ಪ್ರಗತಿ ರಕ್ಷಾ ಕವಚ – ಸಂಘದ ಜವಾಬ್ದಾರಿಗೆ ಸೂಕ್ತ ಭದ್ರತೆ

ಡಾ| ಎಲ್.ಎಚ್ ಮಂಜುನಾಥ್

ಸ್ವಸಹಾಯ ಸಂಘ ಚಳುವಳಿಯಿಂದಾಗಿ ಅದರ ಸದಸ್ಯರು ಹೊಸ ಕನಸುಗಳನ್ನು ಕಾಣುವುದು ಸಾಧ್ಯವಾಗಿದೆ. ಬೋರ್‌ವೆಲ್, ಟ್ರಾö್ಯಕ್ಟರ್ ಖರೀದಿ, ಹೈಟೆಕ್ ಕೃಷಿ, ಜಾನುವಾರು ಖರೀದಿ, ಅಂಗಡಿ, ವ್ಯಾಪಾರ ಮುಂತಾದ ಕಸುಬುಗಳನ್ನು ಸಂಘವು ನೀಡುವ ಪ್ರಗತಿನಿಧಿಯಿಂದ ಧೈರ್ಯವಾಗಿ ಕೈಗೊಳ್ಳಲು ಸಾಧ್ಯವಾಗಿದೆ. ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಪ್ರಗತಿನಿಧಿ ಪಡೆಯುವುದು ಸಾಮಾನ್ಯವಾಗಿದೆ. ಅಕಸ್ಮಾತ್ ಪ್ರಗತಿನಿಧಿ ಪಡೆದವರು ಮರಣ ಹೊಂದಿದರೆ ಅವರು ಪಡೆದುಕೊಂಡ ಪ್ರಗತಿನಿಧಿಯನ್ನು ಸಂಘವು ವಾಪಾಸು ಪಡೆದುಕೊಳ್ಳಲು ಮಾಡಲಾಗಿರುವ ಉಪಾಯವೇ ‘ಪ್ರಗತಿ ರಕ್ಷಾ ಕವಚ’. ವರ್ಷದ ಪ್ರಾರಂಭದಲ್ಲಿ ಸಣ್ಣ ಮೊತ್ತದ ಪ್ರೀಮಿಯಂ ಅನ್ನು ವಿಮಾ ಕಂಪೆನಿಗೆ ಕಟ್ಟಿ ತಾವು ಪಡೆದುಕೊಂಡ ಪ್ರಗತಿನಿಧಿಗೆ ವಿಮೆ ಮಾಡಿಸಿಕೊಳ್ಳುವ ಈ ಕ್ರಮದಿಂದಾಗಿ ವರ್ಷದಲ್ಲಿ ಉಂಟಾಗುವ ಎಲ್ಲ ಅವಘಡಗಳಿಗೆ ರಕ್ಷಣೆಯಾಗುತ್ತದೆ. ‘ವಿನಿಯೋಗದಾರರು’ ಎಂಬ ಹೊಸ ಸೂತ್ರವನ್ನು ತಂದು ಕುಟುಂಬದಲ್ಲಿ ಪ್ರಗತಿನಿಧಿ ಪಡೆದುಕೊಳ್ಳುವವರಿಗೆ ಮತ್ತು ಅದನ್ನು ವಿನಿಯೋಗಿಸುವ ಇಬ್ಬರನ್ನೂ ವಿಮೆ ಮಾಡಿಸುವುದರಿಂದ ಸಂಘದ ಹೊರೆ ಬಹಳಷ್ಟು ತಗ್ಗಿದೆ ಎಂದು ಹೇಳಬಹುದಾಗಿದೆ.
‘ಪ್ರಗತಿ ರಕ್ಷಾ ಕವಚ’ ಕಾರ್ಯಕ್ರಮದಲ್ಲಿ ಇದುವರೆಗೆ ಸದಸ್ಯರು ಪಡೆದುಕೊಂಡ ಪ್ರಗತಿನಿಧಿ ಚಾಲ್ತಿ ಮೊತ್ತದ ಮೇಲೆ ಪ್ರತಿ ವರ್ಷ ಆಗಸ್ಟ್ ತಿಂಗಳಿನಲ್ಲಿ ವಿಮಾ ಮೊತ್ತವನ್ನು ಪಾವತಿಸಬೇಕಾಗಿತ್ತು. ಇದೀಗ ಇದರಲ್ಲಿ ಬದಲಾವಣೆ ಮಾಡಿ ಪ್ರಗತಿನಿಧಿ ಅವಧಿಗೆ ಒಮ್ಮೆಲೇ ಪಾವತಿಸುವಂತಹ ಹೊಸ ವಿಧಾನವನ್ನು ಅಳವಡಿಸಲಾಗಿದೆ.
ಉದಾಹರಣೆಗೆ ಒಂದು ಲಕ್ಷ ರೂಪಾಯಿ ಮೊತ್ತವನ್ನು 3 ವರ್ಷಗಳ ಅವಧಿಗೆ ಪ್ರಗತಿನಿಧಿ ಪಡೆದುಕೊಳ್ಳುವುದಿದ್ದಲ್ಲಿ ಒಂದು ಲಕ್ಷ ರೂಪಾಯಿಗೆ ವಿಮಾ ಪ್ರೀಮಿಯಂ ಮೊತ್ತ ರೂ. 1,300 ಆಗುವುದಿದ್ದಲ್ಲಿ ( ಗಂಡ – ಹೆಂಡತಿ ಸೇರಿ) ವರ್ಷಕ್ಕೆ ರೂ.1,200ರಂತೆ ಮೂರು ವರ್ಷಕ್ಕೆ ರೂ.3,600 ಮೊತ್ತವನ್ನು ಒಮ್ಮೆಲೆ ಪಡೆದುಕೊಳ್ಳಲಾಗುವುದು. ಇದಕ್ಕೆ ಪೂರಕವಾಗಿ ವಿಮಾ ಪ್ರೀಮಿಯಂ ಮೊತ್ತವನ್ನೂ ಪ್ರಗತಿನಿಧಿಯೊಳಗೆ ಸೇರಿಸಿ ಕೊಡುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಉದಾಹರಣೆಗೆ ಒಂದು ಲಕ್ಷ ರೂಪಾಯಿ ಪ್ರಗತಿನಿಧಿಗೆ ಮೂರು ವರ್ಷ ಪಾವತಿಗೆ ನೀಡಬೇಕಾದ ವಿಮಾ ಪ್ರೀಮಿಯಂ ಮೊತ್ತ ರೂ.3,600 ಅನ್ನು ಸೇರಿಸಿ ಒಮ್ಮೆಲೆ ರೂ.1,02,600 ಪ್ರಗತಿನಿಧಿಯನ್ನು ಒದಗಿಸಲಾಗುವುದು. ಹೀಗೆ ಮಾಡುವುದರಿಂದ ಪದೇ ಪದೇ ಪ್ರತಿ ವರ್ಷ ವಿಮಾ ಪ್ರೀಮಿಯಂ ಮೊತ್ತವನ್ನು ಸಂಗ್ರಹಿಸುವ ಜವಾಬ್ದಾರಿ ಇರುವುದಿಲ್ಲ.
ಆದರೆ ಪ್ರತಿ ವಾರ ಪ್ರಗತಿನಿಧಿ ಕಟ್ಟುವುದರಿಂದ ಮೂರು ವರ್ಷದ ಪ್ರಗತಿನಿಧಿ ಪಡೆದುಕೊಂಡಾಗ ಪ್ರಥಮದಲ್ಲಿ ಪಡೆದುಕೊಂಡ ಚಾಲ್ತಿ ಪ್ರಗತಿನಿಧಿಗೂ, ಎರಡನೇ ವರ್ಷದ ಚಾಲ್ತಿ ಮೊತ್ತಕ್ಕೂ, ಮೂರನೇ ವರ್ಷದ ಚಾಲ್ತಿ ಮೊತ್ತಕ್ಕೂ ವ್ಯತ್ಯಾಸವಿರುತ್ತದೆ. ಪ್ರಗತಿನಿಧಿ ಪಡೆದುಕೊಂಡ ನಂತರ ಮರುಪಾವತಿಯನ್ನು ಸಮರ್ಪಕವಾಗಿ ಮಾಡಿದರೆ ಚಾಲ್ತಿ ಮೊತ್ತ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಾಗಿ ಪ್ರಗತಿನಿಧಿ ಪಡೆದುಕೊಂಡ ಮೊತ್ತಕ್ಕೇ ಯಾಕೆ ಇನ್‌ಶ್ಯೂರೆನ್ಸ್ ಮಾಡಿಸಿಕೊಳ್ಳಬೇಕು? ನಾವು ಪ್ರತಿ ವರ್ಷ ಇಟ್ಟಿರುವ ಚಾಲ್ತಿ ಮೊತ್ತದ ಮೇಲೆ ಇನ್‌ಶ್ಯೂರೆನ್ಸ್ ಮಾಡಿದರೆ ಸಾಲದೇ ಎಂಬ ಪ್ರಶ್ನೆ ಸದಸ್ಯರಿಗೆ ಸಹಜವಾಗಿ ಬರುತ್ತದೆ. ಉದಾಹರಣೆಗೆ ಒಂದು ಲಕ್ಷ ರೂಪಾಯಿ ಪ್ರಗತಿನಿಧಿಯನ್ನು ಪಡೆದುಕೊಂಡಲ್ಲಿ ಮೊದಲ ವರ್ಷವೇ ಸುಮಾರು ರೂ.25,000 ಪ್ರಗತಿನಿಧಿ ಮರುಪಾವತಿ ಆಗಿರುತ್ತದೆ. ಹಾಗಾಗಿ ಎರಡನೇ ವರ್ಷಕ್ಕೆ ಒಂದು ಲಕ್ಷಕ್ಕೆ ವಿಮೆ ಮಾಡಿಸುವ ಅಗತ್ಯವಿರುವುದಿಲ್ಲ. ರೂ.25,000ಕ್ಕೆ ಮಾಡಿಸಿದರೆ ಸಾಕಾಗುತ್ತದೆ. ಅದೇ ರೀತಿ ಮೂರನೇ ವರ್ಷಕ್ಕೆ ಕೇವಲ ರೂ.25000 ಉಳಿದಿರುವ ಸಾಧ್ಯತೆ ಇರುತ್ತದೆ. ಹಾಗಾದರೆ ಆಗ ಮೂರನೇ ವರ್ಷಕ್ಕೆ ರೂ.25,000 ಮೊತ್ತಕ್ಕೆ ವಿಮೆ ಮಾಡಿಸಿದರೆ ಸಾಕಾಗುತ್ತದೆ. ಈ ವಿಷಯವನ್ನೂ ಪರಿಗಣನೆಗೆ ತೆಗೆದುಕೊಂಡು ಯೋಜನೆಯು ನೀವು ಪಾವತಿಸಿರುವ ವಿಮಾ ಮೊತ್ತವನ್ನು ನಿಮ್ಮ ಸಂಘದ ಖಾತೆಯಲ್ಲಿಯೇ ಇರಿಸಿ ಪ್ರತಿ ವರ್ಷ ಅಗತ್ಯಬಿದ್ದಷ್ಟು ಮೊತ್ತವನ್ನು ಮಾತ್ರ ವಿಮಾ ಕಂಪೆನಿಗೆ ಪಾವತಿ ಮಾಡುತ್ತದೆ. ಹೀಗೆ ಮಾಡುವುದರಿಂದ ಉಳಿದ ಮೊತ್ತ ನಿಮ್ಮ ಖಾತೆಯಲ್ಲಿಯೇ ಉಳಿದು ಹೊಸ ಪ್ರಗತಿನಿಧಿ ಪಡೆಯುವಾಗ ಆ ಉಳಿದ ಮೊತ್ತವನ್ನು ವಿಮಾ ಮೊತ್ತಕ್ಕೆ ಹೊಂದಾಣಿಕೆ ಮಾಡಲಾಗುವುದು. ಹೀಗೆ ಮಾಡುವುದರಿಂದ ನಿಮಗೆ ಹೊರೆ ಕಡಿಮೆಯಾಗುವುದಲ್ಲದೆ ನೀವು ಕಟ್ಟಿದ ಹಣದಲ್ಲಿ ಯಾವುದೇ ವ್ಯತ್ಯಾಸ ಬರದಂತೆ ನೋಡಿಕೊಳ್ಳಲಾಗುವುದು.
ಮುಂದಿನ ದಿನಗಳಲ್ಲಿ ಪ್ರಗತಿ ರಕ್ಷಾ ಕವಚ್ ಅದನ್ನು ಪುನರ್ ನವೀಕರಣ ಮಾಡುವ ಯಾವುದೇ ಜವಾಬ್ದಾರಿ ಸಂಘಕ್ಕಾಗಲಿ, ಸದಸ್ಯರಿಗಾಗಲಿ ಇರುವುದಿಲ್ಲ. ಬದಲಾಗಿ ಒಮ್ಮೆಲೇ ಈ ಹಣವನ್ನು ಪಡೆದುಕೊಳ್ಳಲಾಗುವುದು. ಆದರೆ ಹೆಚ್ಚುವರಿ ಮೊತ್ತವನ್ನು ಸಂಘದಲ್ಲಿಯೇ ಇರಿಸಲಾಗುವುದು. ಪ್ರಗತಿನಿಧಿ ಮುಕ್ತಾಯವಾದ ಮೇಲೆ ಆ ಹೆಚ್ಚುವರಿ ಮೊತ್ತವನ್ನು ಸದಸ್ಯರಿಗೆ ವಾಪಾಸ್ ಕೊಡಲಾಗುವುದು. ಸಂಘದಲ್ಲಿ ಇಟ್ಟ ವಿಮಾ ಪ್ರೀಮಿಯಂ ಮೊತ್ತದಿಂದ ಸಂಘಕ್ಕೆ ಆದಾಯ ಜಾಸ್ತಿ ಆಗುವುದು.
ಈ ಹೊಸ ಮಾದರಿಯಿಂದ ಸಂಘದಲ್ಲಿ ಸಮರ್ಪಕವಾಗಿ ಪ್ರಗತಿ ರಕ್ಷಾ ಕವಚ್ ಕಾರ್ಯಕ್ರಮವು ಅನುಷ್ಠಾನವಾಗಲು ಸಾಧ್ಯವಾಗುತ್ತದೆ. ಇದೀಗ ಸದಸ್ಯರು ಮಾಡಬೇಕಾದ ವಿಷಯವೆಂದರೆ ಸದಸ್ಯರ ಹೆಸರಂತೂ ಯೋಜನೆಯಲ್ಲಿ ಸರಿಯಾಗಿ ಲಭ್ಯವಿದೆ. ಆದರೆ ವಿನಿಯೋಗದಾರರ ಹೆಸರು, ಲಿಂಗ, ಸಂಬAಧ, ವಯಸ್ಸು ಮತ್ತು ಅವರ ಆಧಾರ್ ಪ್ರತಿಯನ್ನು ಪ್ರತಿ ವರ್ಷ ತಪ್ಪದೆ ಆಗಸ್ಟ್ ತಿಂಗಳಲ್ಲಿ ನಿಮ್ಮ ಸಂಘಕ್ಕೆ ನೀಡಿದಲ್ಲಿ ವಿನಿಯೋಗದಾರರ ಹೆಸರನ್ನು ನಮೂದಿಸುವಲ್ಲಿ ಯಾವುದೇ ತಪಾವತು ಆಗದಂತೆ ನೋಡಿಕೊಳ್ಳಲು ನಮಗೆ ಸಾಧ್ಯವಾಗುತ್ತದೆ. ಈ ಬಗ್ಗೆ ನೀವು ಎಚ್ಚರ ವಹಿಸಬೇಕೆಂದು ವಿನಂತಿಸುತ್ತೇನೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *