ಮಕ್ಕಳಿಗೆ ಕೆಮ್ಮು – ಜ್ವರ ಬಂದರೆ ಏನು ಮಾಡಬೇಕು?

ಕೆಮ್ಮು ಮತ್ತು ಜ್ವರವೇ ಒಂದು ರೋಗವಲ್ಲ. ಅವೆರಡೂ ಒಳಗಿರುವ ಬೇರೊಂದು ರೋಗದ ಎರಡು ಮುಖ್ಯ ಲಕ್ಷಣಗಳಷ್ಟೇ. ಹಾಗಾಗಿ ಕೆಮ್ಮು ಮತ್ತು ಜ್ವರಕ್ಕೆ ಔಷಧ ಮಾಡುವುದಕ್ಕಿಂತ ಮುಖ್ಯವಾಗಿ ಅವುಗಳು ಬಂದಿರುವ ಕಾರಣವನ್ನು ಕಂಡುಹಿಡಿದು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು.
ನಮ್ಮ ಶರೀರಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಅದ್ಭುತ ತಾಕತ್ತಿದೆ. ಕೆಮ್ಮು ಎಂಬುವುದು ಒಂದು ಪೀಡೆಯಲ್ಲ. ಅದು ದೇಹವನ್ನು ರಕ್ಷಿಸಿಕೊಳ್ಳುವ ತಾಕತ್ತಿನ ಒಂದು ಅಂಶ. ನಮ್ಮ ಉಸಿರಾಟದ ನಾಳಗಳಲ್ಲಿ ಬೇಡವಾದ ಕೀಟಾಣುಗಳ ದಾಳಿಯಿಂದ ಅವುಗಳನ್ನು ಹೊರಹಾಕುವ ಒಂದು ತಂತ್ರವೇ ಈ ಕೆಮ್ಮು. ಹಾಗಾಗಿ ಕೆಮ್ಮನ್ನು ಮುಚ್ಚಿ ಹಾಕುವ ಸಿರಪುಗಳನ್ನು ಚಿಕ್ಕ ಮಕ್ಕಳಿಗೆ ಕೊಡಬಾರದು ಎನ್ನುವುದು ತಜ್ಞರ ಅಭಿಪ್ರಾಯ. ಆದರೆ ಕೆಮ್ಮನ್ನು ಅನುಭವಿಸಿದವರಿಗೆ ಗೊತ್ತು ಅದರ ಸಂಕಟ. ಹಾಗಾಗಿ ಕೆಮ್ಮಿನ ಕಾರಣಕ್ಕೆ ಪರಿಹಾರ ಮಾಡಬೇಕೇ ಹೊರತು ಕೆಮ್ಮನ್ನು ಕೃತಕವಾಗಿ ನಿಲ್ಲಿಸುವುದಲ್ಲ!
ಜ್ವರವೂ ಕೂಡಾ ದೇಹದ ರಕ್ಷಣೆಗಾಗಿ ಇರುವ ಒಂದು ತಂತ್ರ. ಜ್ವರ ಹೆಚ್ಚಾದಾಗ ಕೀಟಾಣುಗಳು ಹೆಚ್ಚು ಬೆಳೆಯಲಾಗದು. ಹಾಗಾಗಿ ದೇಹಕ್ಕೆ ಸೋಂಕುoಟಾದಾಗ ಜ್ವರ ಬರುವುದು. ಹಾಗಾಗಿ ಸಣ್ಣ ಪುಟ್ಟ ಜ್ವರಕ್ಕೆಲ್ಲಾ ಜ್ವರದ ಮದ್ದನ್ನು ಕೊಡುವುದು ಸಲ್ಲದು. ಹಾಗೆಯೇ ಸೋಂಕಲ್ಲದೆ ಅಲರ್ಜಿ ಮೊದಲಾದವುಗಳೂ ಕೆಮ್ಮನ್ನು ಉಂಟುಮಾಡಬಲ್ಲದು.
ಸೋಂಕಿನ ಕೆಮ್ಮು ಅಥವಾ ಅಲರ್ಜಿಯ ಕೆಮ್ಮು ಎಂಬುವುದನ್ನು ಕಂಡುಹಿಡಿಯುವುದು ಹೇಗೆ?
ಕೆಮ್ಮು ಇದ್ದಾಗ ಅದು ಸೋಂಕಿನ ಕೆಮ್ಮೇ ಅಥವಾ ಅಲರ್ಜಿಯ ಕೆಮ್ಮೇ ಎಂಬುದನ್ನು ಕಂಡುಹಿಡಿಯುವುದು ಮುಖ್ಯ. ಏಕೆಂದರೆ ಅವೆರಡಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಾಗೂ ಔಷಧಗಳೂ ಬೇರೆ ಬೇರೆ. ತೀವ್ರತರದ ಜ್ವರದ ಒಟ್ಟಿಗೆ ಬರುವ ಕೆಮ್ಮು ಸೋಂಕಿನ ಲಕ್ಷಣ. ಆದರೆ ಜ್ವರವಿಲ್ಲದೆ ಬರುವ ಕೆಮ್ಮು, ಆಗಾಗ ಬರುತ್ತಲೇ ಇರುವ ಕೆಮ್ಮು, ವಾತಾವರಣದಲ್ಲಿ ಚಳಿ ಹೆಚ್ಚಾದಾಗ ಅಥವಾ ತಂಪಾದ, ಕರಿದ ಆಹಾರ ಪದಾರ್ಥಗಳನ್ನು ತಿಂದಾಗ ಹೆಚ್ಚಾಗುವ ಕೆಮ್ಮು ಅಲರ್ಜಿಯ ಕಾರಣದಿಂದ ಉಂಟಾಗುವ ಕೆಮ್ಮಾಗಿರುತ್ತದೆ.
ಸಣ್ಣಪುಟ್ಟ ಜ್ವರ – ಕೆಮ್ಮಿಗೆ ಯಾವ ಮನೆ ಮದ್ದನ್ನು ಮಾಡಬಹುದು?
ಬೆಚ್ಚನೆಯ ನೀರು ಕುಡಿಯಲು ಕೊಡಿ. ವೈದ್ಯರಿಗೆ ಕೇಳಿ ಮೂಗಿನ ಡ್ರಾಪ್ ಮನೆಯಲ್ಲಿ ಇಟ್ಟುಕೊಂಡು ಅದನ್ನು ಹಾಕುತ್ತಿರಬಹುದು. ಸ್ವಲ್ಪ ದೊಡ್ಡ ಮಕ್ಕಳಿದ್ದಲ್ಲಿ ಬಿಸಿ ನೀರಿನ ಹಬೆ ಸೇವಿಸಬಹುದಾಗಿದೆ. ಒಂದು ವರ್ಷ ಮೇಲ್ಪಟ್ಟ ಮಗುವಾಗಿದ್ದಲ್ಲಿ ಕಲಬೆರಕೆ ಇಲ್ಲದ ಜೇನು ತುಪ್ಪವನ್ನು ಕೊಡಬಹುದು.
ಮಗುವಿಗೆ ಕೆಮ್ಮು ಇದ್ದಾಗ ‘ಮೆಡಿಕಲ್’ ನಿಂದ ಕೆಮ್ಮಿನ ‘ಸಿರಪ್’ ತಂದು ಕೊಡಬಹುದೇ?
‘ಮೆಡಿಕಲ್’ನಿಂದ ತoದ ಕೆಮ್ಮಿನ ಸಿರಪ್‌ನಲ್ಲಿ ವಯಸ್ಕರಿಗೆ ಮಾತ್ರ ಕೊಡಬಹುದಾದ, ಮಕ್ಕಳಿಗೆ ಕೊಡಬಾರದ ಅಂಶಗಳಿರಬಹುದು. ಹೆಚ್ಚು ನಿದ್ದೆ ಬರಿಸುವ ಅಂಶ ಇರಬಹುದು. ಮೇಲಾಗಿ ಮದ್ದನ್ನು ಮಗುವಿನ ತೂಕಕ್ಕೆ ಸರಿಯಾಗಿ ಕೊಡಲು ಕಷ್ಟವಾಗಬಹುದು. ಕೆಲವೊಮ್ಮೆ ಅದರಿಂದಲೇ ತೊಂದರೆಯೂ ಹೆಚ್ಚಾಗಬಹುದು. ಹಾಗಾಗಿ ವೈದ್ಯರಿಗೆ ತೋರಿಸದೆ ಮಕ್ಕಳಿಗೆ ಕೆಮ್ಮಿನ ಮದ್ದು ಕೊಡುವುದು ತರವಲ್ಲ.
ಕೆಮ್ಮಿಗೆ ಎಕ್ಸ್-ರೇ ಪರೀಕ್ಷೆಗಳ ಅವಶ್ಯಕತೆ ಉಂಟೇ?
ಸಣ್ಣಪುಟ್ಟ ಕೆಮ್ಮಿಗೆ ಅದರ ಅವಶ್ಯಕತೆ ಇರದು. ಅದರ ಅವಶ್ಯಕತೆ ಇದೆಯೋ ಇಲ್ಲವೋ ಎಂದು ವೈದ್ಯರು ನಿರ್ಧರಿಸಬೇಕು.
ನನ್ನ ಮಗಳಿಗೆ ಆಗಾಗ ಕೆಮ್ಮು, ಜ್ವರ ಬರುತ್ತಲೇ ಇರುತ್ತದೆ. ಅದನ್ನು ತಡೆಗಟ್ಟಲು ನಾನು ಏನು ಮಾಡಲಿ?
ಪದೇಪದೇ ಕೆಮ್ಮು ಬರುವುದು ಅಲರ್ಜಿಯ ಕಾರಣವೂ ಇರಬಹುದು. ಆದರೆ ಆಗಾಗ ಬರುತ್ತಲೇ ಇದ್ದು ತೊಂದರೆಯಾಗುತ್ತಿದ್ದರೆ ಹಾಗೆ ಮತ್ತೆ ಮತ್ತೆ ಬರದಂತೆ ಅಲರ್ಜಿಯನ್ನು ಗುಣಪಡಿಸುವ ಔಷಧಗಳನ್ನು ಕೆಲವು ತಿಂಗಳು ನಿರಂತರವಾಗಿ ತೆಗೆದುಕೊಳ್ಳಲು ವೈದ್ಯರು ಹೇಳಬಹುದು. ಆಗ ಪದೇ ಪದೇ ಆಗುವ ಅಸ್ತಮಾ, ಅಲರ್ಜಿ ಶೀತ ಮೊದಲಾದವುಗಳನ್ನು ತಡೆಗಟ್ಟಬಹುದು. ವೈದ್ಯರನ್ನು ಕೇಳಿ ಅಂತಹ ಔಷಧಗಳ ಅವಶ್ಯಕತೆ ಇದ್ದರೆ ಬಳಸಬಹುದು.
ಮಕ್ಕಳಿಗೆ ಹೇಳಲ್ಪಟ್ಟಿರುವ ಚುಚ್ಚುಮದ್ದುಗಳನ್ನು ಸಮಯಕ್ಕೆ ಸರಿಯಾಗಿ ತೆಗದುಕೊಳ್ಳಬೇಕು. ಇವು ಸರಕಾರದಿಂದ ಉಚಿತವಾಗಿ ದೊರೆಯುತ್ತದೆ. ಕೆಲವೊಂದು ಚುಚ್ಚುಮದ್ದುಗಳು ದುಬಾರಿಯಾಗಿದ್ದು ಸರಕಾರಿ ಆಸ್ಪತ್ರೆಯಲ್ಲಿ ದೊರೆಯದು. ಆದರೆ ಆರ್ಥಿಕ ಹೊರೆ ಆಗದಿದ್ದ ಪಕ್ಷದಲ್ಲಿ ಅದನ್ನು ಮಕ್ಕಳಿಗೆ ಖಾಸಗಿಯಾಗಿಯೂ ಕೊಡಿಸಬಹುದು. ಮೊದಲ ೬ ತಿಂಗಳವರೆಗೆ ಮಗುವಿಗೆ ಎದೆಹಾಲು ಮಾತ್ರಕೊಟ್ಟು ನಂತರ ಎದೆಹಾಲನ್ನು ಕನಿಷ್ಟ ೨ ವರ್ಷಗಳವರೆಗೆ ಮುಂದುವರೆಸಬೇಕು. ಮಗುವಿಗೆ ಎದೆಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅತಿ ಶ್ರೇಷ್ಠ ಆಹಾರವಾಗಿದೆ.


ಡಾ| ಸಂದೀಪ್ ಹೆಚ್.ಎಸ್.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates