ಮಕ್ಕಳೊಂದಿಗೆ ಹೆತ್ತವರು ಬೆರೆಯುವುದು ಹೇಗೆ?

ಹದಿಹರೆಯದ ಮಕ್ಕಳಲ್ಲಿ ಮಾನಸಿಕ ಸಮಸ್ಯೆಯನ್ನು, ಆತ್ಮಹತ್ಯೆಯ ಪ್ರವೃತ್ತಿಯನ್ನು ಪ್ರಚೋದಿಸುವ ಅನೇಕ ಅಂಶಗಳು, ಕಾರಣಗಳನ್ನು ನಾವು ಪಟ್ಟಿ ಮಾಡಬಹುದು. ಅವುಗಳಲ್ಲಿ ಮುಖ್ಯವಾದವು ಕೆಲವು. ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆಗಳ ಫಲಿತಾಂಶ ಬರುವ ದಿನಗಳ ಆಸುಪಾಸು ದಿನಗಳಂತೂ ಆ ವಯಸ್ಸಿನ ಮಕ್ಕಳ ತಂದೆ ತಾಯಿಯಂದಿರಿಗೆ ಏನೋ ಆಂತರಿಕ ಆತಂಕ! ಯಾವ ಮಗು ಎಲ್ಲಿ ಹೇಗೆ ಸಾಯುತ್ತಾನೆ/ಳೆ ಎಂಬ ದುಗುಡ. ಹೌದಾ! ಅವನಾ? ಅವಳಾ? ಅವನು/ಳು ಹೀಗೆ ಮಾಡಿಕೊಂಡನಾ?/ಳಾ? ಅಷ್ಟು ಮಾನಸಿಕವಾಗಿ ವೀಕಾ? ಅವನು/ಳು ಎಂಬAತಹ ಮಾತುಗಳು. ನಾವು ನೀವು ಯೋಚನೆ ಮಾಡದವರೂ ಹೀಗೆ ಮಾಡಿಕೊಂಡು ಬಿಡುತ್ತಾರೆ.
ಇನ್ನು ಪ್ರೀತಿ, ಸೆಳೆತ, ವ್ಯಾಮೋಹ ಇವುಗಳಲ್ಲಿ ಜಾರಿದ ಹದಿಹರೆಯದವರೂ ಸಾಕಷ್ಟು ಮನೋವ್ಯಸನಗಳಿಗೆ ತುತ್ತಾಗುತ್ತಾರೆ. ಇದರ ಜೊತೆಗೆ ಆರ್ಥಿಕ ಕೀಳರಿಮೆ, ದೈಹಿಕ ರೂಪ, ನ್ಯೂನತೆಗಳು, ಗೆಳೆಯ – ಗೆಳತಿಯರ ಸಂಬ0ಧ, ಅಧ್ಯಯನದಲ್ಲಿ ವಿಫಲತೆ ಹೀಗೆ ಒಂಟಿತನಕ್ಕೆ ದೂಡುವ ಹಲವು ಕಾರಣಗಳು ಈ ಹದಿಹರೆಯದವರಲ್ಲಿ ಎದುರಾಗುತ್ತವೆ. ಮಕ್ಕಳ ದುರಂತ ಆತಂಕಗಳಿಗೆ ಕಾರಣಗಳನ್ನು ಕೇಳಿದಾಗ ಅವು ತೀರಾ ಸಾಮಾನ್ಯವೆಂದೆನಿಸಿದರೂ ಅವೇ ಮಕ್ಕಳನ್ನು ದೊಡ್ಡ ದುರಂತಕ್ಕೆ ಈಡುಮಾಡುತ್ತವೆ ಎನ್ನುವುದು ಕಟು ಸತ್ಯ. ಹಾಗಾಗಿ ಸಾಮಾನ್ಯವೆನಿಸಿದರೂ ಇಂಥ ವಿಷಯಗಳನ್ನು ನಾವು ಗಮನಿಸುತ್ತಿರಬೇಕು.
ಯಾಕೆ ಹೀಗಾಗುತ್ತದೆ?
ಮಕ್ಕಳು ಮಾನಸಿಕವಾಗಿ ಸದೃಢರಾಗಲು ಪೋಷಕರ ಪಾತ್ರ ಬಲು ಮುಖ್ಯ. ಹೇಗೆ ಬೀಜಕ್ಕೆ ಮರವಾಗಲು ಮಣ್ಣು, ಗೊಬ್ಬರಗಳು ಅತಿ ಮುಖ್ಯವೋ ಅಂತೆಯೇ ಪೋಷಕರ ಮತ್ತು ಮಕ್ಕಳ ಸಂಬ0ಧಗಳೂ ಅಷ್ಟೇ ಮುಖ್ಯ.
ಏನು ಮಾಡಬೇಕು?
ಮಕ್ಕಳಲ್ಲಿ ಸಮಸ್ಯೆಗಳು ಮೊದಲು ಪ್ರಾರಂಭವಾಗುವುದೇ “ಅಭದ್ರತೆಯ ಭಾವನೆ” ಕಾಡಲು ಆರಂಭವಾದಾಗ. ಹೆಚ್ಚಿನ ತಂದೆ – ತಾಯಂದಿರು ಮಕ್ಕಳಿಗೆ ಏನು ಬೇಕೋ ಆ ಎಲ್ಲ ವಸ್ತುಗಳನ್ನು ತೆಗೆದುಕೊಡುತ್ತಾರೆ. ಆದರೆ ನಿಜವಾಗಿ ಮಕ್ಕಳಿಗೆ ಆ ಕಾಲದಲ್ಲಿ ಬೇಕಿರುವುದು ಪೋಷಕರ ಸಾಂಗತ್ಯ. ಮಕ್ಕಳ ಜೊತೆಗೆ ಇರುವುದು, ಅವರೊಂದಿಗೆ ಆಡುವುದು, ಊಟ ಮಾಡುವುದು, ಅವರಿಗೆ ದಿನವೂ ಪುಟ್ಟ ಪುಟ್ಟ ಕಥೆಗಳನ್ನು ಹೇಳುವುದು, ಒಟ್ಟಿನಲ್ಲಿ ಮಕ್ಕಳ ಜೊತೆಗೆ ಇರುತ್ತಾ ಅವರಿಗೊಂದು ಬೆಚ್ಚನೆಯ ಭಾವವನ್ನು ನೀಡಬೇಕು.
ಮಗು ತನ್ನ ಶೈಶವದಿಂದ ಬಾಲಕ/ಬಾಲಕಿ ಆಗುವ ಹಂತಗಳಲ್ಲಿ ಅನೇಕ ವಿಧದ ಕಲಿಕೆಗಳು ಆಗುತ್ತವೆ. ಅದರಲ್ಲಿ ಪ್ರಮುಖವಾದದ್ದು ಅನುಕರಣೆ ಮತ್ತು ಅನುಸರಣೆ ಕಲಿಕೆ. ಮಗು ಹಿರಿಯರನ್ನು ಅನುಕರಣೆ ಮಾಡುತ್ತಾ ಅನುಸರಿಸುತ್ತಾ ಎಲ್ಲವನ್ನೂ ಕಲಿಯಲು ಆರಂಭಿಸುತ್ತದೆ. ಹಿರಿಯರು ಮಗುವಿನ ಜೊತೆಗೆ ಇದ್ದಾಗ ಈ ರೀತಿಯ ಕಲಿಕೆ ತುಂಬಾ ಪರಿಣಾಮಕಾರಿಯಾಗಿ ಆಗುತ್ತದೆ.
ಮಕ್ಕಳನ್ನು ಐದು ವರ್ಷದವರೆಗೆ ಮುದ್ದಾಗಿ ಆಟ ಆಡಿಸುತ್ತಾ ಬೆಳೆಸಬೇಕು. ಮತ್ತೆ ಹತ್ತು ವರ್ಷಗಳ ಕಾಲ ಅಂದರೆ ಹದಿನೈದು ವರ್ಷಗಳವರೆಗೆ ಮಕ್ಕಳಿಗೆ ಅವರ ತಪ್ಪುಗಳಿಗೆ ಅರಿವಾಗುವಂತೆ ಶಿಕ್ಷೆಗಳನ್ನು ನೀಡುತ್ತಾ ಶಿಸ್ತನ್ನು ಕಲಿಸಬೇಕು. ಮತ್ತೆ ಗೆಳೆಯರಂತೆ ಅವರಲ್ಲಿ ವ್ಯವಹಾರ ಮಾಡುತ್ತಾ ಅವರನ್ನು ಬೆಳೆಸಬೇಕು.
ಇವತ್ತು ತಂದೆ ತಾಯಂದಿರು ಒಂದೋ ತೀರಾ ಮುದ್ದು ಮಾಡುತ್ತಾ ಶಿಕ್ಷೆಗಳನ್ನು ನೀಡದೇ, ಶಿಸ್ತನ್ನು ಬೆಳೆಸದೇ ಮಕ್ಕಳನ್ನು ಬೆಳೆಸುತ್ತಾರೆ. ಇಲ್ಲವೇ ತೀರಾ ‘ಹೊಡಿ-ಬಡಿ’ಯ ಮೂಲಕ ಮಕ್ಕಳನ್ನು ತಮ್ಮ ನಿಯಂತ್ರಣದಲ್ಲಿ ಇರುವಂತೆ ಮಾಡುತ್ತಾರೆ. ಇವೆರಡೂ ಮಕ್ಕಳ ಬೆಳವಣಿಗೆಯ ದೃಷ್ಟಿಯಲ್ಲಿ ತಪ್ಪೇ…
ಹಾಗಾಗಿ ಪ್ರೀತಿ, ಮುದ್ದು ಮಗುವಿಗೆ ತನ್ನ ತಪ್ಪನ್ನು ಅರಿಯುವಂತೆ ಮಾಡುವ ಗುದ್ದು. ಕೊನೆಯಲ್ಲಿ ಗೆಳೆತನದ ಭಾವನೆ ಬರುವಂತೆ ಮಾಡುತ್ತಾ ಮಕ್ಕಳನ್ನು ಬೆಳೆಸಿದರೆ ಮಕ್ಕಳು ಹೆತ್ತವರೊಂದಿಗೆ ವಾತ್ಸಲ್ಯದ ಬೆಸುಗೆಯನ್ನು ಕಟ್ಟಿಕೊಳ್ಳುತ್ತಾರೆ. ಶಿಸ್ತನ್ನು ರೂಢಿಸಿಕೊಳ್ಳುತ್ತಾರೆ. ಗೆಳೆತನದ ಸಲುಗೆಯಿಂದ ಮಾತನ್ನೂ ಕೇಳಿಕೊಂಡು ಆರೋಗ್ಯವಂತವಾಗಿ ಬೆಳೆಯುತ್ತಾರೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *