ಮತ್ತೊಂದು ಕ್ರೀಡಾ ಲೀಗ್ – ಅಲ್ಟಿಮೇಟ್ ಖೋ ಖೋ

ದಿನಕರ

ಯಾವಾಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂಬ ಕ್ರಿಕೆಟ್ ಟೂರ್ನಿಯು ಅತ್ಯಂತ ಯಶಸ್ವಿಯಾಯಿತೋ ಅದರ ಬಳಿಕ ಭಾರತದಲ್ಲಿ ಹಲವಾರು ಕ್ರೀಡೆಗಳನ್ನು ಅದೇ ರೀತಿ ಜನಪ್ರಿಯತೆಗೆ ತರಲು ಪ್ರಯತ್ನಗಳು ಸಾಗಿದವು. ಅದೇ ಬಗೆಯ ಕಬಡ್ಡಿ, ಹಾಕಿ, ಬ್ಯಾಡ್ಮಿಂಟನ್, ಫುಟ್ಬಾಲ್ ಮುಂತಾದ ಲೀಗ್ ಟೂರ್ನಿಗಳು ಶುರುವಾದವು. ಕಬಡ್ಡಿಯಂತಹ ಟೂರ್ನಿಗಳು ಭಾರೀ ಯಶಸ್ಸು ಕಂಡರೂ ಕೆಲವು ಅಷ್ಟರಮಟ್ಟಿಗೆ ಯಶಸ್ಸು ಕಾಣಲಿಲ್ಲವೆನ್ನುವುದೂ ನಿಜ.
ಅಲ್ಟಿಮೇಟ್ ಖೋ ಖೋ
ಖೋ ಖೋ ಪಂದ್ಯದ ಲೀಗ್ ಟೂರ್ನಿಯ ಮೊತ್ತಮೊದಲ ಸೀಸನ್ ಆಗಸ್ಟ್ 14ಕ್ಕೆ ಆರಂಭವಾಗಿ ಸೆಪ್ಟೆಂಬರ್ ಮೊದಲ ವಾರದವರೆಗೆ ನಡೆಯಿತು. ಒಟ್ಟು ಆರು ತಂಡಗಳು ಇದರಲ್ಲಿ ಭಾಗವಹಿಸಿದ್ದವು. ವಿಶೇಷವೆಂದರೆ ಕಬಡ್ಡಿಯ ರೀತಿಯಲ್ಲೇ ಈ ಖೋ ಖೋ ಲೀಗ್ ಕೂಡಾ ಜನಪ್ರಿಯತೆ ಪಡೆಯುವ ಸಂಕೇತಗಳು ತೋರಿಬಂದಿವೆ.
ಮುಖ್ಯವಾಗಿ ಟಿ.ವಿ. ಪ್ರೇಕ್ಷಕರನ್ನು ಹಾಗೂ ಆ ಮೂಲಕ ಜಾಹೀರಾತುದಾರರನ್ನು ಆಕರ್ಷಿಸುವುದೇ ಇಂತಹ ಲೀಗ್‌ಗಳ ಉದ್ದೇಶವಾಗಿರುವುದರಿಂದ ಕ್ರೀಡೆಯು ಹೆಚ್ಚು ಮನರಂಜನಾತ್ಮಕ ಹಾಗೂ ರೋಚಕವನ್ನಾಗಿಸಲು ಎಲ್ಲಾ ಬಗೆಯ ಪ್ರಯತ್ನಗಳನ್ನು ಮಾಡಲಾಗುತ್ತದೆ. ಅದಕ್ಕಾಗಿ ಅಲ್ಟಿಮೇಟ್ ಖೋ ಖೋ ದಲ್ಲಿ ಕೂಡಾ ಪಂದ್ಯದ ನಿಯಮಗಳಿಗೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಮೊದಲ ಆವೃತ್ತಿಯ ಪಂದ್ಯಗಳನ್ನು ವೀಕ್ಷಿಸಿದವರಿಗೆ ಈ ಬದಲಾವಣೆಗಳು ಖೋ ಖೋವನ್ನು ಹೆಚ್ಚು ಆಕರ್ಷಕವಾಗಿಸಿದೆ ಎಂದು ಅನಿಸಿರುವುದು ಸಹಜವೆ. ನಾವು ಬಾಲ್ಯದಿಂದ ನೋಡಿದ್ದ ಖೋ ಖೋ ಪಂದ್ಯಗಳಿಗೆ ಹೋಲಿಸಿದರೆ ಈ ಅಲ್ಟಿಮೇಟ್ ಖೋ ಖೋ’ ಅತ್ಯಂತ ರೋಚಕ, ಸ್ಪರ್ಧಾತ್ಮಕ ಹಾಗೂ ಚುರುಕಿನ ಆಟವಾಗಿ ಕಂಡಿದ್ದರೆ ಅಚ್ಚರಿಯಿಲ್ಲ. ಎದುರಾಳಿಯನ್ನು ಔಟ್ ಮಾಡಲು ಗಾಳಿಯಲ್ಲಿ ಡೈವ್ ಹೊಡೆಯುವುದನ್ನೆಲ್ಲ ಈವರೆಗೆ ಖೋ ಖೋ ಆಟದಲ್ಲಿ ಕಂಡಿರದವರಿಗೆಅಲ್ಟಿಮೇಟ್ ಖೋ ಖೋ’ದಲ್ಲಿ ಅದನ್ನು ಕಂಡು ಅಚ್ಚರಿಯಾಗುವುದು ಸಹಜವೇ.
ಅಲ್ಟಿಮೇಟ್ ಖೋ ಖೋ'ದಲ್ಲಿ ಮುಖ್ಯವಾಗಿ ಅಂಕ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ. ಔಟ್ ಮಾಡಿದರೆ ಒಂದು ಅಂಕದ ಬದಲಾಗಿ ೨ ಅಂಕ ದೊರಕುವುದು. ಆದರೆ ಡೈವ್ ಹೊಡೆದು ಔಟ್ ಮಾಡುವಂತಹ ಕೆಲವು ವಿಶೇಷ ಬಗೆಯಟಚ್’ಗಳಿಗೆ ಒಂದು ಬೋನಸ್ ಅಂಕ ಕೂಡ ದೊರಕುವುದು. ಇದು ಪ್ರೇಕ್ಷಕನಿಗೆ ಹೆಚ್ಚು ರೋಚಕತೆ ಸೃಷ್ಟಿಸುವುದು ಸ್ವಾಭಾವಿಕವಾಗಿದೆ.
ಇದೇ ವೇಳೆ ಡಿಫೆಂಡರ್ ತಂಡದ ಯಾವನಾದರೂ ಆಟಗಾರ ಎರಡೂವರೆ ನಿಮಿಷಕ್ಕಿಂತ ಹೆಚ್ಚು ಕಾಲ ಔಟಾಗದೆ ಉಳಿದರೆ ಆ ತಂಡಕ್ಕೆ ಒಂದು ಬೋನಸ್ ಅಂಕ ದೊರಕುವುದು. ಬಳಿಕ ಆತ ಔಟಾಗದೆ ಉಳಿದಂತೆಲ್ಲ ಪ್ರತೀ 30 ಸೆಕೆಂಡುಗಳಿಗೆ ಹೆಚ್ಚುವರಿ ಬೋನಸ್ ಅಂಕ ಸಿಗುತ್ತಾ ಹೋಗುವುದು.
ಇಲ್ಲಿನ ಮತ್ತೊಂದು ವಿಶೇಷವೆಂದರೆ ಪ್ರತೀ ತಂಡದಲ್ಲಿ ಇಬ್ಬರು ವಜೀರ್ ಆಟಗಾರರಿರುತ್ತಾರೆ. ದಾಳಿ ಮಾಡುವ ತಂಡದಲ್ಲಿ ಅವರು ಯಾವ ದಿಕ್ಕಿಗೂ ಓಡಲು ಅವಕಾಶವಿದೆ. ಅವರಿಗೆ ಇತರ ಆಟಗಾರರ ನಿಯಮ ಅನ್ವಯವಾಗುವುದಿಲ್ಲ.ಪವರ್ ‘ಪ್ಲೇ’ ಕೂಡಾ ಅಳವಡಿಸಲಾಗಿದ್ದು, ಈ ಸಮಯದಲ್ಲಿ ಇಬ್ಬರು ವಜೀರ್‌ಗಳು ಆಡಲು ಅವಕಾಶವಿರುತ್ತದೆ. ಡಿಫೆಂಡರ್‌ಗಳ ಮೊದಲ ತಂಡದ ಮೂವರೂ ಔಟಾದ ಕೂಡಲೇ ಪವರ್‌ಪ್ಲೇ ಕೊನೆಗೊಳ್ಳುತ್ತದೆ.
ಕೋರ್ಟ್ನ ಆಯಾಮದಲ್ಲಿ ಬದಲಾವಣೆ ಮಾಡಿರುವುದು, ಕೋರ್ಟ್ಗೆ ಮ್ಯಾಟ್ ಬಳಸಿರುವುದು, ಆಟದ ಸಮಯ ಬದಲಾವಣೆ ಮೊದಲಾದವು ಆಟವನ್ನು ಹೆಚ್ಚು ರೋಮಾಂಚಕಗೊಳಿಸಲು ಸಹಕಾರಿಯಾಗಿವೆ.
ಖೋ ಖೋ ಕುರಿತೊಂದಿಷ್ಟು :
‘ಖೋ ಖೋ’ ಭಾರತದ ಸಾಂಪ್ರದಾಯಿಕ ಕ್ರೀಡೆ. ಕಬಡ್ಡಿಯಂತೆಯೇ ಇತರನ್ನು ಸ್ಪರ್ಶಿಸಿ ಔಟ್ ಮಾಡುವಂತಹ ಆಟ. ಬಹುಶ ಈ ಆಟಕ್ಕೆ ಕಣ್ಣಾಮುಚ್ಚಾಲೆಯಂತಹ ಹಿಡಿಯುವ ಆಟಗಳು ಪ್ರೇರಣೆಯಾಗಿರಲೂಬಹುದು ಎಂದು ನಂಬಲಾಗಿದೆ. ‘ಖೋ ಖೋ’ ಭಾರತದಲ್ಲಿ ಪುರಾತನ ಇತಿಹಾಸ ಹೊಂದಿದೆ. ಮಹಾಭಾರತದಲ್ಲೂ ಇಂತಹ ಆಟದ ಉಲ್ಲೇಖವಿದೆ ಎಂದು ಹೇಳಲಾಗಿದೆ. ಭಾರತದಿಂದಾಗಿ ದಕ್ಷಿಣ ಏಶ್ಯಾದಲ್ಲಿ ಈ ಕ್ರೀಡೆಯು ಜನಪ್ರಿಯವಾಗಿದೆ. ಮುಖ್ಯವಾಗಿ ಶಾಲಾ ಕಾಲೇಜುಗಳ ಹಂತದಲ್ಲಿ ಈ ಆಟವನ್ನು ಹೆಚ್ಚು ಆಡಲಾಗುತ್ತದೆ. ಅದನ್ನೀಗ ವೃತ್ತಿಪರ ಮಟ್ಟಕ್ಕೆ ಬೆಳೆಸುವ ಪ್ರಯತ್ನವನ್ನು ಅಲ್ಟಿಮೇಟ್ ಖೋ ಖೋ ಮಾಡುತ್ತಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates