ಮನುಷ್ಯ ಪ್ರಯತ್ನ ಮತ್ತು ದೈವಾನುಗ್ರಹ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು

ದೈವಾನುಗ್ರಹ ಮತ್ತು ಮನುಷ್ಯ ಪ್ರಯತ್ನ ಈ ಎರಡು ಪದಗಳಿಗೂ ವಿಶಾಲವಾದ ಅರ್ಥಗಳಿವೆ. ದೈವಾನುಗ್ರಹವನ್ನು ಪಡೆಯುವುದು ಹೇಗೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ. ದೇವರಿಗೆ ಕೈಮುಗಿದರೆ, ಬೇಡಿಕೊಂಡರೆ, ಹರಕೆ ಹೊತ್ತರೆ, ಪೂಜೆ ಮಾಡಿಸಿದ ಮಾತ್ರಕ್ಕೆ ದೈವಾನುಗ್ರಹ ಒಲಿಯುವುದಿಲ್ಲ.
ಮೊದಲೆಲ್ಲಾ ಗದ್ದೆಯ ಬೇಸಾಯ ಪ್ರಾರಂಭ ಮಾಡಬೇಕಾದರೆ ಭೂಮಿ ಪೂಜೆ ಮಾಡುವುದು, ನೇಜಿ ನಾಟಿಗೆ ಒಳ್ಳೆಯ ಮುಹೂರ್ತ ನೋಡುವ, ದೈವ – ದೇವರುಗಳಿಗೆ ಹರಕೆ ಹೇಳುವ ರೂಢಿ ಇತ್ತು. ಇದರ ಹಿಂದಿನ ಉದ್ದೇಶ ಇಷ್ಟೇ. ನಮ್ಮ ಬಹುಪಾಲು ಶ್ರಮದ ಜೊತೆಗೆ ದೈವಾನುಗ್ರಹ ಇರಲೆಂದು ದೇವರಲ್ಲಿ ಬೇಡುವುದಾಗಿದೆ.
ಒಬ್ಬ ಆಲಸಿ ‘ನಾನು ಏನೂ ಕೆಲಸ ಮಾಡುವುದಿಲ್ಲ, ದೇವರು ಇರೋದೆ ಆದ್ರೆ ನನಗೆ ಒಳ್ಳೆಯದು ಮಾಡಲಿ’ ಅಂದನ0ತೆ. ಅದಕ್ಕೆ ದೇವರು ‘ನಾನು ಏನು ಮಾಡಲಿ? ಮೊದಲು ನೀನು ನಿನ್ನ ಭೂಮಿಯನ್ನು ಸರಿಯಾಗಿ, ಆಳವಾಗಿ ಉಳುಮೆ ಮಾಡು. ಆಗ ಮಾತ್ರ ಫಲವತ್ತತೆಯ ಮಣ್ಣು ತಯಾರಾಗುತ್ತದೆ. ಭೂಮಿಯಲ್ಲಿ ನೀರು ಸರಿಯಾಗಿ ಇಂಗಿಸಿದರೆ, ನೀರನ್ನು ಸರಿಯಾಗಿ ಬಳಕೆ ಮಾಡಿದರೆ ಉತ್ತಮವಾದ ಬೆಳೆ ಸಿಗುತ್ತದೆ. ಉತ್ತಮವಾದ ಬೀಜವನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚು ಫಸಲು ಸಿಗುತ್ತದೆ. ಬೀಜವನ್ನು ಆಯ್ಕೆ ಮಾಡುವಾಗ ದೇವರಿಗೆ ಹರಕೆ ಹೇಳಿದೆನೆಂದುಕೊ0ಡು ಕೈಗೆ ಸಿಕ್ಕ ಬೀಜಗಳನ್ನು ಬಿತ್ತಿದರೆ ಅದರಿಂದ ದೈವಾನುಗ್ರಹ ದೊರೆಯಲಾರದು. ಬೀಜದ ರಾಶಿಯಿಂದ ಉತ್ತಮವಾದ ಬೀಜವನ್ನು ಆಯ್ಕೆ ಮಾಡಿಕೊಂಡು ಬಿತ್ತಬೇಕು. ಉತ್ತಮ ಗೊಬ್ಬರವನ್ನು ಹಾಕಬೇಕು. ಆಗ ನನ್ನ ಆಶೀರ್ವಾದ ಇದ್ದೇ ಇರುತ್ತದೆ’ ಅಂದರ0ತೆ. ಹೀಗೆ ಮನುಷ್ಯ ಪ್ರಯತ್ನ ಮಾಡಿದಾಗ ದೇವರು ಕೂಡಾ ಆಶೀರ್ವಾದ ಮಾಡುತ್ತಾನೆ. ಇಲ್ಲದಿದ್ದರೆ ದೇವರು ಕೂಡಾ ಏನು ಮಾಡಲು ಆಗುವುದಿಲ್ಲ.
ಮನುಷ್ಯ ಪ್ರಯತ್ನವನ್ನು ಹೇಗೆ ಮಾಡಬೇಕೆಂಬುದನ್ನು ಗ್ರಾಮಾಭಿವೃದ್ಧಿ ಯೋಜನೆ ತನ್ನ ಫಲಾನುಭವಿಗಳಿಗೆ ಚೆನ್ನಾಗಿ ತಿಳಿಸಿಕೊಟ್ಟಿದೆ. ಪರಿಣಾಮವಾಗಿ ಇಂದು ಪ್ರತಿ ಗ್ರಾಮದಲ್ಲಿ ತಮ್ಮ ಸಾಧನೆಯ ಮೂಲಕ ದೈವಾನುಗ್ರಹವನ್ನು ಕಂಡುಕೊAಡು ಲಕ್ಷಾಂತರ ಮಂದಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಯೋಜನೆಯ ವತಿಯಿಂದ ಅನುಷ್ಠಾನಿಸಲಾಗುವ ‘ಯಂತ್ರಶ್ರೀ’ ಪದ್ಧತಿ ಬೇಸಾಯ, ಸಾಮಾಜಿಕ ಅರಣ್ಯೀಕರಣ, ಜನಜಾಗೃತಿ ಶಿಬಿರಗಳು ಹೀಗೆ ಎಲ್ಲಾ ಕಾರ್ಯಕ್ರಮಗಳು ಯೋಜನೆಯ ಫಲಾನುಭವಿಗಳ ಪ್ರಯತ್ನದಿಂದ ಇಂದು ಸಮರ್ಪಕವಾಗಿ ಅನುಷ್ಠಾನಗೊಂಡಿವೆ. ಯೋಜನೆಯ ಫಲಾನುಭವಿಗಳು ಸೋಮಾರಿಗಳಲ್ಲ. ಅವರು ಶ್ರಮ ಜೀವಿಗಳು, ಭಗವಾನ್ ಭಕ್ತರು ಆಗಿದ್ದಾರೆ. ಕಠಿಣ ದುಡಿಮೆಯನ್ನು ಮಾಡಿ ಫಲವನ್ನು ಭಗವಂತನಲ್ಲಿ ಹಕ್ಕಿನಿಂದ ಕೇಳುವಷ್ಟರ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.
ಕಳೆದ ವರ್ಷ ಆರಂಭಿಸಲಾದ ಕಾಡು ಪ್ರಾಣಿಗಳಿಗಾಗಿ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ ಮತ್ತು ‘ಯಂತ್ರಶ್ರೀ’ ಕಾರ್ಯಕ್ರಮಕ್ಕೆ ಯೋಜನೆಯ ಫಲಾನುಭವಿಗಳು ಉತ್ತಮವಾದ ಸ್ಪಂದನೆಯನ್ನು ನೀಡಿದ್ದೀರಿ. ಕಳೆದ ಒಂದು ವರ್ಷದಲ್ಲೆ ಸುಮಾರು ಎರಡುವರೆ ಲಕ್ಷ ಹಣ್ಣಿನ ಗಿಡಗಳ ನಾಟಿ ನಡೆದಿದೆ. ಇದು ಮನುಷ್ಯ ಪ್ರಯತ್ನದಿಂದ ಮಾತ್ರ ಸಾಧ್ಯ. ಮುಂದಿನ ಒಂದು ವರ್ಷದಲ್ಲಿ ೧೦ ಲಕ್ಷ ಹಣ್ಣಿನ ಸಸಿಗಳನ್ನು ನಾಟಿ ಮಾಡುವ ಬೃಹತ್ ಅಭಿಯಾನಕ್ಕೆ ಜೂನ್ ೨೩, ೨೦೨೨ರಂದು ಚಾಲನೆ ನೀಡಲಾಗಿದೆ. ಈ ಗುರಿಯನ್ನು ಸುಲಭವಾಗಿ ಸಾಧಿಸುತ್ತೀರಿ ಎಂಬ ನಂಬಿಕೆ ನನಗಿದೆ. ಹಾಗೆಯೇ ಭತ್ತ ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಳೆದ ವರ್ಷ ಆರಂಭಿಸಲಾದ ‘ಯಂತ್ರಶ್ರೀ’ ಯೋಜನೆಗೆ ಅಭೂತಪೂರ್ವ ಸ್ಪಂದನೆ ದೊರೆತಿದೆ. ಕಳೆದ ವರ್ಷ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ, ರಾಯಚೂರು, ಮಂಡ್ಯ, ಮೈಸೂರು, ವಿಜಯನಗರ, ಹಾಸನ, ಕೊಡಗು ಮುಂತಾದ ಜಿಲ್ಲೆಗಳಲ್ಲಿ ೧೮ ಸಾವಿರ ಎಕರೆ ಪ್ರದೇಶದಲ್ಲಿ ‘ಯಂತ್ರಶ್ರೀ’ ಮೂಲಕ ರೈತರು ಭತ್ತ ಬೆಳೆದಿದ್ದಾರೆ. ಈ ಬಾರಿ ೨೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಯಂತ್ರಗಳನ್ನು ಬಳಸಿ ಭತ್ತ ಬೆಳೆಯುವ ಕಾರ್ಯಕ್ರಮಕ್ಕೆ ಜೂನ್ ೨೮, ೨೦೨೨ರಂದು ಬ್ರಹ್ಮಾವರದಲ್ಲಿ ಚಾಲನೆ ನೀಡಲಾಗಿದೆ. ಈ ಎಲ್ಲಾ ಸಾಧನೆಗಳ ಹಿಂದೆ ಮನುಷ್ಯ ಪ್ರಯತ್ನವಿದೆ. ಮನುಷ್ಯ ಪ್ರಯತ್ನದ ಫಲವಾಗಿ ದೈವಾನುಗ್ರಹವು ಅವರಿಗೆ ಲಭ್ಯವಾಗಿದೆ.
ಶ್ರಮಜೀವಿಗಳನ್ನು ಭಗವಂತನು ಇಷ್ಟಪಡುತ್ತಾನೆ. ಕಠಿಣ ದುಡಿಮೆ ಮಾಡಿ ಭಗವಂತನಲ್ಲಿ ಹಕ್ಕಿನಿಂದ ‘ನಾನಿಷ್ಟು ಶ್ರಮಪಟ್ಟಿದ್ದೇನೆ. ನಾನು ಶ್ರಮಪಟ್ಟದ್ದಕ್ಕೆ ತಕ್ಕ ಫಲ ನೀಡು’ ಎಂದು ಕೇಳುವ ಅಧಿಕಾರ ನಮಗೆ ಇದೆ. ಭಗವಂತನ ಪಾಲಿಗೆ ಹಕ್ಕಿನಿಂದ ಫಲವನ್ನು ಕೇಳುವವರೇ ನಿಜವಾದ ಭಕ್ತರು. ನಾವು ಮಾಡುವ ಕರ್ಮದ ಫಲವಾಗಿ ಇಂದು ಸಮಾಜ, ನಮ್ಮ ದೇಶದಲ್ಲಿ ಅನೇಕ ಬದಲಾವಣೆಗಳಾಗಿವೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ಬಡತನ ದೂರವಾಗಿದೆ. ಸ್ವಚ್ಛತೆಯ ಅರಿವು ಮೂಡಿದೆ. ಒಟ್ಟಾರೆಯಾಗಿ ಜನ ಜಾಗೃತಿಯಾಗಿದೆ. ಇಂದು ಸರಕಾರ, ಗ್ರಾಮಾಭಿವೃದ್ಧಿ ಯೋಜನೆಯಂತಹ ಸಂಘ ಸಂಸ್ಥೆಗಳ ಪ್ರಯತ್ನದಿಂದಾಗಿ ಸಾಕಷ್ಟು ಅವಕಾಶಗಳ ನಿರ್ಮಾಣವಾಗಿದೆ.
ಗ್ರಾಮಾಭಿವೃದ್ಧಿ ಯೋಜನೆ ಸಮಾಜದ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅವುಗಳ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಿ. ಮನುಷ್ಯ ಪ್ರಯತ್ನದ ಮೂಲಕ ಯಶಸ್ಸನ್ನು ಕಂಡುಕೊಳ್ಳಿ. ಆಗ ನಿಮಗೆ ಮಂಜುನಾಥ ಸ್ವಾಮಿಯ ಅನುಗ್ರಹ ತನ್ನಿಂತಾನಾಗಿಯೇ ದೊರೆಯುತ್ತದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *