ಶಿಕ್ಷಣಕ್ಕೆ ನೆರವಾಗುವ ಸುಜ್ಞಾನನಿಧಿ

ಕಳೆದ ಸಂಚಿಕೆಯಲ್ಲಿ ‘ಜ್ಞಾನದೀಪ ಶಿಕ್ಷಣ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ಶ್ರೀ ಹೆಗ್ಗಡೆಯವರು ಆರ್ಥಿಕವಾಗಿ ಹಿಂದುಳಿದ ಯೋಜನೆಯ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣವನ್ನು ಪಡೆಯಲು ಅನುಕೂಲವಾಗುವಂತೆ ಆರಂಭಿಸಲಾದ ‘ಸುಜ್ಞಾನನಿಧಿ ಶಿಷ್ಯವೇತನ’ ಎಂಬ ವಿದ್ಯಾರ್ಥಿವೇತನದ ಬಗ್ಗೆ ತಿಳಿದುಕೊಳ್ಳೋಣ.
ಒಂದೆರಡು ದಶಕಗಳ ಹಿಂದೆ ಗ್ರಾಮೀಣ ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಮಹತ್ತರ ಕ್ರಾಂತಿಯೇ ಉಂಟಾಯಿತು. ಸರಕಾರಿ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣವನ್ನು ನೀಡುವುದರ ಜೊತೆಗೆ ಸ್ಥಳೀಯವಾಗಿ ಕೆಲವು ಖಾಸಗಿ ಸಂಸ್ಥೆಗಳು ಶಿಕ್ಷಣವನ್ನು ನೀಡಲು ಪ್ರಾರಂಭಿಸಿದವು. ಇವೆಲ್ಲದರ ಫಲಶ್ರುತಿಯಾಗಿ ಶಿಕ್ಷಣದಿಂದ ವಂಚಿತರಾಗುವ ಗ್ರಾಮೀಣ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಯಲಾರಂಭಿಸಿತು. ಸರಕಾರಿ ಶಾಲೆಯ ಸೌಲಭ್ಯದಿಂದಾಗಿ ಬಡವರ ಹಾಗೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಅಸಹಾಯಕರಾಗಿರುವವರ ಮಕ್ಕಳೂ ಕೂಡ ಉಚಿತ ಅಥವಾ ಅತೀ ಕಡಿಮೆ ವೆಚ್ಚದ ಶಿಕ್ಷಣವನ್ನು ಪಡೆಯುವಂತಾಯಿತು. ಅದೂ ಹೆಚ್ಚು ಕಡಿಮೆ ಅವರಿರುವ ಗ್ರಾಮ ಮಟ್ಟದಲ್ಲಿಯೇ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳೂ ಕೂಡ ಈ ರೀತಿಯಾಗಿ ಗ್ರಾಮ ಮಟ್ಟದಲ್ಲಿ ಶಿಕ್ಷಣವನ್ನು ಪಡೆಯುವಾಗ ಪ್ರಾಥಮಿಕ ಶಿಕ್ಷಣ ಅಥವಾ ಹೆಚ್ಚೆಂದರೆ ಪ್ರೌಢ ಅಥವಾ ಪದವಿಪೂರ್ವ ಶಿಕ್ಷಣದವರೆಗೆ ಕಲಿಯುವಂತಾಯಿತು. ನಂತರ ಮುಂದಿನ ಶಿಕ್ಷಣವನ್ನು ಕೈಗೊಳ್ಳಲು ಸಾಧ್ಯವಾಗದೆ ಅವರ ಶೈಕ್ಷಣಿಕ ಬದುಕು ಅಲ್ಲಿಗೆ ಮುಗಿಯುತ್ತಿತ್ತು. ಎಷ್ಟೋ ಸಂದರ್ಭದಲ್ಲಿ ಕಲಿಯುವ ಎಲ್ಲಾ ಸಾಮರ್ಥ್ಯಗಳಿದ್ದರೂ, ಆರ್ಥಿಕ ಸಂಕಷ್ಟದಿಂದಾಗಿ ಮುಂದಿನ ಶಿಕ್ಷಣ ಕೈಗೊಳ್ಳಲು ಸಾಧ್ಯವಾಗದೆ, ಪಡೆದ ಅಲ್ಪ ಶಿಕ್ಷಣದ ಆಧಾರದ ಮೇಲೆ ಯಾವುದಾದರೂ ಕೆಲಸ ಹುಡುಕಿ ಹೇಗೋ ಜೀವನ ನಡೆಸುವ ಸ್ಥಿತಿಗಳು ಸಾಮಾನ್ಯವಾಗಿತ್ತು. ಕಲಿಯುವ ಸಾಮರ್ಥ್ಯವಿದ್ದು ಆರ್ಥಿಕ ಸಂಕಷ್ಟದಿAದ ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದೇ ಇರುವ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹವನ್ನು ನೀಡುವ ಸಲುವಾಗಿ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳು ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣವನ್ನು ಪಡೆದು ಉತ್ತಮ ಸಾಧನೆ ಮಾಡಬೇಕೆಂಬ ಈ ಎರಡು ಪ್ರಮುಖ ಉದ್ದೇಶಗಳೊಂದಿಗೆ ಶ್ರೀ ಹೆಗ್ಗಡೆಯವರು ಯೋಜನೆಯ ಸದಸ್ಯರ ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಿಹಬ್ಬದ ಸವಿನೆನಪಿಗಾಗಿ 2007ರಲ್ಲಿ ‘ಸುಜ್ಞಾನನಿಧಿ ಶಿಷ್ಯವೇತನ’ ಎಂಬ ವಿನೂತನ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿದರು.
ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರ ಮಕ್ಕಳ ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣಕ್ಕಾಗಿ ಪ್ರತಿ ತಿಂಗಳು ನೀಡಲಾಗುವ ವಿದ್ಯಾರ್ಥಿವೇತನ ಇದಾಗಿರುತ್ತದೆ. ಪ್ರತಿ ವರ್ಷ ವಿದ್ಯಾರ್ಥಿಗಳಿಂದ ಶಿಷ್ಯವೇತನ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಸಿಕ ರೂ. 400 ರಿಂದ ರೂ. 1 ಸಾವಿರದವರೆಗೆ ಶಿಷ್ಯವೇತನವನ್ನು ನೀಡಲಾಗುತ್ತದೆ. ಸಂಬಂಧಪಟ್ಟ ಕೋರ್ಸ್ ಮುಗಿಯುವವರೆಗೆ ಪ್ರತಿ ತಿಂಗಳು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಶಿಷ್ಯವೇತನವನ್ನು ಪಾವತಿಸಲಾಗುತ್ತದೆ. ಇದುವರೆಗೆ 1,27,593 ವಿದ್ಯಾರ್ಥಿಗಳಿಗೆ ರೂ. 157 ಕೋಟಿಗೂ ಅಧಿಕ ಮೊತ್ತದ ಶಿಷ್ಯವೇತನವನ್ನು ವಿತರಿಸಲಾಗಿದೆ. ಸಾಮಾನ್ಯವಾಗಿ ಶಿಷ್ಯವೇತನಗಳನ್ನು ವರ್ಷಕ್ಕೊಮ್ಮೆ ನೀಡುವುದಾಗಿದ್ದರೆ ಯೋಜನೆಯ ‘ಸುಜ್ಞಾನನಿಧಿ’ ಪ್ರತಿ ತಿಂಗಳು ನೀಡುವÀ ಒಂದು ವಿಶೇಷ ಪ್ರೋತ್ಸಾಹದ ಶಿಷ್ಯವೇತನವಾಗಿದೆ.
ಸುಜ್ಞಾನನಿಧಿ ಶಿಷ್ಯವೇತನವನ್ನು ಪಡೆದು ಶಿಕ್ಷಣವನ್ನು ಮುಗಿಸಿದ ಸಾವಿರಾರು ಮಂದಿ ಇಂದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ತಾಂತ್ರಿಕ ಶಿಕ್ಷಣ ಪಡೆಯಬೇಕೆಂಬ ಆಸೆಯಿದ್ದು ಆರ್ಥಿಕ ಸಮಸ್ಯೆಯಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದ ಎಷ್ಟೋ ಮಂದಿಗೆ ಈ ಶಿಷ್ಯವೇತನ ತಾಂತ್ರಿಕ ಶಿಕ್ಷಣದ ದಾರಿಯನ್ನು ತೋರಿಸಿ ಇಂದು ಅವರು ಉನ್ನತ ಹುದ್ದೆಯನ್ನು ಅಲಂಕರಿಸುವAತೆ ಮಾಡಿದೆ.
ಸ್ವಯಂಸೇವಾ ಸಂಸ್ಥೆಯೊAದು ವಿದ್ಯಾರ್ಥಿಗಳಿಗೆ ಕಳೆದ ಹತ್ತೊಂಭತ್ತು ವರ್ಷಗಳಿಂದ ಪ್ರತಿ ತಿಂಗಳು ತಪ್ಪದೇ ಶಿಷ್ಯವೇತನವನ್ನು ನೀಡುತ್ತಿರುವ ಇಂತಹ ಉದಾಹರಣೆ ಬೇರೆಲ್ಲೂ ಕಾಣಸಿಗಲಾರದು. ಶಿಕ್ಷಣ ಕ್ಷೇತ್ರಕ್ಕೆ ಶ್ರೀ ಹೆಗ್ಗಡೆ ದಂಪತಿಗಳ ಮಾರ್ಗದರ್ಶನದಲ್ಲಿ ಜ್ಞಾನದೀಪ ಶಾಲಾ ಶಿಕ್ಷಣ, ಬೆಂಚು-ಡೆಸ್ಕ್ ಒದಗಣೆ, ಶಾಲಾ ಕೊಠಡಿ ರಚನೆ, ಶಾಲೆಗಳಿಗೆ ವಿದ್ಯುತ್ ಸಂಪರ್ಕ, ಶಾಲಾ ಶೌಚಾಲಯ ನಿರ್ಮಾಣ, ಆಟದ ಮೈದಾನ, ಶಾಲಾ ಆವರಣ-ಕೊಠಡಿ ದುರಸ್ತಿ, ಕಂಪೌಂಡ್ ರಚನೆ, ಕುಡಿಯಲು ನೀರಿನ ವ್ಯವಸ್ಥೆ, ಪಾಠ-ಕ್ರೀಡಾ ಸಾಮಾಗ್ರಿ ವಿತರಣೆ, ಅಂಗನವಾಡಿ ಕಟ್ಟದ ನಿರ್ಮಾಣ, ಗ್ರಂಥಾಲಯ ಪುಸ್ತಕ ಪೂರೈಕೆ ಹೀಗೆ ಸಾಕಷ್ಟು ಕಾರ್ಯಕ್ರಮಗಳನ್ನು ಯೋಜನೆಯ ಮೂಲಕ ಮಾಡಲಾಗುತ್ತಿದೆ. ಇವುಗಳ ಜೊತೆಗೆ ಶಿಷ್ಯವೇತನವನ್ನು ನೀಡುತ್ತಿರುವುದು ಒಂದು ಅಮೋಘ ಪ್ರಯತ್ನ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇನ್ನಷ್ಟು ಕಾರ್ಯಕ್ರಮಗಳ ಮಾಹಿತಿಯನ್ನು ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.

Facebook
Twitter
WhatsApp
LinkedIn
Telegram