ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು
ದೇಶದ ಎಲ್ಲಾ ಗ್ರಾಮ ಗ್ರಾಮಗಳಲ್ಲಿ ಬ್ಯಾಂಕ್‍ಗಳು ತಮ್ಮ ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೇವೆ ನೀಡುವುದು ಅಸಾಧ್ಯವೆಂಬುದನ್ನು ಪರಿಗಣಿಸಿದ ವಿತ್ತ ಸಚಿವಾಲಯ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ಥಿಕ ಸೇರ್ಪಡೆ (Financial Inclusion) ಕಾರ್ಯಕ್ರಮದಡಿ ವ್ಯಕ್ತಿಗತ ಹಾಗೂ ಆಯ್ದ ಸಂಸ್ಥೆಗಳನ್ನು ನಿಯೋಜಿಸಿಕೊಂಡು ಗ್ರಾಮ ಗ್ರಾಮಗಳಲ್ಲೂ ಬ್ಯಾಂಕಿಂಗ್ ಸೇವಾ ಸೌಲಭ್ಯ ದೊರೆಯುವಂತಾಗಬೇಕೆಂದು ತನ್ನ ಅನೇಕ ಸುತ್ತೋಲೆಗಳು ಹಾಗೂ ಮಾರ್ಗದರ್ಶನಗಳಲ್ಲಿ ನಿರ್ದೇಶಿಸಿರುತ್ತದೆ. ಇದರನ್ವಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‍ನ್ನು ದೇಶದ ಪ್ರಮುಖ ಆರು ಬ್ಯಾಂಕುಗಳು ‘ಎಸ್.ಹೆಚ್.ಜಿ. ಬ್ಯಾಂಕ್ ಕ್ರೆಡಿಟ್ ಲಿಂಕೆಜ್ ಪ್ರೋಗ್ರಾಂ’ (ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಕಾರ್ಯಕ್ರಮ) ಸೇವೆಗಳನ್ನು ಒದಗಿಸಲು ತನ್ನ Banking Business Correspondent (ಬ್ಯಾಂಕ್‍ನ ವ್ಯವಹಾರ ಪ್ರತಿನಿಧಿ) ಆಗಿ ನಿಯೋಜಿಸಿಕೊಂಡಿವೆ. ಈ ಬಿ.ಸಿ. ವ್ಯವಸ್ಥೆಯಲ್ಲಿ ಗ್ರಾಮ ಗ್ರಾಮಗಳಲ್ಲಿ ಸ್ವಸಹಾಯ ಸಂಘಗಳಿಗೆ ಬ್ಯಾಂಕ್‍ಗಳಿಂದ ನೇರವಾಗಿ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ತಲುಪಿಸುವ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ‘ಎಸ್.ಹೆಚ್.ಜಿ. ಬ್ಯಾಂಕ್ ಕ್ರೆಡಿಟ್ ಲಿಂಕೇಜ್’ ಕಾರ್ಯಕ್ರಮದ ದೇಶದ ಅತೀ ದೊಡ್ಡ ‘ಬಿ.ಸಿ.’ ಎಂಬ ಹೆಗ್ಗಳಿಕೆ ಗ್ರಾಮಾಭಿವೃದ್ಧಿ ಯೋಜನೆಯದ್ದಾಗಿದೆ.
ಈ ಬಿ.ಸಿ. ವ್ಯವಸ್ಥೆಯಲ್ಲಿ ನೀಡುವ ಸೇವೆಗಳು ಬ್ಯಾಂಕಿಂಗ್ ವ್ಯವಸ್ಥೆಯ ಒಂದು ಪ್ರಮುಖ ಭಾಗವಾಗಿದೆ. ಬ್ಯಾಂಕುಗಳಿಗೆ ಬಿ.ಸಿ.ಯಾಗಿ ಸೇವೆ ಸಲ್ಲಿಸುತ್ತಿರುವ ಗ್ರಾಮಾಭಿವೃದ್ಧಿ ಯೋಜನೆಗೆ ಆಯಾ ಬ್ಯಾಂಕುಗಳು ಬಿ.ಸಿ. ಸೇವಾಶುಲ್ಕವನ್ನು ನೀಡುತ್ತವೆ. ಬ್ಯಾಂಕುಗಳೇ ಸಾಲವನ್ನು ಸ್ವಸಹಾಯ ಸಂಘಗಳಿಗೆ ನೀಡುತ್ತಿರುವುದರಿಂದ ಸ್ವಸಹಾಯ ಸಂಘಗಳ ಸಾಲಗಳಿಗೆ ಬ್ಯಾಂಕೇ ಬಡ್ಡಿದರವನ್ನು ವಿಧಿಸುತ್ತಿದ್ದು ಈ ಬಡ್ಡಿದರದಲ್ಲಿ ಬ್ಯಾಂಕ್ ಬಡ್ಡಿದರ ಹಾಗೂ ಯೋಜನೆಗೆ ನೀಡುವ ಬಿ.ಸಿ.ಸೇವಾ ಶುಲ್ಕವು ಒಳಗೊಂಡಿರುತ್ತದೆ. ಸ್ವಸಹಾಯ ಸಂಘಗಳಿಗೆ ಅವರಿರುವ ಗ್ರಾಮದಲ್ಲಿಯೇ ಇತರ ಯಾವುದೇ ವೆಚ್ಚಗಳಿಲ್ಲದೇ 14% (ಬೆಳಗಾಂ ಜಿಲ್ಲೆಯಲ್ಲಿ 15%) ಬಡ್ಡಿದರದಲ್ಲಿ ಬ್ಯಾಂಕ್‍ನಿಂದ ನೇರ ಸಾಲ ಸೌಲಭ್ಯವನ್ನು ದೊರಕಿಸಿಕೊಡುವ ಈ ವ್ಯವಸ್ಥೆಯನ್ನು ನಬಾರ್ಡ್ ಒಂದು ಮಾದರಿ ವ್ಯವಸ್ಥೆ ಎಂದು ಪರಿಗಣಿಸಿ, ದೇಶಾದ್ಯಂತ ಈ ಮಾದರಿಯನ್ನು ವಿಸ್ತರಿಸಬೇಕೆಂದು ಆಶಿಸಿದೆ.
ಯೋಜನೆಯು ಬ್ಯಾಂಕ್‍ಗಳಿಂದ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸಿ ಇಂದು ಲಕ್ಷಾಂತರ ಕೃಷಿ, ಸ್ವ ಉದ್ಯೋಗ ಚಟುವಟಿಕೆಗಳನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಪ್ರದೇಶದ ರೈತರು, ಬಡವರು, ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗಿದೆ. ಇದರ ಜೊತೆಗೆ ಗ್ರಾಮೀಣ ಪ್ರದೇಶದ ಯುವಕ- ಯುವತಿಯರಿಗೆ ಬ್ಯಾಂಕ್‍ನಿಂದ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು, ತರಬೇತಿಗಳನ್ನು ಒದಗಿಸುವ ಮೂಲಕ ಲಕ್ಷಾಂತರ ಮಂದಿಗೆ ಗುಡಿ ಕೈಗಾರಿಕೆಗಳು, ಕಿರು ಉದ್ಯಮ, ವ್ಯಾಪಾರ, ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ.
ಗ್ರಾಮಾಭಿವೃದ್ಧಿ ಯೋಜನೆಯು ದೇಶದ ಅತ್ಯಂತ ಪ್ರಮುಖ ಬ್ಯಾಂಕ್ ಆದ ‘ಸಿಡ್ಬಿ’ (SIDBI) ಬ್ಯಾಂಕ್‍ನ ‘ಪ್ರಯಾಸ್’ ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತಿದ್ದು ಇದರಡಿ ಅತೀ ಕಡಿಮೆ ಬಡ್ಡಿದರದಲ್ಲಿ ಕಿರು ಉದ್ಯಮವನ್ನು ಆರಂಭಿಸಲು ಗರಿಷ್ಠ ಮೊತ್ತದ ಸಾಲವನ್ನು ಸಿಡ್ಬಿಯಿಂದ ನೇರವಾಗಿ ಸ್ವ ಉದ್ಯೋಗ ಘಟಕ ಪ್ರಾರಂಭಿಸುವ ಸದಸ್ಯರಿಗೆ ದೊರಕಿಸಿಕೊಡುತ್ತಿದೆ. ಸಿಡ್ಬಿ ಪ್ರಯಾಸ್ ಕಾರ್ಯಕ್ರಮದ ಮೂಲಕ 56,057 ಸದಸ್ಯರಿಗೆ 1,971 ಕೋಟಿ ರೂಪಾಯಿ ಮೊತ್ತದ ಸಾಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಆ ಮೂಲಕ ಸಾವಿರಾರು ಮಂದಿ ಗ್ರಾಮೀಣ ಪ್ರದೇಶದ ಯುವಕ, ಯುವತಿಯರು ವ್ಯಾಪಾರ, ಕಿರು ಉದ್ಯಮಗಳನ್ನು ಆರಂಭಿಸುವ ಮೂಲಕ ಸ್ವಾವಲಂಬಿ ಬದುಕನ್ನು ಸಾಗಿಸುತ್ತಿದ್ದಾರೆ.
ಹೀಗೆ ಸಣ್ಣ ಹಾಗೂ ಕಿರು ಉದ್ಯಮವನ್ನು ಗ್ರಾಮ ಗ್ರಾಮಗಳಲ್ಲಿ ಸೃಷ್ಟಿಸಲು ಅತ್ಯುತ್ತಮ ಸೇವೆಗೈದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‍ಗೆ ದೇಶದ ಬ್ಯಾಂಕಿಂಗ್ ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ‘ಭಾರತೀಯ ಅತೀ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘಟನೆ’ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ ‘ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ-2024’ (ಅತ್ಯುತ್ತಮ ಸಂಸ್ಥೆ ಹಾಗೂ ವಿಶೇಷ ಅಂಗೀಕಾರ ಪ್ರಶಸ್ತಿ) ಲಭಿಸಿದೆ. ದಿನಾಂಕ 12.2.2025ರಂದು ನವದೆಹಲಿಯಲ್ಲಿ ಕೇಂದ್ರ ಹಣಕಾಸು ರಾಜ್ಯ ಸಚಿವರಾದ ಶ್ರೀ ಪಂಕಜ್ ಚೌಧರಿ ಪ್ರಶಸ್ತಿ ಪ್ರಧಾನ ಮಾಡಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ ಹಾಗೂ ಖಾಸಗಿ ಬ್ಯಾಂಕ್‍ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹೀಗೆ ದೇಶದ ಇಪ್ಪತ್ತು ಪ್ರತಿಷ್ಠಿತ ಸಂಸ್ಥೆಗಳು ಈ ಪ್ರಶಸ್ತಿಗೆ ಭಾಜನವಾಗಿವೆ. ಈ ಪ್ರಶಸ್ತಿಯ ಪಾಲುದಾರ ಬಂಧುಗಳು ನಮ್ಮೆಲ್ಲಾ ಸ್ವಸಹಾಯ ಸಂಘಗಳ ಸದಸ್ಯರು, ಲಕ್ಷಾಂತರ ಸ್ವ ಉದ್ಯೋಗಗಳನ್ನು ನಿರ್ಮಿಸಿಕೊಂಡು ರಾಜ್ಯದ ಆರ್ಥಿಕ ಅಭಿವೃದ್ಧಿಯನ್ನುಂಟು ಮಾಡುತ್ತಿರುವ ಲಕ್ಷಾಂತರ ಯುವಕ-ಯುವತಿಯರಾಗಿದ್ದಾರೆ.
ಗ್ರಾಮಾಭಿವೃದ್ಧಿ ಯೋಜನೆಯ ಮಾದರಿಯನ್ನು ದೇಶದಲ್ಲೇ ಅತ್ಯುತ್ತಮ ಮಾದರಿಯಾಗುವಂತೆ ಮಾಡಿದ ನಿಮಗೆಲ್ಲರಿಗೂ ಅಭಿನಂದನೆಗಳು.