ಅಂಗಾಂಗ ದಾನ

ನಮ್ಮ ಸನಾತನ ಸಂಸ್ಕೃತಿಯಲ್ಲಿ ಸಾಕಷ್ಟು ದೇವಾನುದೇವತೆಯರನ್ನು ಪೂಜಿಸುತ್ತೇವೆ. ಈ ಎಲ್ಲ ದೇವಾನುದೇವತೆಗಳ ಹುಟ್ಟಿಗೆ ಅದರದ್ದೇ ಆದ ಒಂದೊoದು ಕಥೆ, ಸನ್ನಿವೇಶ, ಸಂದರ್ಭಗಳು ಇರುತ್ತವೆ. ನಮ್ಮಲ್ಲಿ ಯಾವುದೇ ಶುಭಕಾರ್ಯವನ್ನು ಆರಂಭಿಸುವ ಮೊದಲು ಸ್ತುತಿಸುವುದು ವಿಘ್ನವಿನಾಶಕ ಗಣಪತಿಯನ್ನು. ಬೇರೆಲ್ಲ ದೇವಾನುದೇವತೆಗಳಿಂದ ಈ ಗಜವದನ ತನ್ನ ದೇಹಾಕಾರದಿಂದ ವಿಶೇಷವಾಗಿದ್ದಾನೆ. ಯಾಕೆಂದರೆ ಆತನದ್ದು ಆನೆಯ ಮುಖ. ಗಣಪತಿಗೆ ಆನೆ ಮುಖ ಹೇಗೆ ಬಂತು ಎಂಬುದರ ಬಗ್ಗೆ ಪುರಾಣಗಳಲ್ಲಿ ಸಾಕಷ್ಟು ರೀತಿಯ ಕಥೆಗಳಿವೆ. ಅವುಗಳಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿ ಇರುವಂಥದ್ದು, ಒಮ್ಮೆ ಪಾರ್ವತಿ ಮೈಗೆ ಲೇಪಿಸಿಕೊಂಡ ಸುಗಂಧ ದ್ರವ್ಯದಿಂದ ಒಂದು ಬಾಲಕನ ಮೂರ್ತಿ ಮಾಡಿದಳು. ನೋಡಲು ಸುಂದರವಾಗಿ, ಮುದ್ದಾಗಿದ್ದ ಮೂರ್ತಿಯನ್ನು ನೋಡಿದ ಆಕೆ, ‘ಇದಕ್ಕೆ ಜೀವಕಳೆ ಎಷ್ಟು ಚೆನ್ನ’ ಎಂದು ಭಾವಿಸಿ ತನ್ನ ಶಕ್ತಿಯಿಂದ ಜೀವಕಳೆ ತುಂಬಿದಳು. ತನ್ನದೇ ಅಂಶದಿoದ ಹುಟ್ಟಿದ ಮಗುವಿಗೆ ಆಕೆ ತಾಯಿಯಾದಳು. ಆಕೆ ಸ್ನಾನಕ್ಕೆ ಹೋಗುವಾಗ ಒಳಗೆ ಬರಲು ಯಾರಿಗೂ ಬಿಡಬೇಡ ಎಂದು ಸೂಚಿಸಿದಳು. ಆ ವೇಳೆಯಲ್ಲಿ ಶಿವನು ಪಾರ್ವತಿಯನ್ನು ಕಾಣಲು ಅಲ್ಲಿಗೆ ಬಂದ. ಬಾಗಿಲು ಕಾಯುತ್ತಿದ್ದ ಬಾಲಕನನ್ನು ಅಲಕ್ಷಿಸಿ ಒಳಗೆ ಹೋಗಲು ನೋಡಿದ. ಆದರೆ ತನ್ನ ತಾಯಿಯ ಆದೇಶವನ್ನು ಪಾಲಿಸುವ ಸಲುವಾಗಿ ಬಾಲಕನು ಶಿವನನ್ನು ತಡೆಯುತ್ತಾನೆ. ಕೋಪಗೊಂಡ ಶಿವನು ಆ ಬಾಲಕನ ತಲೆಯನ್ನು ಕಡಿದುಬಿಡುತ್ತಾನೆ.
ಆಗ ಪಾರ್ವತಿಯು ಸ್ನಾನ ಮುಗಿಸಿ ಬರುತ್ತಾಳೆ. ತನ್ನ ಮಗನ ಶಿರಚ್ಛೇದ ಮಾಡಿರುವುದನ್ನು ಕಂಡು ಅತ್ತು, ಉಗ್ರವಾಗಿ ಕೋಪಗೊಳ್ಳುತ್ತಾಳೆ. ಶಿವನು ಆಕೆಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾನೆ. ಕೊನೆಗೆ ಬಾಲಕನನ್ನು ಬದುಕಿಸುವ ಭರವಸೆ ನೀಡಿ ‘ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿರುವವರ ತಲೆಯನ್ನು ತನ್ನಿ’ ಎಂದು ಶಿವ ತನ್ನ ಗಣಗಳಿಗೆ ಆದೇಶಿಸುತ್ತಾನೆ. ಅಂತೆಯೇ ಶಿವಗಣಗಳು ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿದ್ದ ಆನೆಯ ತಲೆಯನ್ನು ತರುತ್ತಾರೆ. ತಕ್ಷಣ ಶಿವನು ಆ ಬಾಲಕನ ಮುಂಡಕ್ಕೆ ಜೋಡಿಸಿ ಮರುಜೀವ ಕೊಡುತ್ತಾನೆ. ಹೀಗೆ ಆತನಿಗೆ ಆನೆಯ ಮುಖ ಪ್ರಾಪ್ತವಾಯಿತು. ಬಳಿಕ ಗಜಾನನೆಂದು ಖ್ಯಾತನಾದನು.
ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೆoದರೆ ಒಬ್ಬ ವ್ಯಕ್ತಿಯ ಮುಂಡಕ್ಕೆ ಬೇರೊಂದು ರುಂಡವನ್ನು ಜೋಡಿಸಿ ಮರುಜೀವ ಕೊಟ್ಟಿರುವುದು. ಅಂದರೆ ಈಗ ನಮ್ಮ ವೈದ್ಯವಿಜ್ಞಾನದಲ್ಲಿ ಇರುವಂತೆ ಅಂಗಾoಗ ಕಸಿಯು ಪುರಾಣಗಳಲ್ಲಿಯೂ ಇತ್ತು ಎಂಬುವುದಕ್ಕೆ ಗಣಪತಿಯ ಕಥೆ ಉದಾಹರಣೆಯಾಗಬಲ್ಲದು.
ಮಹಾಭಾರತದಲ್ಲೂ ಗಾಂಧಾರಿಯ 101 ಮಕ್ಕಳ ಜನನದ ಹಿಂದೆಯೂ ವೈಜ್ಞಾನಿಕತೆ ಅಡಕವಾಗಿದೆ. ಕುಂತಿಗೆ ಮಕ್ಕಳಾಯಿತು ಎಂದು ತಿಳಿದ ಗಾಂಧಾರಿ ರೋಷದಿಂದ ತನ್ನ ಗರ್ಭಕ್ಕೆ ತಾನೇ ಹೊಡೆದುಕೊಂಡ ಕಾರಣಕ್ಕಾಗಿ ಗಾಂಧಾರಿಯು ಮಾಂಸದ ಮುದ್ದೆಗಳಿಗೆ ಜನ್ಮವಿತ್ತಳು. ಮಹರ್ಷಿ ವ್ಯಾಸರು ತಕ್ಷಣವೇ ತುಪ್ಪಗಳಿಂದ ತುಂಬಿದ ನೂರು ಮಡಿಕೆಗಳನ್ನು ತರುವಂತೆ ಹೇಳಿ 100 ಭಾಗಗಳಾಗಿದ್ದ ಮಾಂಸದ ಮುದ್ದೆಯನ್ನು ಮಡಿಕೆಗಳಲ್ಲಿ ಮುಚ್ಚುವಂತೆ ಹೇಳಿದರು. ವ್ಯಾಸರಿಗೆ ಒಂದು ಆಧುನಿಕ ತಂತ್ರಜ್ಞಾನದ ಬಗ್ಗೆ ಅರಿವಿರಬೇಕು. ಹೀಗಾಗಿ ಅವರು ಕೃತಕವಾಗಿ ಮಾಂಸದ ಮುದ್ದೆಗಳನ್ನು ಮಡಕೆಗಳಲ್ಲಿ ಸರಿಯಾದ ಸ್ಥಿತಿಯಲ್ಲಿ ಇಟ್ಟು ಶಿಶುವು ಅದರಲ್ಲಿ ಬೆಳೆಯುವಂತೆ ಮಾಡಿದರು. ಹೀಗೆ ಕೌರವರ ಜನನವಾಯಿತು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಈ ವಿಚಾರ ತಿಳಿಸುವ ಉದ್ದೇಶವೇನೆಂದರೆ ಪುರಾಣದ ಕಥೆಗಳಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಅಂಗಾoಗ ದಾನ, ಕಸಿ, ಶಸ್ತçಚಿಕಿತ್ಸೆಗಳು ನಡೆಯುತ್ತಿದ್ದ ವಿಚಾರದ ಕುರಿತಾಗಿ ಪುಷ್ಠಿ ನೀಡುತ್ತವೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮಾತ್ರವಲ್ಲದೆ ರಾಜ್ಯದ ಅನೇಕ ಆಸ್ಪತ್ರೆಗಳಲ್ಲಿ ಸಾಕಷ್ಟು ರೀತಿಯ ಅಂಗಾoಗ ಕಸಿ ಅಥವಾ ಜೋಡಣೆಯ ಚಿಕಿತ್ಸೆಗಳು ನಡೆಯುತ್ತಿವೆ. ಇದು ವೈದ್ಯಲೋಕದಲ್ಲಿ ಆಗುತ್ತಿರುವ ಉತ್ತಮ ಬೆಳವಣಿಗೆಯಾಗಿದೆ.
ಅಂಗಾoಗ ಜೋಡಣೆಯಂತ ವೈದ್ಯಕೀಯ ತಂತ್ರಜ್ಞಾನಗಳು ವಿದೇಶಗಳಲ್ಲಿ ಬಹು ಪ್ರಚಲಿತದಲ್ಲಿತ್ತು. ಕಾಲಾನಂತರದಲ್ಲಿ ಭಾರತದಲ್ಲೂ ವ್ಯಾಪಿಸತೊಡಗಿತು. ಆರಂಭ ಕಾಲದಲ್ಲಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಈ ಚಿಕಿತ್ಸೆಗಳೆಲ್ಲ ಗಗನಕುಸುಮವಾಗಿದ್ದವು. ಆದರೆ ಈಗ ದೇಶವು ಅಭಿವೃದ್ಧಿಪಥದಲ್ಲಿ ಮುನ್ನಡೆಯುತ್ತಿದೆ ಹಾಗೂ ಎಲ್ಲ ವರ್ಗದವರಿಗೆ ಎಲ್ಲಾ ರೀತಿಯ ಸೇವೆ ಸೌಕರ್ಯಗಳು ದೊರೆಯುವಂತೆ ಸರಕಾರವು ನೋಡಿಕೊಳ್ಳುತ್ತಿವೆ. ಹಾಗಾಗಿ ಎಲ್ಲಾ ವರ್ಗದವರೂ ಕೂಡ ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯವನ್ನು ಸರಕಾರದ ನೆರವಿನೊಂದಿಗೆ ಪಡೆಯಬಹುದಾಗಿದೆ.
ಬೇರೆಲ್ಲ ವೈದ್ಯಕೀಯ ಚಿಕಿತ್ಸೆಗಳನ್ನು ಆಧುನಿಕ ವೈದ್ಯಕೀಯ ಸಲಕರಣೆಗಳ ಸಹಾಯದಿಂದ ಮಾಡಬಹುದಾದರೂ ಅಂಗಾoಗ ಜೋಡಣಾ ಚಿಕಿತ್ಸೆಗೆ ದಾನಿಗಳು ಅಗತ್ಯವಾಗಿ ಬೇಕಾಗಿರುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರೆ ಅದರ ಬದಲಿಗೆ ಬೇರೆ ಲಿವರ್ ಕಸಿ ಮಾಡಲು ಮತ್ತೊಬ್ಬ ವ್ಯಕ್ತಿಯ ಲಿವರ್ ಅಗತ್ಯವಾಗಿ ಬೇಕಾಗಿರುತ್ತದೆ. ದಾನವಾಗಿ ಪಡೆದ ಅಂಗಾoಗವಿಲ್ಲದೆ ಚಿಕಿತ್ಸೆ ನಡೆಸಲು ಸಾಧ್ಯವಾಗುವುದಿಲ್ಲ. ಹೆಚ್ಚಾಗಿ ಅಪಘಾತ ಅಥವಾ ಇನ್ನಿತರ ಅವಘಡಗಳಲ್ಲಿ ಮೆದುಳು ನಿಷ್ಕಿçಯಗೊಂಡ ವ್ಯಕ್ತಿಯ ಅಂಗಾoಗಗಳನ್ನು ದಾನ ಮಾಡಬಹುದಾಗಿದೆ. ಮೃತ ವ್ಯಕ್ತಿಯ ಕಣ್ಣನ್ನು ಇತರರಿಗೆ ಅಳವಡಿಸಬಹುದಾಗಿದ್ದು, ಅದು ಇಂತಿಷ್ಟೇ ಗಂಟೆಗಳ ಒಳಗಾಗಿ ನಡೆಯಬೇಕಾದ ತುರ್ತು ಪ್ರಕ್ರಿಯೆಯಾಗಿದೆ.
ಮೆದುಳು ನಿಷ್ಕಿçಯಗೊಂಡ ವ್ಯಕ್ತಿ ಜೀವಂತವಿರಬಹುದೇ ಹೊರತು ಆತ ಬದುಕಿದ್ದರೂ ಸತ್ತಂತೆಯೇ ಇರುತ್ತಾನೆ. ಅಂತಹ ಸಂದರ್ಭದಲ್ಲಿ ಆತನ/ಆಕೆಯ ಮನೆಯವರು ಅಥವಾ ಬಂಧುಗಳು ಅಂಗಾoಗ ದಾನಕ್ಕೆ ಸಮ್ಮತಿ ನೀಡಿದರೆ ಆತ ಅನೇಕರ ಜೀವನಕ್ಕೆ ಬೆಳಕಾಗುತ್ತಾನೆ. ಒಂದು ದೇಹದ ಅಂಗಾoಗ ದಾನದಿಂದ ಸುಮಾರು ಎಂಟು ಮಂದಿಗೆ ಅಂಗಾoಗ ಕಸಿ ಮಾಡಿ ಬದುಕಿಸಲು ಸಾಧ್ಯವೆಂದು ತಜ್ಞರು ಹೇಳುತ್ತಾರೆ. ಮರಣಾನಂತರ ಬೆಂಕಿಯಲ್ಲಿ ಬೂದಿಯಾಗುವ ಅಥವಾ ಮಣ್ಣಲ್ಲಿ ಮಣ್ಣಾಗುವ ದೇಹವನ್ನು ಸರಕಾರಿ ಅಥವಾ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೂ ದಾನ ಮಾಡಬಹುದಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತವಾದ ಅಧ್ಯಯನಕ್ಕೆ ಪೂರಕವಾಗಿ ಅವನ್ನು ಬಳಸಿಕೊಳ್ಳಲಾಗುತ್ತದೆ.
ಅಂಗಾoಗ ದಾನ ಮಾಡಲು ವಯೋಮಿತಿ, ಲಿಂಗ ಭೇದವಿಲ್ಲ. ಕ್ಯಾನ್ಸರ್, ಏಡ್ಸ್ ಮುಂತಾದ ಸೋಂಕಿತರನ್ನು ಹೊರತುಪಡಿಸಿ ದೇಹದ ಅಂಗಾAಗಗಳು ಸುವ್ಯವಸ್ಥೆಯಲ್ಲಿರುವವರು ದಾನ ಮಾಡಬಹುದು. ವ್ಯಕ್ತಿಯ ಮೆದುಳು ನಿಷ್ಕಿçಯವಾಗಿದ್ದಾಗ ಹೃದಯ ಬಡಿತವಿರುತ್ತದೆ. ಆಗ ಕಣ್ಣು, ಕಿವಿ, ಯಕೃತ್ ದಾನ ಮಾಡಬಹುದು. ಮರಣದ ನಂತರ (ತಕ್ಷಣಕ್ಕೆ) ಹೃದಯ, ಚರ್ಮ, ಕರುಳು, ಮೂತ್ರಪಿಂಡ, ಶ್ವಾಸಕೋಶ ದಾನ ಮಾಡಬಹುದು.
ಅಂಗಾoಗ ದಾನದ ಮಹತ್ವ, ಉದ್ದೇಶ ಸಾರುವ ನಿಟ್ಟಿನಲ್ಲಿ ಆಗಸ್ಟ್ 13 ಅನ್ನು ‘ವಿಶ್ವ ಅಂಗಾoಗ ದಾನ ದಿನ’ವನ್ನಾಗಿ ಆಚರಿಸಲಾಗುತ್ತದೆ. ಆದರೆ ಇಂದಿಗೂ ಅಂಗಾoಗ ದಾನದ ಜಾಗೃತಿಯ ಕೊರತೆ ಎಲ್ಲೆಡೆ ಇದೆ ಎಂದು ಅನೇಕ ಸಮೀಕ್ಷೆಯ ಮೂಲಕ ಕಂಡುಬoದಿದೆ. ಈಗ ಪ್ರತಿ ಒಂದು ಮಿಲಿಯನ್ ಜನಸಂಖ್ಯೆಯಲ್ಲಿ ಅಂಗಾoಗ ದಾನದ ಪ್ರಮಾಣ ಕೇವಲ ಶೇ.0.26ರಷ್ಟಿದೆ. ವರ್ಷದಿಂದ ವರ್ಷಕ್ಕೆ ಅಂಗಾoಗ ದಾನ ಬಯಸುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಅಂಗಾoಗ ದಾನದಂತೆ ಹಿಂದೆ ರಕ್ತದಾನದ ಬಗ್ಗೆಯೂ ಸಾಕಷ್ಟು ತಪ್ಪು ಅಭಿಪ್ರಾಯಗಳಿದ್ದವು. ಆರೋಗ್ಯವಂತ ವ್ಯಕ್ತಿ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ರಕ್ತದಾನ ಮಾಡಿದರೆ ದೇಹಾರೋಗ್ಯ ಉತ್ತಮಗೊಳ್ಳುತ್ತದೆ ಎಂಬ ಮಾಹಿತಿಗಳನ್ನು ನೀಡಿ ಜನರಲ್ಲಿ ಧೈರ್ಯ ತುಂಬಿದ ಬಳಿಕವಷ್ಟೇ ರಕ್ತದಾನ ಮಾಡಲು ಒಂದಷ್ಟು ಮಂದಿ ಮುಂದಾದರು. ಆಸ್ಪತ್ರೆಗಳು ಮತ್ತು ಸಂಘ ಸಂಸ್ಥೆಗಳು ಜನರಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಪ್ರೋತ್ಸಾಹಿಸುತ್ತಿವೆ. ಆದರೂ ರಕ್ತದಾನ ಮಾಡಲು ಹಿಂದೇಟು ಹಾಕುವವರು ಇನ್ನೂ ಇದ್ದಾರೆ.
ಕೆಲವು ವರ್ಷಗಳ ಹಿಂದೆ ಅಪಘಾತ, ಹೆರಿಗೆಯ ಸಂದರ್ಭದಲ್ಲಿ ತೀವ್ರರಕ್ತಸ್ರಾವಗೊಂಡು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿತ್ತು. ಯಾಕೆಂದರೆ ಅವರಿಗೆ ಸಕಾಲದಲ್ಲಿ ರಕ್ತ ದೊರೆಯದೇ ಇದ್ದುದರಿಂದ ಅವರನ್ನು ಉಳಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಇಂತಹ ಸನ್ನಿವೇಶಗಳು ಅತಿ ಕಡಿಮೆ. ಮುಂಜಾಗರೂಕತೆಯಾಗಿ ಬಹುತೇಕ ಆಸ್ಪತ್ರೆಗಳು ರಕ್ತ ಸಂಗ್ರಹಣೆ ಮಾಡಿಕೊಂಡಿರುತ್ತವೆ ಇಲ್ಲವೇ ‘ಬ್ಲಡ್ ಬ್ಯಾಂಕ್’ ಮೂಲಕ ರಕ್ತವನ್ನು ಪಡೆದು ರೋಗಿಯನ್ನು ಬದುಕಿಸಲು ಪ್ರಯತ್ನಿಸುತ್ತವೆ.
ಮಹಾಭಾರತದ ಒಂದು ಕಥೆಯನ್ನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ಒಮ್ಮೆ ಕೃಷ್ಣ ಮತ್ತು ಅರ್ಜುನರ ನಡುವೆ ದಾನದ ಮಹತ್ವದ ಬಗ್ಗೆ ಚರ್ಚೆಯಾಗಿತ್ತು. ಆಗ ಧರ್ಮರಾಯನ ದಾನ ಧರ್ಮಗಳೇ ಶ್ರೇಷ್ಠ ಎನ್ನುವುದು ಅರ್ಜುನನ ವಾದವಾಗಿತ್ತು. ಕೃಷ್ಣನಿಗೆ ಕರ್ಣನ ದಾನಗಳ ಬಗ್ಗೆ ತಿಳಿದಿತ್ತು. ಹಾಗಾಗಿ ಈ ಚರ್ಚೆಯನ್ನು ಮುಗಿಸುವ ಸಲುವಾಗಿ ಕೃಷ್ಣನು ಅರ್ಜುನನನ್ನು ಧರ್ಮರಾಯನ ಬಳಿ ಕರೆದುಕೊಂಡು ಹೋಗಿ ತನಗೆ ಬಂಗಲೆಯೊoದನ್ನು ಕಟ್ಟಲು ಗಂಧದ ಕಟ್ಟಿಗೆಗಳ ಅವಶ್ಯಕತೆ ಇದೆಯೆಂದು ತಿಳಿಸಿದನು. ಧರ್ಮರಾಯನು ತನ್ನ ಸೇವಕರಿಗೆ ಆದೇಶ ನೀಡಿದನು. ಆದರೆ ಆಗ ಮಳೆ ಸುರಿಯುತ್ತಿದ್ದುದರಿಂದ ಕಟ್ಟಿಗೆಯನ್ನು ತರಲು ಸಾಧ್ಯವಾಗಲಿಲ್ಲ. ಧರ್ಮರಾಯನು ಅಸಹಾಯಕತೆಯಿಂದ ಕೃಷ್ಣನಲ್ಲಿ ತನ್ನಿಂದ ಈ ಕಾರ್ಯ ಸಾಧ್ಯವಿಲ್ಲ ಎಂದನು. ಬಳಿಕ ಕೃಷ್ಣನು ಕರ್ಣನ ಬಳಿ ಅರ್ಜುನನನ್ನು ಕರೆದೊಯ್ದು ಅದೇ ವಿಚಾರವನ್ನು ಪ್ರಸ್ತಾಪಿಸಿದನು. ಕರ್ಣನಿಗೂ ಮಳೆಯಿಂದಾಗಿ ಗಂಧದ ಕಟ್ಟಿಗೆಯ ಅಭಾವ ಕಾಡಿತು. ಆದರೆ ಸಮಯ ಸಂದರ್ಭ ಅರಿತ ಕರ್ಣನು ತನ್ನ ಕೊಠಡಿಯಲ್ಲಿದ್ದ ಗಂಧದ ಮರದಿಂದ ತಯಾರಿಸಲ್ಪಟ್ಟಿದ್ದ ಮಂಚದ ಕಾಲುಗಳನ್ನು ಕತ್ತರಿಸಿ ಕೃಷ್ಣನಿಗೆ ಒದಗಿಸಿದನು. ಇದನ್ನೆಲ್ಲ ನೋಡುತ್ತಿದ್ದ ಅರ್ಜುನನಿಗೆ ದಾನದ ಮಹತ್ವ ಮತ್ತು ಅದರ ಶ್ರೇಷ್ಠತೆಯ ಅರಿವಾಯಿತು. ಈ ವಿಚಾರವನ್ನು ತಿಳಿಸಿದ ಉದ್ದೇಶವೇನು ಎಂದರೆ ದಾನ ಮಾಡುವ ಸಂಸ್ಕಾರವನ್ನು ನಾವು ಬೆಳೆಸಿಕೊಳ್ಳಬೇಕು. ಆಗ ನಮ್ಮ ಕಾಯವಳಿದರೂ ನಮ್ಮ ಅಂಗಗಳು ಮತ್ತೊಬ್ಬರಿಗೆ ದೊರೆಯುವುದರಿಂದ ನಮ್ಮ ಜೀವನವನ್ನು ನಾವು ವಿಸ್ತರಿಸಿಕೊಂಡoತೆ ಆಗುತ್ತದೆ. ನಾವು ಅಳಿದಾಗ ನೇತ್ರದಾನ ಮಾಡಿದರೆ ನಮ್ಮ ಕಣ್ಣುಗಳು ಜಗತ್ತನ್ನು ಕಾಣುತ್ತಿರುತ್ತವೆ. ಈ ಮೂಲಕ ಮತ್ತೊಬ್ಬರಿಗೆ ನಾವು ಬೆಳಕಾಗುತ್ತೇವೆ.
‘ಮಾನವನ ಅಂಗಗಳು ಅತ್ಯಂತ ಅಮೂಲ್ಯವಾದದ್ದು ಮತ್ತು ಯಾರಾದರೂ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದರೆ ಅವರು ನಿಜವಾಗಿಯೂ ತಮ್ಮ ಜೀವನವನ್ನು ಇನ್ನೊಂದು ಜೀವಕ್ಕೆ ವರ್ಗಾಯಿಸಿ ತಮ್ಮ ಜೀವನವನ್ನೇ ವಿಸ್ತರಿಸಿಕೊಂಡoತೆ’ ಎನ್ನುವ ಉಕ್ತಿ ನಿಜಕ್ಕೂ ಸಾರ್ವಕಾಲಿಕವಾದುದು. ಅನ್ನದಾನ, ವಿದ್ಯಾದಾನ, ಕನ್ಯಾದಾನ ಹೀಗೆ ಪ್ರತಿಯೊಂದು ದಾನವೂ ತನ್ನದೇ ಆದ ಮೌಲ್ಯ ಹಾಗೂ ಮಹತ್ವವನ್ನು ಹೊಂದಿದೆ. ನಮ್ಮಲ್ಲಿರುವ ದಾನ ಪರಂಪರೆಯಿoದಾಗಿಯೇ ಭಾರತೀಯರು ವಿಶ್ವದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟು ಗೌರವ ಪಡೆಯುತ್ತಿರುವುದು. ನಮ್ಮ ಸಂಪ್ರದಾಯ, ಪದ್ಧತಿಗಳ ರೂಪದಲ್ಲಿ ಜನಜೀವನದಲ್ಲಿ ಹಾಸುಹೊಕ್ಕಿರುವ ದಾನಪರಂಪರೆಗೆ ರಕ್ತದಾನ, ಅಂಗಾoಗದಾನ ಹೊಸ ಸೇರ್ಪಡೆಯೆಂದೇ ಹೇಳಬಹುದು. ಸಾಧ್ಯವಾದಷ್ಟು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾ ಇನ್ನೊಬ್ಬರ ಬದುಕಿಗೆ ಜೀವತುಂಬುವ ಕಾರ್ಯದಲ್ಲಿ ನಮ್ಮಿಂದಾಗುವ ಪ್ರಯತ್ನವನ್ನು ಮಾಡೋಣ.

Facebook
Twitter
WhatsApp
LinkedIn
Telegram