ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ನಮ್ಮ ಸುತ್ತಮುತ್ತಲಿನ ಪ್ರದೇಶ, ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿ ಇರದಿದ್ದರೆ ಸರಕಾರ, ಜನಪ್ರತಿನಿಧಿಗಳತ್ತ ಬೊಟ್ಟು ಮಾಡಿ ತೋರಿಸುವ ನಾವು ಪ್ರತಿದಿನ ನಮ್ಮ ಮನೆಯಲ್ಲಿ ನಾವು ಸ್ವಚ್ಛತೆಗೆ ಎಷ್ಟು ಸಮಯವನ್ನು ಮೀಸಲಿರಿಸುತ್ತೇವೆ ಎಂದು ಯೋಚಿಸಬೇಕಿದೆ. ದಿನದಲ್ಲಿ ಹತ್ತು ನಿಮಿಷಗಳನ್ನು ಮನೆಯ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗಾಗಿ ಮೀಸಲಿಡದ ಎಷ್ಟೋ ಮಂದಿ ಇದ್ದಾರೆ. ಹೀಗಿರುವಾಗ ಪರಿಸರ ಸ್ವಚ್ಛತೆಯ ಪ್ರಜ್ಞೆ ಅವರಲ್ಲಿ ಹೇಗೆ ಬರಲು ಸಾಧ್ಯ? ನಮ್ಮ ಸುತ್ತಲಿನ ಪರಿಸರ, ಸಾರ್ವಜನಿಕ ಸ್ಥಳಗಳ ‘ಸ್ವಚ್ಛತೆ ನಮ್ಮ ಕರ್ತವ್ಯ’ ಎಂಬ ಪ್ರಜ್ಞೆ ಎಲ್ಲರಲ್ಲಿ ಬೆಳೆದಾಗ ಸ್ವಚ್ಛ ಸಮಾಜದ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ.
ವಿದೇಶಿಗರಲ್ಲಿ ಈಗಾಗಲೇ ಸ್ವಚ್ಛತೆ ಎನ್ನುವುದು ಅವರ ಸಂಸ್ಕೃತಿಯ ಒಂದು ಭಾಗವಾಗಿರುವುದನ್ನು ನಾವು ಕಾಣಬಹುದು. ನಾವು ಟಿ.ವಿ.ಯಲ್ಲಿ ವಿದೇಶಗಳ ಪರಿಸರ, ಅಲ್ಲಿನವರ ಮನೆಗಳನ್ನು, ರಸ್ತೆ, ಇನ್ನಿತರ ಜಾಗಗಳನ್ನು ನೋಡುವಾಗಲು ಎಲ್ಲವೂ ಹಚ್ಚ ಹಸಿರಿನಿಂದ ತುಂಬಿರುತ್ತದೆ. ಒಂದಿನಿತೂ ಜಾಗವನ್ನು ಖಾಲಿ ಬಿಡದೆ ಸದ್ವಿನಿಯೋಗ ಮಾಡಿಕೊಂಡಿರುತ್ತಾರೆ. ಒಂದೋ ಗಿಡ ನೆಟ್ಟಿರುತ್ತಾರೆ. ಇಲ್ಲವಾದರೆ ಕಾಂಕ್ರೀಟ್, ಇಂಟರ್‌ಲಾಕ್ ಹಾಕಿರುತ್ತಾರೆ. ಮರಗಳಿಂದ ದಿನವೂ ಉದುರುವ ಎಲೆಗಳೂ ಕೂಡ ಕಾಣಸಿಗುವುದಿಲ್ಲ. ಕೆಲವು ವರ್ಷಗಳ ಹಿಂದೆ ನಾವು ಅಮೆರಿಕಕ್ಕೆ ಪ್ರವಾಸ ಹೋದಾಗ ಅಲ್ಲಿದ್ದ ಪರಿಚಿತರೊಬ್ಬರು ತನ್ನ ಮನೆಯಲ್ಲಿ ಉಳಿದುಕೊಳ್ಳಬೇಕು ಎಂದು ಬಹಳ ಹಠ ಮಾಡಿದ್ದರಿಂದ, ಒಂದು ದಿನ ಅಲ್ಲಿಯೇ ಉಳಿದುಕೊಂಡೆವು. ಅದು ಅಮೆರಿಕದ ವಾಸ್ತುಶೈಲಿಯಲ್ಲಿ ನಿರ್ಮಿತವಾದ ಮನೆ. ಬಹಳ ತೆಳುವಾದ ಬಾಗಿಲು, ಮನೆಯ ಸುತ್ತಮುತ್ತ ವಿಶಾಲವಾದ ಜಾಗವಿತ್ತು. ಅಲ್ಲಿ ಹಸಿರು ತುಂಬಿತ್ತು. ಎಲ್ಲೂ ಕಸ ಕಾಣಲು ಸಿಗುತ್ತಿರಲಿಲ್ಲ. ಇಷ್ಟೊಂದು ಸ್ವಚ್ಛತೆಯಿಂದ ಪರಿಸರವನ್ನು ಹೇಗೆ ಇಟ್ಟುಕೊಳ್ಳಲು ಸಾಧ್ಯ ಎಂದು ನಮಗೆ ಆಶ್ಚರ್ಯವಾಯಿತು. ಈ ರೀತಿಯ ಸ್ವಚ್ಛತೆ ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ಮೂಡುವುದು ಸಹಜ. ನಾವು ಉಳಿದುಕೊಂಡಿದ್ದ ಮನೆಯವರಲ್ಲಿ ‘ಮರಗಳಿಂದ ಬಿದ್ದ ತರಗೆಲೆಗಳೂ ಇಲ್ಲದಂತೆ ಶುಚಿತ್ವ ಕಾಪಾಡಿಕೊಂಡಿರುವುದು ಹೇಗೆ?’ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು ‘ಇಲ್ಲಿ ಈ ರಸ್ತೆಯಲ್ಲಿರುವಂತಹ 50-100 ಮನೆಗಳಿಗೆ ಒಂದು ಸಮಿತಿ ಇರುತ್ತದೆ. ಆ ಸಮಿತಿಯಲ್ಲಿ ಒಪ್ಪಂದ ಮಾಡಿಕೊಂಡ ಪ್ರಕಾರ ನಮ್ಮ ಮನೆಯ ಸುತ್ತಮುತ್ತಲಿನ ಜಾಗವನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳಬೇಕಾಗುತ್ತದೆ. ತರಗೆಲೆಗಳು ಬಿದ್ದು ಹಿಮ, ನೀರು ಸೇರಿಕೊಂಡು ಅಲ್ಲೇ ಕೊಳೆತು ಕ್ರಿಮಿಕೀಟಗಳು ಸೃಷ್ಟಿಯಾದರೆ ನಮ್ಮ ಮನೆಯ ಪರಿಸರಕ್ಕೂ, ಆರೋಗ್ಯಕ್ಕೂ ಮಾರಕ. ಅಲ್ಲದೆ ಅಕ್ಕಪಕ್ಕದವರಿಗೂ ತೊಂದರೆಯಾಗುತ್ತದೆ. ಶನಿವಾರ ಮತ್ತು ಭಾನುವಾರ ನಮಗೆ ರಜಾದಿನವಾಗಿದ್ದು ಅಂದು ವಿಶೇಷವಾಗಿ ಮನೆಯ ಯಜಮಾನ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆಯನ್ನು ಮಾಡಬೇಕಾಗುತ್ತದೆ. ಈ ಕೆಲಸಕ್ಕೆ ಮನೆಯ ಮಕ್ಕಳನ್ನೂ ಸೇರಿಸಿಕೊಳ್ಳಲಾಗುತ್ತದೆ. ಈ ಮೂಲಕ ಬಾಲ್ಯದಿಂದಲೇ ಅವರಿಗೂ ಸ್ವಚ್ಛತೆಯ ಜಾಗೃತಿ ಮೂಡಿಸಲಾಗುತ್ತದೆ. ಎಲ್ಲ ತ್ಯಾಜ್ಯಗಳನ್ನು ಮನೆ ಹತ್ತಿರದಲ್ಲಿರುವ ತ್ಯಾಜ್ಯದ ಡ್ರಮ್‌ಗೆ ಹಾಕಿದರೆ ಆಯಾ ಪ್ರದೇಶದ ಆಡಳಿತ ವ್ಯವಸ್ಥೆ ನೋಡಿಕೊಳ್ಳುವ ಸಂಸ್ಥೆ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಿಸುವ ವ್ಯವಸ್ಥೆಯನ್ನು ಮಾಡುತ್ತದೆ. ಒಂದು ವೇಳೆ ನಾವು ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ದಂಡ ಹಾಕುತ್ತಾರೆ’ ಎಂದು ಅವರು ಹೇಳಿದರು.
ಜಪಾನ್, ಚೀನಾ ದೇಶಗಳಿಗೆ ಪ್ರವಾಸ ಹೋದಾಗಲೂ ಅವರು ಸ್ವಚ್ಛತೆಗೆ ನೀಡುವ ಮಹತ್ವವನ್ನು ಗಮನಿಸಿದ್ದೇನೆ. ಅಲ್ಲಿನ ಪರಿಸರ ಸ್ವಚ್ಛವಾಗಿ ಕಂಗೊಳಿಸುವುದರ ಹಿಂದೆ ಅಲ್ಲಿನ ಪ್ರತಿಯೊಬ್ಬ ಪ್ರಜೆಯ ಪ್ರಯತ್ನವಿರುವುದನ್ನು ನಾವು ಗಮನಿಸಬಹುದು. ಆದರೆ ನಾವು ಸ್ವಚ್ಛತೆಯ ವಿಷಯದಲ್ಲಿ ವಿದೇಶಗಳಿಗೆ ಹೋಲಿಸಿದರೆ ಬಹಳ ಹಿಂದೆ ಇದ್ದೇವೆ. ನಮ್ಮಲ್ಲಿ ಇಂದಿಗೂ ಮನೆಯ ಸುತ್ತಮುತ್ತ ತರಕಾರಿ ಸಿಪ್ಪೆಯಿಂದ ಹಿಡಿದು ಪ್ಲಾಸ್ಟಿಕ್, ಬಾಟಲಿ ಹೀಗೆ ಅನೇಕ ರೀತಿಯ ತ್ಯಾಜ್ಯಗಳನ್ನು ಬಿಸಾಡಿರುವುದನ್ನು ಕಾಣುತ್ತೇವೆ. ಕೋಳಿ, ನಾಯಿ ಅಥವಾ ಹಂದಿಗಳು ಇದ್ದರೆ ಎಸೆದ ತ್ಯಾಜ್ಯಗಳಲ್ಲಿ ಕೆಲವೊಂದನ್ನು ಅವು ತಿನ್ನುತ್ತವೆ. ಆದರೆ ಹೊಲಸು ತಿನ್ನಲು ಕೋಳಿ, ನಾಯಿಗಳು ಇವೆಯಲ್ಲ ಎಂದುಕೊAಡು ಅಲ್ಲಲ್ಲಿ ಬಿಸಾಡುವುದು, ಗಲೀಜು ಮಾಡುವುದು ಸರಿಯಲ್ಲ. ಯಾಕೆಂದರೆ ತ್ಯಾಜ್ಯ ವಸ್ತುಗಳು ಕೊಳೆತು ನಾರತೊಡಗಿದರೆ ಪ್ರಾಣಿಗಳೂ ಅವುಗಳನ್ನು ಮುಟ್ಟುವುದಿಲ್ಲ. ಇಂತಹ ಅಸಹ್ಯ ವಾತಾವರಣ ನಿರ್ಮಿಸಿಕೊಂಡು, ಆಮೇಲೆ ಕಷ್ಟಪಡುವ ಬದಲು ದಿನಕ್ಕೆ ಕೇವಲ ಹತ್ತು ನಿಮಿಷ ಮನೆಯ ಸುತ್ತಮುತ್ತ ಸ್ವಚ್ಛತೆಗೆ ಮೀಸಲಿರಿಸಿದರೆ ಸಮಸ್ಯೆ ಖಂಡಿತ ಪರಿಹಾರವಾಗುತ್ತದೆ. ಹಳ್ಳಿ-ನಗರವಾಸಿಗಳಲ್ಲಿ ಈ ಪ್ರಜ್ಞೆ, ಅರಿವು ಮೂಡಬೇಕಿದೆ. ನಗರಗಳಲ್ಲಿ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆಗಳಿದ್ದರೂ ರಸ್ತೆಯ ಕೊನೆಗೋ, ಮೋರಿಗೋ ಕಸದ ಚೀಲಗಳನ್ನು ಎಸೆಯುವವರಿದ್ದಾರೆ. ತೊಟ್ಟಿ ಇದ್ದರೂ ಅದಕ್ಕೆ ಕಸ ಹಾಕದೆ ಎಲ್ಲೆಂದರಲ್ಲಿ ಹಾಕುವವರನ್ನು ಕಾಣಬಹುದು.
ನಾವು ಸಂಕುಚಿತ ಯೋಚನೆಗಳನ್ನು ಬಿಟ್ಟು ಸ್ವಚ್ಛತೆಯ ವಿಷಯದಲ್ಲಿ ವಿಶಾಲವಾಗಿ ಯೋಚಿಸಬೇಕಿದೆ. ಈ ಪರಿಸರ, ಸಮಾಜ ‘ನನ್ನದಲ್ಲ’ ಎನ್ನುವ ಭಾವನೆಯನ್ನು ತೊಡೆದುಹಾಕಿ ‘ನಮ್ಮದು’ ಎನ್ನುವ ಭಾವನೆಯನ್ನು ಮೈಗೂಡಿಸಿಕೊಂಡರೆ ದೇಶವನ್ನು ಸ್ವಚ್ಛ ಪಥದಲ್ಲಿ ಮುನ್ನಡೆಸಲು ಸಾಧ್ಯ. ನಮ್ಮ ಮಕ್ಕಳಿಗೂ ಮನೆಗಳಿಂದಲೇ ಸ್ವಚ್ಛತೆಯ ಪಾಠ ದೊರೆಯುವಂತಾಗಬೇಕು. ಆಗ ನಮ್ಮ ದೇಶ ಮತ್ತು ಸಂಸ್ಕೃತಿಯನ್ನು ಇತರರೂ ಗೌರವದಿಂದ ಕಾಣುವಂತಾಗುತ್ತದೆ.