ಮಕ್ಕಳ ಮಾನಸಿಕ ಖಿನ್ನತೆಗೆ ಕಾರಣವಾಗದಿರಲಿ ಫೋಟೋಗ್ರಾಫಿ

ಡಾ‌. ಲಕ್ಷ್ಮೀಶ್ ಭಟ್

ನೀವು ಸುಮಾರು 35 ವರ್ಷ ವಯಸ್ಸಿಗಿಂತ ಹಿರಿಯರಾಗಿದ್ದರೆ ಒಮ್ಮೆ ನಿಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಿ. ಆವಾಗೆಲ್ಲ ನಮ್ಮ ಒಂದು ಫ್ಯಾಮಿಲಿ ಫೋಟೊ ತೆಗೆದುಕೊಳ್ಳುವುದು ಅಂದರೇನೇ ಅದೊಂದು ಸಂಭ್ರಮ. ಮಣ್ಣಿನ ಗೋಡೆಗೊಂದು ಆಣಿ ಬಡಿದು ನೇತುಹಾಕಿದ 40 ವರ್ಷಕ್ಕೂ ಹಳೆಯ ಮರದ ಚೌಕಟ್ಟಿನೊಳಗಿನ ನಮ್ಮ ಒಂದೇ ಒಂದು ಫೋಟೊ ಇಂದಿಗೂ ನಮ್ಮ ಮನೆಯ ಅಮೂಲ್ಯ ಆಸ್ತಿ. ಅದರಲ್ಲೂ ನಮ್ಮ ಮನೆಯ ಪಡಸಾಲೆಯಲ್ಲಿ ಕಬ್ಬಿಣದ ಡಬಿರಿ ಪೆಟ್ಟಿಗೆಯಲ್ಲಿ ಇರುವ ನಮ್ಮ 7ನೇ ತರಗತಿಯ ಕೊನೆಯ ದಿನದ ಶಾಲೆಯ ಗ್ರೂಪ್ ಫೋಟೊ… ಅದಕ್ಕೆ ಹಣ ಹೊಂದಿಸಲು ಅಮ್ಮ ಅವರಿವರ ಮನೆಯಲ್ಲಿ ಕೇಳಿ ಮುಜುಗರ ಪಟ್ಟು ಕೊನೆಗೂ ಹೇಗೋ 10 ರೂಪಾಯಿ ಹೊಂದಿಸಿದ್ದು… ಇವನ್ನೆಲ್ಲ ಈಗಲೂ ನೆನಪಿಸಿಕೊಂಡರೆ ಕಣ್ಣಂಚಿನಲ್ಲಿ ಹನಿ ನೀರು…
ಇಂದಿನ ಮಕ್ಕಳಲ್ಲಿ ಅವರ ಬಾಲ್ಯದ ಫೋಟೊಗಳ ಕುರಿತು ಕೇಳಿನೋಡಿ. ಅವರು ಅಮ್ಮನ ಗರ್ಭದಲ್ಲಿದ್ದ ಸ್ಕಾö್ಯನ್ ಪ್ರತಿ, ಬೇಬಿಸ್ ಬಂಪ್, ಹುಟ್ಟಿದ ತತ್‌ಕ್ಷಣದ ಫೋಟೊಗಳು… ಹೀಗೆ ಸುಮಾರು ೭ನೇ ತರಗತಿ, ೧೦ನೇ ತರಗತಿಯವರೆಗೆ ಬರುವಾಗ ಅವರ ಹೆಸರಿನ ಗೂಗಲ್ ಡ್ರೈವ್ನಲ್ಲಿ ಕನಿಷ್ಠ 10 ಜಿ.ಬಿ. ಯಷ್ಟು ಅವರ ಫೋಟೊಗಳ ಸಂಗ್ರಹಗಳಿರುತ್ತವೆ!
ಮಕ್ಕಳ ಪ್ರತೀ ಕ್ಷಣಗಳನ್ನು ಸೆರೆಹಿಡಿದಿಡಬೇಕೆಂಬ ಅಪ್ಪ – ಅಮ್ಮನ ತುಡಿತ ಇಂದು ಮಕ್ಕಳಲ್ಲಿ ಅವರ ಕುರಿತಾದ ಫೋಟೊಗಳ ಮೇಲಿನ ವ್ಯಾಮೋಹವನ್ನು ಹೆಚ್ಚಿಸುತ್ತಿರುವುದು ಸುಳ್ಳಲ್ಲ. ಪ್ರತಿಯೊಬ್ಬರ ಕೈಯಲ್ಲೇ ಇರುವ ಮೊಬೈಲ್ ಕ್ಯಾಮೆರಾಗಳು ಈ ಸಾಧ್ಯತೆಯನ್ನು ಇನ್ನಷ್ಟು ಸುಲಭವನ್ನಾಗಿಸಿವೆ.
ಇತ್ತೀಚೆಗೆ ಫೋಟೊ ತೆಗೆಸಿಕೊಳ್ಳುವುದು, ತೆಗೆಯುವುದು ಒಂದು ರೋಗವಾಗಿ ಅಥವಾ ರೋಗದ ಚಿಹ್ನೆಯಾಗಿ ಯುವ ಮನಸ್ಸುಗಳನ್ನು ಕಾಡುತ್ತಿದೆ. ಇದನ್ನು ಮನೋವಿಜ್ಞಾನದಲ್ಲಿ ‘ಅಸ್ವಸ್ಥತೆ’ ಎಂದು ವರ್ಗೀಕರಿಸಿದ್ದಾರೆ.


ಏನಾಗುತ್ತದೆ?
ಹದಿಹರೆಯದ ಮಂದಿ ಹೆಚ್ಚಾಗಿ ತಮ್ಮ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾ ಅದಕ್ಕೆ ಎಷ್ಟು ಲೈಕ್ಸ್, ಕಮೆಂಟ್‌ಗಳು ಬರುತ್ತವೆ, ಎಷ್ಟು ಮಂದಿ ಶೇರ್ ಮಾಡುತ್ತಾರೆ ಎಂದು ನೋಡುತ್ತಾ ಗಂಟೆಗಟ್ಟಲೆ ಸಮಯವನ್ನು ವ್ಯಯ ಮಾಡುತ್ತಾರೆ.

ತಮ್ಮ ಸಹವರ್ತಿಗಳಿಂದ ಕಡಿಮೆ ಲೈಕ್‌ಗಳು ಬಂದಲ್ಲಿ ತಮ್ಮ ದೈಹಿಕ ಸ್ಥಿತಿಯ ಕುರಿತಾಗಿ ಕೀಳರಿಮೆಯನ್ನು ಬೆಳೆಸಿಕೊಳ್ಳುತ್ತಾರೆ. ನಿಧಾನವಾಗಿ ಖಿನ್ನತೆಗೂ ಜಾರುತ್ತಾರೆ. ಟಿ ಜಾಲತಾಣಗಳಲ್ಲಿ ಈ ಕುರಿತು ತಡರಾತ್ರಿಯವರೆಗೂ ತಡಕಾಡುತ್ತಾ ನೋವನ್ನು ಅನುಭವಿಸುತ್ತಾರೆ. ಬೇಸರದ ಸಂಗತಿ ಎಂದರೆ ಇಂಥವರಲ್ಲಿ ತಮ್ಮ ಫೋಟೊಗಳಿಗೆ ಕಡಿಮೆ ಲೈಕ್ ಬಂದಿದೆ ಎನ್ನುವುದಕ್ಕಿಂತ ತಮ್ಮ ಗೆಳೆಯ/ಗೆಳತಿಯರಿಗೆ ಹೆಚ್ಚು ಲೈಕ್ ಬಂದಿದೆ ಎನ್ನುವುದೇ ಅವರ ಹೃದಯವನ್ನು ಚುಚ್ಚುವ ಸಂಗತಿಯಾಗಿರುತ್ತದೆ. ಈ ಕಾರಣದಿಂದಲೇ ಅವರು ನಿದ್ರಾಹೀನತೆಗೆ ತುತ್ತಾಗುತ್ತಾರೆ.

ಇಂಥ ಕಾಲದಲ್ಲಿ ಬಲು ಆಪತ್ತಿಗೆ ಅವರು ಬೀಳುವ ಸಂಭವ ಹೆಚ್ಚು. ತಮ್ಮ ಫೋಟೊವನ್ನು ಎಲ್ಲರೂ ಮೆಚ್ಚಬೇಕು ಎನ್ನುವ ತರಾತುರಿಯಲ್ಲಿ ಒಬ್ಬ ಅನಾಮಿಕ ತನ್ನ ಫೋಟೊಗೆ ಕೊಟ್ಟ ಕಮೆಂಟ್‌ಗೆ ಹದಿನಾರರ ಹುಚ್ಚು ಮನಸ್ಸು ಜಾರಿ ಬೀಳುತ್ತದೆ. ತನ್ನ ಸೌಂದರ್ಯವನ್ನು ಪ್ರಶಂಸಿಸುವ, ಆರಾಧಿಸುವ ಗೋಮುಖ ವ್ಯಾಘ್ರಗಳ ಬಲೆಗೆ ಬೀಳುವ ಸಾಧ್ಯತೆ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗುತ್ತಿದೆ. ಪರಿಣಾಮವಾಗಿ ಎಲ್ಲವನ್ನೂ ಕಳೆದುಕೊಂಡು ಕೊನೆಗೆ ಪ್ರಾಣವನ್ನು ಕಳೆದುಕೊಂಡ ಸಾವಿರಾರು ಉದಾಹರಣೆಗಳು ಇವೆ.

ಹೆಚ್ಚಾಗಿ ಈ ಅತಿರೇಕದ ಫೋಟೊಗಳು ವ್ಯಕ್ತಿಯನ್ನು ಕಾಲ್ಪನಿಕವಾಗಿ ಸದಾ ಕಾಲ ಬದುಕುವಂತೆ ಮಾಡಿ ಆತ/ಆಕೆಯನ್ನು ವರ್ತಮಾನದಲ್ಲಿ ಇರದಂತೆ ಮಾಡುತ್ತದೆ.

ಇದರ ಜೊತೆಗೆ ಸೆಲ್ಫಿಗಳು ಮಾಡುತ್ತಿರುವ ಅನಾಹುತಗಳ ಪಟ್ಟಿ ನೂರಾರು ಇವೆ. ಸೆಲ್ಫಿಯ ಹುಚ್ಚಿನಿಂದ ಇಂದು ಮಕ್ಕಳು, ಹಿರಿಯರೆನ್ನದೆ ಎಲ್ಲರೂ ಅನೇಕ ಅಪಾಯಗಳನ್ನು ಎದುರಿಸುತ್ತಿದ್ದಾರೆ.

ಇವೆಲ್ಲವೂ ಹುಚ್ಚು ಮನಸ್ಸಿನ ಅಥವಾ ಅತೃಪ್ತ ಮನಸ್ಥಿತಿಯ ಅತಿರೇಕಗಳೇ. ಜಾಲತಾಣಗಳಲ್ಲಷ್ಟೇ ಇದ್ದ ಈ ಸ್ಥಿತಿ ಇಂದು ಡಿ.ಪಿ., ಸ್ಟೇಟಸ್‌ಗಳ ಮೂಲಕ ಮತ್ತಷ್ಟು ವಿಸ್ತೃತವಾಗಿ ದುರ್ಬಲ ಮನಸ್ಸಿನವರನ್ನು ಮತ್ತಷ್ಟು ಅಲುಗಾಡಿಸುವ ಹಂತಕ್ಕೆ ಬಂದಿದೆ.


ಯಾರು ಇದರ ಬಲಿಪಶುಗಳು?
ವಾಟ್ಸಪ್ ಡಿ.ಪಿ., ಸ್ಟೇಟಸ್, ಜಾಲತಾಣಗಳು ಎಲ್ಲವೂ ನಮ್ಮ ಆನಂದಕ್ಕಾಗಿ ಎಂದು ನಾವು ಅಂದುಕೊoಡರೂ ಇವೆಲ್ಲವೂ ನಮ್ಮಲ್ಲಿ ಒಂದು ತೃಷೆಯನ್ನು ಸದ್ದಿಲ್ಲದೆ ಮೂಡಿಸುತ್ತಿರುವುದು ಸತ್ಯ! ಈ ಕೊರತೆಯನ್ನು ಬದುಕಿನಲ್ಲಿ ಅನುಭವಿಸುವವರು ಬಲು ಬೇಗ ತೃಷೆಗೆ ಬಳಗಾಗುತ್ತಾರೆ.

ತಮ್ಮ ದೈಹಿಕ ನೋಟ – ಮಾಟಗಳ ಬಗ್ಗೆ ಕೀಳರಿಮೆ ಇರುವವರು, ಒಳ್ಳೆಯ ಗೆಳೆಯರ ಸಮೂಹವಿಲ್ಲದೇ ಒಂಟಿತನದಿoದ ಬಳಲುವವರು ಈ ಸ್ಥಿತಿಯಿಂದ ಹೊರಬರಲು ಇನ್ನಿತರೇ ವ್ಯಕ್ತಿಗಳನ್ನು ತಮ್ಮತ್ತ ಆಕರ್ಷಿಸಲು ತಮ್ಮ ಫೋಟೊಗಳ ಪ್ರದರ್ಶನಕ್ಕೆ ಇಳಿದು ಬಿಡುತ್ತಾರೆ.

ಟಿ.ವಿ., ಜಾಲತಾಣ ಹೀಗೆ ಕಾಲ್ಪನಿಕ ಪ್ರಪಂಚದಲ್ಲೇ ಹೆಚ್ಚೆಚ್ಚು ಹೊತ್ತು ಕಳೆಯುವ ಮಂದಿ ಬಲು ಬೇಗ ಈ ಗೀಳಿಗೆ ತುತ್ತಾದಾರು ಜೋಕೆ.
ಕೆಲವೊಮ್ಮೆ ಅಧ್ಯಯನದಲ್ಲಿ ವಿಫಲತೆ, ಪ್ರೇಮ ವೈಫಲ್ಯ, ಮನೆಯಲ್ಲಿನ ಕಿರಿಕಿರಿಗಳಿಂದ ಮನಸ್ಸನ್ನು ಹಗುರಗೊಳಿಸುವುದಕ್ಕಾಗಿ ಈ ವೇದಿಕೆಗೆ ಬಂದ ವ್ಯಕ್ತಿಯನ್ನು ಸಮಸ್ಯೆಗೆ ಸಿಲುಕಿಸಬಹುದು.
ಅಪ್ರಬುದ್ಧ ಎಳೆ ಮನಸ್ಸು ಸರಿ – ತಪ್ಪುಗಳನ್ನು ತೀರ್ಮಾನಿಸುವಷ್ಟು ಬೆಳೆದಿರುವುದಿಲ್ಲ. ಹಾಗಾಗಿ ತನ್ನ ಕುರಿತಾದ ಹೊಗಳಿಕೆಯ ಹಿಂದಿರುವ ಆಶಯವನ್ನು ಗುರುತಿಸದೇ ಕೆಲವೊಮ್ಮೆ ದುಷ್ಟರ ಖೆಡ್ಡಾಕ್ಕೆ ಬೀಳುವ ಮನಸ್ಸುಗಳೂ ಈ ತೊಂದರೆಗೆ ಸಿಲುಕಬಹುದು.


ಏನು ಮಾಡಬೇಕು?

ಕೆಲವೊಂದು ಸಂದರ್ಭದಲ್ಲಿ ಹಿರಿಯರ ವರ್ತನೆಗಳೇ ಮಕ್ಕಳಲ್ಲಿ ಅಪವರ್ತನೆಗಳು ಚಿಗುರೊಡೆಯಲು ಕಾರಣ. ಈ ನಿಟ್ಟಿನಲ್ಲಿ ಯುವ ಪೋಷಕರು ತಮ್ಮ ವರ್ತನೆಗಳು ಅತಿರೇಕವಾಗದಂತೆ ಗಮನಿಸಿಕೊಳ್ಳುತ್ತಿರಬೇಕು. ಹೆಚ್ಚಿನ ಸಂದರ್ಭದಲ್ಲಿ ಮಕ್ಕಳು ತಮ್ಮ ಪೋಷಕರನ್ನೇ ಅನುಕರಣೆ ಮಾಡಿ ಕಲಿಯುತ್ತವೆ.

ಯುವಕ/ಯುವತಿಯರು ಕಲ್ಪನಾ ಲೋಕದಲ್ಲಿ ಹೆಚ್ಚೆಚ್ಚು ವಿಹರಿಸುವುದನ್ನು ಬಿಟ್ಟು ನೈಜತೆಯ ಬದುಕನ್ನು ಅರಿಯಲು ಪ್ರಯತ್ನಿಸಬೇಕು.

ತಮ್ಮ ಸೋಲು, ಕೀಳರಿಮೆ, ಹಿಂಜರಿಕೆ ಇತ್ಯಾದಿಗಳನ್ನು ಹಿಮ್ಮೆಟ್ಟಿಸಲು ಆರೋಗ್ಯಕರ ಉಪಾಯಗಳನ್ನು ಅಳವಡಿಸಿಕೊಳ್ಳಬೇಕೇ ಹೊರತು ತಪ್ಪು ದಾರಿಗಳನ್ನಲ್ಲ.

ಹಿರಿಯರು, ಗೆಳತಿಯರು, ಆತ್ಮೀಯರು ತಮ್ಮವರ ಫೋಟೊಗಳಿಗೆ ಅಸಹಜವಾದ ಕಮೆಂಟ್‌ಗಳು ಬರುತ್ತಿರುವುದನ್ನು ಆರಂಭದಲ್ಲೇ ಗಮನಿಸಿ ಸೂಕ್ಷ್ಮವಾಗಿ ಸ್ಪಂದಿಸಿದಲ್ಲಿ ಮುಂದೆ ಆಗಬಹುದಾದ ಅನಾಹುತಗಳನ್ನು ಆರಂಭದಲ್ಲೇ ಚಿವುಟಿ ಹಾಕಬಹುದು.

ಮಕ್ಕಳು ವಿಚಿತ್ರವಾಗಿ ಅಪಾಯಕಾರಿಯಾದ ಸೆಲ್ಫಿ ಅಥವಾ ಫೋಟೊ ತೆಗೆಯುವುದನ್ನು ಎಂದಿಗೂ ಪ್ರೋತ್ಸಾಹಿಸಲೇ ಬಾರದು.

ನಮ್ಮ ಅಮೂಲ್ಯ ಕ್ಷಣಗಳನ್ನಷ್ಟೇ ಫೋಟೋ ಮೂಲಕ ಸೆರೆಹಿಡಿಯಬೇಕು. ಅದು ಅದರ ಮೌಲ್ಯವನ್ನು ಕಳೆದುಕೊಳ್ಳದಂತೆ ಮಾಡಬೇಕಾದರೆ ಅತಿರೇಕವನ್ನು ನಾವು ಬಿಡಬೇಕು. ಇವತ್ತು ಕ್ಷಣಕ್ಷಣವನ್ನು ನೇರವಾಗಿ ಕಣ್ಣು, ಹೃದಯದಿಂದ, ಮನಸ್ಸಿನಿಂದ ಆಸ್ವಾದಿಸುವುದನ್ನು ನಾವು ಬಿಡುತ್ತಿದ್ದೇವೆ. ಎಲ್ಲವನ್ನು ಕ್ಯಾಮೆರಾ ಕಣ್ಣಿನಿಂದ ಸ್ಟೋರ್ ಮಾಡುತ್ತಿದ್ದೇವೆ. ಹಾಗಾಗಿ ಅಲ್ಲಿ ಹೃದಯಕ್ಕೆ – ಮನಸ್ಸಿಗೆ ಸ್ಥಳವಿಲ್ಲದೆ ವ್ಯಕ್ತಿ ತನ್ನ ಬದುಕಿನಲ್ಲೂ ಹೃದಯವನ್ನು – ಮನಸ್ಸನ್ನು ಕಳೆದುಕೊಳ್ಳುತ್ತಿದ್ದಾನೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates