆ’ ಎಂದಾಗ ರಾಜನು ತಲೆತಗ್ಗಿಸಿ ಸಂತರ ಕ್ಷಮೆಯಾಚಿಸಿ ಹಿಂದಿರುಗಿದ.
ಈ ಪ್ರಪಂಚದಲ್ಲಿ ನಿಜವಾಗಿ ಯಶಸ್ಸನ್ನು ನಿರೀಕ್ಷಿಸುವವರು ಭಗವಂತನ ಕೃಪೆ – ಅನುಗ್ರಹ ಯಾಚಿಸಿದರೂ, ಆಲಸಿಗಳಾಗಿದ್ದರೆ ಫಲವನ್ನು ನಿರೀಕ್ಷಿಸುವಂತಿಲ್ಲ. ಪ್ರಾರ್ಥನೆಯ ಬಳಿಕ ಕರ್ಮನಿರತರಾಗಿ ವಿಶೇಷ ಪರಿಶ್ರಮ ಹಾಗೂ ಪುರುಷಾರ್ಥವುಳ್ಳವರಾಗಿ ಮುನ್ನಡೆದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾರೆ, ಗೆಲುವು ಸಾಧಿಸುತ್ತಾರೆ ಎಂಬುದನ್ನು ಮರೆಯಬಾರದು.
ಗೆಲ್ಲುವ ಛಲದೊಂದಿಗೆ ಪರಿಶ್ರಮ ಇದ್ದಾಗ ಭಗವಂತನ ಆಶೀರ್ವಾದ ತನ್ನಿಂತಾನಾಗಿಯೇ ಲಭಿಸುತ್ತದೆ. ಆಗ ಗೆಲುವು ನಮ್ಮದಾಗುತ್ತದೆ. ಹೊಸ ವರುಷ ೨೦೨೨ ಅನ್ನು ಹೊಸ ಸಂಕಲ್ಪಗಳೊoದಿಗೆ ಸ್ವಾಗತಿಸೋಣ. ಗೆಲುವಿಗಾಗಿ ಕೈಗೊಳ್ಳುವ ಪ್ರತಿಜ್ಞೆಗಳನ್ನು ಸಾಕಾರಗೊಳಿಸುವ ಪ್ರಯತ್ನಗಳೊಂದಿಗೆ ಮುಂದಡಿಯಿಡೋಣ. ಎಲ್ಲರಿಗೂ ಹೊಸ ವರ್ಷ ೨೦೨೨ರ ಶುಭಾಶಯಗಳು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *