ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.)
ಕಳೆದ 75 ವರ್ಷಗಳಿಂದ ನಮ್ಮ ಪೀಳಿಗೆ ಸ್ವಾತಂತ್ರ್ಯದ ಸವಿ ಜೀವನವನ್ನು ಅನುಭವಿಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ಅಂದು ತಮ್ಮ ಜೀವ ತ್ಯಾಗ ಮಾಡಿದ ಸಹಸ್ರಾರು ಸ್ವಾತಂತ್ರ್ಯ ಹೋರಾಟಗಾರರ ಋಣ ಶಾಶ್ವತವಾಗಿ ನಮ್ಮ ಮೇಲಿದೆ. ಹಾಗೆ ನಮ್ಮ ಮುಂದಿನ ಪೀಳಿಗೆಗೂ ಇದೆ. ಭವ್ಯ ಭಾರತದ ಸ್ವಾತಂತ್ರ್ಯಕ್ಕಾಗಿ ಸ್ವಲ್ಪವೂ ಜಗ್ಗದೇ ಆಂಗ್ಲರ ಗುಂಡೇಟಿಗೆ ಸಿಂಹದoತೆ ಎದೆಯೊಡ್ಡಿದ್ದ ವೀರರನ್ನು ನಾವು ಎಂದಿಗೂ ಪೂಜಿಸಬೇಕು. ಅವರ ತ್ಯಾಗ, ಬಲಿದಾನದ ಫಲವಾಗಿ ನಾವಿಂದು ಹೀಗೆ ಮುಕ್ತವಾಗಿ ಬದುಕುತ್ತಿದ್ದೇವೆ. ಇಂದಿನ ಎಲ್ಲಾ ಸೌಕರ್ಯಗಳೊಂದಿಗೆ ಅವಲಂಬಿತರಾಗಿ ಬದುಕುವ ನಮಗೆ ೭೫ ವರ್ಷಗಳ ಹಿಂದಿನ ದಿನಗಳು ಹೇಗೆ ಇದ್ದವು ಎಂದು ಕಲ್ಪನೆಗೆ ಸಿಗದು. ಯಾವ ಸಾರಿಗೆ-ಸಂಪರ್ಕ, ಸಂಪನ್ಮೂಲಗಳ ಸೌಕರ್ಯಗಳಿಲ್ಲದೇ ಅಂದಿನ ಸ್ವಾತಂತ್ರ್ಯ ಹೋರಟಗಾರರು ಆಂಗ್ಲರ ಅಷ್ಟೊಂದು ಕಠಿಣ ದಬ್ಬಾಳಿಕೆಯಲ್ಲಿ ಹೇಗೆ ಹೋರಾಡಿದ್ದರು ಎಂದು ಊಹಿಸಲಿಕ್ಕೂ ನಮಗೆ ಇಂದು ಸಾಧ್ಯವಾಗುತ್ತಿಲ್ಲ. ಈಗ ನಮ್ಮ ಸೈನಿಕರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ಧರಿದ್ದಾರೆ. ಆದರೆ ಅಂದು ಸಾಮಾನ್ಯ ಪ್ರಜೆಯೂ ದೇಶದ ಸ್ವಾತಂತ್ರ್ಯಕ್ಕಾಗಿ ಯಾವ ಬಲಿದಾನಕ್ಕೂ ಸಿದ್ಧರಿದ್ದರು. ಆಂಗ್ಲರ ಗುಂಡೇಟು ತಮ್ಮ ಎದೆ ಸೀಳುತ್ತದೆ ಎಂದು ಗೊತ್ತಿದ್ದರೂ ಕೂಡ ಸ್ವಲ್ಪವೂ ಅಂಜದೇ ಹೋರಾಟಕ್ಕೆ ಧುಮುಕುತ್ತಿದ್ದರು. ಅವರೆಲ್ಲರಿಗೂ ಇದೋ ಶಿರಸಾ ಪ್ರಣಾಮಗಳು.
ಇಂದು ಭಾರತ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಆಗುವುದಲ್ಲದೆ ಅತೀ ಹೆಚ್ಚು ಯುವಜನತೆಯನ್ನು ಹೊಂದಿದ ದೇಶವೂ ಆಗಿದೆ. ಮುಂದಿನ ಭವ್ಯ ಭಾರತದ ನಿರ್ಮಾಣವು ಈ ಯುವ ಜನತೆಯ ಕೈಯಲ್ಲಿದೆ. ಸಕಾರಾತ್ಮಕ ಚಿಂತನೆಯೊoದಿಗೆ ಉತ್ತಮ ವ್ಯಕ್ತಿತ್ವಗಳನ್ನು ಹೊಂದಿದ ಯುವ ಜನತೆ ದೇಶದ ಆಸ್ತಿಗಳಾಗುತ್ತಾರೆ. ಇದು ತದ್ವಿರುದ್ದವಾದರೆ ಮಾರಕವೂ ಆಗುತ್ತಾರೆ. ಯುವ ಜನತೆಯ ದೈಹಿಕ ಶ್ರಮ ದೇಶದ ಅಭಿವೃದ್ಧಿಗೆ ಎಷ್ಟು ಪೂರಕವೋ, ಅದಕ್ಕಿಂತ ಹೆಚ್ಚು ಅವರ ಬುದ್ಧಿಶಕ್ತಿ ಪೂರಕವಾಗಿದೆ. ಕೃಷಿ, ಮೂಲಭೂತ ಸೌಕರ್ಯ ನಿರ್ಮಾಣ, ಉತ್ಪಾದಕ ಚಟುವಟಿಕೆ, ಇತ್ಯಾದಿ ವಲಯಗಳ ಅಭಿವೃದ್ಧಿಯಲ್ಲಿ ಯುವಜನತೆಯ ದೈಹಿಕ ಶ್ರಮ ಆಧಾರವಾಗಿದ್ದರೆ, ವಿಜ್ಞಾನ, ತಂತ್ರಜ್ಞಾನ ಆವಿಷ್ಕಾರಗಳ ವಿಷಯಗಳ ಅಭಿವೃದ್ಧಿಗೆ ಯುವ ಬುದ್ಧಿಶಕ್ತಿ ಕೀಲಿ ಕೈಯಾಗಿದೆ. ಹಾಗೆಯೇ ಈ ಎಲ್ಲಾ ಅಭಿವೃದ್ಧಿಗಳನ್ನು ನಾಶಪಡಿಸುವಂತಹ ಮಾರಕ ದೈಹಿಕ ಹಾಗೂ ಮಾನಸಿಕ ಶಕ್ತಿಗಳ ಪ್ರಯೋಗಗಳಾಗುತ್ತಿರುವುದು ಈ ಯುವ ಜನತೆಯಿಂದಲೇ. ನಮ್ಮ ದೇಶದ ಭವಿಷ್ಯ, ಸಂಪನ್ಮೂಲ ಯುವ ಜನತೆಯ ಗುಣಮಟ್ಟದಲ್ಲಿ ನಿಂತಿದೆಯೇ ಹೊರತು, ಬರಿ ಒಟ್ಟು ಯುವ ಜನತೆಯ ಪ್ರಮಾಣದಲ್ಲಿ ಅಲ್ಲ. ನಮ್ಮ ಇಂದಿನ ಬದುಕಿಗಾಗಿ ಅಂದು ತ್ಯಾಗ, ಬಲಿದಾನ ಮಾಡಿದ ಸ್ವಾತಂತ್ರö್ಯ ವೀರರನ್ನು ಇಂದಿನ ಯುವ ಜನತೆ ಸದಾ ಸ್ಮರಿಸಬೇಕು. ಸ್ವಾತಂತ್ರ್ಯದ ಮಹತ್ವ ಅರಿತು ತಮ್ಮ ಬದುಕಿನಲ್ಲಿ ಅತ್ಯುತ್ತಮ ಸಾಧನೆಗಳನ್ನು ಮಾಡುವುದರ ಮೂಲಕ ಅವರಿಗೆ ಗೌರವಾರ್ಪಣೆ ಮಾಡಬೇಕು. ಅದುವೆ ನಿಜಾರ್ಥದಲ್ಲಿ
“ಆಜಾದಿ ಕಾ ಅಮೃತ ಮಹೋತ್ಸವ” ಆಗುವುದು.
ನಮ್ಮ ದೇಶದ ಯುವ ಜನತೆಯ ಮೇಲೆ ಪೂಜ್ಯ
ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಎಲ್ಲಿಲ್ಲದ ಪ್ರೀತಿ. ಯುವ ಜನತೆಯ ಸುಂದರ ಭವಿಷ್ಯಕ್ಕಾಗಿ ತನ್ನ ಅನೇಕ ಸಂಸ್ಥೆಗಳ ಮೂಲಕ ಬಹಳಷ್ಟು ಕಾರ್ಯಕ್ರಮಗಳನ್ನು ಕರ್ನಾಟಕ ರಾಜ್ಯದಲ್ಲಿ ಹಮ್ಮಿಕೊಂಡು ಅದ್ಭುತ ಯಶಸ್ಸನ್ನು ತಂದು ಕೊಟ್ಟಿದ್ದಾರೆ. ಶಿಕ್ಷಣವಂತ ಯುವ ಜನತೆ ನಿರ್ಮಾಣಕ್ಕಾಗಿ 52 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ಉತ್ತಮ ಜೀವನ ಮೌಲ್ಯಗಳೊಂದಿಗೆ ಒಂದು ನಾಣ್ಯದ ಎರಡು ಮುಖಗಳಂತೆ ನೀಡುತ್ತಿದ್ದಾರೆ. ಉತ್ತಮ ಶಿಕ್ಷಣ ಹೊಂದಿದ ಅಥವಾ ಕಡಿಮೆ ಶಿಕ್ಷಣ ಹೊಂದಿದ ಎಷ್ಟೋ ಯುವ ಜನತೆಯ ಬದುಕನ್ನು ರೂಪಿಸಲು ರುಡ್‌ಸೆಟ್ ಸಂಸ್ಥೆಯನ್ನು ಸ್ಥಾಪಿಸಿ, ಅಲ್ಪಾವಧಿಯಲ್ಲಿ ಪರಿಪೂರ್ಣ ಸ್ವ-ಉದ್ಯೋಗದ ತರಬೇತಿಗಳನ್ನು ನೀಡುತ್ತಿದ್ದಾರೆ. ಇದು ದೇಶಾದ್ಯಂತ ಪ್ರತಿ ಜಿಲ್ಲೆಯಲ್ಲೂ ನೆಲೆಸಿ ಇಲ್ಲಿಯವರೆಗೆ 40 ಲಕ್ಷ ಯುವ ಜನತೆಗೆ ತರಬೇತಿ ನೀಡಿ ಅವರಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಪೂಜ್ಯರ ಇನ್ನೊಂದು ಮಹತ್ತರ ಕಾರ್ಯಕ್ರಮವಾದ ‘ಗ್ರಾಮಾಭಿವೃದ್ಧಿ ಯೋಜನೆ’ಯ ಮೂಲಕ ಲಕ್ಷಾಂತರ ಯುವ ಜನತೆಗೆ ಅನೇಕ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ಸೌಲಭ್ಯವನ್ನು ಒದಗಿಸುತ್ತಾ, ತರಬೇತಿಯನ್ನು ನೀಡುತ್ತಾ ಅವರ ಸ್ವಾವಲಂಬಿ ಬದುಕಿಗೆ ಕಾರಣೀಭೂತರಾಗಿದ್ದಾರೆ. ಹಾಗೆಯೇ, ಯೋಜನೆಯ ‘ಜನಜಾಗೃತಿ ವೇದಿಕೆ’ಯ ಮೂಲಕ ಸಾವಿರಾರು ಮದ್ಯವ್ಯಸನಿ ಯುವ ಜನತೆಯ ಮನಪರಿವರ್ತನೆ ಮಾಡಿ ಅವರನ್ನು ವ್ಯಸನ ಮುಕ್ತ ಸಜ್ಜನರನ್ನಾಗಿ ಪರಿವರ್ತಿಸಲಾಗುತ್ತಿದೆ. ಕೃಷಿಯ ಮೂಲಕ ಲಾಭದಾಯಕ ಬದುಕನ್ನು ಯುವ ಜನತೆಗೆ ಕಟ್ಟಿಕೊಡುವ ತಂತ್ರಜ್ಞಾನವನ್ನು ಕೃಷಿಗೆ ಹೊತ್ತು ತಂದು ಯಂತ್ರಾಧಾರಿತ ಕೃಷಿ ಸಂಸ್ಕೃತಿಗೆ ರಾಜ್ಯದಲ್ಲಿ ನಾಂದಿ ಹಾಡಿದ್ದಾರೆ. ತಮ್ಮ ಅನೇಕ ಸಂಸ್ಥೆಗಳ ಮೂಲಕ ಸುಮಾರು ೫೦ ಸಾವಿರ ಯುವಜನತೆಗೆ ನೇರ ಉದ್ಯೋಗ ಕಲ್ಪಿಸಿ ಪೂಜ್ಯರು ಅವರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಕರ್ನಾಟಕ ರಾಜ್ಯದ ‘ಸಂಪನ್ಮೂಲಯುತ ಯುವ ಜನತೆಯ ನಿರ್ಮಾತೃ’ ಪೂಜ್ಯ ಶ್ರೀ ಹೆಗ್ಗಡೆಯವರು ಎಂದರೂ ತಪ್ಪಾಗಲಾರದು.
“ಆಜಾದಿ ಕಾ ಅಮೃತ ಮಹೋತ್ಸವ”ದ ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಹೆಗ್ಗಡೆಯವರನ್ನು ಘನವೆತ್ತ ರಾಷ್ಟ್ರಪತಿಗಳು ಸಂಸತ್ತಿನ ಮೇಲ್ಮನೆಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ಮಾಡುತ್ತಿರುವುದು ಅಮೃತ ಮಹೋತ್ಸವ ಕಾಲದ ಅಮೃತಘಳಿಗೆಯಾಗಿದೆ. ಪೂಜ್ಯರ ಎಲ್ಲಾ ಯಶಸ್ವಿ ಪ್ರಯೋಗಗಳು ಇನ್ನು ಮುಂದೆ ಅಮೃತ ಸಿಂಚನದAತೆ ಇಡೀ ದೇಶಕ್ಕೆ ಪ್ರಸರಿಸುವುದು ನಮ್ಮೆಲ್ಲರ ಭಾಗ್ಯವೇ ಸರಿ. ಭವಿಷ್ಯತ್‌ನಲ್ಲಿ ಪೂಜ್ಯರ ದಿವ್ಯ ಮಾರ್ಗದರ್ಶನದನುಸಾರ ನಮ್ಮ ದೇಶದ ಯುವ ಜನತೆ ಸದೃಢ ಯುವ ಸಂಪನ್ಮೂಲಗಳಾಗುವುದು ನಿಶ್ಚಲವಾಗಿ ಕಾಣುತ್ತಿದೆ. ಆ ಒಟ್ಟು ಯುವ ಸಂಪನ್ಮೂಲಗಳ ಅಂತರಾಳದಲ್ಲಿ ಭವ್ಯ ಭಾರತದ ಚಿತ್ರಣವೂ ಕಾಣುತ್ತಿದೆ.