ಧರ್ಮಸ್ಥಳದ ಮೇಲಿನ ನಂಬಿಕೆ ಬಡವರ ಬಾಳಿಗೆ ಬೆಳಕಾಯಿತು

ಹಿಂದಿನ ಸಂಚಿಕೆಯಲ್ಲಿ ಸಿರಿವಂತರ ಬಳಿ ಸಾಲ ಪಡೆಯಲು ಬ್ಯಾಂಕಿಗೆ ನೀಡಬೇಕಾದ ದಾಖಲೆ, ಸ್ಥಿರಾಸ್ತಿ, ಜಾಮೀನು ಎಲ್ಲಾ ಇದೆ. ಆದರೆ ಅವರಿಗೆ ಸಾಮಾನ್ಯವಾಗಿ ಸಾಲ ಬೇಡ. ಆದರೆ ಬಡವರಿಗೆ ಸಾಲ ಬೇಕು, ಆದರೇನು ಮಾಡುವುದು ಸಾಲಕ್ಕಾಗಿ ಬ್ಯಾಂಕಿಗೆ ಕೊಡಲು ದಾಖಲೆ, ಸ್ಥಿರಾಸ್ತಿ, ಜಾಮೀನುಗಳು ಮಾತ್ರ ಇಲ್ಲ. ಹೀಗಿರುವಾಗ ಯಾವ ಮಹಾನ್ ಶಕ್ತಿ ಈ ಬಡವರ ಬೆನ್ನಿಗೆ ನಿಲ್ಲಲು ಸಾಧ್ಯ ಎಂದು ವಿವರಿಸಿದ್ದೆ. ಬ್ಯಾಂಕ್‌ಗಳು ಸಾಲಕ್ಕಾಗಿ ಪಡೆಯುವ ಈ ದಾಖಲೆಗಳು, ಸ್ಥಿರಾಸ್ತಿ, ಜಾಮೀನುಗಳೆಲ್ಲವೂ ಸಾಲದ ಮರುಪಾವತಿಯ ನಂಬಿಕೆಗಾಗಿ ಆಗಿವೆ. ಇವುಗಳು ಒಂದು ರೀತಿಯಲ್ಲಿ ನಂಬಿಕೆಯ ಪ್ರತೀಕಗಳಾಗಿವೆ.
ಶ್ರೀಕ್ಷೇತ್ರ ಧರ್ಮಸ್ಥಳ ಅನಾದಿಯಿಂದಲೂ ಧರ್ಮದ ಪ್ರತೀಕವಾಗಿದ್ದು ಇಂದಿಗೂ ಧರ್ಮವನ್ನು ಎತ್ತಿಹಿಡಿದಿದೆ. ಪೂಜ್ಯ ಶ್ರೀ ಹೆಗ್ಗಡೆಯವರು ಧರ್ಮವನ್ನು ಪರಿಪೂರ್ಣ ಪಾಲನೆ ಮಾಡುವುದಲ್ಲದೇ, ಧರ್ಮಾಧಿಕಾರಿಗಳಾಗಿ ಇಡೀ ಮನುಕುಲಕ್ಕೆ ಧರ್ಮದಾರ್ಶನಿಕರಾಗಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಪೂಜ್ಯ ಶ್ರೀ ಹೆಗ್ಗಡೆಯವರು ನಂಬಿಕೆ ಎನ್ನುವ ಒಂದು ನಾಣ್ಯದ ಎರಡು ಮುಖಗಳಾಗಿ ನಂಬಿಕೆಯ ಅಪರಿಮಿತ ಮೌಲ್ಯವನ್ನು ಸೃಷ್ಟಿಸಿದ್ದಾರೆ. ಅಗ್ರಗಣ್ಯವಾದ ಈ ನಂಬಿಕೆಗಳು ಸಾಗರದಷ್ಟು ಆಳ ಮತ್ತು ವಿಶಾಲತೆಯನ್ನು ಹೊಂದಿವೆ. ಬೆಲೆ ಕಟ್ಟಲು ಅಸಾಧ್ಯವಾದ ಈ ಅಪರಿಮಿತವಾದ ನಂಬಿಕೆಯ ಫಲಗಳು ಬಡವರ ಬದುಕಿಗೆ ದಾರಿ ದೀಪ ಆಗಲಿ ಎಂದು ಪೂಜ್ಯರು ಸಂಕಲ್ಪ ಮಾಡಿದರು. ಅರ್ಥಾತ್ ‘ಧರ್ಮಸ್ಥಳದ ಮೇಲಿನ ನಂಬಿಕೆ’ ಬಡವರ ಬಾಳಿಗೆ ಬೆಳಕಾಗಲಿ ಎಂದು ಆಶಿಸಿದರು, ಹರಸಿದರು, ಕಾರ್ಯರೂಪಕ್ಕಿಳಿಸಿದರು. ಕಡಿಮೆ ಬಡ್ಡಿದರದಲ್ಲಿ ಬಡವರಿಗೆ, ಅಸಹಾಯಕರಿಗೆ ಸಾಲ ನೀಡಿ ಎಂದು ದೇಶದ ಪ್ರಮುಖ ಬ್ಯಾಂಕ್‌ಗಳಿಗೆ ಕರೆ ನೀಡಿದರು. ಇದು ಕೇವಲ ಕರೆ ಅಷ್ಟೇ ಆಗಿರಲಿಲ್ಲ. ಇವುಗಳಿಗೆ ಪ್ರತಿಫಲವಾಗಿ ಬ್ಯಾಂಕ್‌ಗಳ ನಿಯಮಗಳ ಪ್ರಕಾರ ಬೇಕಾದ ಜವಾಬ್ದಾರಿಯ ಹೊರೆಯನ್ನು ತಾನು ಸ್ವೀಕರಿಸುವ ಮಹಾತ್ಯಾಗಕ್ಕೆ ಸಿದ್ಧರಾದರು. ಬ್ಯಾಂಕ್‌ಗಳು ಬಡವರಿಗೆ, ಅಸಹಾಯಕರಿಗೆ ಅವರ ಪ್ರಗತಿಗಾಗಿ ನೀಡುವ ಸಾಲಗಳ ಪೂರ್ಣ ಮರುಪಾವತಿಯ ಬಗ್ಗೆ ಜವಾಬ್ದಾರಿಯ ಅಭಯವನ್ನಿತ್ತರು. ಹೀಗೆ ಪೂಜ್ಯ ಶ್ರೀ ಹೆಗ್ಗಡೆಯವರು ಯೋಜನೆಯ ಮೂಲಕ ಬಡವರ ಬೆನ್ನಿಗೆ ನಿಂತರು. ಆಗ ಬ್ಯಾಂಕುಗಳಿಗೆ ಜಗತ್ತಿನ ಎಲ್ಲಾ ನಂಬಿಕೆಗಳನ್ನು ಮೀರಿ ನಿಲ್ಲುವ ಮಹಾನ್ ನಂಬಿಕೆಯ ಸಾಗರವೇ ಸಿಕ್ಕಿದಂತಾಯಿತು. ತಡಮಾಡದೇ ಆಗ ಎಲ್ಲಾ ಬ್ಯಾಂಕ್‌ಗಳು ನಾ ಮುಂದೆ ತಾ ಮುಂದೆ ಎಂದು ಓಡಿ ಬಂದವು. ಇಂತಹ ಒಂದು ಅದ್ಭುತ ಪರಿವರ್ತನೆ ಈ ಜಗತ್ತಿನಲ್ಲಿ ಹಿಂದೆoದೂ ಆಗಿರಲಿಲ್ಲ. ಇವೆಲ್ಲಾ ಕೇವಲ ಮಾತು, ಭರವಸೆ ಅಷ್ಟಕ್ಕೇ ಇರಲಿಲ್ಲ. ಬದಲಾಗಿ ಪೂಜ್ಯರು ಒಂದು ಶ್ರೇಷ್ಠವಾದ ವ್ಯವಸ್ಥೆಯನ್ನು ಇದಕ್ಕಾಗಿಯೇ ಹುಟ್ಟುಹಾಕಿದರು. ಅದುವೇ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’.
ಈ ಯೋಜನೆಯ ಮೂಲಕ ಸ್ವ ಸಹಾಯ ಸಂಘಗಳನ್ನು ಅತ್ಯಂತ ಶಿಸ್ತು ಬದ್ಧವಾಗಿ ರಚಿಸಿ ಆ ಸಂಘದ ಸದಸ್ಯರಿಗೆ ಆರ್ಥಿಕ ಶಿಸ್ತನ್ನು ಮೂಡಿಸಿ, ಹಣಕಾಸು, ಸಾಲದ ಮಹತ್ವವನ್ನು ತಿಳಿಸಿ, ಜೀವನೋಪಾಯಗಳ ದಾರಿಗಳನ್ನು ತೋರಿಸುತ್ತಾ ಲಕ್ಷಾಂತರ ಬಡವರ ಪಾಲಿಗೆ ಪೂಜ್ಯರು ಬೆಳಕನ್ನು ನೀಡಿದರು. ಹೀಗೆ ಯೋಜನೆಯಿಂದ ಶಿಸ್ತುಬದ್ಧವಾಗಿ ರೂಪುಗೊಂಡ ಸಂಘದ ಸದಸ್ಯರಿಗೆ ಯೋಜನೆಯ ಶಿಫಾರಸ್ಸು ಹಾಗೂ ಬ್ಯಾಂಕ್ ಪ್ರತಿನಿಧಿಯ ಕಾರ್ಯವೈಖರಿಯಲ್ಲಿ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕಿನಿoದ ನೇರವಾಗಿ ಸಾಲಗಳು ಹರಿದು ಬರಲಾರಂಭಿಸಿತು. ಬ್ಯಾಂಕ್ ಪ್ರತಿನಿಧಿಯಾಗಿ ಯೋಜನೆ ಕಾರ್ಯನಿರ್ವಹಿಸಬೇಕಾದರೆ ಸಾವಿರಾರು ಸಿಬ್ಬಂದಿಗಳು, ನೂರಾರು ಕಛೇರಿಗಳು ಹಾಗೂ ಇತರ ಅನೇಕ ವ್ಯವಸ್ಥೆಗಳನ್ನು ಸಂಸ್ಥೆಯು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಬೇಕಾಗುತ್ತದೆ. ಈ ಎಲ್ಲಾ ವೆಚ್ಚಗಳನ್ನು ಭರಿಸುವ ಸಲುವಾಗಿ ಬ್ಯಾಂಕ್ ಯೋಜನೆಗೆ ‘ಬ್ಯಾಂಕ್ ಪ್ರತಿನಿಧಿ ಸೇವಾಶುಲ್ಕ (BC Service Charges) ಆಗಿ ವಾರ್ಷಿಕ ಶೇಕಡಾ ೫ರಷ್ಟು ನೀಡುತ್ತದೆ. ಇದು ದೇಶದಲ್ಲಿಯೇ ಅತ್ಯಂತ ಕಡಿಮೆ ಬಿ.ಸಿ. ಸೇವಾಶುಲ್ಕವನ್ನು ಸ್ವೀಕರಿಸುವ ವ್ಯವಸ್ಥೆಯಾಗಿದೆ. ಶೇಕಡಾ 10ರಷ್ಟು ಸೇವಾಶುಲ್ಕ ಪಡೆಯುವ ಕಾನೂನಾತ್ಮಕ ಅವಕಾಶ ಇದ್ದರೂ ಕೂಡಾ, ಕೇವಲ ಶೇಕಡಾ ೫ಕ್ಕೆ ಸೀಮಿತಗೊಳಿಸುವಂತಹ ಮಹತ್ತರ ನಿಲುವನ್ನು ಪೂಜ್ಯರು ಕೈಗೊಂಡರು. ಏಕೆಂದರೆ ಹೆಚ್ಚಿನ ಸೇವಾಶುಲ್ಕದರದಿಂದಾಗಿ ಬ್ಯಾಂಕ್‌ಗಳು ಬಡವರಿಗೆ ವಿಧಿಸುವ ಬಡ್ಡಿದರ ಹೆಚ್ಚಾಗಬಾರದೆಂಬ ಉದ್ದೇಶಕ್ಕಾಗಿ. ಇವುಗಳೆಲ್ಲದರ ಪರಿಣಾಮದಿಂದಾಗಿ ಇಂದು ಕರಾವಳಿ ಪ್ರಾಂತ್ಯದಲ್ಲಿ ಕೇವಲ ಶೇಕಡಾ 13..5ರಷ್ಟು ಹಾಗೂ ಕರ್ನಾಟಕದ ಉಳಿದ ಭಾಗದಲ್ಲಿ ಕೇವಲ ಶೇಕಡಾ 14ರಷ್ಟು ಬಡ್ಡಿದರದಲ್ಲಿ ಸಂಘದ ಸದಸ್ಯರು ಪ್ರಗತಿನಿಧಿ ಸಾಲವನ್ನು ಪಡೆಯುತ್ತಿದ್ದಾರೆ. ಈ ಸಾಲವನ್ನು ಪಡೆಯಲು ಯಾವುದೇ ಆಸ್ತಿ, ಜಮೀನುಗಳನ್ನು ಅಡಮಾನ ಇಡಬೇಕಾಗಿಲ್ಲ. ಆದಾಯ ಪ್ರಮಾಣ ಪತ್ರ ನೀಡಬೇಕಾಗಿಲ್ಲ, ವೈಯಕ್ತಿಕ ಜಾಮೀನಿಗೆ ಅಲೆದಾಡಬೇಕಾಗಿಲ್ಲ, ವಕೀಲರು ಅಭಿಪ್ರಾಯ ನೀಡಬೇಕಾಗಿಲ್ಲ, ಬ್ಯಾಂಕಿಗೆ ಹಲವು ಬಾರಿ ಓಡಾಟ ಮಾಡಬೇಕಾಗಿಲ್ಲ. ಬದಲಾಗಿ ನಾವಿರುವ ಊರಲ್ಲಿ ಸುಲಭವಾಗಿ, ಶೀಘ್ರವಾಗಿ ಪ್ರಗತಿನಿಧಿ ಸಾಲ ನೇರವಾಗಿ ಸದಸ್ಯರ ವೈಯಕ್ತಿಕ ಖಾತೆಗೆ ಬಂದು ಬೀಳುತ್ತದೆ. ಇದಕ್ಕಿಂತ ಭಾಗ್ಯ ಬಡವರ ಪಾಲಿಗೆ ಇನ್ನೊಂದಿದೆಯೇ?. ಈ ಭಾಗ್ಯ ಜ್ಯೋತಿಯ ದೀಪ, ಬತ್ತಿ ಎಲ್ಲವೂ ಶ್ರೀಕ್ಷೇತ್ರ ಧರ್ಮಸ್ಥಳದ ಮೇಲಿನ ನಂಬಿಕೆ, ಪೂಜ್ಯ ಶ್ರೀ ಹೆಗ್ಗಡೆಯವರ ಮಹಾನ್ ತ್ಯಾಗವಾಗಿದೆ. ಯೋಜನೆಯ ಮೂಲಕ ಬಡವರ, ಅಸಹಾಯಕರ ಜೀವನದಲ್ಲಿ ಆದ ಮಹತ್ತರ ಬದಲಾವಣೆಗಳು ಯಾವೆಲ್ಲ ರೀತಿಯಿಂದ ಆಗಿದೆಯೆಂದು ಮುಂದಿನ ಸಂಚಿಕೆಯಲ್ಲಿ ತಿಳಿಸುತ್ತೇನೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *