ನಿವೃತ್ತಿಯ ನೆರಳಿನಲ್ಲಿ

ನಿರಂತರ ಪ್ರಗತಿ ಪತ್ರಿಕೆಯ ಪ್ರಾರಂಭದಿ0ದಲೂ ಪತ್ರಿಕೆಯ ಸಂಪಾದಕೀಯ ಮಂಡಳಿಯಲ್ಲಿ ನಾನು ಕೆಲಸ ಮಾಡುತ್ತಾ ಬಂದಿದ್ದೇನೆ. ನೋಡನೋಡುತ್ತಿದ್ದಂತೆ ಓದುಗರ ಆಶೀರ್ವಾದದಿಂದ ಪತ್ರಿಕೆಯು ಜನಪ್ರಿಯವಾಗುತ್ತಾ ಬೆಳೆದಿದೆ. ಕಾಲಕಾಲಕ್ಕೆ ಬದಲಾದ ಸಂಪಾದಕೀಯ ಮಂಡಳಿಯ ಪ್ರಯತ್ನಗಳಿಂದಾಗಿ ‘ನಿರಂತರ ಪ್ರಗತಿ’ ಪತ್ರಿಕೆಯ ಹೂರಣ ಸಾಕಷ್ಟು ಸಮೃದ್ಧವಾಗಿದೆ. ಪೂಜ್ಯರು ಬರೆಯುವ ‘ಅಧ್ಯಕ್ಷರ ನಲ್ನುಡಿ’ ಮತ್ತು ಹೇಮಾವತಿ ಅಮ್ಮನವರ ‘ಗೆಳತಿ’ ಅಂಕಣಗಳು ಪತ್ರಿಕೆಯ ಜನಪ್ರಿಯ ಅಂಕಣಗಳಾಗಿವೆ. ಜೊತೆಯಲ್ಲಿ ಕಳೆದ 20 ವರ್ಷಗಳಿಂದ ಪ್ರತಿ ತಿಂಗಳಿಗೊ0ದರ0ತೆ ಜ್ವಲಂತ ವಿಷಯಗಳ ಬಗ್ಗೆ ‘ನಿರ್ದೇಶಕರ ನಿವೇದನೆ’ ಎಂಬ ಅಂಕಣವನ್ನು ಬರೆಯುವ ಭಾಗ್ಯ ನನ್ನದಾಗಿದೆ. ಎಲ್ಲ ಓದುಗರು ಪತ್ರಿಕೆಯನ್ನು ಮತ್ತು ಅಂಕಣಗಳನ್ನು ಪ್ರೀತಿಯಿಂದ ಸ್ವೀಕರಿಸಿದ್ದೀರಿ ಮತ್ತು ಪೋಷಿಸಿದ್ದೀರಿ. ಇದೀಗ ಪತ್ರಿಕೆ ಪ್ರತಿ ತಿಂಗಳು ಹತ್ತು ಲಕ್ಷ ಪ್ರತಿಗಳನ್ನು ಮುದ್ರಿಸುವ ಹಂತಕ್ಕೆ ತಲುಪಿದ್ದು ಕನ್ನಡ ಪತ್ರಿಕೋದ್ಯಮ ರಂಗದಲ್ಲಿಯೇ ವಿಶೇಷ ಸಾಧನೆಯಾಗಿದೆ ಮತ್ತು ಇದಕ್ಕೆ ಮುಖ್ಯ ಕಾರಣಕರ್ತರು ಯೋಜನೆಯ ಎಲ್ಲ ಪಾಲುದಾರ ಬಂಧುಗಳೇ ಆಗಿರುತ್ತಾರೆ. ವಿಶೇಷವೆಂದರೆ ಯೋಜನೇತರರು ಈ ಪತ್ರಿಕೆಯನ್ನು ಓದಿ ಅದರ ಗುಣಮಟ್ಟದಿಂದ ಮತ್ತು ಅದರ ಮಾಹಿತಿಗಳಿಂದ ಬಹಳಷ್ಟು ಪ್ರಭಾವಿತರಾಗಿದ್ದಾರೆ. ಯೋಜನೆಯ ಹರವು ಬಹಳ ವಿಸ್ತಾರವಾಗಿರುವುದರಿಂದ ಲಕ್ಷಾಂತರ ಜನರಿಗೆ ನೆರವು ಕೊಡುವ ಈ ಕಾರ್ಯಕ್ರಮದಲ್ಲಿ ಸಹಜವಾಗಿಯೇ ಸಾಕಷ್ಟು ಯಶೋಗಾಥೆಗಳು ಸುಲಭವಾಗಿ ಲಭ್ಯವಾಗುತ್ತವೆ. ಜೊತೆಯಲ್ಲಿ ಮದ್ಯವರ್ಜನೆಯಂತಹ ಅತ್ಯಂತ ಕಠಿಣ ಕಾರ್ಯಕ್ರಮವನ್ನು ಯೋಜನೆಯು ಯಶಸ್ವಿಯಾಗಿ ನಡೆಸುತ್ತಿರುವುದರಿಂದ ಅನೇಕ ಮನಕಲಕುವ ಘಟನೆಗಳು ಪತ್ರಿಕೆಯಲ್ಲಿ ಪ್ರಕಟಗೊಂಡು ಜನರನ್ನು ಮುದಗೊಳಿಸುತ್ತವೆ ಮತ್ತು ಪ್ರೇರಣೆ ನೀಡುತ್ತವೆ. ಈ ಎಲ್ಲ ಕಾರಣಗಳಿಂದಾಗಿ ‘ನಿರಂತರ ಪತ್ರಿಕೆ’ ಯಶಸ್ವಿಯಾಗಿ ಇಪ್ಪತ್ತೊಂದನೆ ವಸಂತವನ್ನು ಕಾಣಲು ಸಜ್ಜಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ನಿವೃತ್ತನಾಗುವ ಸಮಯ ನನಗೆ ಬಂದಿದೆ. ಯೋಜನೆಯಿಂದ ನಿವೃತ್ತನಾಗುತ್ತಿರುವಂತೆಯೇ ‘ನಿರಂತರ ಪತ್ರಿಕೆ’ಯ ಸಂಪಾದಕೀಯ ಮಂಡಳಿಯಿoದಲೂ ನಾನು ಹೊರಬರಬೇಕಾಗಿದೆ. ಪೂಜ್ಯರ ಆಶಯದಂತೆ, ಹೇಮಾವತಿ ಅಮ್ಮನವರ ಕಲ್ಪನೆಯಂತೆ ನಡೆದು ಬಂದಿರುವ ಈ ಯೋಜನೆಯಲ್ಲಿ ನನಗೆ ಸೇವೆ ಸಲ್ಲಿಸಲು ಯೋಜನೆಯ ಕಾರ್ಯಕರ್ತ ಮಿತ್ರರು, ಒಕ್ಕೂಟಗಳ ಪದಾಧಿಕಾರಿಗಳು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಮತ್ತು ಸದಸ್ಯರುಗಳು ಬಹಳಷ್ಟು ಸಹಕಾರವನ್ನು ನೀಡಿರುತ್ತಾರೆ. ಯೋಜನೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಸಾಧ್ಯವಾಗಿದ್ದಿದ್ದರೆ ಅದಕ್ಕೆ ನಮ್ಮ ಕಾರ್ಯಕರ್ತರುಗಳ ಪ್ರಾಮಾಣಿಕ ಪ್ರಯತ್ನ ಮತ್ತು ಛಲ ಬಿಡದ ಅನುಪಾಲನೆಯೇ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಕಳೆದ ಎರಡು ದಶಕಗಳಲ್ಲಿ ಯೋಜನೆಯ ಸ್ವರೂಪ ಬದಲಾಗಿರುವಂತೆ ಯೋಜನೆಯು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರೂ ಪ್ರತಿನಿತ್ಯ ಬೆಳೆಯುತ್ತಾ ಸಾಗಿದೆ. ಯೋಜನೆಯ ಈ ಬೆಳವಣಿಗೆಗೆ ‘ನಿರಂತರ ಪತ್ರಿಕೆ’ಯೂ ತನ್ನದೇ ಆದಂತಹ ಕಾಣಿಕೆಯನ್ನು ನೀಡಿದೆ. ಯೋಜನೆಯ ಎಲ್ಲ ಕಾರ್ಯಕ್ರಮಗಳ ಕುರಿತಾಗಿ ‘ನಿರಂತರ ಪತ್ರಿಕೆ’ಯಲ್ಲಿ ವಿಸ್ತೃತವಾಗಿ ಚರ್ಚೆಯಾಗುತ್ತಿದೆ ಮತ್ತು ಇದನ್ನು ಓದುವ ಪಾಲುದಾರ ಬಂಧುಗಳು ಯೋಜನೆಯನ್ನು ಮತ್ತು ಯೋಜನೆಯ ಕಾರ್ಯಕ್ರಮಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಪ್ರಸ್ತುತ ಯೋಜನೆಯು ಸುಸ್ಥಿರವಾಗಿದ್ದು, ಸದೃಢವಾಗಿದ್ದು ನಿಮ್ಮೆಲ್ಲರ ಭಾಗವಹಿಸುವಿಕೆಯಿಂದ ಜನಪ್ರಿಯವೂ ಆಗಿದೆ.
ಒಂದು ಪ್ರಯೋಗವಾಗಿ ಪ್ರಾರಂಭಗೊAಡ ‘ನಿರಂತರ ಪ್ರಗತಿ’ ಪತ್ರಿಕೆ ಈ ಅವಧಿಯಲ್ಲಿ ಬೃಹತ್ ಆಗಿ ಬೆಳೆಯಲು ಅನೇಕ ಮಂದಿ ಸಹಕಾರ ನೀಡಿದ್ದಾರೆ. ಸಂಸ್ಥೆಯ ಹೆಮ್ಮೆಯ ಅಧ್ಯಕ್ಷರಾದ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಪತ್ರಿಕೆಯ ಪ್ರತಿ ತಿಂಗಳ ಕರಡನ್ನು ಗಮನವಿಟ್ಟು ಓದಿ, ತಿದ್ದಿ, ತೀಡಿ ಅದರ ಹೂರಣವನ್ನು ಆಕರ್ಷಕವಾಗಿ ಮಾಡುವಲ್ಲಿ ಶ್ರಮವಹಿಸುತ್ತಾರೆ. ಹೇಮಾವತಿ ಅಮ್ಮನವರೂ ಪತ್ರಿಕೆಯನ್ನು ಸೂಕ್ಷö್ಮವಾಗಿ ಗಮನಿಸುವುದಲ್ಲದೆ ತನ್ನ ಮೌಲ್ಯಯುತ ಲೇಖನಗಳಿಂದ ಪತ್ರಿಕೆಯ ಆಕರ್ಷಣೆಯನ್ನು ಹೆಚ್ಚಿಸಿರುತ್ತಾರೆ. ಈ ಪತ್ರಿಕೆಯನ್ನು ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಅಚ್ಚುಕಟ್ಟಾಗಿ ಮುದ್ರಿಸಿ, ಒಪ್ಪ ಹೊರಣಗೊಳಿಸಿ ಪ್ರಕಟಿಸುವ ಮಂಜುಶ್ರೀ ಪ್ರಿಂಟರ್ಸ್ರವರ ಶ್ರಮವನ್ನು ಇಲ್ಲಿ ಸ್ಮರಿಸಿಕೊಳ್ಳಬೇಕಾಗಿದೆ. ಪತ್ರಿಕೆಯ ಸಂಪಾದಕೀಯ ಮಂಡಳಿ ಸಣ್ಣದಾಗಿದ್ದರೂ ಅವರ ಕಾರ್ಯವೈಖರಿ ಬಹಳ ದೊಡ್ಡದಾಗಿದೆ. ಪತ್ರಿಕೆಯ ಸಂಪಾದಕರು ಮತ್ತು ವರದಿಗಾರರು ಸ್ವಯಂ ಕ್ಷೇತ್ರ ಅಧ್ಯಯನ ಮಾಡಿ ಉತ್ತಮ ಮಾಹಿತಿಗಳನ್ನು ಸಂಗ್ರಹಿಸಿ ಲೇಖನಗಳನ್ನು ಬರೆಯುವುದಲ್ಲದೆ ಬಂದ0ತಹ ಲೇಖನಗಳನ್ನು ತಿದ್ದಿ ತೀಡಿ ಸಮರ್ಪಕಗೊಳಿಸಿ ಪತ್ರಿಕೆಯಲ್ಲಿ ಅಳವಡಿಸುವಲ್ಲಿ ಬಹಳಷ್ಟು ಶ್ರಮ ಪಡುತ್ತಾರೆ. ಮಾಹಿತಿಯುಕ್ತ ಮುಖಪುಟ ಲೇಖನ, ಅಂಕಣಗಳು, ಯಶೋಗಾಥೆಗಳು, ವಿಶೇಷ ಲೇಖನಗಳು ಈ ಪತ್ರಿಕೆಯನ್ನು ಆಕರ್ಷಕವನ್ನಾಗಿ ಮಾಡಿವೆ.
ಇನ್ನು ಓದುಗರ ಬಗ್ಗೆಯಂತೂ ಹೇಳುವುದೇ ಬೇಡ. ಪ್ರತಿವರ್ಷ ಮುಂಗಡವಾಗಿ ಹಣವನ್ನು ಪಾವತಿಸಿ ಪತ್ರಿಕೆಯ ಚಂದಾದಾರರಾಗುವುದಲ್ಲದೇ ಅದನ್ನು ಓದಿ, ಅದರ ಬಗ್ಗೆ ವಿಮರ್ಶೆ ಬರೆಯುವಂತಹ ಸಹೃದಯಿ ಓದುಗರಿಂದ ಪತ್ರಿಕೆಯು ಶ್ರೀಮಂತವಾಗಿದೆ. ಅನೇಕ ಓದುಗರು ಪತ್ರಿಕೆಯ ವಿವಿಧ ಅಂಕಣಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಮುಖಾಂತರ ಪತ್ರಿಕೆಯ ಮೌಲ್ಯವನ್ನು, ಘನತೆಯನ್ನು ಹೆಚ್ಚಿಸಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿವೃತ್ತಿ ಹೊಂದುತ್ತಿರುವ ಈ ಸಂದರ್ಭದಲ್ಲಿ ಪತ್ರಿಕೆಯನ್ನು ಪ್ರಾರಂಭದಿ0ದ ಇಷ್ಟು ವರ್ಷಗಳ ಕಾಲ ನಡೆಸಲು ಅನುಮತಿ ಕೊಟ್ಟ ಪೂಜ್ಯರಿಗೂ, ಅಮ್ಮನವರಿಗೂ, ಯೋಜನೆಯ ಟ್ರಸ್ಟಿಗಳಿಗೂ, ಆಡಳಿತ ಮಂಡಳಿಯ ಎಲ್ಲ ಸದಸ್ಯರುಗಳಿಗೂ, ಕಾರ್ಯಕರ್ತ ಮಿತ್ರರಿಗೂ, ವಿತರಿಸುವ ವಿತರಕರಿಗೂ, ನನ್ನ ಸಲಹೆ ಮಾರ್ಗದರ್ಶನವನ್ನು ಧನಾತ್ಮಕವಾಗಿ ಸ್ವೀಕರಿಸಿ ನನ್ನ ಜೊತೆ ದುಡಿದ ಪತ್ರಿಕೆಯ ಈ ಹಿಂದಿನ ಮತ್ತು ಇಂದಿನ ಸಂಪಾದಕರಿಗೂ, ಅತ್ಯಂತ ಪ್ರಿಯ ಓದುಗರಿಗೂ ನಾನು ಮನತುಂಬಿದ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates