ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರುಟ್ಟೋಣ
ಪ್ರತಿ ವರ್ಷ ಮೇ 31 ಅನ್ನು ‘ವಿಶ್ವ ತಂಬಾಕುಮುಕ್ತ ದಿನ’ವನ್ನಾಗಿ ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದ ಮೂಲಕ ಯಾರು ಧೂಮಪಾನ, ತಂಬಾಕು ಸೇವನೆ ಮಾಡುತ್ತಾರೋ ಅವರನ್ನು ದುಶ್ಚಟಗಳ ದಾಸರಾಗದಂತೆ ಎಚ್ಚರಿಸಲಾಗುತ್ತಿದೆ.
ಜನರಲ್ಲಿ ದುಶ್ಚಟಗಳು ಹೆಚ್ಚಳವಾದಾಗ ಅವುಗಳನ್ನು ನಿಯಂತ್ರಿಸಲು ಸರಕಾರವು ಜಾಗೃತಿ, ಮನವರಿಕೆ, ಎಚ್ಚರಿಕೆ, ದಂಡ ಪ್ರಯೋಗ, ತೆರಿಗೆ ಹೆಚ್ಚಳ ಹೀಗೆ ವಿವಿಧ ಪ್ರಯತ್ನಗಳನ್ನು ಮಾಡಿದೆ, ಮಾಡುತ್ತಿದೆ. ಮದ್ಯ, ಹೊಗೆಸೊಪ್ಪು ಹಾಗೂ ಅದರ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿದರೆ ಜನರಿಗೆ ಅದನ್ನು ಕೊಂಡುಕೊಳ್ಳಲು ಕಷ್ಟವಾಗುತ್ತದೆ. ಈ ಮೂಲಕ ಮದ್ಯಪಾನ, ಧೂಮಪಾನದಿಂದ ಜನರನ್ನು ದೂರ ಮಾಡಬಹುದು ಎಂಬುವುದು ಸರಕಾರಗಳ ಆಲೋಚನೆಯಾಗಿತ್ತು. ಆದರೆ ತೆರಿಗೆ ಹೆಚ್ಚಳ ಮಾಡಿದರೂ ಜನರು ದುಶ್ಚಟಗಳನ್ನು ದೂರ ಮಾಡಲಿಲ್ಲ. ಸರಕಾರದ ತೆರಿಗೆ ಹೆಚ್ಚಳದ ಈ ಪ್ರಯತ್ನ ಹೆಚ್ಚು ಫಲಪ್ರದವಾಗಲಿಲ್ಲ. ದುರಭ್ಯಾಸಗಳಿಗೆ ಶರಣಾದ, ಮಾದಕ ವಸ್ತುಗಳ ಸೇವನೆಯಿಂದ ವಿಚಿತ್ರ ಅನುಭವ ಪಡೆಯುವ ವ್ಯಕ್ತಿಗಳು ಚಟವನ್ನು ಬಿಡಲಾಗದೆ ಎಷ್ಟೇ ದುಬಾರಿಯಾದರೂ ತಂಬಾಕು ಪದಾರ್ಥಗಳನ್ನು ಕೊಂಡುಕೊಳ್ಳತೊಡಗಿದರು.
ಧೂಮಪಾನದಿoದಾಗುವ ಆರೋಗ್ಯ ಸಮಸ್ಯೆಯ ಕುರಿತು ಜನರಿಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಎಲ್ಲ ಸಿಗರೇಟು ಪ್ಯಾಕ್‌ಗಳಲ್ಲಿ ‘ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ’ ಎಂದು ದೊಡ್ಡ ಅಕ್ಷರಗಳಲ್ಲಿ ಮುದ್ರಿಸಲಾಯಿತು. ಇನ್ನೂ ಮುಂದುವರೆದು ಧೂಮಪಾನದಿಂದಾಗಿ ಕ್ಯಾನ್ಸರ್‌ಗೆ ಒಳಗಾಗಿರುವ ರೋಗಿಯ ಚಿತ್ರವನ್ನು ಕೂಡ ಸಿಗರೇಟ್, ತಂಬಾಕು ಪ್ಯಾಕ್‌ಗಳ ಮೇಲೆ ಕಾಣಿಸುವಂತೆ ಮುದ್ರಿಸಲಾಯಿತು. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬಹುದು ಹಾಗೂ ಚಿತ್ರವನ್ನು ನೋಡಿ ಭಯಪಟ್ಟಾದರೂ ಧೂಮಪಾನ, ತಂಬಾಕು ಸೇವನೆ ಬಿಡಬಹುದು ಎಂಬುವುದು ಸರಕಾರದ ಆಲೋಚನೆಯಾಗಿತ್ತು. ಆದರೆ ಈ ಪ್ರಯತ್ನ ಕೂಡಾ ಸಂಪೂರ್ಣ ಯಶಸ್ವಿಯಾಗಲಿಲ್ಲ.
ಚಲನಚಿತ್ರ ಮಂದಿರಗಳಲ್ಲಿ ಚಲನಚಿತ್ರ ಆರಂಭವಾಗುವ ಮುಂಚೆ ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಜಾಗೃತಿಯ ಜಾಹೀರಾತನ್ನು ಪ್ರಕಟಿಸಲಾಗುತ್ತದೆ. ಧಾರವಾಹಿ, ಸಿನಿಮಾಗಳಲ್ಲಿ ಮದ್ಯಪಾನ, ಧೂಮಪಾನ ಸೇವನೆಯ ದೃಶ್ಯಗಳನ್ನು ತೋರಿಸುವಾಗ ಎಚ್ಚರಿಕೆಯ ಸೂಚನೆಗಳನ್ನು ಪ್ರಕಟಿಸಲಾಗುತ್ತದೆ. ಹೀಗೆ ಸಾಕಷ್ಟು ರೀತಿಯಲ್ಲಿ ಧೂಮಪಾನದಿಂದ ದೂರವಿರುವ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಲಾಗಿದೆ.
ಚಟಗಳೆಂದರೆ ಹಾಗೆಯೇ. ಅದು ಒಳ್ಳೆಯದಿರಬಹುದು ಅಥವಾ ಕೆಟ್ಟದಿರಬಹುದು. ಒಮ್ಮೆ ಅಭ್ಯಾಸವಾಗಿ ಬಿಟ್ಟರೆ ಅದರಿಂದ ಹೊರಬರಲು ಬಹಳ ಕಷ್ಟವಾಗುತ್ತದೆ. ನಿತ್ಯವೂ ವಾಯುವಿಹಾರ ಹೋಗುವ ಅಭ್ಯಾಸವನ್ನು ಬೆಳೆಸಿಕೊಂಡವರಿಗೆ ಒಂದು ದಿನ ವಾಯುವಿಹಾರ ಹೋಗುವುದು ತಪ್ಪಿದರೆ ಏನೋ ಕಳೆದುಕೊಂಡ ಹಾಗೆ ಮೈಮನ ಉತ್ಸಾಹವಿಲ್ಲದಂತೆ ಆಗುತ್ತದೆ. ದುಶ್ಚಟಗಳೂ ಇದಕ್ಕಿಂತ ಒಂದು ಪಾಲು ಹೆಚ್ಚು ಎಂದು ಹೇಳಬಹುದು. ಇಲ್ಲಿ ವ್ಯಕ್ತಿ ತನ್ನ ನಿಯಂತ್ರಣದಲ್ಲಿ ತಾನಿರುವುದಿಲ್ಲ.
ಯಾವಾಗಲೂ ಮದ್ಯವರ್ಜನ ಶಿಬಿರಗಳು ನಡೆಯುವಲ್ಲಿಗೆ ಭೇಟಿ ನೀಡಿದಾಗ ನಾನು ಒಂದು ಮಾತನ್ನು ಹೇಳುತ್ತಿರುತ್ತೇನೆ. ‘ಒಮ್ಮೆ ದುಶ್ಚಟಕ್ಕೆ ಒಳಗಾದರೆ ಆ ಚಟವನ್ನು ಬಿಡಲು ಪ್ರಯತ್ನಿಸಬಹುದು. ಆದರೆ ಆ ಚಟ ನಿಮ್ಮನ್ನು ಬಿಡಲಾರದು.’ ಅಂದರೆ ಮದ್ಯಪಾನ ವ್ಯಸನವುಳ್ಳವರಿಗೆ ‘ಮದ್ಯಪಾನ ಒಳ್ಳೆಯದಲ್ಲ, ಇದು ನನ್ನ ಸಂಸಾರಕ್ಕೆ ಕೇಡು ತರುತ್ತದೆ. ನನ್ನ ಪ್ರಾಣಕ್ಕೆ ಸಂಚಕಾರವಾಗಬಹುದು, ಕ್ಯಾನ್ಸರ್, ಟಿ.ಬಿ.ಯಂತಹ ಅಪಾಯಕಾರಿ ಖಾಯಿಲೆಗಳು ಬರಬಹುದು, ಅನೇಕ ರೋಗಗಳು ಅಂಟಬಹುದು’ ಎಂದು ಗೊತ್ತಿರುತ್ತದೆ. ಹಾಗಾಗಿ ಕೆಲವರು ಮದ್ಯಪಾನ, ಧೂಮಪಾನವನ್ನು ಬಿಡುವ ಸಂಕಲ್ಪ ಮಾಡುತ್ತಾರೆ. ಆದರೆ ಆ ಚಟ ಅವರನ್ನು ಮತ್ತೆ ಮತ್ತೆ ತನ್ನತ್ತ ಸೆಳೆಯುತ್ತದೆ. ಹೀಗಾಗಿ ಮದ್ಯಪಾನಿಗಳು ಮತ್ತು ಧೂಮಪಾನಿಗಳು ಎಷ್ಟೇ ಪ್ರಯತ್ನಪಟ್ಟರೂ ಕೂಡಾ ಮಾನಸಿಕ ಪರಿವರ್ತನೆ ಆಗದಿದ್ದಲ್ಲಿ ಅವರು ಆ ಚಟಗಳಿಂದ ಸುಲಭವಾಗಿ ದೂರವಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಒತ್ತಾಯದಿಂದ, ಚುಚ್ಚುಮದ್ದು, ಮಾತ್ರೆಗಳ ಮೂಲಕ ದುಶ್ಚಟ ತ್ಯಜಿಸಲು ಮುಂದಾಗಿ ಅನೇಕ ಅಪಾಯಗಳು ಎದುರಾಗಿರುವುದನ್ನೂ ನಾವು ಕಂಡಿದ್ದೇವೆ. ಸ್ವಯಂ ಪ್ರೇರಣೆ ಹಾಗೂ ಇಚ್ಛಾಶಕ್ತಿ ಇದ್ದಾಗ ಮಾತ್ರ ದುಶ್ಚಟಗಳಿಂದ ಹೊರಬರಲು ಸಾಧ್ಯವಿದೆ.
ವೈದ್ಯರು ತಪಾಸಣೆ ಮಾಡಿ ‘ನೋಡಿ ನಿಮ್ಮ ಶ್ವಾಸಕೋಶ ಬಹಳಷ್ಟು ಕೆಟ್ಟುಹೋಗಿದೆ. ನೀವು ಬೀಡಿ, ಸಿಗರೇಟ್ ಸೇದುವುದು ಬಿಡದೇ ಇದ್ದರೆ ಕೆಲವೇ ದಿನಗಳಲ್ಲಿ ಕ್ಯಾನ್ಸರ್ ಉಲ್ಬಣಗೊಂಡು ನಿಮ್ಮ ಪ್ರಾಣಕ್ಕೆ ಸಂಚಕಾರ ಇದೆ’ ಎನ್ನುತ್ತಾರೆ. ಆ ಕ್ಷಣಕ್ಕೆ ವ್ಯಕ್ತಿಯೂ ‘ನಾನು ಇನ್ನಷ್ಟು ದಿನ ಬದುಕಬೇಕು, ನನ್ನ ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳಬೇಕು, ದುಶ್ಚಟವನ್ನು ಬಿಡುತ್ತೇನೆ’ ಎಂದು ತೀರ್ಮಾನ ಮಾಡುತ್ತಾನೆ. ಆದರೆ ಮನೆಗೆ ಬಂದು ಕೆಲ ದಿನಗಳ ಬಳಿಕ ಎಲ್ಲವೂ ಸರಿ ಆಗುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ಆ ಚಟ ಅವನನ್ನು ಸೆಳೆದುಕೊಳ್ಳುತ್ತದೆ. ಇದರಿಂದಾಗಿ ರೋಗ ಉಲ್ಬಣಗೊಂಡು ಮತ್ತೆ ಆರೋಗ್ಯ ಏರುಪೇರಾಗಿ ಪ್ರಾಣವನ್ನೇ ಕಳೆದುಕೊಂಡ ಅನೇಕ ದೃಷ್ಟಾಂತಗಳು ನಮ್ಮೆದುರಿಗಿವೆ.
ನಾನು ಒಮ್ಮೆ ಧಾರವಾಡದಲ್ಲಿರುವ ಎಸ್.ಡಿ.ಎಂ. ದಂತ ವೈದ್ಯ ಕಾಲೇಜಿಗೆ ಭೇಟಿ ನೀಡಿದ್ದೆ. ಅಲ್ಲಿ ವೈದ್ಯರು ಒಂದು ಎಕ್ಸರೆಯೊಂದನ್ನು ತೋರಿಸಿದರು. ಅದು ಗುಟ್ಕಾ ಅಭ್ಯಾಸವಿದ್ದ ಒಬ್ಬ ವ್ಯಕ್ತಿಯ ಗಲ್ಲದ ಚಿತ್ರವಾಗಿತ್ತು. ಗಲ್ಲದ ಬಳಿ ಆದ ದೊಡ್ಡ ರಂಧ್ರವೇ ಅವನು ಎಷ್ಟು ತಂಬಾಕು, ಗುಟ್ಕಾ ಸೇವನೆಯನ್ನು ಮಾಡಿದ್ದ ಎನ್ನುವುದನ್ನು ತೋರಿಸುತ್ತಿತ್ತು.
ಇದಕ್ಕೆಲ್ಲ ಪರಿಹಾರ ಏನು? ವ್ಯಸನಗಳಿಂದ ಮುಕ್ತಿ ಹೇಗೆ? ಎನ್ನುವ ಚಿಂತನೆ ಮಾಡಬೇಕು. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಸಂಕಲ್ಪ ಶಕ್ತಿ. ವ್ಯಸನಗಳು ನನ್ನ ದೇಹಕ್ಕೆ ಹಾನಿಕರ. ದುಶ್ಚಟಗಳಿಂದ ನನ್ನ ಹೆಂಡತಿ-ಮಕ್ಕಳು ನನ್ನಿಂದ ದೂರಾಗುತ್ತಾರೆ ಮತ್ತು ಅವರಿಗೆ ಅನೇಕ ರೀತಿಯ ಕಷ್ಟಗಳು ಎದುರಾಗುತ್ತವೆ. ಆದ್ದರಿಂದ ನಾನು ದುಶ್ಚಟಗಳನ್ನು ಬಿಡುತ್ತೇನೆ ಎಂಬ ದೃಢ ಸಂಕಲ್ಪ ಇರಬೇಕು. ಆಗ ಯಾರು ಬೇಕಾದರೂ ದುಶ್ಚಟಗಳಿಂದ ಮುಕ್ತರಾಗಬಹುದು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 1982ನೇ ಇಸವಿಯಲ್ಲಿ ಬಾಹುಬಲಿ ಸ್ವಾಮಿಯ ಪ್ರತಿಷ್ಠಾಪನೆ ಮತ್ತು ಮಹಾಮಸ್ತಕಾಭಿಷೇಕವಾಯಿತು. ಆ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮದ ಅಂಗಡಿ ಮಾಲೀಕರೆಲ್ಲ ಸ್ವಯಂಪ್ರೇರಿತರಾಗಿ ಒಟ್ಟಾಗಿ ಸಭೆ ನಡೆಸಿ ಧರ್ಮಸ್ಥಳದ ಅಂಗಡಿ-ಮುoಗಟ್ಟುಗಳಲ್ಲಿ ಬೀಡಿ, ಸಿಗರೇಟು, ಗುಟ್ಕಾ ಮಾರಾಟ ಮಾಡುವುದಿಲ್ಲ ಎಂಬ ಪ್ರತಿಜ್ಞೆ ತೆಗೆದುಕೊಂಡರು. ಅಂದಿನಿoದ ಇಲ್ಲಿಯವರೆಗೂ ಧರ್ಮಸ್ಥದಲ್ಲಿ ಯಾವುದೇ ಅಂಗಡಿಗಳಲ್ಲೂ ತಂಬಾಕು, ಧೂಮಪಾನ ಮಾರಾಟಕ್ಕೆ ಅವಕಾಶಗಳಿಲ್ಲ. ಈ ತೀರ್ಮಾನ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಅನೇಕರಿಗೆ ಧೂಮಪಾನ, ತಂಬಾಕು ಸೇವನೆಯಿಂದ ಮುಕ್ತರಾಗಲು ಪ್ರೇರಣೆಯಾಗಬಹುದು.
ರಾಜ್ಯದ ಎಲ್ಲಾ ಅಂಗಡಿ-ಮುoಗಟ್ಟುಗಳ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ತಂಬಾಕು ಮಾರಾಟ ಮಾಡದಿರುವ ಬಗ್ಗೆ ದೃಢ ಸಂಕಲ್ಪ ತೆಗೆದುಕೊಂಡು ‘ತಂಬಾಕು ಮಾರಾಟದಿಂದ ಬರುವ ಆದಾಯ ನಮಗೆ ಬೇಡ, ಅದರಿಂದ ಇತರರ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಹ ಪಾಪಕ್ಕೆ ನಾವು ಈಡಾಗುವುದು ಬೇಡ’ ಎಂದು ಚಿಂತಿಸಿ ತಂಬಾಕು, ಧೂಮಪಾನವನ್ನು ನಮ್ಮ ಅಂಗಡಿಗಳಲ್ಲಿ ಮಾರಾಟ ಮಾಡುವುದಿಲ್ಲ ಎಂಬ ತ್ಯಾಗವನ್ನು ಮಾಡಿದರೆ ಖಂಡಿತವಾಗಿ ತಂಬಾಕಿನಿoದ ಜನ ದೂರ ಉಳಿಯುತ್ತಾರೆ. ‘ನಮ್ಮ ಅಂಗಡಿಯಲ್ಲಿ ತಂಬಾಕು ಮೂಲದ ಯಾವುದೇ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ’ ಎಂದು ಸೂಚನಾಫಲಕವನ್ನು ಅಳವಡಿಸುವುದರಿಂದ ಅಂಗಡಿ ಮಾಲೀಕರಿಗೆ ಹೆಮ್ಮೆ, ಹೆಗ್ಗಳಿಕೆ, ಗೌರವ ಮತ್ತು ಪುಣ್ಯ ಎಲ್ಲವೂ ಪ್ರಾಪ್ತಿಯಾಗುತ್ತದೆ. ಈ ಬಾರಿ ಇಂತಹ ಒಂದು ಸಂಕಲ್ಪವನ್ನು ಮಾಡೋಣ.
ತಂಬಾಕನ್ನು ಸೇವಿಸುವ ವ್ಯಕ್ತಿಯ ಮೇಲಷ್ಟೇ ಅಲ್ಲದೆ ಆತನ ಜೊತೆಗೆ ಇರುವವರ ಮೇಲೆಯೂ ಸಾಕಷ್ಟು ಪರಿಣಾಮ ಬೀರಿ ಅವರಿಗೂ ಅನಾರೋಗ್ಯ ಸಮಸ್ಯೆ ಎದುರಾಗುತ್ತದೆ. ಮನೆಯಲ್ಲಿ ಅಪ್ಪ ಸಿಗರೇಟು ಸೇದಿ ಬಿಟ್ಟ ಹೊಗೆಯನ್ನು ಮನೆಯಲ್ಲಿರುವ ಹೆಂಡತಿ ಮಕ್ಕಳು ಕೂಡ ಉಸಿರಾಡುತ್ತಾರೆ. ಈ ರೀತಿಯಾಗಿ ಸಾಕಷ್ಟು ಜನರು ಅನಾರೋಗ್ಯಕ್ಕೆ ಒಳಗಾದ ಉದಾಹರಣೆಗಳು ನಮ್ಮ ಸುತ್ತಮುತ್ತಲಿವೆ. ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಶೇ.೩೮ರಷ್ಟು ಹದಿಹರೆಯದವರು ಸಿಗರೇಟಿನ ದಾಸಕ್ಕೊಳಗಾಗಿದ್ದಾರೆ. ಇದರಲ್ಲಿ ಶೇ. 47ರಷ್ಟು ಮಂದಿ ಸೇದುವ ವ್ಯಸನವನ್ನು ಶೇ. 52ರಷ್ಟು ಮಂದಿ ಹೊಗೆರಹಿತ ತಂಬಾಕು ಬಳಕೆದಾರರಿದ್ದಾರೆ. ಈ ವರದಿಯನ್ನು ಗಮನಿಸಿದರೆ ಚಿಕ್ಕ ವಯಸ್ಸಿನಲ್ಲಿಯೆ ಮಕ್ಕಳು ತಂಬಾಕು ಸೇವನೆಗೆ ಒಳಗಾಗುತ್ತಿರುವುದು ಕಂಡು ಬರುತ್ತದೆ. ಧೂಮಪಾನಿಗಳು ಧೂಮಪಾನ ಮಾಡದವರಿಗಿಂತ ಹತ್ತು ವರ್ಷ ಮೊದಲು ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರತಿವರ್ಷ ಪ್ರಪಂಚದಾದ್ಯoತ ಸುಮಾರು 8 ಮಿಲಿಯನ್ ಜನರು ತಂಬಾಕು ಸೇವನೆಯಿಂದ, 1.3 ಮಿಲಿಯನ್ ಮಂದಿ ಧೂಮಪಾನ ಮಾಡದೆಯೂ ಇತರರು ಧೂಮಪಾನ ಮಾಡಿದ ಹೊಗೆ ಸೇವನೆಯಿಂದ ಸಾಯುತ್ತಾರೆ ಎಂಬ ಅಂಕಿಅAಶ ಎಂಥವರನ್ನು ಬೆಚ್ಚಿಬೀಳಿಸುತ್ತದೆ. ತಂಬಾಕು ಸೇವನೆಯಿಂದ ಕೆಮ್ಮು, ದಮ್ಮು, ಅಲರ್ಜಿ, ಉಸಿರಾಟದ ತೊಂದರೆ ಹೀಗೆ ಹಲವು ಸಮಸ್ಯೆಗಳು ಎದುರಾಗುವುದುಂಟು. ಮನೆಯಲ್ಲಿನ ವ್ಯಕ್ತಿಗಳು ಮಾತ್ರವಲ್ಲದೆ ಮುದ್ದಾಗಿ ಸಾಕುವ ನಾಯಿ, ಬೆಕ್ಕುಗಳಿಗೂ ತಂಬಾಕಿನಿoದ ಅಪಾಯವಿದೆ ಎಂಬುದನ್ನು ಇತ್ತೀಚೆಗೆ ಪತ್ರಿಕೆಯಲ್ಲಿ ಓದಿದ್ದೆ. ತಂಬಾಕು, ಬೀಡಿ, ಸಿಗರೇಟು ಇತ್ಯಾದಿಗಳ ತುಂಡನ್ನು ಗೊತ್ತಿದ್ದೋ, ಗೊತ್ತಿಲ್ಲದೆಯೂ ಪ್ರಾಣಿಗಳು ಸೇವಿಸಿದಾಗ ಅವುಗಳು ವಾಂತಿ, ಭೇದಿ, ಅಪಸ್ಮಾರದಂತಹ ಖಾಯಿಲೆಗಳಿಗೆ ಒಳಗಾಗುತ್ತವೆ. ದುಶ್ಚಟಕ್ಕೆ ಒಳಗಾದ ವ್ಯಕ್ತಿಗೆ ಮಾತ್ರವಲ್ಲದೆ ದುಶ್ಚಟ ಅವನ ಕುಟುಂಬ, ಸಮಾಜದಲ್ಲಿ ಇರುವ ಜನರಿಗೂ ಮಾರಕ ಎಂಬುದನ್ನು ಮರೆಯಬಾರದು.
ಹಿಂದೆ ವೀಳ್ಯದೆಲೆಯ ಜೊತೆಗೆ ತಂಬಾಕು ಸೇವನೆಯನ್ನು ಹೆಚ್ಚಾಗಿ ಮಾಡುತ್ತಿದ್ದರು. ಈಗ ನಮ್ಮ ರಾಜ್ಯದಲ್ಲಿ ಅಂತಹ ಅಭ್ಯಾಸ ಬಹಳಷ್ಟು ಕಡಿಮೆಯಾಗಿದೆ. ಮೊದಲು ಇದೊಂದು ಚಟವೇ ಆಗಿತ್ತು ಮತ್ತು ಗ್ರಾಮೀಣ ಪ್ರದೇಶದಲ್ಲಿ ತಂಬಾಕು ಸೇವನೆ ಮಾಡದೇ ಇರುವವರು ತೀರಾ ವಿರಳ ಎನ್ನುವ ಸನ್ನಿವೇಶ ಇತ್ತು. ಹಿಂದಿನ ದಿನಗಳಿಗೆ ಹೋಲಿಸಿದರೆ ಪ್ರಸ್ತುತ ಹೊಗೆಸೊಪ್ಪಿನ ನೇರ ಸೇವನೆಯ ಅಭ್ಯಾಸ ಶೇ.90ರಷ್ಟು ಕಡಿಮೆಯಾಗಿದೆ ಎನ್ನಬಹುದು. ಉತ್ತರ ಭಾರತದಲ್ಲಿ ಮಾತ್ರ ಹೊಗೆಸೊಪ್ಪಿನ ನೇರ ಸೇವನೆ ಇದೆ. ತಂಬಾಕನ್ನು ನೇರವಾಗಿ ಸೇವನೆ ಮಾಡದೆ ಗುಟ್ಕಾ, ಪಾನ್, ಮಸಲಾ ಪಾನ್ ಹೀಗೆ ವಿವಿಧ ರೂಪದಲ್ಲಿ ಸೇವನೆ ಮಾಡುತ್ತಾರೆ. ಈ ತಂಬಾಕಿನಲ್ಲಿ ವಿಶೇಷವಾದ ಶಕ್ತಿ ಏನಿದೆ ಎಂದರೆ ಅದು ಒಂದು ಬಾರಿ ನಾಲಗೆಗೆ ಸ್ಪರ್ಶವಾದರೆ ಮತ್ತೆ ಚಟವಾಗಿ ಪರಿವರ್ತನೆಗೊಂಡು ಆ ಚಟವನ್ನು ಬಿಡುವುದಕ್ಕೆ ಆಗದಷ್ಟು ಆಳವಾದ ಸಂಬoಧವನ್ನು ವ್ಯಕ್ತಿಯ ಜೊತೆಗೆ ಉಳಿಸಿ, ಬೆಳೆಸಿಕೊಳ್ಳುತ್ತದೆ.
‘ತಂಬಾಕು ಮುಕ್ತ ದಿನ’ ಎನ್ನುವುದು ಒಂದು ದಿನಕ್ಕೆ ಸಿಮೀತವಾಗದೆ ಪ್ರತಿದಿನವೂ ತಂಬಾಕುಮುಕ್ತದಿನವಾಗಬೇಕು. ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ ಎನ್ನುವುದoನ್ನು ಅರಿತುಕೊಂಡು ತಂಬಾಕುಮುಕ್ತ ಬದುಕನ್ನು ರೂಪಿಸೋಣ. ತಂಬಾಕು ಸೇವಿಸುವ ಎಲ್ಲರನ್ನೂ ಮುಕ್ತರಾಗುವಂತೆ ಪ್ರೇರೇಪಿಸೋಣ.