ಮಕ್ಕಳಿಗೆ ಜ್ವರ ಬಂದಾಗ ಏನು ಮಾಡಬೇಕು?

ಜ್ವರ ಮಕ್ಕಳಲ್ಲಿ ಕಂಡುಬರುವ ಒಂದು ಸಾಮಾನ್ಯ ಆರೋಗ್ಯ ಸಮಸ್ಯೆ. ಬಹುಶಃ ಜ್ವರವೇ ಬಾರದ ಮಗುವಿಲ್ಲ. ಜ್ವರದ ಬಗ್ಗೆ ಕೆಲವೊಂದು ಉಪಯುಕ್ತ ಮಾಹಿತಿಗಳು ಇಲ್ಲಿವೆ.
ಜ್ವರ ಇದ್ದಾಗ ಮಗುವಿಗೆ ಮದ್ದು ಕೊಟ್ಟು ಶಾಲೆಗೆ ಕಳುಹಿಸಬಹುದೇ?
ಜ್ವರ ಸಾಧಾರಣವಾಗಿ ಸೋಂಕಿನಿ0ದ ಬರುತ್ತದೆ. ಆ ಸೋಂಕು ಬೇರೆ ಮಕ್ಕಳಿಗೆ ಶಾಲೆಯಲ್ಲಿ ಹರಡಬಹುದು. ಜ್ವರ ಇದ್ದ ಮಗುವಿಗೆ ಶಾಲೆಯಲ್ಲಿ ಶ್ರಮವಾಗಬಹುದು. ಹಾಗಾಗಿ ಶಾಲೆಗೆ ಜ್ವರ ಇದ್ದಾಗ ಮಗುವನ್ನು ಕಳುಹಿಸುವುದು ಸೂಕ್ತವಲ್ಲ.
ಜ್ವರ ಇದ್ದಾಗ ಮಗು ಊಟ ಮಾಡುತ್ತಿಲ್ಲ ಏನು ಮಾಡಲಿ?
ಜ್ವರ ಬಂದಾಗ ಹಸಿವು ಕಡಿಮೆ ಆಗುವುದು ಸಹಜ. ಜ್ವರ ಬಿಟ್ಟ ಮೇಲೆ ನಿಧಾನವಾಗಿ ಅದು ಸುಧಾರಿಸುತ್ತದೆ. ಅದರಲ್ಲೂ ಟಾನ್ಸಿಲ್ ಸಮಸ್ಯೆ, ಹಲ್ಲು ನೋವಿನ ಸಮಸ್ಯೆ, ವಾಂತಿ ಮೊದಲಾದ ಸಮಸ್ಯೆಗಳಿಂದ ಜ್ವರ ಬಂದಿದ್ದರ0ತೂ ಮಗು ಆಹಾರ ಸೇವಿಸುವುದು ಬಹಳಷ್ಟು ಕಡಿಮೆಯಾಗಬಹುದು. ಇಂತಹ ಸಮಯದಲ್ಲಿ ಮಗುವಿಗೆ ಆಗಾಗ ಸ್ವಲ್ಪ ಸ್ವಲ್ಪ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಕೊಡಬೇಕು. ದೇಹದಲ್ಲಿ ನೀರಿನಾಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಮಗು ಏನನ್ನೂ ತಿನ್ನುವುದೇ ಇಲ್ಲ ಎಂದರೆ ಎದೆ ಹಾಲು ಕುಡಿಯುವ ಮಗು ಅದನ್ನು ನಿಲ್ಲಿಸಿದರೆ ತಕ್ಷಣ ವೈದ್ಯರನ್ನು ಕಾಣಬೇಕು.
ಜ್ವರ ಬಂದಾಗ ‘ಫಿಟ್ಸ್’ ಅಥವಾ ಅಪಸ್ಮಾರ ಉಂಟಾಗಬಹುದೇ?
ಕೆಲವು ಮಕ್ಕಳಲ್ಲಿ ಹಾಗಾಗುವುದುಂಟು. ಇದು 6 ತಿಂಗಳಿ0ದ 5 ವರ್ಷದವರೆಗಿನ ಮಕ್ಕಳಲ್ಲಿ ಕಂಡು ಬರುವ ಸಾಧ್ಯತೆಗಳಿರುತ್ತವೆ. ಕುಟುಂಬದಲ್ಲಿ ಇದ್ದರೆ ಅದು ಅವರ ಸಂಬ0ಧಿ ಮಕ್ಕಳಲ್ಲಿ ಕಂಡು ಬರುತ್ತದೆ. ಜ್ವರದ ಕಾರಣದಿಂದ ಕಾಣಿಸಿಕೊಳ್ಳುವ ಫಿಟ್ಸ್ ಅಥವಾ ಅಪಸ್ಮಾರ ಮಗುವಿನ ಮುಂದಿನ ಮೆದುಳಿನ ಬೆಳವಣಿಗೆಗೆ ಕಂಟಕವಾಗದು. ಮತ್ತು ‘ಅಪಸ್ಮಾರ ಕಾಯಿಲೆ’ಗೆ ತಿರುಗುವುದಿಲ್ಲ. ಅದಕ್ಕೆ ಸೂಕ್ತವಾದ ಔಷಧಿಗಳಿವೆ.
ನನ್ನ ಮೊದಲನೆ ಮಗುವಿಗೆ ವೈದ್ಯರು ಜ್ವರದ ಔಷಧಿ ಕೊಟ್ಟಿದ್ದಾರೆ. ಈಗ ನನ್ನ ಎರಡನೇ ಮಗುವಿಗೆ ಜ್ವರ ಬಂದಿದೆ. ಅದನ್ನೇ ಕೊಡಬಹುದೇ?
ಮಕ್ಕಳಿಗೆ ಯಾವುದೇ ಮದ್ದನ್ನು ಅವರ ತೂಕಕ್ಕೆ ತಕ್ಕಂತೆ ಕೊಡಬೇಕಾಗುತ್ತದೆ. ಹಾಗಾಗಿ ಒಂದು ಮಗುವಿಗೆ ಕೊಟ್ಟ ಮದ್ದು ಇನ್ನೊಂದು ಮಗುವಿಗೆ ವೈದ್ಯರ ಸಲಹೆ ಇಲ್ಲದೆ ಬಳಸಿದರೆ ಮಾರಕವಾಗಬಹುದು. ಜ್ವರದ ಮದ್ದು ಅತ್ಯಂತ ಸುರಕ್ಷಿತ. ಆದರೆ ಅತಿಯಾದರೆ ಅಮೃತವೂ ವಿಷವೇ. ಅಷ್ಟೇ ಅಲ್ಲದೆ ಔಷಧದ ಪ್ರಮಾಣ ಕಡಿಮೆ ಆದಲ್ಲಿ ಅದು ಯಾವುದೇ ಪರಿಣಾಮವನ್ನು ಬೀರದೇ ವ್ಯರ್ಥವೂ ಆಗಬಹುದು. ವೈದ್ಯರ ಸಲಹೆಯ ಮೇರೆಗೆ ಮದ್ದನ್ನು ತೆಗೆದುಕೊಳ್ಳುವುದು ಉತ್ತಮ.
ಫ್ರಿಡ್ಜ್ನಲ್ಲಿ ಇಟ್ಟ ಆಹಾರ ಕೆಟ್ಟದ್ದೇ?
ಹೆಸರೇ ಹೇಳುವಂತೆ ಅದು ಎಂದಿಗೂ ತಂಗಳು ಪೆಟ್ಟಿಗೆ. ಜ್ವರದ ಮಗುವಿಗೆ ಅಷ್ಟೇ ಅಲ್ಲದೇ ಆರೋಗ್ಯವಂತ ಮಗುವಿಗೂ ಕೂಡಾ ಆದಷ್ಟು ತಾಜಾ ಆಹಾರಗಳು ಅಂದರೆ, ಫ್ರಿಡ್ಜ್ನಲ್ಲಿ ಇಡದ ಆಹಾರವೇ ಉತ್ತಮ. ತಾಜಾ ಆಹಾರದಷ್ಟು ಸ್ವಚ್ಛತೆ, ಪೌಷ್ಠಿಕತೆ ಫ್ರಿಡ್ಜ್ನಲ್ಲಿ ಇಟ್ಟ ಆಹಾರಕ್ಕೆ ಬರದು. ಅದಲ್ಲದೇ ಕೆಲವು ತಂಪಿನ ಆಹಾರ ಸೇವಿಸುವುದರಿಂದ ಅಲರ್ಜಿ ಇರುವ ಮಕ್ಕಳಿಗೆ ಅಲರ್ಜಿ ಹೆಚ್ಚಾಗಬಹುದು.
ಜ್ವರ ಬಂದಾಗ ಮಲಗಿಯೇ ಇರಬೇಕೆ?
ಜ್ವರ ಬಂದಾಗ ಮಲಗಿಯೇ ಇರಬೇಕೆಂದೇನೂ ಇಲ್ಲ. ಆದರೆ ಸ್ವಲ್ಪ ಹೆಚ್ಚಿನ ಪ್ರಮಾಣದ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಜ್ವರವಿದ್ದಾಗ ಅತಿಯಾದ ದೈಹಿಕ ಅಥವಾ ಮಾನಸಿಕ ಶ್ರಮ ಸಲ್ಲ.
ಎಷ್ಟು ದಿನದಲ್ಲಿ ಜ್ವರ ವಾಸಿಯಾಗುತ್ತದೆ?
3 ತಿಂಗಳು ಮೇಲ್ಪಟ್ಟ ವಯಸ್ಸಿನ ಆರೋಗ್ಯವಂತ ಮಗುವಾಗಿದ್ದರೆ 3 ರಿಂದ 4 ದಿನಗಳಲ್ಲಿ ಜ್ವರ ಕಡಿಮೆಯಾಗುತ್ತದೆ. ಮತ್ತೂ ಜ್ವರ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಹಿಂದಿನ ಕಾಲದಲ್ಲಿ ಜ್ವರ ಹಳ್ಳಿಮದ್ದಿನಲ್ಲಿಯೇ ಕಡಿಮೆಯಾಗುತ್ತಿತ್ತು. ಆದರೆ ಇತ್ತೀಚೆಗೆ ಎಲ್ಲದಕ್ಕೂ ಆಸ್ಪತ್ರೆಗೆ ತೆರಳಲೇಬೇಕಾಗಿದೆ. ಆದ್ದರಿಂದ ಮಕ್ಕಳಿಗೆ ಜ್ವರ ಬಂದಾಗ ಹಳ್ಳಿ ಮದ್ದುಗಳನ್ನಷ್ಟೆ ನಂಬಿ ಕುಳಿತುಕೊಳ್ಳುವ ಬದಲು ಮಕ್ಕಳ ವೈದ್ಯರನ್ನು ಭೇಟಿಯಾಗುವುದು ಒಳಿತು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *