ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ನಮ್ಮ ದೇಶದಲ್ಲಿ ವಿಶೇಷವಾಗಿ ನಮ್ಮ ಪೂರ್ವಜರು ಕೊರೊನಾದಂತಹ ವ್ಯಾಧಿ, ಸಾಂಕ್ರಾಮಿಕ ರೋಗಗಳನ್ನು ದೂರ ಇಡುವುದಕ್ಕಾಗಿ ಹಾಗೂ ಆರೋಗ್ಯಪೂರ್ಣ ಬದುಕಿಗಾಗಿ ಸ್ವಚ್ಛತೆಯ ಪಾಠವನ್ನು ಸಂಪ್ರದಾಯ ಮತ್ತು ಆಚರಣೆಗಳ ಮೂಲಕ ಕಾರ್ಯರೂಪಕ್ಕೆ ತಂದಿದ್ದಾರೆ. ಹಿರಿಯರು ವೈಯಕ್ತಿಕ ಆರೋಗ್ಯದ ಕುರಿತು ಹೆಚ್ಚಿನ ಚಿಂತನೆಯನ್ನು ನಡೆಸುತ್ತಿದ್ದರು. ಅನೇಕರು ಇದನ್ನು “ಮಡಿ’’ ಎಂದು ಕಲ್ಪನೆ ಮಾಡಿಕೊಂಡು ಮೂಗು ಮುರಿದದ್ದೂ ಇದೆ. ದೇವಸ್ಥಾನಗಳಿಗೆ ಹೋಗುವಾಗ ಸ್ನಾನ ಮಾಡಿ, ಮಡಿ ಬಟ್ಟೆ ಉಟ್ಟುಕೊಂಡು ಹೋಗುತ್ತಿದ್ದೆವು. ಹಳ್ಳಿಗಳಲ್ಲಿ ಇಂದಿಗೂ ಈ ಸಂಪ್ರದಾಯವಿದೆ. ಇದು ಕೂಡಾ ಸ್ವಚ್ಛತೆಯ ಒಂದು ಭಾಗ.
ಪೂರ್ವಜರು ಸ್ವಚ್ಛತೆಯನ್ನು ದೇವಸ್ಥಾನಗಳ ಮೂಲಕ ಆರಂಭಿಸಿದರು. ಸಾರ್ವಜನಿಕವಾಗಿ ಜನ ಸೇರುವ ಜಾಗ ಅಂದರೆ ಅದು ದೇವಸ್ಥಾನ. ದೇವಸ್ಥಾನದ ಪೂಜೆಗಳು, ಉತ್ಸವ, ಜಾತ್ರೆ ಈ ಮೂರರಲ್ಲಿ ಮಡಿಯನ್ನು ಬಹಳ ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿತ್ತು.
ದೇವಸ್ಥಾನಕ್ಕೆ ಹೋಗುವಾಗ ಅನೇಕರು ಮದ್ಯ – ಮಾಂಸವನ್ನು ಬಿಟ್ಟು ವ್ರತಧಾರಿಗಳಾಗಿರುತ್ತಾರೆ. ದೇವಸ್ಥಾನಕ್ಕೆ ಹೋಗುವ ಮುಂಚೆ ಅಲ್ಲಿಯ ಕಲ್ಯಾಣಿ ಅಥವಾ ನದಿಯಲ್ಲಿ ಕೈ-ಕಾಲುಗಳನ್ನು ತೊಳೆದುಕೊಂಡು ಅಥವಾ ಸ್ನಾನ ಮಾಡಿ ಶುಚಿರ್ಭೂತರಾಗಿ ಹೋಗುತ್ತಾರೆ. ಒದ್ದೆ ಬಟ್ಟೆಯಲ್ಲೇ ದೇವರ ದರ್ಶನಕ್ಕೆ ಹೋಗುವುದು ಸಾಮಾನ್ಯವಾಗಿತ್ತು. ಇಂದಿಗೂ ಧರ್ಮಸ್ಥಳಕ್ಕೆ ಬರುವ ಅನೇಕ ಭಕ್ತರು ನೇತ್ರಾವತಿ ನದಿಯಲ್ಲಿ ಪವಿತ್ರ ತೀರ್ಥಸ್ನಾನ ಮಾಡಿ ಶುದ್ಧೀಕರಿಸಿಕೊಂಡು ಅಲ್ಲಿಂದ ಕಾಲ್ನಡಿಗೆಯಲ್ಲಿ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಆಗಮಿಸುತ್ತಾರೆ.
ಇತ್ತೀಚೆಗಂತೂ ಕೊರೊನಾ ಎಂಬ ಸಾಂಕ್ರಾಮಿಕ ಕಾಯಿಲೆ ಭಕ್ತರಲ್ಲಿ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ. ಇದರ ಪರಿಣಾಮವಾಗಿ ಇತ್ತೀಚೆಗೆ ಹಿಂದೆಂದಿಗಿಂತ ವಿಶೇಷವಾಗಿ ಸ್ವಚ್ಛತೆಯ ಕಡೆ ಗಮನಹರಿಸಲಾಗುತ್ತಿದೆ. ಹಿರಿಯರು ಆರಂಭಿಸಿದ ಪ್ರತಿಯೊಂದು ಸಂಪ್ರದಾಯದ ಹಿಂದೆಯೂ ಒಂದೊಂದು ವೈಜ್ಞಾನಿಕ ಪಾಠವಿದೆ. ಕ್ಷೇತ್ರಗಳಿಗೆ ಬಂದಾಗ ಅನೇಕ ಮಂದಿ ಮಡಿಯನ್ನು, ಶುದ್ಧಿಯನ್ನು ಅಪೇಕ್ಷಿಸುತ್ತಾರೆ. ಅಂದರೆ ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ ಹೋಗುವಾಗ ಅಲ್ಲಿರುವ ಸ್ಟೀಲ್ ಪೈಪುಗಳು, ವಸ್ತುಗಳನ್ನು ಮುಟ್ಟುವುದಿಲ್ಲ. ಇದು ಯಾಕೆಂದು ವೈಜ್ಞಾನಿಕವಾಗಿ ವಿಮರ್ಶೆ ಮಾಡಿದರೆ ಗೊತ್ತಾಗುತ್ತದೆ. ಕೆಲವರು ಕೈಯಿಂದ ಮೂಗನ್ನು ತುರಿಸಿಕೊಂಡು, ಬಾಯಿಗೆ ಕೈ ಹಿಡಿದು ಕೆಮ್ಮಿ, ಬಾಯಿಯನ್ನು ಒರೆಸಿಕೊಂಡು ಅದೇ ಕೈಯಲ್ಲಿ ಪೈಪುಗಳನ್ನು ಮುಟ್ಟುತ್ತಾರೆ. ಇದರಿಂದಾಗಿ ಸೋಂಕುಗಳು ತಗಲಬಹುದು ಎಂಬ ವೈಜ್ಞಾನಿಕ ಸತ್ಯ ಇದರ ಹಿಂದೆ ಇದೆ. ವಿದೇಶಿಯರನ್ನು ಯಾವುದೇ ಟಿ.ವಿ. ಚಾನೆಲ್ ಅಥವಾ ಸಿನಿಮಾದಲ್ಲಿ ನೋಡಿದರೂ ಎಲ್ಲೂ ಕೂಡ ಅವರು ದೇಹ, ಮೂಗು, ಬಾಯಿ ಮತ್ತಿತರ ಅಂಗಗಳನ್ನು ಮುಟ್ಟುವುದಿಲ್ಲ. ಆದರೆ ನಮ್ಮಲ್ಲಿ ಕೆಲವು ನಡವಳಿಕೆಗಳು ಅಭ್ಯಾಸ ಆಗಿ ಬಿಟ್ಟಿದೆ. ಕ್ರಿಕೆಟ್‌ನಲ್ಲಿ ಕೂಡ ಹಿಂದೆ ಚೆಂಡಿಗೆ ಹೊಳಪು ಬರಬೇಕೆಂದು ನಾಲಗೆಯ ಎಂಜಲನ್ನು ಮುಟ್ಟಿ ಉಜ್ಜಿ ಬೌಲಿಂಗ್ ಮಾಡುತ್ತಿದ್ದರು. ಇದು ನನಗಂತೂ ತುಂಬಾ ಅಸಹ್ಯ ಅನಿಸುತ್ತಿತ್ತು. ಈಗ ಕ್ರಿಕೆಟ್ ಅಸೋಸಿಯೇಶನ್‌ನವರು ಯಾರೂ ಕೂಡಾ ಎಂಜಲು ಹಾಕಿ ಬೌಲಿಂಗ್ ಮಾಡಬಾರದು ಎಂಬ ನಿಯಮವನ್ನೇ ತಂದಿದ್ದಾರೆ. ಇವೆಲ್ಲ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆಗಳು. ಹಿಂದೆ ಮನೆಗೆ ಬರುವ ಅತಿಥಿಗಳಿಗೆ ಕೈ – ಕಾಲು ತೊಳೆದುಕೊಳ್ಳಲು ನೀರಿಡುವ ಪದ್ಧತಿ ಇತ್ತು. ಗ್ರಾಮೀಣ ಪ್ರದೇಶದಲ್ಲಿ ಮನೆಗೆ ಬರುವಾಗ ಕೈ – ಕಾಲು ತೊಳೆಯುವ ಈ ವ್ಯವಸ್ಥೆಯನ್ನು ಇಂದಿಗೂ ಅಚ್ಚುಕಟ್ಟಾಗಿ ಮಾಡಿಕೊಂಡರೆ ಒಳ್ಳೆಯದು.
ಸ್ವಚ್ಛತೆಯೊಂದಿದ್ದರೆ ಶೇಕಡಾ ೫೦ರಷ್ಟು ಆರೋಗ್ಯ ಸಮಸ್ಯೆಗಳು ತನ್ನಿಂತಾನಾಗಿಯೆ ದೂರವಾಗುತ್ತವೆ. ಹಾಗಾದರೆ ಸ್ವಚ್ಛತೆಯ ಪಾಠ ಎಲ್ಲಿಂದ ಆರಂಭವಾಗಬೇಕೆ0ದು ಹೆತ್ತವರು ಯೋಚಿಸಬೇಕಿದೆ. ಪ್ರಾಥಮಿಕ ಶಿಕ್ಷಣದಲ್ಲೆ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದ ಉತ್ತಮ ಆಚರಣೆಗಳು ಅಭ್ಯಾಸವಾದರೆ ಬದುಕಿನುದ್ದಕ್ಕೂ ಉಳಿಯುತ್ತದೆ. ನಗರದಲ್ಲಿ ವಾಸವಾಗಿರುವವರೊಬ್ಬರು ಹೇಳಿದ ಘಟನೆಯಿದು. ತಾಯಿಯೊಂದಿಗೆ ಮೂರು ವರ್ಷದ ಮಗುವೊಂದು ನಡೆದುಕೊಂಡು ಹೋಗುತ್ತಿರುವಾಗ ಅವರ ಮುಂದೆ ಹೋಗುತ್ತಿದ್ದವರು ಕೈಯಲ್ಲಿದ್ದ ಖಾಲಿ ಪೊಟ್ಟಣವೊಂದನ್ನು ರಸ್ತೆಯಲ್ಲಿ ಎಸೆದರು. ತಾಯಿಯ ಕೈ ಕೊಡವಿಕೊಂಡು ಓಡಿದ ಮಗುವು ಆ ವ್ಯಕ್ತಿಯ ಬಳಿಗೆ ಹೋಗಿ ‘ನೀವು ರಸ್ತೆಯಲ್ಲಿ ಪೊಟ್ಟಣವನ್ನು ಎಸೆಯಬಾರದಿತ್ತು’ ಎಂದು ಹೇಳುತ್ತದೆ.
ಆ ವ್ಯಕ್ತಿ ಸಿಟ್ಟಾದರೆ ಏನು ಮಾಡುವುದೆಂದು ತಾಯಿಗೆ ಗಾಬರಿ. ಆಕೆ ಓಡಿ ಹೋಗಿ ‘ಕ್ಷಮಿಸಿ, ಮಗುವಿಗೆ ತಿಳುವಳಿಕೆಯಿಲ್ಲ! ಎಂದಾಗ ಆ ವ್ಯಕ್ತಿ ‘ಖಂಡಿತಾ ಮಗು ಮಾಡಿದ್ದು ತಪ್ಪಲ್ಲ. ನನ್ನದೇ ತಪ್ಪು. ಈ ಮಗುವಿಗೆ ಚಿಕ್ಕಂದಿನಿAದಲೇ ಇಂತಹ ಸಂಸ್ಕಾರ ಬಂದಿದೆಯಲ್ಲ, ಅದಕ್ಕೆ ನಾನು ಹೆಮ್ಮೆಪಡುತ್ತೇನೆ’ ಎಂದಾಗ ತಾಯಿ ನಿಟ್ಟುಸಿರನ್ನು ಬಿಟ್ಟಳಂತೆ.
ಎಲ್ಲೆಂದರಲ್ಲಿ ಉಗುಳುವುದು, ಬೀಡಿ – ಸಿಗರೇಟ್ ಸೇದುವುದು, ವಸ್ತುಗಳನ್ನು ಬಿಸಾಡುವುದನ್ನು ಮಾಡಬಾರದು. ಇದೀಗ ರಸ್ತೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಎಲ್ಲೆಡೆ ಕಸದ ಬುಟ್ಟಿಗಳಿವೆ. ವಾಹನಗಳಲ್ಲಿ ಚಲಿಸುವಾಗ ತಿಂದ ಚಾಕಲೇಟ್ ಸಿಪ್ಪೆಗಳು, ತಿಂಡಿಯ ಶೇಷ ಭಾಗಗಳನ್ನು ಇಡಲು ವಾಹನದಲ್ಲೇ ವ್ಯವಸ್ಥೆಗಳಿವೆ. ಸರಕಾರಿ ಬಸ್‌ಗಳಲ್ಲೂ ತ್ಯಾಜ್ಯ ವಸ್ತುಗಳನ್ನು ಹಾಕುವ ವ್ಯವಸ್ಥೆಗಳನ್ನು ಮಾಡಿದ್ದಾರೆ.
ವಿದೇಶಕ್ಕೆ ನಾವು ಹೋದಾಗ ಅಲ್ಲಿಯ ಬಸ್‌ಗಳಲ್ಲಿ ನಾವು ಓಡಾಡುತ್ತಿದ್ದೆವು. ಬಸ್ ಹತ್ತುವಾಗಲೇ ತ್ಯಾಜ್ಯ ವಸ್ತುಗಳನ್ನು ಈ ಪೆಟ್ಟಿಗೆಯಲ್ಲಿ ಹಾಕಿ ಎಂಬ ಸಂದೇಶವನ್ನು ನೀಡುತ್ತಾರೆ. ವಾಹನದ ಚಾಲಕ ಗುರಿಮುಟ್ಟಿದ ನಂತರ ತ್ಯಾಜ್ಯವನ್ನು ಬಿಸಾಡಿ ಪೆಟ್ಟಿಗೆಯನ್ನು ಸ್ವಚ್ಛ ಮಾಡಿ ಮುಂದಿನ ಪ್ರಯಾಣಕ್ಕೆ ಇಡುತ್ತಿದ್ದ. ಹಾಗಾಗಿ ನಾವು ತಿಂದ ಹಣ್ಣುಹಂಪಲುಗಳ ಸಿಪ್ಪೆ, ಬೀಜ, ಆಹಾರ ವಸ್ತುಗಳ ಪ್ಯಾಕೆಟ್ ಮೊದಲಾದವುಗಳನ್ನು ತ್ಯಾಜ್ಯ ಪೆಟ್ಟಿಗೆಗೆ ಹಾಕುತ್ತಿದ್ದರಿಂದ ಕಸವನ್ನು ಎಲ್ಲೆಂದರಲ್ಲಿ ಬಿಸಾಡುವ ಪ್ರಮೇಯವೇ ಬರುತ್ತಿರಲಿಲ್ಲ. ಈ ರೀತಿಯಲ್ಲಿ ವಿದೇಶಗಳಲ್ಲಿ ಸ್ವಚ್ಛತೆಗೆ ಗಮನಕೊಡುವ ಕಾರಣ ಅಲ್ಲಿ ಸ್ವಚ್ಛತೆಯ ಕೊರತೆಯಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ.
ಸ್ವಚ್ಛತೆಯ ಪರಿಪಾಠವನ್ನು ಪ್ರತಿಯೊಬ್ಬರು ಬೆಳೆಸಿಕೊಂಡಲ್ಲಿ ಕೆಲವೊಂದು ಸಾಂಕ್ರಾಮಿಕ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದಾಗಿದೆ. ಸ್ವಚ್ಛತೆಯ ಕುರಿತಂತೆ ಅರಿವನ್ನು ಮಕ್ಕಳಲ್ಲಿ ಬಾಲ್ಯದಲ್ಲೆ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಹಿರಿಯರು ಪ್ರಯತ್ನಿಸಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಪ್ರತಿಯೊಬ್ಬರಿಗೂ ಪರಿಸರ ಸ್ವಚ್ಛತೆ, ಸಂರಕ್ಷಣೆ ಅಭ್ಯಾಸವಾಗಬೇಕು, ಜೀವನ ವಿಧಾನವಾಗಬೇಕು. ಇಂದಿನ ಮಕ್ಕಳೇ ಮುಂದಿನ ಜನಾಂಗವಾಗುವುದರಿಂದ ಸದ್ ಚಿಂತನೆಗಳು, ಅಭ್ಯಾಸಗಳು ಸಹಜವಾಗಿರಲಿ.