ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರಿಗೆ ಅಭಿನಂದನೆ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮೂಲಕ ಈ ವರ್ಷದ ಎಲ್ಲ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನೆರವೇರಿವೆ. ವಿಶೇಷವಾಗಿ ನಮ್ಮ ರಾಜ್ಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭಿಸಿದ ಮೇಲೆ ಪ್ರತಿಯೊಂದು ಗ್ರಾಮಗಳಲ್ಲೂ ಕೂಡ ಸಂಘಗಳು ರಚನೆಯಾಗಿವೆ. ಗ್ರಾಮೀಣ ಮಹಿಳೆಯರು ಮತ್ತು ಪುರುಷರು ಸ್ವಸಹಾಯ ಸಂಘಗಳ ಸದಸ್ಯರಾಗಿದ್ದಾರೆ. ಯೋಜನೆಯ ಮೂಲಕ, ಕಿರು ಆರ್ಥಿಕ ಯೋಜನೆಯ ಮೂಲಕ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಂಡಿದ್ದಾರೆ.
ನಮ್ಮ ಎಲ್ಲ ಕಾರ್ಯಕರ್ತರೂ ನನ್ನ ಮತ್ತು ಶ್ರೀಮತಿ ಹೇಮಾವತಿಯವರ ಜೊತೆಗೆ ತಲ್ಲೀನರಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದ್ದೀರಿ. ಈ ವರ್ಷದ ಯೋಜನೆಯ ವರದಿಗಳನ್ನು ನೋಡುವಾಗ ನಮಗೆ ತುಂಬಾ ಸಂತೋಷವಾಗಿದೆ. ಸಂಘಗಳ ಗುರಿ ಸುಮಾರು 6 ಲಕ್ಷ ಇದ್ದು 6 ಲಕ್ಷದ 3 ಸಾವಿರ ಅಂದರೆ ಮೂರು ಸಾವಿರ ಸಂಘಗಳನ್ನು ಹೆಚ್ಚಾಗಿ ರಚಿಸಿದ್ದೀರಿ. ಶೇ.100ಕ್ಕಿಂತಲೂ ಹೆಚ್ಚಿನ ಸಾಧನೆಯನ್ನು ಮಾಡಿದ್ದೀರಿ. ಅದಲ್ಲದೆ ವಿಮೆ, ಮಹಿಳಾ ಸಬಲೀಕರಣ, ಜ್ಞಾನವಿಕಾಸದ ಕಾರ್ಯಕ್ರಮಗಳನ್ನು ಜನತೆಗೆ ಮುಟ್ಟಿಸುವಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದೀರಿ.
ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ತುಂಬಾ ಅಗಾಧವಾದ ಪರಿವರ್ತನೆಯಾಗಿದೆ. ಅನೇಕ ಮಹಿಳೆಯರಲ್ಲಿ ಸಬಲೀಕರಣ ಆಗಿದೆ, ಆತ್ಮವಿಶ್ವಾಸ ತುಂಬಿದೆ. ಇವತ್ತು ಮನೆಯ ಮತ್ತು ಸಂಸಾರದ ವ್ಯವಹಾರಗಳು, ಹೊಣೆಗಾರಿಕೆ ಕೇವಲ ಪುರುಷರ ಮೇಲಿಲ್ಲ. ದಂಪತಿಗಳ ಮೇಲಿದೆ ಅಥವಾ ಹೆಣ್ಮಕ್ಕಳ ಮೇಲಿದೆ ಎಂದರೂ ತಪ್ಪಾಗಲಾರದು. ನಮ್ಮ ಕಾರ್ಯಕರ್ತರು, ಸೇವಾಪ್ರತಿನಿಧಿಗಳು, ಮೇಲ್ವಿಚಾರಕರು, ಯೋಜನಾಧಿಕಾರಿಗಳು, ನಿರ್ದೇಶಕರು ಮತ್ತು ಪ್ರಾದೇಶಿಕ ನಿರ್ದೇಶಕರು ಎಲ್ಲ ಸೇರಿ ಬಹಳ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿದ್ದೀರಿ. ಕೊರೊನಾ ಸಂದರ್ಭದಲ್ಲಿ ಸಂಘದ ಮತ್ತು ಸಂಸ್ಥೆಯ ಶಿಸ್ತು ಉಳಿಯಬೇಕು. ಸಂಸ್ಥೆಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸಬೇಕು ಎಂದು ನೀವೆಲ್ಲ ಬಹಳ ಕಷ್ಟಪಟ್ಟಿದ್ದೀರಿ. ಕೊರೊನಾ ಸಮಯದಲ್ಲಿ ಎಲ್ಲಿ ಹೋದರೂ ಕೂಡಾ ಸಂಚಾರದ ವ್ಯವಸ್ಥೆ, ಪ್ರವಾಸದ ತಡೆಗಳು ಉಂಟಾಗುತ್ತಿತ್ತು. ಉದ್ಯೋಗದ ಕೊರತೆ, ಕೃಷಿಯ ಮಾರುಕಟ್ಟೆಯ ವ್ಯವಸ್ಥೆಯ ಕೊರತೆ ಮತ್ತು ಅನೇಕ ಕಡೆ ಹೆಣ್ಮಕ್ಕಳು ಮನೆಯಿಂದ ಹೊರಬರಲಾರದೆ ಸಾಮಾಜಿಕ ದಿಗ್ಬಂಧನ ಅನುಭವಿಸಿ ತಮ್ಮ ಆದಾಯವನ್ನು ಕಡಿಮೆ ಮಾಡಿಕೊಂಡು ಸಂಘದ ಬಗ್ಗೆ ಅವರಿಗೆ ಉತ್ಸಾಹ ಇದ್ದರೂ, ಸೇವಾ ಮನೋಭಾವ ಇದ್ದರೂ, ಸಂಘದ ಆರೋಗ್ಯವನ್ನು ರಕ್ಷಣೆ ಮಾಡಬೇಕೆನ್ನುವ ಪ್ರಜ್ಞೆ ಇದ್ದರೂ ಕೂಡಾ ಅಸಹಾಯಕರಾಗಿದ್ದರು. ಆದರೆ ಕಳೆದ ಮೂರು ತಿಂಗಳಲ್ಲಿ ನಮ್ಮ ಎಲ್ಲ ಕಾರ್ಯಕರ್ತರು ಮಾಡಿದ ಸಾಧನೆಯಿಂದಾಗಿ ನಮ್ಮ ಸಂಘಟನೆ ಮತ್ತೆ ಚೇತರಿಸಿಕೊಂಡಿದೆ ಮತ್ತು ತಮ್ಮ ಕಾರ್ಯಕ್ರಮಗಳನ್ನು ಮುಂದುವರಿಸಿದೆ. ಬ್ಯಾಂಕ್‌ಗಳ ಎಲ್ಲ ನಿರ್ವಾಹಕರು ಮತ್ತು ಅಧಿಕಾರಿಗಳು ಸಂತೋಷದಿ0ದ ಇದ್ದಾರೆ. ಈ ಸಂಘಟನೆಯಿAದ ಇನ್ನು ಮುಂದೆ ನಮ್ಮ ವ್ಯವಸ್ಥೆ ಸರಿಯಾಗಿ ನಡೆಯುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಹಾಗಾಗಿ ನಮ್ಮ ಎಲ್ಲ ಕಾರ್ಯಕರ್ತರಿಗೂ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ನಿಮ್ಮ ಉತ್ಸಾಹ ಹೀಗೆಯೇ ಇರಲಿ. ನಿಮ್ಮ ಭಾಗವಹಿಸುವಿಕೆ, ಪಾಲುದಾರಿಕೆ ಹೀಗೆಯೇ ಇರಲಿ, ಇನ್ನು ಮುಂದಿನ ದಿನಗಳಲ್ಲಿ ನೀವು ಅದ್ಭುತವಾದ ಸೇವೆಯನ್ನು ಜನತೆಗೆ ಮಾಡಲಿಕ್ಕಿದ್ದೀರಿ. ಯಾಕೆಂದರೆ ನನ್ನ ಅನುಭವದಂತೆ ಯೋಜನೆಯ ಕಾರ್ಯಕ್ರಮದಲ್ಲಿ ಆಗಿರುವ ಪರಿಣಾಮ ಅದ್ಭುತವಾದದ್ದು. ನಾವು ಸರಕಾರದ ಜೊತೆಗೇ ಸೇವೆ ಮಾಡುತ್ತಿದ್ದೇವೆ. ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ತಳಮಟ್ಟದ ಗ್ರಾಮ ಪಂಚಾಯತ್‌ವರೆಗೆ ಎಲ್ಲ ಸರಕಾರಿ ಕಾರ್ಯಕ್ರಮಗಳು ಕೂಡಾ ಜನರಿಗೆ ತಲುಪುವಲ್ಲಿ ನಾವು ಸಹಾಯ ಮಾಡುತ್ತೇವೆ. ಹಾಗಾಗಿ ಬಹಳ ಮುಖ್ಯವಾಗಿ ನಾವು ಗಮನಿಸುವುದು ಏನೆಂದರೆ ಈ ವರ್ಷ ಕೇಂದ್ರ ಸರಕಾರದ ಯೋಜನೆಯನ್ನು ನಾವು ಅಳವಡಿಸಿಕೊಂಡ ಮೇಲೆ ಕೇವಲ ಆರು ತಿಂಗಳಲ್ಲಿ ಆರು ಸಾವಿರ ಕಚೇರಿಗಳನ್ನು ತೆರೆದು ೨೫ ಲಕ್ಷ ಮಂದಿಗೆ ಇ- ಶ್ರಮ್ ಕಾರ್ಡ್, ಆಧಾರ್ ಕಾರ್ಡ್ಗಳನ್ನು ಕೊಟ್ಟಿರುವುದು ಕೇಂದ್ರ ಸರಕಾರಕ್ಕೆ ಆಶ್ಚರ್ಯವನ್ನು, ವಿಸ್ಮಯವನ್ನುಂಟು ಮಾಡಿದೆ. ಅಲ್ಲಿಯ ಐ.ಎ.ಎಸ್. ಅಧಿಕಾರಿಗಳು ಬಂದು ನಮ್ಮನ್ನು ಅಭಿನಂದಿಸಿದ್ದಾರೆ. ಇನ್‌ಶ್ಯೂರೆನ್ಸ್ನಲ್ಲಿ ಭಾರತದಲ್ಲಿ ಅತೀ ಹೆಚ್ಚು ವಿಮೆ ಮಾಡಿದಂತಹ ಸಂಸ್ಥೆ ಎಂದರೆ ನಮ್ಮ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್. ಆ ಹಿರಿಯ ಅಧಿಕಾರಿಗಳು ಕೂಡಾ ಇಲ್ಲಿಗೆ ಬಂದು ಅಭಿನಂದಿಸಿದ್ದಾರೆ. ಇವೆಲ್ಲ ಅಭಿನಂದನೆಗಳನ್ನು ಸ್ವೀಕರಿಸುವುದು ನಾವು ಆದರೂ ನಿಮ್ಮಿಂದಾಗಿ ನಮಗೆ ಈ ಗೌರವ, ಅಭಿಮಾನ ಮತ್ತು ಈ ಪ್ರಶಸ್ತಿಗಳು ಬರುತ್ತಿವೆ. ಇನ್ನು ಮುಂದಿನ ದಿನಗಳಲ್ಲಿಯೂ ಕೂಡಾ ಏಕಸೂತ್ರದಲ್ಲಿ ಕೆಲಸ ಮಾಡಿ. ಪ್ರತಿ ಕ್ಷಣವೂ ಮಂಜುನಾಥ ಸ್ವಾಮಿಯನ್ನು ಸ್ಮರಿಸಿಕೊಂಡು ಕೆಲಸ ಮಾಡಿ. ನೀವು ಯಾರೋ ಆಗಬಹುದಿತ್ತು. ಯಾವುದೋ ಕಂಪೆನಿಯಲ್ಲಿ ಕೆಲಸ ಮಾಡಬಹುದಿತ್ತು. ಬ್ಯಾಂಕಿನಲ್ಲಿ ಅಥವಾ ಇನ್ಯಾವುದೋ ಕಡೆ ಸಿಬ್ಬಂದಿ ಆಗಬಹುದಿತ್ತು. ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಂತಹ ಒಂದು ಕಾರ್ಯಕ್ರಮದಲ್ಲಿ ಸೇರ್ಪಡೆಯಾಗಿ ಜನತೆಯ ಜೊತೆ ಸ್ಪಂದಿಸಿ ಅವರ ಕಷ್ಟ – ಸುಖಗಳನ್ನು ತಿಳಿದುಕೊಂಡು ಅವರಿಗೆ ಮಾರ್ಗದರ್ಶನ ಕೊಟ್ಟು ಅವರಲ್ಲಿ ಚೈತನ್ಯವನ್ನು ಉಂಟು ಮಾಡುವ ಅವಕಾಶವನ್ನು ದೇವರು ಕೊಟ್ಟಿದ್ದಾನಲ್ಲ ಇದು ಈ ಜನ್ಮದ ಪುಣ್ಯವಲ್ಲ. ಹಿಂದಿನ ಮೂರು ಜನ್ಮದ ಪುಣ್ಯದಿಂದಾಗಿ ನಿಮಗೆ ಅದು ದೊರಕಿದೆ. ಯಾರಿಗೂ ನೋವಾಗುವಂತೆ, ಅವಮಾನ ಆಗುವಂತೆ ವರ್ತಿಸಬೇಡಿ. ಆದರೆ ನಿಮ್ಮ ಶಿಸ್ತು, ನಿಮ್ಮ ನಿಯಮಗಳು, ನಿಮ್ಮ ಕಾರ್ಯಕ್ರಮದ ಅನುಷ್ಠಾನದಲ್ಲಿ ಬರುವಂತಹ ಸಾಧನೆಗಳನ್ನು ಕಡಿಮೆ ಮಾಡಬೇಡಿ. ಯಾವುದೇ ಕಾರ್ಯಕ್ಕೂ ಕೂಡಾ ಆಲಸ್ಯ, ಸೋಮಾರಿತನ ಮಾಡುವುದು ಸರಿಯಲ್ಲ. ಹೇಗೂ ನಡೀತದೆ ಎನ್ನುವ ಭಾವನೆ ಸರಿಯಲ್ಲ. ಇವೆಲ್ಲವೂ ಕೂಡಾ ಮನುಷ್ಯ ಪ್ರಯತ್ನ, ದೈವಾನುಗ್ರಹದಿಂದ ನಡೆಯುತ್ತದೆ. ಮನುಷ್ಯ ಪ್ರಯತ್ನವಿಲ್ಲದೆ ದೈವಾನುಗ್ರಹವನ್ನು ಕೇಳಲು ಸಾಧ್ಯವಿಲ್ಲ. ದೈವಾನುಗ್ರಹ ಬೇಕಿದ್ದರೆ ಮನುಷ್ಯ ಪ್ರಯತ್ನ ಬೇಕು. ಈ ಎರಡನ್ನು ನಾವು ಮಾಡಬೇಕಾಗಿದೆ.
ಇನ್ನು ಮುಂದಿನ ದಿನಗಳಲ್ಲೂ ನಮ್ಮ ಕರ್ತವ್ಯವನ್ನು, ನಮ್ಮ ಸೇವೆಯನ್ನು ನಾವು ಮಾಡೋಣ. ಭಗವಂತನ ಅನುಗ್ರಹ ನಾವು ಮಾಡುವ ಕೆಲಸಕ್ಕೆ ಇರುತ್ತದೆ ಎನ್ನುವ ಭಾವನೆಯಿಂದ ಅತ್ಯಂತ ಯಶಸ್ವಿಯಾಗಿ ಕೆಲಸವನ್ನು ನಿರ್ವಹಿಸಿ. ನಿಮಗೆಲ್ಲ ಅಭಿನಂದನೆಗಳು.
ಮು0ದಿನ ದಿನಗಳಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಇಡೀ ವಿಶ್ವದಲ್ಲಿ ಗಮನ ಸೆಳೆಯುವಂತಹ ಕಾರ್ಯಕ್ರಮ ಆಗಬೇಕು ಎಂದು ಆಶಿಸಿ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ನಿಮ್ಮೆಲ್ಲರ ಮೇಲಿರಲಿ. ನನ್ನ ಮತ್ತು ಶ್ರೀಮತಿ ಹೇಮಾವತಿಯವರ ಶುಭಾಶಯಗಳು ನಿಮ್ಮ ಜೊತೆಗಿದೆ. ನೂತನ ಶುಭಕೃತ್ ಸಂವತ್ಸರ ಅತ್ಯಂತ ಒಳ್ಳೆಯ ಸಂವತ್ಸರ ಬಂದಿದೆ. ಇಷ್ಟು ವರ್ಷ ಸ್ವಲ್ಪ ಭೀಕರವಾದ ಸಂವತ್ಸರಗಳು ಬಂತು. ಈಗ ಅವು ಎಲ್ಲಾ ಹೋಯಿತು, ಕಾಯಿಲೆಗಳು ದೂರವಾದವು, ಅತಿವೃಷ್ಟಿ, ಅನಾವೃಷ್ಟಿಗಳೂ ಕೂಡಾ ಈ ವರ್ಷ ಸ್ವಲ್ಪ ದೂರವಾಗುವ ಸಂದರ್ಭಗಳು ಕಾಣಿಸುತ್ತಿವೆ.
ಎಲ್ಲರೂ ಕೂಡಾ ಉತ್ತಮ ಉತ್ಸಾಹ, ಚೈತನ್ಯ ಮತ್ತು ಆಸಕ್ತಿಯಿಂದ ಸೇವೆ ಮಾಡಿ ಎಂದು ಹೇಳುತ್ತಾ ನಿಮ್ಮೆಲ್ಲರನ್ನು ಅಭಿನಂದಿಸುತ್ತಾ ಎಲ್ಲರಿಗೂ ಮಂಜುನಾಥ ಸ್ವಾಮಿಯ ಆಶೀರ್ವಾದ, ಅನುಗ್ರಹವಿರಲಿ ಎಂದು ಪ್ರಾರ್ಥಿಸುತ್ತೇನೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *