ಧರ್ಮಸ್ಥಳ ಲಕ್ಷದೀಪೋತ್ಸವ

ಭಾರತೀಯ ಸಂಸ್ಕೃತಿಯಲ್ಲಿ ಬೆಳಕಿಗೆ ಎಲ್ಲಿಲ್ಲದ ಪ್ರಾಶಸ್ತ್ಯವಿದೆ. ‘ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ’ ಇದು ಪ್ರತಿಯೊಬ್ಬ ಭಾರತೀಯನಿಗೂ ಚಿರಪರಿಚಿತವಾದ ಶ್ಲೋಕವಾಗಿದೆ. ‘ಬೆಳಕು’ ಜ್ಞಾನ, ಸತ್ಯ, ಸಮೃದ್ಧಿ, ಪರಿಶುದ್ಧತೆಯ ಪ್ರತೀಕವಾಗಿದೆ. ಬೆಳಕನ್ನು ನೀಡುವ ದೀಪಕ್ಕೆ ಇನ್ನೂ ಹೆಚ್ಚಿನ ಪ್ರಾಶಸ್ತ್ಯವಿದೆ. ಕೈಹಿಡಿದು ಮುನ್ನಡೆಸುವ ದಾರಿದೀಪ, ಕುಲವನ್ನು ಮುನ್ನಡೆಸುವ ಕುಲದೀಪ, ಅನಂತತೆಯನ್ನು ಸಾರುವ ನಂದಾದೀಪ ಇವು ‘ದೀಪ’ದ ಮಹತ್ವವನ್ನು ಸಾರುತ್ತವೆ. ಆಧ್ಯಾತ್ಮಿಕತೆ ಹಾಗೂ ಧಾರ್ಮಿಕ ಆಚರಣೆಗಳು ದೀಪದ ಮೂಲಕವೇ ಪ್ರಾರಂಭಗೊಳ್ಳುತ್ತವೆ. ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ದೀಪಗಳ ಉತ್ಸವವು ಒಂದು ದೊಡ್ಡ ಹಬ್ಬವೇ ಆಗಿದೆ. ಅಂತಹ ದೀಪಗಳ ಉತ್ಸವಗಳಲ್ಲಿ ‘ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ’ವು ಕೋಟ್ಯಾಂತರ ಭಕ್ತರ ಪಾಲಿನ ಪ್ರಮುಖ ಹಬ್ಬವಾಗಿದೆ. ಕ್ಷೇತ್ರದ ಲಕ್ಷದೀಪೋತ್ಸವವು ಧಾರ್ಮಿಕ ತಳಹದಿಯ ಆಚರಣೆ ಆಗಿದ್ದರೂ, ಪೂಜ್ಯರ ಪೂರ್ವದಿಂದಲೂ ಈ ಉತ್ಸವಕ್ಕೆ ಸಾಮಾಜಿಕ ಉತ್ಸವದ ಮೆರುಗನ್ನು ನೀಡಿದ್ದಾರೆ. ಪರಮಪೂಜ್ಯ ಖಾವಂದರು ಈ ಉತ್ಸವವನ್ನು ಇನ್ನೂ ಉತ್ತುಂಗಕ್ಕೇರಿಸಿ ಕ್ಷೇತ್ರ ಧರ್ಮಸ್ಥಳದ ಅತ್ಯಂತ ಪ್ರಮುಖ ಸಂಭ್ರಮಾಚರಣೆಯನ್ನಾಗಿ ಮಾಡಿದ್ದಾರೆ. ದೀಪೋತ್ಸವವನ್ನು ವಿಶಿಷ್ಟವಾಗಿ ಆಚರಿಸಿ ದೇಶವೇ ಗಮನಸೆಳೆಯುವಂತೆ ಮಾಡಿದ್ದಾರೆ. ಆರು ದಿನಗಳ ಕಾಲ ನಡೆಯುವ ಈ ವಿಜೃಂಭಣೆಯ ಲಕ್ಷದೀಪೋತ್ಸವದಲ್ಲಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಗೆ ‘ಹೊಸಕಟ್ಟೆ ಉತ್ಸವ’, ‘ಕೆರೆಕಟ್ಟೆ ಉತ್ಸವ’, ‘ಲಲಿತೋದ್ಯಾನ ಉತ್ಸವ’, ‘ಕಂಚಿಮಾರುಕಟ್ಟೆ ಉತ್ಸವ’ ಹಾಗೂ ‘ಗೌರಿಮಾರುಕಟ್ಟೆ ಉತ್ಸವ’ ಹೀಗೆ ಐದು ಪ್ರಮುಖ ಉತ್ಸವಗಳು ವಿಜೃಂಭಣೆಯಿAದ ನಡೆಯುತ್ತವೆ. ಶ್ರೀ ಚಂದ್ರನಾಥ ಸ್ವಾಮಿಯ ‘ಸಮವಸರಣ ಪೂಜೆ’ಯೊಂದಿಗೆ ಆಯಾ ಸಂವತ್ಸರದ ಲಕ್ಷದೀಪೋತ್ಸವವನ್ನು ಬಹು ವಿಜೃಂಭಣೆಯಿoದ ಮುಕ್ತಾಯಗೊಳಿಸಲಾಗುತ್ತದೆ.
ಈ ಮೇಲಿನ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿದಿನವೂ ವಿಶಿಷ್ಟ ಸಾಮಾಜಿಕ ವೈಭವಗಳ ಆಚರಣೆಗಳೂ ಇರುವುದು ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ವಿಶೇಷವಾಗಿದೆ. ಲಕ್ಷದೀಪೋತ್ಸವದ ಪ್ರಾರಂಭದ ದಿನ ‘ರಾಜ್ಯಮಟ್ಟದ ವಸ್ತುಪ್ರದರ್ಶನ’ ಉದ್ಘಾಟನೆಯು ನಡೆಯಲಿದೆ. ಆ ವಸ್ತುಪ್ರದರ್ಶನದಲ್ಲಿ ರಾಜ್ಯದ ಅನೇಕ ಇಲಾಖೆಗಳು, ಸಂಸ್ಥೆಗಳು ತಮ್ಮ ಸೇವೆ ಹಾಗೂ ಉತ್ಪನ್ನಗಳನ್ನು ಪ್ರದರ್ಶನ ಮಾಡುತ್ತವೆ. ಅನೇಕ ವ್ಯಾಪಾರಿಗಳಿಗೆ, ಕರಕುಶಲಕರ್ಮಿಗಳಿಗೆ ತಮ್ಮ ವಸ್ತುಗಳ ಪ್ರದರ್ಶನಕ್ಕೂ, ಮಾರಾಟಕ್ಕೂ ಅವಕಾಶವಿರುತ್ತದೆ. ಇದು ಅನೇಕ ವಿಷಯಗಳನ್ನು ತಿಳಿದುಕೊಳ್ಳುವ ಮತ್ತು ಜ್ಞಾನದ ಅರಿವನ್ನು ಮೂಡಿಸುವ ವೇದಿಕೆಯೂ ಆಗಿರುತ್ತದೆ.
‘ಸರ್ವಧರ್ಮ ಸಮ್ಮೇಳನ’ವು ಲಕ್ಷದೀಪೋತ್ಸವದಲ್ಲಿ ಬಹಳ ಪ್ರಮುಖ ಕಾರ್ಯಕ್ರಮವಾಗಿದೆ. ವಿಶ್ವಮಾನ್ಯತೆಯನ್ನು ಪಡೆದ ನಮ್ಮ ದೇಶದ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಬೀಜ ಮಂತ್ರಕ್ಕೆ ಧರ್ಮಸ್ಥಳದ ‘ಸರ್ವಧರ್ಮ ಸಮ್ಮೇಳನ’ವು ಅತ್ಯಂತ ಸೂಕ್ತವಾದ ವೇದಿಕೆಯಾಗಿದೆ. ನಮ್ಮ ದೇಶದ ಪ್ರಮುಖ ಧರ್ಮಗಳ ಧಾರ್ಮಿಕ ಮುಖಂಡರು ಒಂದೇ ವೇದಿಕೆಯಲ್ಲಿ ಧರ್ಮದ ಸಾರವನ್ನು ತಿಳಿಸುತ್ತಾರೆ. ಮಾನವ ಕಲ್ಯಾಣದಲ್ಲಿ ಧರ್ಮಾಚರಣೆಯ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಪ್ರೇರಣೆ ನೀಡುವ ಜ್ಞಾನದ ವೇದಿಕೆಯೂ ಇದು ಆಗಿದೆ. ಕಲೆ, ಸಾಹಿತ್ಯಕ್ಕೆ ಅಪಾರ ಆದ್ಯತೆ ನೀಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಮೂಲಕ ಕಲೆ, ಸಾಹಿತ್ಯಕ್ಕೆ ಒಂದು ದೊಡ್ಡ ವೇದಿಕೆಯನ್ನೇ ನೀಡಿದೆ. ಇದುವೇ ‘ಸಾಹಿತ್ಯ ಸಮ್ಮೇಳನ.’ ಲಕ್ಷ ದೀಪೋತ್ಸವದ ಐದೂ ದಿನಗಳಲ್ಲಿ ಗಾನ, ಸಂಗೀತ, ನಾಟ್ಯಗಳು ವಿಜೃಂಭಣೆಯಿoದ ನಡೆಯುವುದರ ಜೊತೆಗೆ ಸಾಹಿತ್ಯದ ಬಗ್ಗೆ ವಿದ್ವಾಂಸರ ಚರ್ಚೆ- ಮಂಡನೆಗಳನ್ನು ಉಣಬಡಿಸುವ ಅದ್ಭುತವಾದ ಸಾಹಿತ್ಯ ಸಮ್ಮೇಳನವನ್ನು ಕೈಗೊಳ್ಳಲಾಗುತ್ತದೆ. ರಾಜ್ಯದ ಪ್ರಖ್ಯಾತ ವಿದ್ವಾಂಸರು, ಕವಿಗಳು, ಲೇಖಕರು ಈ ಕಾರ್ಯಕ್ರಮದಲ್ಲಿ ಜ್ಞಾನದ ಬೆಳಕನ್ನು ನೀಡುತ್ತಾರೆ. ಈ ಎಲ್ಲಾ ವಿಶೇಷತೆಗಳಿಂದಾಗಿಯೇ ‘ಧರ್ಮಸ್ಥಳದ ಲಕ್ಷದೀಪೋತ್ಸವ’ವು ಜ್ಞಾನದೀಪೋತ್ಸವವೂ ಆಗಿದೆ.
ಕ್ಷೇತ್ರದ ಲಕ್ಷದೀಪೋತ್ಸವದ ಪ್ರಾರಂಭದ ದಿನ ಕರಾವಳಿ ಜಿಲ್ಲೆಗಳ ಭಕ್ತಾದಿಗಳು ಉಜಿರೆಯ ಶ್ರೀ ಜನಾರ್ಧನ ಸ್ವಾಮಿಯ ಸನ್ನಿಧಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ‘ಪಾದಯಾತ್ರೆ’ಯನ್ನು ಕೈಗೊಳ್ಳುತ್ತಾರೆ. ಇದನ್ನು ಸತ್ಯಧರ್ಮದೆಡೆಗಿನ ಪಾವನಯಾತ್ರೆಯೆಂದೂ ಕರೆಯುತ್ತಾರೆ. ಸಹಸ್ರ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಶ್ರೀ ಮಂಜುನಾಥ ಸ್ವಾಮಿಯ ಭಜನೆ, ಘೋಷಗಳೊಂದಿಗೆ ಪಾದಯಾತ್ರೆ ಮಾಡುತ್ತಾರೆ. ಪೂಜ್ಯ ಶ್ರೀ ಹೆಗ್ಗಡೆಯವರ ಮೇಲಿನ ಅಪಾರ ಪ್ರೀತಿ, ಅಭಿಮಾನ, ಗೌರವವನ್ನು ಸೂಚಿಸುವ ಸಂಕೇತವೂ ಈ ಪಾದಯಾತ್ರೆಯಾಗಿದೆ. ಕಳೆದ 12 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಈ ಪಾದಯಾತ್ರೆಯು ಈಗ ಒಂದು ಸಂಸ್ಕೃತಿಯೇ ಆಗಿದೆ.
ಇನ್ನು ದೀಪೋತ್ಸವದ ‘ಗೌರಿಮಾರುಕಟ್ಟೆ ಉತ್ಸವ’ದ ದಿನ ಲಕ್ಷಾಂತರ ಭಕ್ತರು ಆಗಮಿಸಿ ರಾತ್ರಿಯ ವೈಭವದ ಉತ್ಸವವನ್ನು ವೀಕ್ಷಿಸುತ್ತಾರೆ. ಆ ಒಂದು ದಿನ ರಾಜ್ಯದ ಬೇರೆ ಬೇರೆ ಭಾಗಗಳ ಭಕ್ತಾಧಿಗಳ ಸುಮಾರು ಇಪ್ಪತ್ತೈದರಷ್ಟು ತಂಡ ನೆರೆದ ಲಕ್ಷಾಂತರ ಭಕ್ತಾಧಿಗಳಿಗೆ ಅನ್ನದಾನವನ್ನು ನಡೆಸುತ್ತಾರೆ. ರಾಜ್ಯವಲ್ಲದೇ ದೇಶದ ಪ್ರಮುಖ ತಿಂಡಿತಿನಿಸುಗಳನ್ನು ಸ್ವಾದಿಷ್ಟವಾಗಿ ಕ್ಷೇತ್ರದಲ್ಲೆ ತಯಾರಿಸಿ ಲಕ್ಷಾಂತರ ಜನರಿಗೆ ಪ್ರೀತಿಯಿಂದ ಉಣಬಡಿಸುತ್ತಾರೆ. ಈ ಎಲ್ಲಾ ವಿಶಿಷ್ಟತೆಗಳನ್ನು ಒಳಗೊಂಡಿರುವುದರಿAದಾಗಿಯೇ ‘ಶ್ರೀ ಕ್ಷೇತ್ರದ ಲಕ್ಷದೀಪೋತ್ಸವ’ವು ಅತ್ಯಂತ ವಿಶಿಷ್ಟವಾಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates