ನೀರಿನೊಂದಿಗಿನ ಸಾಹಸ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು

ಪ್ರತಿ ವರ್ಷ ಮಳೆಗಾಲದಲ್ಲಿ ರಾಜ್ಯದ ಯಾವುದಾದರೂ ಒಂದು ಭಾಗದಲ್ಲಿ ಜಲಪ್ರಳಯವಾಗುವುದು ಸಾಮಾನ್ಯವಾಗಿಬಿಟ್ಟಿದೆ. ಮಳೆಯ ರಭಸಕ್ಕೆ ನದಿ, ತೊರೆಗಳು ಉಕ್ಕಿ ಹರಿದು ಕೆಲವರ ಆಸ್ತಿ, ಕೃಷಿ, ಪ್ರಾಣ ಹಾನಿಗೂ ಕಾರಣವಾಗುವುದಿದೆ. ಆದರೆ ಎಷ್ಟೋ ಬಾರಿ ನೆರೆಯಿಂದಾಗುವ, ಆಗಬಹುದಾದ ಪರಿಣಾಮಗಳ ಬಗ್ಗೆ ಗೊತ್ತಿದ್ದರೂ ಮೋಜು, ಮಸ್ತಿ, ಶೋಕಿ, ಸಾಹಸದ ಹೆಸರಿನಲ್ಲಿ ಕೆಲವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವುದು ಬೇಸರದ ಸಂಗತಿ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿ ಸೇತುವೆಗಳು ಮುಳುಗಡೆಯಾಗಿದ್ದರೂ ಅದರ ಮೇಲೆ ದ್ವಿಚಕ್ರ ವಾಹನ ಚಲಾಯಿಸುವ ಸಾಹಸ ಮಾಡಿ ವಾಹನ ಸಹಿತ ನೀರುಪಾಲಾದ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಎಷ್ಟೋ ಸಂದರ್ಭಗಳಲ್ಲಿ ಜಲ ಸಂಕಟದಲ್ಲಿ ಸಿಲುಕಿಕೊಂಡ ಬೈಕ್ ಸವಾರನನ್ನು ಪ್ರಾಣಾಪಾಯದಿಂದ ಪಾರು ಮಾಡಲು ಹೋಗಿ ತಾವೂ ನೀರಿನೊಂದಿಗೆ ಕೊಚ್ಚಿಕೊಂಡು ಹೋದ ಉದಾಹರಣೆಗಳು ಇವೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ತಮ್ಮ ಊರಿನ ಯಾವ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತವೆ? ಹೆಚ್ಚು ಮಳೆ ಬಂದರೆ ಯಾವ ಸೇತುವೆಗಳು, ರಸ್ತೆಗಳು ಮುಳುಗಡೆಯಾಗುತ್ತವೆ. ಡ್ಯಾಂ ತುಂಬಿದರೆ ಎಷ್ಟು ಎಕರೆ ಪ್ರದೇಶ ಜಲಾವೃತವಾಗುತ್ತದೆ ಎಂಬುದು ಗೊತ್ತಿರುತ್ತದೆ. ಆದರೆ ತಾವು ನಿತ್ಯ ಓಡಾಡುವ ಸೇತುವೆ, ರಸ್ತೆಗಳು ಮಳೆ ನೀರಿನಿಂದ ಮುಳುಗಿದರೂ ಅದರ ಮೇಲೆಯೇ ದ್ವಿಚಕ್ರ ವಾಹನದಲ್ಲಿ ಸಂಚರಿಸಬಲ್ಲೆ ಎಂಬ ವಿಶೇಷ ಧೈರ್ಯ ಅವರಲ್ಲಿರುತ್ತದೆ. ಎಷ್ಟೋ ಬಾರಿ ಈ ಹುಂಬ ಧೈರ್ಯ ಅವರ ಪ್ರಾಣಕ್ಕೆ ಮುಳುವಾದದ್ದು ಇದೆ.
ಮಳೆಗಾಲವೆಂಬುದು ಮಕ್ಕಳಾಟಿಕೆಯಲ್ಲ. ಪ್ರತಿಯೊಬ್ಬರು ತಮ್ಮ ಬಗ್ಗೆ, ಮಕ್ಕಳು, ಹಿರಿಯರು, ಸಾಕುಪ್ರಾಣಿಗಳ ಬಗ್ಗೆ ಮುಂಜಾಗರೂಕತೆಗಳನ್ನು ಕೈಗೊಳ್ಳಲೇಬೇಕು. ‘ವಾಹನ ಚಾಲನೆ ಮತ್ತು ಈಜು ಇವರೆಡನ್ನೂ ಕಲಿತೆನೆಂದು ಬೀಗಬಾರದು’ ಎಂಬ ಮಾತಿದೆ. ನಮಗೆ ಈಜಾಡಲು ಗೊತ್ತಿರಬಹುದು. ಆದರೆ ಎಷ್ಟೋ ಬಾರಿ ಮಳೆ ನೀರಿನ ರಭಸ ನಮಗೆ ಈಜಾಡಲು ಅವಕಾಶವನ್ನೆ ನೀಡದೆ ನಮ್ಮನ್ನು ನೀರಿನೊಂದಿಗೆ ಕೊಚ್ಚಿಕೊಂಡು ಹೋಗಬಹುದು. ಈಜು ಕಲಿತೆನೆಂಬ ಅಹಂ ಎಂದಿಗೂ ನಮ್ಮಲ್ಲಿರಬಾರದು. ನಾವು ಯಾವಾಗ, ಎಲ್ಲಿ ಈಜಾಡುತ್ತೇವೆ ಎಂಬುದು ಮುಖ್ಯ. ಕೆರೆ, ನದಿ, ಸಮುದ್ರ ಮೂರು ವಿಧದಲ್ಲೂ ವ್ಯತ್ಯಾಸಗಳಿವೆ. ಕೆರೆ ಸ್ತಬ್ಧವಾದ ನೀರು. ಅಂದರೆ ನಿಂತ ನೀರು. ಇಲ್ಲಿ ಈಜಲು ಪರಿಣತಿ ಇರಬೇಕು. ಈಜು ಗೊತ್ತಿಲ್ಲದೆ ಕೆಳಗಿಳಿದರೆ ಅದು ನಿಂತ ನೀರಾದುದರಿಂದ ಅನಾಹುತ ನಿಶ್ಚಿತ. ನದಿಯ ನೀರಿನಲ್ಲಿ ಸ್ನಾನ ಮಾಡಬೇಕಾದರೂ ಅನುಭವ ಬೇಕು. ಯಾಕೆಂದರೆ ಹರಿಯುವ ನೀರಿನಲ್ಲಿ ಸೆಳೆತವಿರುತ್ತದೆ. ಸಮುದ್ರದಲ್ಲಿ ಈಜಬೇಕಾದರೆ ಸಾಮಾನ್ಯವಾದ ಈಜುಗಾರಿಕೆ ಅಭ್ಯಾಸ ಸಾಲದು. ಆಗಾಗ ಅನೇಕ ಮಂದಿ ಬೆಸ್ತರು ಅಥವಾ ಮೀನುಗಾರರೇ ಸಮುದ್ರ ಪಾಲಾಗುವ ಘಟನೆಯನ್ನು ಕೇಳಿದಾಗ ಆಶ್ಚರ್ಯವಾಗುತ್ತದೆ. ಹೆಚ್ಚಿನ ಮೀನುಗಾರರು ಮತ್ತು ಅವರ ಕುಟುಂಬದವರು ಶ್ರೀಕ್ಷೇತ್ರ ಧರ್ಮಸ್ಥಳದ ಭಕ್ತರಾದುದರಿಂದ ಧರ್ಮಸ್ಥಳಕ್ಕೆ ಅವರು ಬಂದಾಗ, ಸಮುದ್ರದಲ್ಲಿ ದೋಣಿ ಮಗುಚಿ ಸಾವು ಉಂಟಾಯಿತಲ್ಲ! ಅದು ಹೇಗೆ ಸಾಧ್ಯ? ನೀವು ದಿನವೂ ಸಮುದ್ರದಲ್ಲೇ ಇರುವವರು. ಈಜು ಗೊತ್ತಿರುವವರು. ನಿಮಗೆ ಹೇಗೆ ಆಪತ್ತು ಬರುತ್ತದೆ? ಎಂದು ಕೇಳಿದೆ. ಅದಕ್ಕವರು ಹೇಳಿದರು, ‘ಸಾಮಾನ್ಯವಾಗಿ ಈಜು ಗೊತ್ತಿದ್ದರೂ ಸಮುದ್ರದಲ್ಲಿ ದೋಣಿ ಮಗುಚಿದಾಗ ಅದರೊಳಗೆ ಇರುವ ಬಲೆ, ಮೀನು ಹಿಡಿಯುವಂಥ ಸಲಕರಣೆಗಳು ದೋಣಿಯಲ್ಲಿದ್ದ ವ್ಯಕ್ತಿಗಳ ಕೈಗೋ, ಕಾಲಿಗೋ ಸುತ್ತು ಹಾಕಿಕೊಂಡು ಅವರು ಈಜಲಾರದೆ ಮುಳುಗುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇನ್ನು ಕೆಲವರು ಸಮುದ್ರದಲ್ಲಿ ಬಿದ್ದಾಗ ಭಯದಿಂದ ಮತ್ತು ಅಕಸ್ಮಾತ್ತಾಗಿ ಉಂಟಾದ ಪರಿಸ್ಥಿತಿಗಳಿಂದಾಗಿ ಹೆಚ್ಚು ಹೊತ್ತು ಈಜಲಾರದೆ ಅಥವಾ ಈಜಿಯೂ ದಡವನ್ನು ಸೇರಲಾಗದೆ ಕೈಸೋತು ಸಾವನ್ನಪ್ಪುತ್ತಾರೆ’.
ಇನ್ನೇನು ಮಳೆಗಾಲ ಆರಂಭವಾಗಲಿದೆ. ಈ ಬಾರಿಯ ಮಳೆಗಾಲದಲ್ಲಿ ರಾಜ್ಯದಲ್ಲಿ ಯಾವುದೇ ಅನಾಹುತ, ತೊಂದರೆಗಳು ಆಗದಿರಲಿ. ಈ ಬಾರಿಯ ಮಳೆಗಾಲದಲ್ಲಿ ಕೆಲವೊಂದು ಅಗತ್ಯ ಮುನ್ನೆಚ್ಚರಿಕೆ, ಮುಂಜಾಗರೂಕತೆಗಳನ್ನು ಕೈಗೊಳ್ಳಿರಿ.

* ನದಿಗಳು ಉಕ್ಕಿ ಹರಿಯುತ್ತಿರುವಾಗ ನದಿ ದಾಟುವ ಪ್ರಯತ್ನವನ್ನು ಮಾಡಬೇಡಿ.

* ಸೇತುವೆಗಳು ಮುಳುಗಡೆ ಹಂತದಲ್ಲಿರುವಾಗ ಅದರ ಮೇಲೆ ವಾಹನ ಚಲಾಯಿಸುವ ಸಾಹಸ ಬೇಡ.

* ಪ್ರವಾಹದೊಂದಿಗೆ ಸೆಲ್ಫಿ ತೆಗೆಯುವುದು, ವೀಡಿಯೋ ಮಾಡುವುದನ್ನು ಮಾಡದಿರಿ.
* ಜಲಾಶಯಗಳ ಕೆಳಗಿನ ಮಂದಿ, ತಗ್ಗು ಪ್ರದೇಶಗಳ ಮಂದಿ, ಪ್ರತಿ ವರ್ಷ ಜಲಪ್ರಳಯವನ್ನು ಎದುರಿಸುವವರು ಒಂದಷ್ಟು ಮುಂಜಾಗರೂಕತೆಗಳನ್ನು ಕೈಗೊಳ್ಳಿ.

* ಮಳೆ ನೀರು ತುಂಬಿರುವ ಕೊಳ, ಕೆರೆಗಳಲ್ಲಿ ಈಜಾಡದಿರಿ.

*ಮಳೆಗಾಲದಲ್ಲಿ ವಿಷ ಜಂತುಗಳ ಹಾವಳಿ ಹೆಚ್ಚು. ಓಡಾಡುವಾಗ ಸಾಧ್ಯವಾದಷ್ಟೂ ಎಚ್ಚರವಹಿಸಿ.
*ಶಾಲೆಗೆ ಹೋಗುವ ಮಕ್ಕಳ ಬಗ್ಗೆ ಜಾಗ್ರತೆ ವಹಿಸಿ.

* ಮನೆಯಲ್ಲಿ ಸಣ್ಣ ಮಕ್ಕಳಿರುವವರು ಮನೆಯ ಸುತ್ತಮುತ್ತ ದೊಡ್ಡ ಬಕೆಟ್‌ಗಳಲ್ಲಿ ನೀರು ತುಂಬಿಸಿಡಬೇಡಿ.

*ಸಿಡಿಲು ಬಂದಾಗ ಮನೆಯೊಳಗೆ ಮರದ ಪೀಠೋಪಕರಣಗಳಲ್ಲಿ ಕುಳಿತುಕೊಳ್ಳುವುದು ಉತ್ತಮ.

* ವಿದ್ಯುತ್ ಕಂಬಗಳ ಪಕ್ಕ, ಕಂಬಕ್ಕೆ ದನ – ಕರುಗಳನ್ನು ಕಟ್ಟಬೇಡಿ.

* ಸಾಕುಪ್ರಾಣಿಗಳ ಬಗ್ಗೆ ಜಾಗರೂಕರಾಗಿರಿ.
*ಪ್ರತಿ ವರ್ಷ ಜಲಪ್ರಳಯವನ್ನು ಎದುರಿಸುವ ಭಾಗದ ಜನತೆ ಮಳೆಗಾಲಕ್ಕಿಂತ ಮುಂಚಿತವಾಗಿ ಬೇರೆ ಕಡೆಗಳಿಗೆ ತೆರಳುವ ಪೂರ್ವ ಯೋಜನೆಗಳನ್ನು ಹಾಕಿಕೊಳ್ಳಿರಿ.

* ಮಳೆಗಾಲದಲ್ಲಿ ರಸ್ತೆ ಸಂಪರ್ಕ ಕಡಿದು ಹೋಗುವ, ಮರಗಳು ರಸ್ತೆಗೆ ಅಡ್ಡಲಾಗಿ ಬೀಳುವ, ಗುಡ್ಡ ಜರಿಯುವ ಮುಂತಾದ ಸಮಸ್ಯೆಗಳು ಆಗುತ್ತಿರುವುದರಿಂದ ದೂರದ ಊರುಗಳಿಗೆ, ಪರಿಚಿತವಲ್ಲದ ಸ್ಥಳಗಳಿಗೆ ಪ್ರಯಾಣ ಬೇಡ.

* ಉತ್ತರ ಕರ್ನಾಟಕದಲ್ಲಿ ಮನೆಗಳು ಕುಸಿದು ಬಿದ್ದು ಸಾವು – ನೋವುಗಳು ಸಂಭವಿಸುತ್ತಿರುತ್ತದೆ. ಆದ್ದರಿಂದ ತಮ್ಮ ಮನೆಗಳ ಗಟ್ಟಿತನದತ್ತ ಗಮನಹರಿಸಿ.

* ಗಾಳಿಗೆ ಮರಗಳು ಮನೆಗೆ ಬೀಳುವುದು ಸಾಮಾನ್ಯ. ಮನೆ ಹತ್ತಿರ ಅಂತಹ ಮರಗಳಿದ್ದರೆ ಮಳೆಗಾಲ ಆರಂಭಕ್ಕಿ0ತ ಮೊದಲು ಅದರ ರೆಂಬೆಗಳನ್ನು ಕತ್ತರಿಸಿ.

* ಮಳೆ ನೀರಿಗೆ ಮನೆಯಂಗಳ ಜಾರುತ್ತಿರುತ್ತದೆ. ಆದ್ದರಿಂದ ನಡೆದಾಡುವಾಗಲೂ ಜಾಗರೂಕತೆ ವಹಿಸಬೇಕು.
*ಸೇವಿಸುವ ಆಹಾರದ ಬಗ್ಗೆಯೂ ಗಮನಹರಿಸಿ.

* ನಿಮ್ಮ ಆಸ್ತಿ ದಾಖಲೆ, ಶಾಲೆಯ ಅಂಕಪಟ್ಟಿ ಮುಂತಾದ ಅಗತ್ಯ ದಾಖಲೆಗಳನ್ನು ಭದ್ರವಾಗಿರಿಸಿ.

* ಮಳೆಗಾಲದಲ್ಲಿ ಕಳ್ಳರು ಕೈಚಳಕ ತೋರಿಸುವುದು ಅಧಿಕ. ಸುರಕ್ಷತೆಗಾಗಿ ಒಡವೆ, ಹಣವನ್ನು ಬ್ಯಾಂಕ್ ಲಾಕರ್‌ನಲ್ಲಿಡಿ.

* ಮನೆ, ಕೊಟ್ಟಿಗೆ ಮುಂತಾದ ದುರಸ್ತಿ ಕೆಲಸಗಳನ್ನು ಮಳೆಗಾಲ ಆರಂಭಕ್ಕೆ ಮೊದಲೇ ಮಾಡಿ ಮುಗಿಸಿ.

* ಸಮಸ್ಯೆಗಳಾದರೆ ತಕ್ಷಣ ಸಂಪರ್ಕಿಸಲು ನೆರವು ಕೇಂದ್ರದ ದೂರವಾಣಿ ಸಂಖ್ಯೆ ನಿಮ್ಮಲ್ಲಿರಲಿ.
ಈ ಬಾರಿಯ ಮಳೆಗಾಲ ನಾಡಿನ ರೈತರ ಮೊಗದಲ್ಲಿ ಮಂದಹಾಸವನ್ನು ಮೂಡಿಸಲಿ. ಯಾವುದೇ ಅನಾಹುತಗಳು, ಅಹಿತಕರ ಘಟನೆಗಳು ಆಗದಿರಲಿ ಎಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *