ನಮ್ಮ ಹೆಮ್ಮೆಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ರಾಜ್ಯೋತ್ಸವದ ಗರಿ

ಶ್ರೀ ಅನಿಲ್ ಕುಮಾರ್ ಎಸ್.ಎಸ್.

‘ರಾಜ್ಯೋತ್ಸವ ಪ್ರಶಸ್ತಿ’ಯು ನಮ್ಮ ರಾಜ್ಯದ ಉನ್ನತ ಪ್ರಶಸ್ತಿಗಳಲ್ಲೊಂದಾಗಿದೆ. ಕಲೆ, ಸಾಹಿತ್ಯ, ಶಿಕ್ಷಣ, ಆಡಳಿತ, ಉದ್ದಿಮೆ, ಕ್ರೀಡೆ, ಕೃಷಿ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಸಮಾಜಸೇವೆ ಹೀಗೆ ಹತ್ತಾರು ವಲಯಗಳಲ್ಲಿ ಶ್ರೇಷ್ಠ ಸಾಧನೆಯನ್ನು ಮಾಡಿ ಕರ್ನಾಟಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ ಮಹಾಸಾಧಕರಿಗೆ ಈ ಪ್ರಶಸ್ತಿಯು ಭಾಜನವಾಗುವುದು. 2022ನೇ ‘ರಾಜ್ಯೋತ್ಸವ ಪ್ರಶಸ್ತಿ’ಯನ್ನು ನಮ್ಮ ಯೋಜನೆಯ ಹೆಮ್ಮೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್. ಎಚ್. ಮಂಜುನಾಥ್ ಸರ್‌ರವರಿಗೆ ನೀಡಿರುವುದು ನಮಗೆಲ್ಲರಿಗೂ ಬಹಳ ಅಭಿಮಾನದ ವಿಷಯವಾಗಿದೆ. ಪೂಜ್ಯ ಶ್ರೀ ಹೆಗ್ಗಡೆಯವರು ಹಾಗೂ ಮಾತೃಶ್ರೀ ಅಮ್ಮನವರ ಸಮಾಜ ಸೇವೆಯ ಕನಸಿನ ಕೂಸಾದ ‘ಗ್ರಾಮಾಭಿವೃದ್ಧಿ ಯೋಜನೆ’ಯಲ್ಲಿ ಡಾ| ಎಲ್. ಎಚ್. ಮಂಜುನಾಥ್‌ರವರು ಸಲ್ಲಿಸಿರುವ ಅನನ್ಯ ಆಡಳಿತ ಸೇವೆಯನ್ನು ವಿಶೇಷವಾಗಿ ಗುರುತಿಸಿದ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ. ನಿಜಕ್ಕೂ ಇದು ಅತ್ಯಂತ ಸೂಕ್ತ ಆಯ್ಕೆಯಾಗಿದೆ.
ನಾಲ್ಕು ದಶಕಗಳ ಹಿಂದೆ ಸಮಾಜದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದ ಮೂರು ಪ್ರಮುಖ ಸಮಸ್ಯೆಗಳಿಗೆ ಪರಿಣಾಮಕಾರಿಯಾದ ಪರಿಹಾರವನ್ನು ನೀಡುವ ಸಲುವಾಗಿಯೇ ಪೂಜ್ಯರು ನಮ್ಮ ಗ್ರಾಮಾಭಿವೃದ್ಧಿ ಯೋಜನೆಯನ್ನು ಹುಟ್ಟು ಹಾಕಿದರು. ರೈತಾಪಿ ವರ್ಗದ ಹಾಗೂ ಬಡವರÀ ದುರ್ಬಲ ಪರಿಸ್ಥಿತಿ, ಗ್ರಾಮೀಣ ಮಹಿಳೆಯರ ಅಸಹಾಯಕ ಬದುಕು ಹಾಗೂ ಗ್ರಾಮಗಳ ಹಿಂದುಳಿದ ಸ್ಥಿತಿಗತಿ ಎಷ್ಟೋ ಶತಮಾನಗಳಿಂದ ಉಳಿದುಕೊಂಡ ಶಾಶ್ವತ ಸಮಸ್ಯೆಗಳಾಗಿದ್ದವು. ಆದರೆ ಪೂಜ್ಯರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಈ ಶಾಶ್ವತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪಣತೊಟ್ಟರು. ಅನ್ನದಾತರ, ದುರ್ಬಲರ ಸಶಕ್ತೀಕರಣ, ಮಹಿಳೆಯರ ಸಬಲೀಕರಣ ಹಾಗೂ ಗ್ರಾಮಗಳ ಸಮಗ್ರ ಅಭಿವೃದ್ಧಿಗಳು ಕೇವಲ ಒಂದೆರಡು ಕಾರ್ಯಕ್ರಮದಿಂದ ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಪೂಜ್ಯರು ಹತ್ತಾರು ಯೋಜನೆಗಳನ್ನು ಹಾಕಿಕೊಂಡರು. ಹಾಗೆಯೇ ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಿದರು. ಈ ಅದ್ಭುತ ಚಿಂತನೆಗಳು, ಮಾರ್ಗಸೂಚಿಗಳು ಸಮರ್ಪಕವಾಗಿ ಅನುಷ್ಠಾನವಾದರೆ ಮಾತ್ರ ಅವುಗಳ ಫಲ ಸಮಾಜಕ್ಕೆ ಸಿಗಲು ಸಾಧ್ಯ. ಅಂತಹ ಸಮರ್ಪಕ ಅನುಷ್ಠಾನವು ಓರ್ವ ದಕ್ಷ ಆಡಳಿತಗಾರನಿಂದ ಮಾತ್ರ ಸಾಧ್ಯ. ಡಾ| ಎಲ್. ಎಚ್. ಮಂಜುನಾಥ್‌ರವರು ಪೂಜ್ಯರ ಕನಸುಗಳನ್ನು ನನಸು ಮಾಡುವ ದಕ್ಷ ಆಡಳಿತಗಾರರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಗ್ರಾಮೀಣ ಕರ್ನಾಟಕದ ರೈತರ, ದುರ್ಬಲರ ಹಾಗೂ ಮಹಿಳೆಯರ ಕೈಗಳು ಚಾಚುವಂತೆೆ ಎಂದೂ ಯೋಜನೆ ಪ್ರೋತ್ಸಾಹ ನೀಡಲಿಲ್ಲ, ಬದಲಾಗಿ ಆ ಕೈಗಳಿಗೆ ಶಕ್ತಿ ತುಂಬಿ ನಿಜಾರ್ಥದಲ್ಲಿ ಸಶಕ್ತೀಕರಣವನ್ನು ಮಾಡಲಾಯಿತು. ಆ ಸಶಕ್ತೀಕರಣ ಸುಸ್ಥಿರ ಸಮಾಜವನ್ನು ನಿರ್ಮಾಣ ಮಾಡುತ್ತಾ ಹೋಯಿತು. ಅದರ ಜೊತೆಯಲ್ಲೇ ಯೋಜನೆಯು ಸುಸ್ಥಿರವಾಗುತ್ತಾ ಸಾಗಿತು.
ನಮ್ಮ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಆಂತರಿಕ ಹಾಗೂ ಬಾಹ್ಯ ಆಡಳಿತಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಈ ಎರಡು ವಿಷಯಗಳಿಗೆ ಕಾರ್ಯನಿರ್ವಾಹಕ ನಿರ್ದೇಶಕರು ಅತ್ಯಂತ ಮಹತ್ವವನ್ನು ನೀಡಿ ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ಆಂತರಿಕ ಆಡಳಿತಗಳಲ್ಲಿ ಪ್ರಮುಖ ವಿಷಯಗಳಾದ ಮಾನವ ಸಂಪನ್ಮೂಲಗಳ ಸಮರ್ಪಕ ನಿರ್ವಹಣೆ ಹಾಗೂ ಸಂಸ್ಥೆಯ ಇತರೆ ಎಲ್ಲಾ ಸಂಪನ್ಮೂಲಗಳ ಸದ್ಬಳಕೆ. ಆಯಾ ಸಮಯಕ್ಕೆ ಸರಿಯಾಗಿ ಅನೇಕ ಸೂಕ್ತ ಕಾರ್ಯಕ್ರಮಗಳನ್ನು ಕೈಗೊಂಡು ಅನುಷ್ಠಾನ ಮಾಡುವುದು, ಆಂತರಿಕ ನೀತಿ ನಿಯಮಗಳನ್ನು ರೂಪಿಸುವುದು, ಸುತ್ತೋಲೆಗಳನ್ನು ಹೊರಡಿಸುವುದು ಹಾಗೂ ಅವುಗಳೆಲ್ಲವು ಪಾಲನೆಯಾಗುವಂತೆ ನೋಡಿಕೊಳ್ಳುವದು, ಸಿಬ್ಬಂದಿಗಳಿಗೆ ಸೂಕ್ತ ತರಬೇತಿಗಳನ್ನು ನೀಡಿ ಆಯಾ ಕಾರ್ಯಕ್ರಮಗಳು ಕಾರ್ಯಕ್ಷೇತ್ರದಲ್ಲಿ ಅನುಷ್ಠಾನ ಮಾಡುವುದು, ನಿರಂತರ ವಿಚಕ್ಷಣೆ, ಅಗತ್ಯ ಮೌಲ್ಯವರ್ಧನೆ, ಸೂಕ್ತ ನಿಯಂತ್ರಣಗಳನ್ನು ವ್ಯವಸ್ಥಿತವಾಗಿ ನಡೆಯುವಂತೆ ಮಾಡುವುದು. ವರದಿಗಳೊಂದಿಗೆ ಹಂತ ಹಂತವಾಗಿ ಗುರಿಗಳನ್ನು ಸಾಧಿಸುವಂತೆ ನೋಡಿಕೊಳ್ಳುವುದು. ಇತರ ಅಂಶಗಳಾದ ದಾಖಲಾತಿ ನಿರ್ವಹಣೆ, ಲೆಕ್ಕಾಚಾರ ಹಾಗೂ ಹಣಕಾಸಿನ ವ್ಯವಹಾರಗಳ ಸೂಕ್ತ ನಿರ್ವಹಣೆ ಮಾಡುವುದು, ತಂತ್ರಜ್ಞಾನಗಳ ಸದ್ಬಳಕೆಯೊಂದಿಗೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವುದು, ಹೀಗೆ ಹತ್ತಾರು ಅಂಶಗಳಲ್ಲಿ ಅತ್ಯುತ್ತಮ ಆಡಳಿತವನ್ನು ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು ಮಾಡಿ ಸಾಧನೆಯನ್ನು ತೋರಿಸಿದ್ದಾರೆ. ಇನ್ನು ಬಾಹ್ಯ ಆಡಳಿತವನ್ನು ಅಷ್ಟೇ ದಕ್ಷತೆಯಿಂದ ನಿರ್ವಹಿಸಿದ್ದಾರೆ. ನಮ್ಮ ಯೋಜನೆಯು ಅನೇಕ ಬಾಹ್ಯ ಸಂಸ್ಥೆಗಳೊoದಿಗೆ ಕೈಜೋಡಿಸಿ ಸಮಾಜ ಕಟ್ಟುವ ಕಾರ್ಯವನ್ನು ಮಾಡುತ್ತಿದೆ. ಮುಖ್ಯವಾಗಿ ಬಿ.ಸಿ. ಕಾರ್ಯಕ್ರಮಕ್ಕಾಗಿ ರಾಷ್ಟçದ ಪ್ರಮುಖ ಬ್ಯಾಂಕುಗಳು, ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ಸರಕಾರದ ಅನೇಕ ಇಲಾಖೆಗಳು, ವಿಮಾ ಕಾರ್ಯಕ್ರಮಕ್ಕಾಗಿ ಪ್ರಮುಖ ವಿಮಾ ಸಂಸ್ಥೆಗಳು ಹಾಗೂ ಯೋಜನೆಯ ಇನ್ನಿತರ ಕಾರ್ಯಕ್ರಮಗಳಿಕ್ಕಾಗಿ ಇತರ ಸಂಘ ಸಂಸ್ಥೆಗಳೊoದಿಗೆ ಪಾಲುದಾರ ಸಂಸ್ಥೆಯಾಗಿ ಸಮಾಜದ ಅಭಿವೃದ್ಧಿಕ್ಕಾಗಿ ನಮ್ಮ ಯೋಜನೆಯು ದುಡಿಯುತ್ತಿದೆ. ಈ ಸಂಸ್ಥೆಗಳೊoದಿಗೆ ಮಾಡಿಕೊಂಡ ಒಪ್ಪಂದಗಳ ಅನುಸಾರವೇ ಕಾರ್ಯಕ್ರಮಗಳ ಹಮ್ಮಿಕೊಳ್ಳುವಂತೆ ಉತ್ತಮ ಆಡಳಿತ ನಡೆಸುವುದು, ಆ ಸಂಸ್ಥೆಗಳೊoದಿಗೆ ಸಮರ್ಪಕ ಸಮನ್ವಯತೆಯನ್ನು ಸಾಧಿಸುವುದು, ಒಪ್ಪಂದಗಳನ್ನು ಮೌಲ್ಯವರ್ಧನೆಯೊಂದಿಗೆ ನವೀಕರಿಸುವುದು, ನೂತನ ಕಾರ್ಯಕ್ರಮಗಳನ್ನು ರೂಪಿಸುವುದು, ದಾಖಲಾತಿ, ವರದಿಗಳನ್ನು ವಿನಿಮಯ ಮಾಡಿಕೊಳ್ಳುವುದು, ಹೀಗೆ ಉತ್ತಮ ಪಾಲುದಾರತ್ವ ವ್ಯವಸ್ಥೆಯಲ್ಲಿ ಗುಣಮಟ್ಟದ ಸೇವೆಯನ್ನು ನೀಡುವುದು, ಸರ್ಕಾರಗಳು ಹಾಗೂ ಇತರ ಶಾಸನಬದ್ಧ ಪ್ರಾಧಿಕಾರಗಳು ರೂಪಿಸಿದ ನೀತಿ ನಿಯಮಗಳನ್ನು ಯೋಜನೆಯು ಶಿಸ್ತು ಬದ್ಧವಾಗಿ ಪಾಲಿಸುವುದು, ಸಮರ್ಪಕ ತೆರಿಗೆ ಪಾವತಿಸುವುದು, ವರದಿಗಳನ್ನು ಸಲ್ಲಿಸುವುದು, ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು, ಹೀಗೆ ಅನೇಕ ಬಾಹ್ಯ ಆಡಳಿತದ ವಿಷಯಗಳಲ್ಲಿಯೂ ನಮ್ಮ ಕಾರ್ಯನಿರ್ವಾಹಕ ನಿರ್ದೇಶಕರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಪೂಜ್ಯ ಶ್ರೀ ಹೆಗ್ಗಡೆಯವರು ಹಾಗೂ ಮಾತೃಶ್ರೀ ಅಮ್ಮನವರ ಮಾರ್ಗದರ್ಶನದಲ್ಲಿ ಅತ್ಯುತ್ತಮ ದಕ್ಷ ಆಡಳಿತ ನೀಡಿ, ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಏರಿಸಿದ ‘ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತ ನಮ್ಮ ಹೆಮ್ಮೆಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸಮಸ್ತ ಸಿಬ್ಬಂದಿಗಳ ಹಾಗೂ ಪಾಲುದಾರ ಬಂಧುಗಳ ಪರವಾಗಿ ಗೌರವಪೂರ್ವಕ ಅಭಿನಂದನೆಗಳು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *