ಇನ್ಮುಂದೆ ನಿಮ್ಮ ಮೊಬೈಲ್ ಕಳವಾದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಕಳವಾದ ಫೋನನ್ನು ಕೂತಲ್ಲಿಯೇ ಪೊಲೀಸ್ ಅಥವಾ ವಾರಸುದಾರರು ಬಳಕೆ ಆಗದಂತೆ ಲಾಕ್ ಮಾಡುವ ಸೌಲಭ್ಯವನ್ನು ರಾಜ್ಯ ಪೊಲೀಸ್ ಇಲಾಖೆ ಒದಗಿಸುತ್ತಿದೆ.
ಈಗಾಗಲೆ ಎಲ್ಲ ಮೊಬೈಲ್ ಕಂಪೆನಿ ಮತ್ತು ಟೆಲಿಕಾಂ ಕಂಪೆನಿಗಳೊoದಿಗೆ ಮೊಬೈಲ್ ಬ್ಲಾಕಿಂಗ್ ಬಗ್ಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ದೆಹಲಿ ಮತ್ತು ಮುಂಬೈ ಮಹಾನಗರಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಇದೆ.
ಮೊಬೈಲ್ ಕಳವಾದರೆ ನಾವೇನು ಮಾಡಬೇಕು?
ಮೊಬೈಲ್ ಕಳವಾದ ಬಗ್ಗೆ ಪೊಲೀಸ್ ಇಲಾಖೆಯ ‘ಇ – ಲಾಸ್ಟ್’ನಲ್ಲಿ ದೂರು ದಾಖಲಿಸಬೇಕು. ‘ಇ – ಲಾಸ್ಟ್’ನಲ್ಲಿ ದೂರು ದಾಖಲಾಗುತ್ತಿದ್ದಂತೆ ನೋಡಲ್ ಅಧಿಕಾರಿ ಸಿಇಐಆರ್‌ಗೆ ಮಾಹಿತಿ ರವಾನೆ ಮಾಡಿ ಮೊಬೈಲ್ ಆಕ್ಟಿವೇಷನ್ ಅನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಿಸುತ್ತಾರೆ. ನೋಂದಾಯಿತ ಐಎಂಇಐ ಸಂಖ್ಯೆಯ ಮೊಬೈಲ್ ಅನ್ನು ಸಿಇಐಆರ್ ಆ್ಯಪ್ ಸಂಪೂರ್ಣ ಬ್ಲಾಕ್ ಮಾಡುತ್ತದೆ. ಇದರಿಂದಾಗಿ ಕದ್ದ ಮೊಬೈಲ್ ಅನ್ನು ಬಳಕೆ ಮಾಡಲು ಸಾಧ್ಯವೇ ಆಗುವುದಿಲ್ಲ.
ಮೊಬೈಲ್ ಪತ್ತೆ ಆದರೆ!
ಮೊಬೈಲ್ ಪತ್ತೆಯಾದರೆ ಮತ್ತೆ ಸಿಇಐಆರ್‌ನಲ್ಲಿ ಮಾಹಿತಿ ಅಪ್‌ಡೇಟ್ ಆಗಲಿದೆ. ಆಗ ನೋಡಲ್ ಅಧಿಕಾರಿಗಳು, ಸಂಬAಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ರವಾನೆ ಮಾಡಿ ವಾರಸುದಾರರಿಗೆ ತಲುಪಿಸುವ ಕ್ರಮ ಕೈಗೊಳ್ಳುತ್ತಾರೆ.
ಅನ್‌ಲಾಕ್ ಹೇಗೆ?
ವಾರಸುದಾರರು ಲಾಕ್ ಆಗಿರುವ ಮೊಬೈಲ್ ಅನ್ನು ಮತ್ತೆ ಬಳಕೆಗೆ ಲಾಕ್ ಓಪನ್ ಮಾಡುವಂತೆ ಮನವಿ ಪತ್ರ ನೀಡಬೇಕು. ನೋಡಲ್ ಅಧಿಕಾರಿ, ಸಿಇಐಆರ್ ಪೋರ್ಟ್ನಲ್ಲಿ ಮನವಿ ಸಲ್ಲಿಸಿ ಬ್ಲಾಕ್ ತೆರವು ಮಾಡಿ ಬಳಕೆಗೆ ಯೋಗ್ಯವಾಗುವಂತೆ ಮಾಡಿಕೊಡಲಿದ್ದಾರೆ.
ನಾವೇ ಮೊಬೈಲ್ ಬ್ಲಾಕ್ ಮಾಡುವುದು ಹೇಗೆ?
www.ceir.gov.in ವೆಬ್‌ಸೈಟ್‌ಗೆ ಹೋಗಿ ದೂರು ಕೊಟ್ಟು ಮೊಬೈಲ್ ಬ್ಲಾಕ್ ಮಾಡಿಸಬಹುದು. ಕಳವಾದ ಮೊಬೈಲ್‌ನಲ್ಲಿದ್ದ ಸಿಮ್‌ಕಾರ್ಡ್ ಅನ್ನು ಹೊಸದಾಗಿ ಪಡೆಯಬೇಕು. ಕಳವಾದ ಮೊಬೈಲ್‌ನ ಮಾಡೆಲ್, ಐಎಂಇಐ ನಂಬರ್, ಸಿಮ್ ನಂಬರ್ ಅನ್ನು ನೋಂದಣಿ ಮಾಡಬೇಕು. ನಂತರ ಮೊಬೈಲ್‌ಗೆ ಬರುವ ಒಟಿಪಿಯನ್ನು ನಮೂದಿಸಿದರೆ ಮೊಬೈಲ್ ಬ್ಲಾಕ್ ಆಗಲಿದೆ.
ಮೊಬೈಲ್ ಖರೀದಿಸುವಾಗ ಜಾಗ್ರತೆ
ಸೆಕೆಂಡ್ ಹ್ಯಾಂಡ್ ಮೊಬೈಲ್ ಅನ್ನು ಖರೀದಿಸುವಾಗ ಎಚ್ಚರ ವಹಿಸಬೇಕು. ಕದ್ದ ಮೊಬೈಲ್ ಅನ್ನು ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಖರೀದಿ ಮಾಡಿ ಆ ಮೊಬೈಲ್‌ಗೆ ಸಿಮ್ ಕಾರ್ಡ್ ಹಾಕಿಕೊಂಡು ಬಳಕೆ ಮಾಡಿದರೆ ಈ ಮಾಹಿತಿಯೂ ಪೊಲೀಸರಿಗೆ ಸಿಗಲಿದೆ. ಮೊಬೈಲ್‌ನ ವಾರಸುದಾರ, ಐಎಂಇಐ ನಂಬರ್ ಸಮೇತ ದೂರು ನೀಡಿದರೆ ಫೋನ್ ಅನ್ನು ಇತರರು ಉಪಯೋಗಿಸದಂತೆ ಲಾಕ್ ಮಾಡುವ ಜೊತೆಗೆ ಫೋನ್‌ಗೆ ಯಾವ ಸಿಮ್ ಅಳವಡಿಕೆ ಮಾಡಲಾಗಿದೆ ಮತ್ತು ಅದರ ನಂಬರ್, ಯಾವ ಸ್ಥಳದಲ್ಲಿ ಬಳಕೆಯಾಗುತ್ತಿದೆ ಎಂಬ ಮಾಹಿತಿಯೊಂದಿಗೆ ಸಿಗ್ನಲ್ ಸಮೇತ ಜಾತಕ ಪೊಲೀಸರಿಗೆ ಸಿಗಲಿದೆ.