ಕರೆಂಟಿಲ್ಲದ ಆ ದಿನ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು

ನಾವು ಚಿಕ್ಕವರಿರುವಾಗ ಹಳ್ಳಿಯಲ್ಲಿರುವ ನಮ್ಮ ಅಜ್ಜನ ಮನೆಯಲ್ಲಿ ಕರೆಂಟಿರಲಿಲ್ಲ. ಆದ್ದರಿಂದ ಹಗಲೆಲ್ಲಾ ಗುಡ್ಡ, ಬೆಟ್ಟ, ಗದ್ದೆ ಎಲ್ಲಿ ಬೇಕೆಂದರಲ್ಲಿ ಅಲೆದಾಡಿ ರಾತ್ರಿ ಆಗುತ್ತಿದ್ದಂತೆ ಮನೆ ಸೇರಿಕೊಳ್ಳುತ್ತಿದ್ದೆವು. ಬೇಗ ಊಟ ಮುಗಿಸಿದರೆ ಮತ್ತೆ ನೀರವ ಮೌನ, ಕತ್ತಲೆ. ಅಲ್ಲಿ ನಮ್ಮ ಸಹಾಯಕ್ಕೆ ಬರುತ್ತಿದ್ದವರು ಆಳು ಮಕ್ಕಳು. ಅವರಲ್ಲಿ ಅನೇಕ ಗಾದೆ ಮಾತುಗಳು, ಒಗಟು, ಜಾನಪದ ಕತೆ, ಭೂತಪ್ರೇತದ ಕತೆಗಳ ಮುಗಿಯಲಾರದ ಭಂಡಾರವೇ ಇರುತ್ತಿತ್ತು. ಜೊತೆಗೆ ಮನೆಯ ಹಿರಿಯರು, ಅಮ್ಮ, ದೊಡ್ಡಮ್ಮನವರ ಶಾಸ್ತ್ರ, ಕಾವ್ಯಗಳ ಓದು, ಧಾರ್ಮಿಕ ಚರ್ಚೆ, ಭಜನೆ ಇವು ಹೊತ್ತು ಕಳೆಯುವ ಸಾಧನವಾಗುತ್ತಿತ್ತು. 9 ಗಂಟೆಗೆಲ್ಲಾ ಹಾಲು ಕುಡಿದು ಮಲಗಿದರೆ ಕೈಯಲ್ಲಿ ದೀಪ ಹಿಡಿದುಕೊಂಡು ಓಡಾಡುವವರ ಕರಿನೆರಳು, ಗೋಡೆ ಮೇಲೆ ಉದ್ದಕ್ಕೆ ಬಿದ್ದು ಅವರ ಹೆಜ್ಜೆಗೆ ತಕ್ಕಂತೆ ಅಲುಗಾಡುತ್ತಾ ಸಾಗಿದಾಗ ಆಗ ತಾನೇ ಕೇಳಿದ ಭೂತದ ಕತೆಯ ನೆನಪಾಗಿ ಕಣ್ಣು ಮುಚ್ಚಲೂ ಭಯ, ಕಣ್ಣು ತೆರೆದು ನೋಡಲೂ ಭಯ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಉದ್ದನೆಯ ಹಾಲ್‌ನಲ್ಲಿ ಸಾಲಾಗಿ ಮಲಗುವ ಅಕ್ಕ- ತಂಗಿಯರು, ಅಣ್ಣ – ತಮ್ಮಂದಿರಿದ್ದಾರೆ ಎಂಬುದೇ ಧೈರ್ಯ.
ಆ ಕಾಲದಲ್ಲಿ ರಾತ್ರಿ ವಿದ್ಯುದ್ದೀಪದ ಬೆಳಕೊಂದು ಇಲ್ಲ ಎಂಬುದನ್ನು ಬಿಟ್ಟರೆ ಬೆಳಿಗ್ಗೆ ಎದ್ದ ಬಳಿಕದ ಕಾರ್ಯಕ್ರಮಗಳು ಪ್ರತಿನಿತ್ಯ ನಿರ್ವಿಘ್ನವಾಗಿ ನಡೆಯುತ್ತಿದ್ದವು. ಕಟ್ಟಿಗೆ ಒಲೆಯಲ್ಲಿ ಕಾಲಕಾಲಕ್ಕೆ ಕಾಫಿ, ತಿಂಡಿಗಳು ರೆಡಿ ಆಗುತ್ತಿದ್ದವು. ಸ್ನಾನಕ್ಕೆ ಹಂಡೆ ತುಂಬಾ ಬಿಸಿ ನೀರು ತಯಾರಾದರೆ, ಕುಟ್ಟಲು, ಬೀಸಲು ಗಟ್ಟಿಮುಟ್ಟಾದ ಬೀಸುಕಲ್ಲು, ಕಡೆವ ಕಲ್ಲುಗಳು ಪ್ಲಗ್ಗು, ವಯರ್‌ಗಳ ಜಂಜಡವಿಲ್ಲದೆ ನಾವು ಸದಾ ಸಿದ್ಧ ಎನ್ನುವಂತೆ ಕುಳಿತಿರುತ್ತಿದ್ದವು. ಬಾವಿಯಿಂದ ಸೇದಿದ ಶುದ್ಧ ನೀರನ್ನು ಯಾವುದೇ ಆತಂಕವಿಲ್ಲದೆ ಕುಡಿಯಲು, ಮನೆ ಕೆಲಸಕ್ಕೆ, ಜಾನುವಾರುಗಳಿಗೆ, ಬಟ್ಟೆ ಒಗೆಯಲು ಎಲ್ಲದಕ್ಕೂ ಉಪಯೋಗಿಸುತ್ತಿದ್ದೆವು. ಇಸ್ತ್ರಿ ಹಾಕಲು ಗೆಂಡದ ಇಸ್ತ್ರಿ ಪೆಟ್ಟಿಗೆ. ಕಿವಿ ಹಿಂಡಿದರೆ ಅರಚುವ ರೇಡಿಯೋ ಒಂದೇ ಆ ಕಾಲದ ಮನರಂಜನಾ ಸಾಧನವಾಗಿತ್ತು. ರಾತ್ರಿ ಆದರೆ ಹಾಲ್‌ನಲ್ಲಿ ಉರಿಯುವ ಸಣ್ಣನೆ ದೀಪ, ಯಜಮಾನರ ಕೈಯ ಉದ್ದನೆಯ ಟಾರ್ಚುಲೈಟು ಮನೆ ಬೆಳಗುತ್ತಿತ್ತು. ಮಳೆ ಬಿದ್ದೊಡನೆ ಗದ್ದೆಗೆ ನೀರು ಹಾಯಿಸಲು ಕಟ್ಟಕಟ್ಟಲು ಹೊರಡುವ ಗಂಡಸರು, ಬೇಸಿಗೆಯಲ್ಲಿ ನೀರೆಳೆಯಲು ಏತ ನೀರಾವರಿ, ಒಟ್ಟಿನಲ್ಲಿ ಹೆಂಗಸರು, ಗಂಡಸರು ಮನೆ ಕೆಲಸ, ಗದ್ದೆ ಕೆಲಸದಲ್ಲಿ ಬಿಡುವಿಲ್ಲದಂತೆ ತೊಡಗಿಸಿಕೊಂಡು ಕೈತುಂಬಾ ಕೆಲಸ ಮಾಡಿ ಹೊಟ್ಟೆ ತುಂಬಾ ಊಟ ಮಾಡಿ ಕತ್ತಲಲ್ಲಿ ಕಣ್ತುಂಬಾ ನಿದ್ದೆ ಮಾಡುತ್ತಿದ್ದರು. ಕರೆಂಟ್ ಬಂದ ನಂತರವAತೂ ಕತ್ತಲೆ, ಬೆಳಕಿನಲ್ಲಿ ವ್ಯತ್ಯಾಸವೇ ಇಲ್ಲದಂತಾಗಿದೆ. ರಾತ್ರಿ ಮಲಗಿದರೂ ನಮ್ಮ ಕೋಣೆಗೆ ರಸ್ತೆ ಬದಿ ಉರಿಯುವ ಬೀದಿ ದೀಪಗಳಿಂದ, ರೂಮಿನಲ್ಲಿರುವ ಗಡಿಯಾರ, ಕರೆಂಟ್ ಇಂಡಿಕೇಟರ್ ಸ್ವಿಚ್, ಮೊಬೈಲ್, ಟಿ.ವಿ., ಸೊಳ್ಳೆ ಬ್ಯಾಟ್‌ಗಳು, ಬೆಡ್‌ಲ್ಯಾಂಪ್‌ಗಳು, ಚಾರ್ಜರ್, ಸಿ.ಸಿ.ಟಿ.ವಿ., ಎ.ಸಿ., ಚಾರ್ಜರ್ ಲೈಟ್‌ಗಳು, ವಾಚ್, ಸ್ಟೆಬಿಲೈಜರ್, ಇನ್‌ವರ್ಟರ್ ಹೀಗೆ ನಾನಾ ಕಡೆಗಳಿಂದ ಸಣ್ಣನೆ ಬೆಳಕು ಬರುತ್ತಿರುತ್ತದೆ. ಇದರಿಂದಾಗಿ ಸಂಪೂರ್ಣವಾಗಿ ಕತ್ತಲಿನ ಸುಖನಿದ್ದೆ ಇಂದು ಸಿಗಲಾರದು.
ಈಗ ಒಂದು ದಿನ ಕರೆಂಟಿಲ್ಲ ಅಂದರೆ, ಇಡೀ ಮನೆ ಅಲ್ಲೋಲ ಕಲ್ಲೋಲ ಆದಂತೆ. ಕರೆಂಟ್ ಹೋಗಿ ಫ್ಯಾನ್ ಇಲ್ಲದೆ ಎಚ್ಚರವಾಗಿ ಮುಖ ಉಬ್ಬಿಸಿಕೊಂಡು ಎದ್ದು ಬರುವ ಮಕ್ಕಳು, ಮಿಕ್ಸಿಯಲ್ಲಿ ಹಾಕಿದ ಚಟ್ನಿ, ಗ್ರೈಂಡರ್ ಗೆ ಹಾಕಿದ ದೋಸೆ ಹಿಟ್ಟು ಅರ್ಧಕ್ಕೆ ಕೈಕೊಟ್ಟಿತೆಂದು ತಲೆ ಬಿಸಿಯಲ್ಲಿ ಕಾಯುವ ಅಮ್ಮ, ಬೆಳಗ್ಗಿನ ಕಾಫಿ ಮಾಡುವ ಅಂದರೆ ಕರೆಂಟ್ ಹೋಗಿ ಫ್ರಿಡ್ಜ್ನಲ್ಲಿಟ್ಟ ಹಾಲೂ ಕೆಟ್ಟು ಹೋಗಿದೆ. ಕಾಫಿ ಮೇಕರ್‌ಗೂ ಕರೆಂಟ್ ಇಲ್ಲ ಎನ್ನುವ ಚಡಪಡಿಕೆ, ಕರೆಂಟಿಲ್ಲದೆ ಬಿಸಿ ನೀರಿಲ್ಲ ಎಂದು ಬಿ.ಪಿ. ಏರಿಸಿಕೊಂಡು ಓಡಾಡುವ ಅಪ್ಪ, ಸ್ನಾನ – ತಿಂಡಿ ಇಲ್ಲದೆ ಆಫೀಸ್‌ಗೆ ತಡವಾಗುತ್ತಿದೆ ಎನ್ನುವ ಮಗ, ಸೊಸೆ, ಟಿ.ವಿ.ಯಲ್ಲಿ ಬೆಳಗ್ಗಿನ ಕ್ಷೇತ್ರ ದರ್ಶನ, ಪ್ರವಚನ ಬರುತ್ತಿಲ್ಲವೆಂದು ಪೇಚಾಡಿಕೊಳ್ಳುವ ಅಜ್ಜ, ಇನ್ನು ಇತ್ತೀಚೆಗಂತೂ ಎಲ್ಲರ ಮೊಬೈಲ್‌ಗಳೂ ಒಂದೊ0ದು ಪ್ಲಗ್‌ನಲ್ಲಿ ನೇತಾಡಿಕೊಂಡಿರುತ್ತವೆ. ಜೊತೆಗೆ ಆನ್‌ಲೈನ್ ಕ್ಲಾಸ್‌ಗೆ ತಯಾರಾಗಬೇಕಾದ ಮಕ್ಕಳು, ಎರಡು ದಿನದಿಂದ ಒಗೆಸಿಕೊಳ್ಳಲು ಕಾಯುವ ರಾಶಿ ರಾಶಿ ಬಟ್ಟೆಗಳು ವಾಶಿಂಗ್‌ಮೆಶಿನ್ ಎದುರುಗಡೆ ಗುಡ್ಡೆಯಾಗಿ ಬಿದ್ದಿದ್ದರೆ, ಇಸ್ತ್ರಿ ಇಲ್ಲದ ಅಂಗಿ ಹಾಕಿ ಆಫೀಸ್‌ಗೆ ಹೋಗೋದೆಂತು? ಎಂಬ ಚಿಂತೆ. ಫ್ಲ್ಯಾಟ್ ಗಳಲ್ಲಿ ಮೇಲಿನ ಮಹಡಿಯಲ್ಲಿರುವವರು ಕೆಳಗೆ ಹೋಗಲಾರದೆ, ಮೇಲೂ ಇರಲಾರದೆ ತ್ರಿಶಂಕುಗಳಾಗುವುದು ಕರೆಂಟ್ ಕೈಕೊಟ್ಟಾಗಲೇ.
ಈಗಂತೂ ಅಡುಗೆ ಸಾಮಾನು, ಊಟ – ತಿಂಡಿಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಲು, ದಿನನಿತ್ಯದ ಮಾತುಕತೆಗೆ ಹೀಗೆ ಎಲ್ಲದಕ್ಕೂ ಮೊಬೈಲ್‌ನಲ್ಲಿ ಸದಾ ಚಾರ್ಜ್ ಇರಬೇಕಾಗುತ್ತದೆ. ಮನೆಗೆಲಸಕ್ಕೆ ಜನ ಸಿಗುವುದು ಕಷ್ಟವಾದ್ದರಿಂದ ಪಾತ್ರೆ ತೊಳೆಯುವ, ಮನೆಯ ಕಸ ಗುಡಿಸಿ ಒರೆಸುವ ಮೆಶಿನ್‌ಗಳು ಬಂದಿವೆ. ಈಗಾಗಲೇ ಇಲೆಕ್ಟ್ರಿಕ್ ಬೈಕ್‌ಗಳು, ಕಾರುಗಳೂ ರಸ್ತೆಗಿಳಿದಿವೆ. ಅವುಗಳನ್ನು ಅಲ್ಲಲ್ಲಿ ಚಾರ್ಜ್ ಮಾಡಬೇಕಾದದ್ದು ಅನಿವಾರ್ಯ. ರಾತ್ರಿ ವೇಳೆ ವಿದ್ಯುತ್ ಕೈಕೊಟ್ಟರಂತೂ ಕೇಳುವುದೇ ಬೇಡ. ಕ್ಯಾಂಡಲ್, ದೀಪ, ಬೆಂಕಿಕಡ್ಡಿಗಾಗಿ ಹುಡುಕಾಟ ಶುರುವಾಗುತ್ತದೆ. ದೀಪ ಇದ್ದರೆ ಎಣ್ಣೆ ಇಲ್ಲ, ಎಣ್ಣೆ ಇದ್ದರೆ ದೀಪ ಇಲ್ಲ. ಇದರಿಂದಾಗಿ ಮಕ್ಕಳ ಓದು, ಹೋಮ್‌ವರ್ಕ್ ಎಲ್ಲವೂ ಹಾಗೆಯೇ ಬಾಕಿಯಾಗುತ್ತದೆ. ನಮ್ಮದೇ ಮನೆ ಆದರೂ ಕತ್ತಲಲ್ಲಿ ಓಡಾಡಲು ಕಷ್ಟ. ಹೇಗೋ ಊಟ ಮಾಡಿ ಮಲಗಿದರೂ ಕರೆಂಟಿಲ್ಲದೆ ಫ್ಯಾನ್, ಎ.ಸಿ. ಯಾವುದೂ ಕೆಲಸ ಮಾಡುವುದಿಲ್ಲವಾದ್ದರಿಂದ ನಿದ್ದೆ ದೂರವೇ. ಟಿ.ವಿ.ಯಲ್ಲಿ ಬರುವ ಧಾರವಾಹಿ ಮುಗಿದ ಬಳಿಕವಷ್ಟೇ
ನಿದ್ದೆ ಮಾಡುವವರಿಗೆ ಕರೆಂಟ್ ಇಲ್ಲವಾದರೆ ಟಿ.ವಿ.ಯೂ ಇಲ್ಲ. ಕೊನೆಗೆ ಸೊಳ್ಳೆ ಕಡಿಯುತ್ತದೆಂದರೆ ಸೊಳ್ಳೆಬತ್ತಿ ಇಡುವುದಕ್ಕೂ ಕರೆಂಟ್ ಬೇಕಲ್ಲ?
ಅಂತೂ ಇಂದಿನ ಜನರ ನಿದ್ದೆ, ಎಚ್ಚರ, ಊಟ, ಕೆಲಸ ಎಲ್ಲವೂ ಕರೆಂಟನ್ನು ಅವಲಂಬಿಸಿದೆ ಎನ್ನಲು ಅಡ್ಡಿಯಿಲ್ಲ ಕರೆಂಟಿಲ್ಲದ ದಿನದ ಕೋಪ, ಹತಾಶೆ, ಜಗಳ ಗಡಿಬಿಡಿಗಳಿಂದ ದೂರ ನಿಂತು ನಾವೊಂದು ಘಳಿಗೆ ಇವೆಲ್ಲವನ್ನೂ ವೀಕ್ಷಿಸಿದರೆ ಒಂದು ಒಳ್ಳೆಯ ಸಿನಿಮಾ ನೋಡಿದ ಅನುಭವವಾಗುವುದಂತೂ ಖಂಡಿತ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *