ಮನಸ್ಸು ನಿರ್ಮಲಗೊಳಿಸುವ ಶ್ರದ್ಧಾಕೇಂದ್ರಗಳು

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು

ನಾವು ಯಾವುದೇ ಶ್ರದ್ಧಾಕೇಂದ್ರಗಳಿಗೆ ಭೇಟಿ ನೀಡಿದಾಗ ಮೊದಲು ನಮ್ಮನ್ನು ಆಕರ್ಷಿಸುವುದು ಅಲ್ಲಿನ ಪರಿಸರ. ಸುತ್ತಮುತ್ತಲಿನ ಪರಿಸರ ಆಹ್ಲಾದಕರವಾಗಿ ಸ್ವಚ್ಛತೆಯಿಂದ ಕೂಡಿದ್ದರೆ ಅಂತಹ ಶ್ರದ್ಧಾಕೇಂದ್ರದ ಬಗ್ಗೆ ನಮಗೆ ಗೊತ್ತಿಲ್ಲದಂತೆ ನಮ್ಮಲ್ಲೊಂದು ಭಕ್ತಿಯ ಭಾವನೆ ಉದ್ದೀಪನಗೊಳ್ಳುತ್ತದೆ.
ಶ್ರದ್ಧಾಕೇಂದ್ರಗಳೆoದರೆ ಅವು ಕೇವಲ ಭಕ್ತಿಯ ಕೇಂದ್ರಗಳಷ್ಟೇ ಆಗಿರದೆ ಸ್ವಚ್ಛತೆಯ ಕೇಂದ್ರಗಳು ಆಗಿರಬೇಕು. ಹಾಗಾದರೆ ಶ್ರದ್ಧಾಕೇಂದ್ರಗಳ ಸ್ವಚ್ಛತೆ ಯಾರ ಹೊಣೆ? ಎಂಬ ಪ್ರಶ್ನೆ ಮೂಡುವುದು ಸಹಜ. ಶ್ರದ್ಧಾಕೇಂದ್ರಗಳ ಶುಚಿತ್ವ ಕೇವಲ ಅಲ್ಲಿನ ಆಡಳಿತ ಮಂಡಳಿಯವರ ಜವಾಬ್ದಾರಿಯಷ್ಟೇ ಅಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ. ಆದರೆ ಕಳೆದ ಆರು ವರ್ಷಗಳ ಹಿಂದೆ ಹೆಚ್ಚಿನ ಕಡೆಗಳಲ್ಲಿ ಈ ಬಗ್ಗೆ ಅರಿವಿನ ಕೊರತೆ ಇದ್ದುದನ್ನು ನಾನು ಗಮನಿಸಿದ್ದೇನೆ. ದೇವಾಲಯದ ವಠಾರದಲ್ಲಿ ಉಗುಳುವುದು, ದೇವಾಲಯದ ಕೆರೆಗಳಲ್ಲಿ ಬಟ್ಟೆ ಒಗೆಯುವುದು, ದೇವರ ಪ್ರಸಾದ, ಗಂಧವನ್ನು ದೇವಾಲಯದ ಗೋಡೆಗೆ ಹಚ್ಚುವುದು ಮುಂತಾದವುಗಳನ್ನು ಗಮನಿಸುತ್ತಿದ್ದೆವು. ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಬೇಕೆoಬ ನಿಟ್ಟಿನಲ್ಲಿ ಕಳೆದ ಆರು ವರ್ಷಗಳ ಹಿಂದೆ ಶ್ರೀಕ್ಷೇತ್ರದಿಂದ ಆರಂಭಿಸಿದ ವಿನೂತನ ಅಭಿಯಾನವೇ ‘ಶ್ರದ್ಧಾಕೇಂದ್ರಗಳ ಸ್ವಚ್ಛತೆ.’
ಶ್ರೀಕ್ಷೇತ್ರಕ್ಕೆ ಸಂದ ‘ಸ್ವಚ್ಛ ಧಾರ್ಮಿಕ ನಗರಿ’ ಎಂಬ ಪ್ರಶಸ್ತಿಯ ಸವಿನೆನಪಿಗಾಗಿ 2012ರ ಜನವರಿ ತಿಂಗಳಲ್ಲಿ ಆರಂಭವಾದ ‘ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ’ವನ್ನು ವರ್ಷದಲ್ಲಿ ಎರಡು ಬಾರಿಯಂತೆ ಸಾಮೂಹಿಕವಾಗಿ ರಾಜ್ಯದೆಲ್ಲೆಡೆ ನಡೆಸಿಕೊಂಡು ಬರಲಾಗುತ್ತಿದೆ. ಮಕರ ಸಂಕ್ರಮಣಕ್ಕಿoತ ಎರಡು ವಾರ ಮುಂಚಿತವಾಗಿ ಮತ್ತು ಸ್ವಾತಂತ್ರೋತ್ಸವದ ಎರಡು ವಾರಗಳ ಮುಂಚೆ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕೆಲಸವನ್ನು ನಿಗದಿಗೊಳಿಸಲಾಗಿದೆ. ಇದೀಗ ಈ ಅಭಿಯಾನವನ್ನು ಊರವರು, ಯೋಜನೆಯ ಫಲಾನುಭವಿಗಳು, ದೇವಾಲಯದ ಆಡಳಿತ ಮಂಡಳಿಯವರೇ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯು ಮಾರ್ಗದರ್ಶನದೊಂದಿಗೆ ಅಗತ್ಯ ಪರಿಕರಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತಿದೆ. ಕೆಲವೆಡೆಗಳಲ್ಲಿ ವರ್ಷದಲ್ಲಿ ಇತರ ವಿಶೇಷ ದಿನಗಳ ಸಂದರ್ಭದಲ್ಲಿಯೂ ಶ್ರದ್ಧಾಕೇಂದ್ರಗಳ ಸ್ವಚ್ಛತೆಯನ್ನು ನಡೆಸುವ ಪರಿಪಾಠವು ಬೆಳೆದಿದೆ.
ಈ ಅಭಿಯಾನದಿಂದಾಗಿ ರಾಜ್ಯದ ಹೆಚ್ಚಿನ ಶ್ರದ್ಧಾಕೇಂದ್ರಗಳಲ್ಲಿ ಸ್ವಚ್ಛತೆಯ ದೀಪ ಬೆಳಗಿದೆ. ಶಿಸ್ತಿನ ಪಾಠವಾಗಿದೆ. ಈ ಕಾರ್ಯಕ್ರಮದಿಂದ ಪ್ರೇರಣೆ ಪಡೆದು ತಮ್ಮ ಮನೆ, ಪರಿಸರ, ಊರನ್ನು ಸ್ವಚ್ಛವಾಗಿರಿಸಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಈಗಾಗಲೇ ರಾಜ್ಯದಾದ್ಯಂತ ಸುಮಾರು ಒಂದು ಲಕ್ಷ ಶ್ರದ್ಧಾಕೇಂದ್ರಗಳು ಸ್ವಚ್ಛಗೊಂಡಿರುವುದು ಕಾರ್ಯಕ್ರಮದ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮದಲ್ಲಿ ತೊಡಗುವವರ ಸಂಖ್ಯೆ ಇಮ್ಮಡಿಗೊಳ್ಳುತ್ತಿದೆ.
ಈ ಬಾರಿ ನಡೆದ 6ನೇ ವರ್ಷದ ಸ್ವಚ್ಛತಾ ಅಭಿಯಾನದಲ್ಲಿ 15,309 ಶ್ರದ್ಧಾಕೇಂದ್ರಗಳನ್ನು ಸ್ವಚ್ಛಗೊಳಿಸಲಾಗಿದ್ದು ಸುಮಾರು ನಾಲ್ಕು ಲಕ್ಷ ಮಂದಿ ಈ ಸಪ್ತಾಹದಲ್ಲಿ ಭಾಗವಹಿಸಿರುತ್ತಾರೆ. ಸರ್ವಧರ್ಮಗಳ ಪ್ರತಿನಿಧಿಗಳು, ಆಡಳಿತ ಮಂಡಳಿಯವರು ಬೆಂಬಲ ನೀಡಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರ ಸಹಕಾರ, ಊರವರ, ದೇವಾಲಯದ ಮಂಡಳಿಗಳ, ರಾಜಕಾರಣಿಗಳ, ಗಣ್ಯರ, ಮಠಾಧಿಪತಿಗಳ ಸಹಕಾರದಿಂದ ಅಭಿಯಾನ ಯಶಸ್ವಿಯಾಗುತ್ತಿದೆ. ಈ ಮಹಾನ್ ಕಾರ್ಯದಲ್ಲಿ ಕೈಜೋಡಿಸುತ್ತಿರುವ ಎಲ್ಲರಿಗೂ ಶ್ರೀಕ್ಷೇತ್ರದ ಪರವಾಗಿ ಅಭಿನಂದನೆಗಳು. ನಿಮಗೆಲ್ಲರಿಗೂ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವನ್ನು ಬೇಡುತ್ತೇನೆ.
ಸದಾ ಶ್ರದ್ಧಾಕೇಂದ್ರಗಳನ್ನು ಸ್ವಚ್ಛವಾಗಿಡೋಣ
ಯಾವುದೇ ಶ್ರದ್ಧಾಕೇಂದ್ರಗಳಿಗೆ ಭೇಟಿ ನೀಡಿದಾಗ ತಿಂಡಿಯ ಕವರ್, ಜ್ಯೂಸ್ ಕವರ್, ನೀರಿನ ಬಾಟಲ್, ಚಾಕಲೇಟ್ ಕವರ್ ಹೀಗೆ ಯಾವುದೇ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದಿರಿ. ಇದೊಂದು ಪಾಪದ ಕೆಲಸವೂ ಹೌದು. ಕಸವನ್ನು ಕಸದ ಬುಟ್ಟಿಗೆ ಹಾಕಿರಿ.

ಯಾವುದೇ ಬಸ್ ಅಥವಾ ಸ್ವಂತ ವಾಹನದಲ್ಲಿ ದೇವಾಲಯಗಳಿಗೆ ಹೋಗಿ ಹಿಂದಿರುಗುವಾಗ ತೆಂಗಿನಕಾಯಿ, ಬಟ್ಟೆ, ಪ್ಲಾಸ್ಟಿಕ್ ಕವರ್‌ಗಳನ್ನು ನದಿಗೆ, ರಸ್ತೆಗೆ ಎಸೆಯುವುದನ್ನು ಮಾಡಬೇಡಿ. ದೇವಾಲಯದ ಕಲ್ಯಾಣಿ ಅಥವಾ ನದಿಗಳಲ್ಲಿ ಸ್ನಾನ ಮಾಡಿದ ನಂತರ ಸಾಬೂನು, ಬಟ್ಟೆ ತುಂಡನ್ನು ಅಲ್ಲೇ ಬಿಸಾಡದಿರಿ.

ದೇವಾಲಯದ ಪರಿಸರದಲ್ಲಿ ಸದ್ದು, ಗದ್ದಲಗಳಿಗೆ ಅವಕಾಶ ನೀಡಬೇಡಿ.

ಶ್ರದ್ಧಾಕೇಂದ್ರಗಳ ಪರಿಸರದಲ್ಲಿ ಕಸಕಡ್ಡಿಗಳು ಕಂಡುಬoದರೆ ಅವುಗಳನ್ನು ಹೆಕ್ಕಿ ಪಕ್ಕದ ಕಸದ ಬುಟ್ಟಿಗೆ ಹಾಕುವುದು ಅದೊಂದು ಪುಣ್ಯದ ಕೆಲಸವೇ ಸರಿ.

ನಾವು ಭೇಟಿ ನೀಡಿದ ಶ್ರದ್ಧಾಕೇಂದ್ರಗಳನ್ನು ನಾವೇ ಮಲಿನಗೊಳಿಸುವುದು ಒಂದು ದೊಡ್ಡ ಪಾಪದ ಕೆಲಸ. ಹಾಗಾದಾಗ ಶ್ರದ್ಧಾಕೇಂದ್ರಗಳ ಭೇಟಿಯಿಂದ ನಮಗೆ ಯಾವುದೇ ರೀತಿಯ ಪುಣ್ಯ ದೊರೆಯಲಾರದು.

ಶ್ರದ್ಧಾಕೇಂದ್ರಗಳ ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ. ಈ ಸಂದೇಶವನ್ನು ನಮ್ಮ ಮಕ್ಕಳಿಗೂ ತಿಳಿಸುವ, ಕಲಿಸುವ ಕೆಲಸವನ್ನು ನಾವು ಮಾಡಬೇಕಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates