ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಿಕೊಳ್ಳೋಣ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು

‘ಬದಲಾವಣೆ ಜಗದ ನಿಯಮ’ ಎಂಬ ಮಾತಿದೆ. ಇದು ನಿತ್ಯ, ಸತ್ಯ. ಬದಲಾವಣೆ ಎನ್ನುವುದು ಆಗುತ್ತಿರಬೇಕು. ಜಗತ್ತು ಜಡವಾಗಿರಬಾರದು. ನಾವು ಅಡುಗೆ ಮನೆಯಲ್ಲಿ ಇನ್ನೂ ಕಟ್ಟಿಗೆಯನ್ನೇ ಬಳಸಬೇಕು, ಇದ್ದಿಲನ್ನೇ ಬಳಸಬೇಕು ಎಂದು ಹೇಳಲು ಸಾಧ್ಯವಿಲ್ಲ. ಆಹಾರ – ವಿಹಾರ – ವಿಚಾರದಲ್ಲಿ ಬದಲಾವಣೆ ಆಗುತ್ತಲೇ ಇರಬೇಕು. ಆದರೆ ಅದರಿಂದ ಸೋಮಾರಿತನ, ದೈಹಿಕ ಆಲಸ್ಯ ಉಂಟಾಗಬಾರದು. ಆದರೆ ಇಂದು ಆಹಾರ – ವಿಹಾರ – ವಿಚಾರದಲ್ಲಿ ನಾವೆಷ್ಟು ಬದಲಾಗಿದ್ದೇವೆ ಎಂದರೆ ನಮ್ಮ ಬದಲಾವಣೆ ಆರೋಗ್ಯದ ದೃಷ್ಟಿಯಲ್ಲಿ ಮಾರಕ ಪರಿಣಾಮ ಬೀರುತ್ತಿದೆ. ಆರಾಮದ ಜೀವನಶೈಲಿಯಿಂದ ಅನೇಕ ವ್ಯಾಧಿಗಳು ಬರುತ್ತವೆ. ಎಲ್ಲದಕ್ಕೂ ಆಸ್ಪತ್ರೆಗಳಿವೆಯಲ್ಲ! ವೈದ್ಯರಿದ್ದಾರಲ್ಲ! ಚಿಕಿತ್ಸೆಗಳು ಇವೆಯಲ್ಲ! ಎಂದು ಚಿಂತಿಸುತ್ತಿದ್ದೇವೆ. ವೈದ್ಯರ ಸೂಚನೆ ಇಲ್ಲದೆ ಸ್ವತಃ ಔಷಧ ಪಡೆಯುವುದು, ಅತಿಯಾದ ಔಷಧ ಸೇವನೆ ನಮ್ಮನ್ನು ಅಪಾಯಕ್ಕೆ ತಳ್ಳುತ್ತಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ವಹಿಸುವ ರೀತಿಯಲ್ಲಿನ ನಮ್ಮ ನಿರ್ಲಕ್ಷö್ಯದ ಜೀವನಶೈಲಿಯು ಅನೇಕ ರೀತಿಯ ಪರಿಸರ ಮಾಲಿನ್ಯಕ್ಕೂ ಎಡೆ ಮಾಡಿಕೊಡುತ್ತದೆ. ನಮ್ಮ ಬದುಕಿಗೆ ಅಪಾಯ ತಂದೊಡ್ಡುತ್ತಿದೆ.
ಆರೋಗ್ಯಕರ ಜೀವನಶೈಲಿಯನ್ನು ಪಡೆಯಬೇಕಾದರೆ ನಾವು ಕೆಲವು ಕ್ರಮಗಳನ್ನು ಅನುಸರಿಸಬೇಕು. ಮುಖ್ಯವಾಗಿ ಆಲಸ್ಯವನ್ನು ದೂರ ಮಾಡಬೇಕು. ಮನೆಯಲ್ಲಿ ಭೋಗ ಜೀವನಕ್ಕೆ ಬೇಕಾದ ಸಕಲ ವ್ಯವಸ್ಥೆಗಳಿದ್ದರೂ ಕನಿಷ್ಠ ವ್ಯಾಯಾಮವನ್ನು ಮಾಡಬೇಕು. ದಶಕಗಳ ಹಿಂದೆ ಮಹಿಳೆಯರು ಕಸ ಗುಡಿಸುತ್ತಿದ್ದರು, ನೀರು ಸೇದುತ್ತಿದ್ದರು, ಬಟ್ಟೆ ಒಗೆಯುತ್ತಿದ್ದರು, ಅಡುಗೆ ಮನೆಯಲ್ಲಿ ರುಬ್ಬುವ ಕಲ್ಲಿನ ಉಪಯೋಗ ಮಾಡುತ್ತಿದ್ದರು. ಆದರೆ ಈಗ ಎಲ್ಲವೂ ಯಂತ್ರದ ಮೂಲಕ ಆಗುತ್ತಿದ್ದು ದೇಹಕ್ಕೆ ಸರಿಯಾದ ವ್ಯಾಯಾಮ ದೊರೆಯುತ್ತಿಲ್ಲ. ಈ ಪರಿವರ್ತಿತ ಜೀವನದಲ್ಲಿ ವ್ಯಾಯಾಮವನ್ನು ಹೇಗೆ ಮಾಡಿಕೊಳ್ಳಬೇಕು, ಮಕ್ಕಳನ್ನು ಬೆಳೆಸುವಾಗ ಅವರನ್ನು ಯಾವೆಲ್ಲ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದನ್ನು ಮನಗಾಣಬೇಕು. ಹಿಂದಿನ ಕಾಲದಲ್ಲಿ ಮಕ್ಕಳು ಅನೇಕ ರೀತಿಯ ಆಟಗಳನ್ನು ಆಡುತ್ತಿದ್ದರು. ವಿವಿಧ ರೀತಿಯ ಕೆಲಸ – ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಆದರೆ ಇಂದಿನ ಮಕ್ಕಳು ಕೇವಲ ಲ್ಯಾಪ್‌ಟಾಪ್ ಅಥವಾ ಮೊಬೈಲ್ ಇಟ್ಟುಕೊಂಡು ದಿನಪೂರ್ತಿ ಆಡುತ್ತಿರುತ್ತಾರೆ. ಇದು ಕೆಟ್ಟದ್ದೋ, ಒಳ್ಳೆಯದೋ ಎನ್ನುವ ವಿಚಾರದ ವಿಮರ್ಶೆ ಮುಖ್ಯವಲ್ಲ. ಆದರೆ ಈ ಬೆಳವಣಿಗೆಯಿಂದ ಮಕ್ಕಳ ಆರೋಗ್ಯ, ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹಳೆ ಬೇರು ಹೊಸ ಚಿಗುರು ಎರಡನ್ನೂ ಅಳವಡಿಸಿಕೊಳ್ಳಲೇಬೇಕು. ಆಧುನಿಕತೆಯ ರಭಸಕ್ಕೆ ಹಳೆಯ ಉತ್ತಮ ಸಂಪ್ರದಾಯಗಳನ್ನು ನಾವು ಗಾಳಿಗೆ ತೂರಬಾರದು ಎನ್ನುವುದು ನಮ್ಮ ಬಯಕೆ. ಈ ನಿಟ್ಟಿನಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಜೀವನ ನಮಗೆ ಹೆಚ್ಚು ಸಹಕಾರಿ.
ನಾನು ಅಮೇರಿಕಾಕ್ಕೆ ಹೋಗಿದ್ದಾಗ ಗಮನಿಸಿದ್ದೇನೆಂದರೆ ಅಲ್ಲಿ ಅವರ ಮನೆಯನ್ನು ಅವರೇ ಸ್ವಚ್ಛ ಮಾಡಿಕೊಳ್ಳುತ್ತಿದ್ದರು. ಮನೆಯ ಹಿಂದಿರುವ ಹೋದೋಟವನ್ನು ಶುಚಿ ಮಾಡುವುದು, ಕಳೆ ತೆಗೆಯುವುದು, ಹೊಸ ಗಿಡ ನೆಡುವುದು ಹೀಗೆ ಎಲ್ಲವನ್ನೂ ಅವರೇ ಮಾಡುತ್ತಿದ್ದರು. ಎಷ್ಟರ ಮಟ್ಟಿಗೆ ಸ್ವಚ್ಛ ಮಾಡುತ್ತಿದ್ದರೆಂದರೆ ಒಂದು ತರಗೆಲೆಯೂ ನೆಲದಲ್ಲಿ ಬಿದ್ದಿರುತ್ತಿರಲಿಲ್ಲ. ಆಶ್ಚರ್ಯಚಕಿತನಾಗಿ ನಾನು ಅವರಲ್ಲಿ ಕೇಳಿದೆ, “ಏನು, ಎಲ್ಲಾ ತೋಟಗಾರಿಕೆಯ ಕೆಲಸವನ್ನೂ ನೀವೇ ಮಾಡುತ್ತಿದ್ದೀರಿ, ಕೆಲಸಗಾರರು ಬರುವುದಿಲ್ಲವೇ ಎಂದು?’’ ಅದಕ್ಕೆ ಅವರು “ಇಲ್ಲಿ ಯಾರೂ ಕೆಲಸಕ್ಕೆ ಜನ ಸಿಗೋದಿಲ್ಲ. ವಾರವಿಡೀ ನಾವು ದುಡಿಯುತ್ತೇವೆ, ಆದರೆ ಶನಿವಾರ, ಭಾನುವಾರ ನಾವು ಮನೆಯ ಕೆಲಸವನ್ನು ಮಾಡಿಕೊಳ್ಳುತ್ತೇವೆ. ಮನೆಯ ಎದುರು ಮರದ ಒಂದು ಎಲೆ ಬಿದ್ದಿದ್ದರೂ ಕೂಡಾ ಸರಕಾರದವರು ದಂಡ ಹಾಕುತ್ತಾರೆ.’’ ಎಂದು ಉತ್ತರಿಸಿದರು.
ವಿದೇಶದಲ್ಲಿರುವ ಜನರು ಸೋಮಾರಿಗಳಾಗಿದ್ದಾರೆ, ಹಾಗಾಗಿ ಸರಕಾರದವರು ದಂಡ ವಿಧಿಸುತ್ತಾರೆ ಎನ್ನುವ ಭಯಕ್ಕೆ ದುಡಿಯುತ್ತಾರೆ ಎನ್ನುವ ತಪ್ಪು ಕಲ್ಪನೆ ಬೇಡ. ಆದರೆ ಅವರ ದುಡಿಮೆಯಲ್ಲಿ ಆಧುನಿಕ ಯಂತ್ರಗಳು ಅವರ ಶ್ರಮವನ್ನು ಕಡಿಮೆ ಮಾಡುತ್ತಿದ್ದವು. ಅವರು ಯೋಗ ಮತ್ತು ಪ್ರಾಣಾಯಾಮದ ಜೊತೆಗೆ ಅನೇಕ ವ್ಯಾಯಾಮಗಳನ್ನು ಮಾಡಿ ಅವರ ದೇಹದ ಕ್ಷಮತೆಯನ್ನು ಕಾಪಾಡಿಕೊಳ್ಳುತ್ತಿದ್ದರು. ದೇಹಾರೋಗ್ಯವನ್ನು ಸುಸ್ಥಿತಿಯಲ್ಲಿರಿಸಲು ಪರಿಣಾಮಕಾರಿಯಾದ ಮದ್ದು ಎಂದರೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ. ಯೋಗ – ಪ್ರಾಣಾಯಾಮ ಮೈಗೂಡಿಸಿಕೊಳ್ಳುವುದು ಪ್ರಸ್ತುತ ಅಗತ್ಯವಾಗಿದೆ. ಬದಲಾಗುತ್ತಿರುವ ಬದುಕಿಗೆ ಒಗ್ಗಿಕೊಂಡು ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಳ್ಳೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *