ಬ್ರಿಟೀಷರ ಕಾಲದ ಕೆರೆಯ ಪುನಶ್ಚೇತನಕ್ಕೆ ದೊರೆಯಿತು ಯೋಜನೆಯ ನೆರವು

ಡಾ. ಚಂದ್ರಹಾಸ್ ಚಾರ್ಮಾಡಿ

‘ಕನ್ನಂಪಲ್ಲಿ’ ಕೆರೆಯ ಇತಿಹಾಸ ಕೆರೆಯ ಗಾತ್ರಕ್ಕಿಂತಲೂ ದೊಡ್ಡದು. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಈ ಕೆರೆಯ ಹಿಂದೆ ನಮ್ಮವರ ಶ್ರಮವಿದೆ, ತ್ಯಾಗವಿದೆ. ಸುಮಾರು 157 ವರ್ಷಗಳ ಹಿಂದೆ ನೀರಿನ ವ್ಯವಸ್ಥೆಗಾಗಿ ಕಟ್ಟಲ್ಪಟ್ಟ ‘ಕನ್ನಂಪಲ್ಲಿ’ ಕೆರೆ ಇದೇ ಊರಿನಲ್ಲಿ ಇನ್ನೊಂದು ಕೆರೆಯ ಹುಟ್ಟಿಗೂ ಕಾರಣವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕನ್ನಂಪಲ್ಲಿ ವಡ್ಡಗನಹಳ್ಳಿ ಗ್ರಾಮದಲ್ಲಿರುವ ಈ ಕೆರೆ ಭರ್ತಿಯಾಗಿ ಪ್ರತಿ ವರ್ಷ ಸಾಕಷ್ಟು ನೀರು ಪೋಲಾಗುತ್ತಿತ್ತು. ಪೋಲಾಗುವ ನೀರನ್ನು ಸಂಗ್ರಹಿಸಬೇಕೆoದು ಕನ್ನಂಪಲ್ಲಿ ಕೆರೆಗಿಂತ 300 ಮೀಟರ್ ಅಂತರದಲ್ಲಿ ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ಇನ್ನೊಂದು ಕೆರೆಯನ್ನು ನಿರ್ಮಿಸುತ್ತಾರೆ. ಹಿರಿಯರು ಇದಕ್ಕೆ ‘ವಡ್ಡಗನ ಹಳ್ಳಿ ಚಿಕ್ಕ ಕೆರೆ’ ಎಂದು ಹೆಸರನ್ನಿಡುತ್ತಾರೆ. ಮುಂದೆ ಈ ಕೆರೆ ಗ್ರಾಮದ ಜನರ ಪ್ರಮುಖ ಜಲಮೂಲವಾಗುತ್ತದೆ.
ಬ್ರಿಟಿಷರ ಕಾಲದಿಂದ ಪುನಶ್ಚೇತನಗೊಂಡಿರಲಿಲ್ಲ
ಎಲ್ಲಾ ಕೆರೆಗಳಂತೆ ಇದರಲ್ಲೂ ಹೂಳು ತುಂಬಿತ್ತು. ಊರಿನ ಹಿರಿಯರು, ಯುವಕರು, ಕೆರೆಯ ಹೂಳೆತ್ತುವಂತೆ ಬೇರೆ ಬೇರೆ ಕಡೆಗಳಲ್ಲಿ ಮಾಡಿದ ಪ್ರಯತ್ನಗಳಿಗೆ ಲೆಕ್ಕವಿಲ್ಲ.
ಕೆರೆ ಪುನಶ್ಚೇತನಕ್ಕೆ ಯೋಜನೆಯ ಮೊರೆ
ರಾಜ್ಯದ ಕೆರೆಗಳ ಹೂಳೆತ್ತುವ ಕೆಲಸವನ್ನು ಕಳೆದ ಐದಾರು ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಂದು ತಪಸ್ಸಿನಂತೆ ಮಾಡುತ್ತಿರುವ ವಿಷಯವನ್ನು ‘ನಿರಂತರ’ದಲ್ಲಿ ಓದಿ ತಿಳಿದುಕೊಂಡರು. ‘ನಮ್ಮೂರಿನ ಕೆರೆಗೂ ಪೂಜ್ಯರಿಂದ ಪ್ರಸಾದ ಸಿಗಬಹುದಾ!’ ಎಂದು ಪ್ರಯತ್ನಿಸಿ ನೋಡೋಣ ಅಂದುಕೊoಡು ಊರಿನ ಪ್ರಮುಖರೆಲ್ಲ ಸೇರಿ ಕೆರೆಯ ಪುನಶ್ಚೇತನಕ್ಕಾಗಿ ಗ್ರಾಮಾಭಿವೃದ್ಧಿ ಯೋಜನೆಗೆ ಅರ್ಜಿಯೊಂದನ್ನು ಕಳುಹಿಸಿಕೊಟ್ಟರು.
ಶ್ರೀ ಹೆಗ್ಗಡೆಯವರಿಂದ ಸ್ಪಂದನೆ
ಅರ್ಜಿ ಧರ್ಮಸ್ಥಳಕ್ಕೆ ತಲುಪಿದ ಕೆಲವೇ ದಿನಗಳಲ್ಲಿ ಕೆರೆಗೆ ಜೀವಕಳೆ ತುಂಬುವ ಕೆಲಸವನ್ನು ‘ಗ್ರಾಮಾಭಿವೃದ್ಧಿ ಯೋಜನೆ’ಯ ಮೂಲಕ ಮಾಡಿ ಮುಗಿಸುವುದಾಗಿ ಶ್ರೀ ಹೆಗ್ಗಡೆಯವರಿಂದ ಹಸಿರು ನಿಶಾನೆ ದೊರೆಯಿತು.
ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳಿಂದ ಮಾರ್ಗದರ್ಶನ
ಧರ್ಮಸ್ಥಳದಲ್ಲಿರುವ ಯೋಜನೆಯ ಕೇಂದ್ರ ಕಚೇರಿಯ ಸಮುದಾಯಾಭಿವೃದ್ಧಿ ವಿಭಾಗದ ಅಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲಾ ನಿರ್ದೇಶಕರು ಮತ್ತು ಕೆರೆ ವಿಭಾಗದ ಇಂಜಿನಿಯರ್‌ರವರ ಮಾರ್ಗದರ್ಶನದಂತೆ ಉತ್ತಮವಾದ ‘ಕೆರೆ ಅಭಿವೃದ್ಧಿ ಸಮಿತಿ’ ನಿರ್ಮಾಣವಾಯಿತು. ಯೋಜನೆಯ ಸಿಬ್ಬಂದಿಗಳ ಮತ್ತು ಕೆರೆ ಅಭಿವೃದ್ಧಿ ಸಮಿತಿಯವರ ಅವಿರತ ಪ್ರಯತ್ನದ ಫಲವಾಗಿ ಜುಲೈ 11, 2021 ರಂದು ಕೆರೆ ಪುನಶ್ಚೇತನದ ಕನಸಿಗೆ ಗುದ್ದಲಿ ಪೂಜೆಯೂ ನಡೆಯಿತು.
ಒಂದಾದರು ಊರ ಜನ
ಹೂಳೆತ್ತುವ ಸುದ್ದಿ ಊರಿಡೀ ಹಬ್ಬುತ್ತಿದ್ದಂತೆ ಕೆರೆಯ ಕೆಲಸಗಳಲ್ಲಿ ತಮ್ಮ ಅಳಿಲ ಸೇವೆಗಾಗಿ ಗ್ರಾಮದ ಜನರು ಮುಂದೆ ಬಂದರು. ರಾಜಕೀಯ ನಾಯಕರು, ಮಠಾಧಿಪತಿಗಳು, ಊರಿನ ಗಣ್ಯರು, ನಗರ ಸಭೆಯ ಅಧ್ಯಕ್ಷರು – ಉಪಾಧ್ಯಕರು, ಕೆರೆ ಸಮಿತಿಯ ಸದಸ್ಯರು, ಶಾಲಾ ಮಕ್ಕಳು ಹೀಗೆ ಕೆರೆ ಕೆಲಸದಲ್ಲಿ ಊರ ಮಂದಿಯೆಲ್ಲ ಒಂದಾದರು.
ಮಾದರಿ ಕೆರೆಯ ಭಾಗ್ಯ
ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ಯೋಜನೆಯ ಮೂಲಕ 10ಎಕರೆ ವಿಸ್ತೀರ್ಣದಲ್ಲಿ ಎರಡು ತಿಂಗಳುಗಳ ಕಾಲ ಕೆರೆಯಲ್ಲಿನ ಪೂರ್ಣ ಪ್ರಮಾಣದ ಅಂದರೆ ಸುಮಾರು 2,500 ಟಿಪ್ಪರ್ ಲೋಡ್ ಹೂಳನ್ನು ತೆಗೆಯಲಾಗಿದೆ. ಹೂಳನ್ನು ಅಕ್ಕಪಕ್ಕದ ರೈತರು ತಮ್ಮ ಜಮೀನುಗಳಿಗೆ ಬಳಕೆ ಮಾಡಿಕೊಂಡಿರುತ್ತಾರೆ. ಕೃಷಿಗೆ ಉಪಯೋಗವಾಗದ ಮಣ್ಣನ್ನು ಬಳಸಿ ವಾಯುವಿಹಾರಕ್ಕಾಗಿ ವಾಕಿಂಗ್ ಟ್ರಾö್ಯಕ್ ನಿರ್ಮಿಸಲಾಗಿದೆ. ಕೆರೆಯ ಏರಿಯು ರಸ್ತೆಯ ಬದಿಯಲ್ಲೇ ಇರುವ ಕಾರಣ ಕೆರೆಯ ಏರಿಯ ಭದ್ರತೆಗಾಗಿ ಕಲ್ಲುಗಳನ್ನು ಕಟ್ಟಲಾಗಿದೆ. ಕೆರೆ ಸುತ್ತ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಕೆರೆಯ ಭದ್ರತೆಗಾಗಿ ಬೇಲಿ ವ್ಯವಸ್ಥೆಯನ್ನು ಮಾಡುವ ಮೂಲಕ ಈ ಕೆರೆ ‘ಮಾದರಿ ಕೆರೆ’ಯಾಗಿ ಜನರ ಮನಗೆದ್ದಿದೆ.
150 ಬೋರ್‌ಗಳಲ್ಲಿ ನೀರು
ಈ ಊರಿನಲ್ಲಿ ಇತ್ತೀಚಿನ ಎರಡು ವರ್ಷಗಳಿಂದ ಬೋರ್ ಕೊರೆದರೂ ನೀರು ದೊರೆಯುವುದು ಕಷ್ಟಸಾಧ್ಯವಾಗುತ್ತಿದೆ. ಇದೀಗ 150 ವರ್ಷಗಳ ಹಿಂದಿನ ಕಾಲದ ಕೆರೆಯಲ್ಲಿ ನೀರು ಚಿಮ್ಮುತ್ತಿದ್ದಂತೆ ಬತ್ತಿದ ಊರಿನ ಸುಮಾರು 150 ಕೊಳವೆ ಬಾವಿಗಳಲ್ಲಿ ಜಲಧಾರೆಯ ದರ್ಶನವಾಗಿದೆ.
ಚಿಂತಾಮಣಿಯ ರಸ್ತೆಗೆ ತಾಗಿಕೊಂಡಿರುವ ಈ ಕೆರೆ ತುಂಬಿ, ಇದೀಗ ಆಕರ್ಷಣೀಯವಾಗಿ ಜನರ ಮನಗೆಲ್ಲುತ್ತಿದೆ. ಯೋಜನೆಯ ಕಲ್ಪನೆಯಂತೆ ಮಾದರಿ ಕೆರೆಯಾಗಿ ಕಂಗೊಳಿಸುತ್ತಿದೆ.

ಕೆರೆಯಲ್ಲಿ ನೀರು ತುಂಬುತ್ತಿದ್ದoತೆ ಬೆಳೆದರು ಭತ್ತ
3.50 ಅಡಿಯಷ್ಟು ಹೂಳು ತೆಗೆಯಲಾಗಿದ್ದು ಇದೀಗ ಕೆರೆ ನೀರಿನಿಂದ ಭರ್ತಿಯಾಗಿದೆ. ವಡ್ಡಗನಹಳ್ಳಿ ಕೆರೆ ಭರ್ತಿಯಾಗಿ ಅಲ್ಲಿಂದಲೂ ಈ ಕೆರೆಗೆ ನೀರು ಬರುತ್ತಿದೆ. ಊರಿನ 150 ಕುಟುಂಬಗಳು ಈ ಕೆರೆಯ ಪ್ರಯೋಜವನ್ನು ಪಡೆಯುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಈ ಗ್ರಾಮದಲ್ಲಿ ಕೆರೆಯ ನೀರನ್ನು ನಂಬಿ ಸಾಕಷ್ಟು ಮಂದಿ ಭತ್ತ ಬೆಳೆಯುತ್ತಿದ್ದರು. ಕೆರೆ ಬರಡಾಗುತ್ತಿದ್ದಂತೆ ಭತ್ತ ಬೆಳೆಗಾರರು ಕಣ್ಮರೆಯಾದರು. ಇದೀಗ ಕೆರೆ ತುಂಬುತ್ತಿದ್ದoತೆ ಗ್ರಾಮದ ಸುಮಾರು 80 ಎಕರೆಯಲ್ಲಿ ಭತ್ತದ ಪೈರು ನಳನಳಿಸುತ್ತಿದೆ. ಮಾಳಪಲ್ಲಿ ಮತ್ತು ಕನ್ನಂಪಲ್ಲಿ ಗ್ರಾಮದ ಜಾನುವಾರುಗಳಿಗೆ ಕುಡಿಯುವ ನೀರು ಲಭ್ಯವಾಗುತ್ತಿದೆ. ನಗರದ ಮಂದಿಯ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ. ಸುಮಾರು 150 ಕುಟುಂಬಗಳ ಕೃಷಿ ಭೂಮಿ ಹಸಿರಾಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *