ಶ್ರದ್ಧಾಕೇಂದ್ರಗಳ ಸ್ವಚ್ಛತೆಯೆಂಬ ವಿನೂತನ ಕಲ್ಪನೆ

ಧಾರ್ಮಿಕ ಶ್ರದ್ಧಾಕೇಂದ್ರಗಳು ಮನುಕುಲದ ಬದುಕಿನಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವು ಒಂದು ಶ್ರೇಷ್ಠ ಜೀವನ ಶೈಲಿಗೆ ಪ್ರೇರಣೆ ನೀಡುವುದಲ್ಲದೆ ಆಧ್ಯಾತ್ಮಿಕತೆಯ ಮೂಲಕ ಆತ್ಮವಿಶ್ವಾಸ, ಸ್ಥೈರ್ಯವನ್ನು ಹೆಚ್ಚಿಸುತ್ತವೆ. ಆದ್ದರಿಂದ ಇಂತಹ ಧಾರ್ಮಿಕ ಶ್ರದ್ಧಾಕೇಂದ್ರಗಳು ಸ್ವಚ್ಛ, ಸುಂದರವಾಗಿರಬೇಕೆಂಬುವುದನ್ನು ಅನೇಕ ದಶಕಗಳಿಂದ ಆಶಿಸಿಕೊಂಡು ಕಾರ್ಯರೂಪಕ್ಕಿಳಿಸಿದವರು ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು. ಆದುದರಿಂದಲೇ ‘ಇಂಡಿಯಾ ಟುಡೇ’ ನಿಯತಕಾಲಿಕ ಪತ್ರಿಕೆ ಧರ್ಮಸ್ಥಳವನ್ನು ದೇಶದಲ್ಲೇ ಅತ್ಯಂತ ಸ್ವಚ್ಛ ಧಾರ್ಮಿಕ ನಗರಿ ಎಂದು ಗುರುತಿಸಿ 2013ರಲ್ಲಿ ‘ರಾಷ್ಟ್ರೀಯ ಸಫಾಯಿಗಿರಿ’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅನೇಕ ದಶಕಗಳಿಂದಲೂ ಯೋಜನೆಯ ಮೂಲಕ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದರೂ ಕೂಡಾ ಈ ಸುಸಂದರ್ಭದಲ್ಲಿ ಆ ಕಾರ್ಯಕ್ರಮಗಳಿಗೆ ‘ಶ್ರದ್ಧಾಕೇಂದ್ರಗಳ ಸ್ವಚ್ಛತೆ’ ಎಂಬ ಅಧಿಕೃತ ಹೆಸರನ್ನಿಡಲಾಯಿತು. ಈ ಕಾರ್ಯಕ್ರಮ ಇದೀಗ ಲಕ್ಷಾಂತರ ಮಂದಿಯನ್ನು ಸ್ವಚ್ಛ ಸಮಾಜ ನಿರ್ಮಾಣದ ಸೂತ್ರಧಾರಿಗಳನ್ನಾಗಿಸಿದೆ.
ದೇವಾಲಯದ ಒಳಾಂಗಣ, ಹೊರಾಂಗಣಗಳು ಬಹಳಷ್ಟು ವಿಶಾಲವಾಗಿರುವುದರಿಂದ ಜನರ ಸಹಭಾಗಿತ್ವದಡಿ ಮಾತ್ರ ನಿರಂತರ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಸಾಧ್ಯ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಜನಸಹಭಾಗಿತ್ವದಲ್ಲಿ ಪ್ರತಿವರ್ಷ ಎರಡು ಭಾರಿ ಅಂದರೆ ‘ಮಕರ ಸಂಕ್ರಮಣ’ ಹಾಗೂ ‘ಸ್ವಾತಂತ್ರ್ಯೋತ್ಸವದ ವಿಶೇಷ ಸಂದರ್ಭಗಳಲ್ಲಿ ‘ನಮ್ಮೂರು ನಮ್ಮ ಶ್ರದ್ಧಾಕೇಂದ್ರ’ ಎಂಬ ಧ್ಯೇಯ ವಾಕ್ಯದಡಿ ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಸಾಮುದಾಯಿಕವಾಗಿ ರಾಜ್ಯದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಈ ಕಾರ್ಯಕ್ರಮ ಜನರ ಸಹಭಾಗಿತ್ವಕ್ಕೆ ಒಂದು ಪ್ರೇರಣೆಯಾಗಿದೆ. ಆದರೆ ಇದರ ಉದ್ದೇಶ ಆ ಭಾಗದ ಜನರಲ್ಲಿ ಅಲ್ಲಿನ ಶ್ರದ್ಧಾಕೇಂದ್ರಗಳನ್ನು ದಿನನಿತ್ಯವು ಸ್ವಚ್ಛತೆಯಲ್ಲಿ ಇಟ್ಟುಕೊಳ್ಳುವ ಪ್ರಜ್ಞಾವಂತಿಕೆಯನ್ನು ಮೂಡಿಸುವುದಾಗಿದೆ.
ವರ್ಷಂಪ್ರತಿ ಸುಮಾರು ೧೦ ಸಾವಿರದಷ್ಟು ಶ್ರದ್ಧಾಕೇಂದ್ರಗಳು ಎರಡು ಭಾರಿ ಸ್ವಚ್ಛಗೊಳ್ಳುತ್ತವೆ. ಪ್ರತಿ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ, ನವಜೀವನ ಸಮಿತಿ, ಶೌರ್ಯ ವಿಪತ್ತು ನಿರ್ವಹಣೆಯ ಸದಸ್ಯರು, ಸ್ವಚ್ಛತಾ ಸೇನಾನಿಗಳು, ಊರಿನ ಗಣ್ಯರು, ಗ್ರಾಮಪಂಚಾಯತ್ ಸದಸ್ಯರು, ವಿವಿಧ ಸಂಘ ಸಂಸ್ಥೆಯ ಕಾರ್ಯಕರ್ತರು ಹೀಗೆ ಸುಮಾರು ೩ ಲಕ್ಷದಷ್ಟು ಮಂದಿ ಭಾಗವಹಿಸಿ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿದ್ದಾರೆ.
ಈ ಕಾರ್ಯಕ್ರಮದಡಿ ಶ್ರದ್ಧಾಕೇಂದ್ರಗಳ ಸುತ್ತಮುತ್ತಲಿನ ಗಿಡ-ಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸುವುದು, ದೇವಸ್ಥಾನ, ಬಸದಿಗಳು, ಮಂದಿರಗಳು, ಚರ್ಚ್, ಮಸೀದಿ ಮತ್ತು ಧಾರ್ಮಿಕ ಶ್ರದ್ಧಾಕೇಂದ್ರಗಳ ಆವರಣ, ಕಲ್ಯಾಣಿ, ಸಭಾಭವನ, ಅಶ್ವತ್ಥಕಟ್ಟೆ, ಅರಳಿಕಟ್ಟೆ ಸ್ವಚ್ಛಗೊಳಿಸುವುದು ಪ್ರಮುಖವಾಗಿದೆ. ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಪ್ರತಿನಿತ್ಯವು ಸ್ವಚ್ಛತೆಯಿಂದ ಕಾಪಾಡಿಕೊಂಡು ಹೋಗುವಂತೆ ಆಯಾ ಊರಿನ ಜನರಿಗೆ ಮಾಹಿತಿ, ಮಾರ್ಗದರ್ಶನಗಳನ್ನು ನೀಡಲಾಗುವುದು. ದೇವಸ್ಥಾನದ ಆವರಣದ ಸುತ್ತ ಕಸಕಡ್ಡಿ ಹಾಕದಂತೆ, ಉಗುಳದಂತೆ, ಮಲಿನವಾಗದಂತೆ ಜಾಗೃತಿ ಮೂಡಿಸಲಾಗುವುದು. ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟಿ ಪರಿಸರಸ್ನೇಹಿ ವಸ್ತುಗಳನ್ನೇ ಬಳಕೆ ಮಾಡಲು ಪ್ರೇರಣೆ ನೀಡಲಾಗುವುದು. ಈವರೆಗೆ ಒಟ್ಟು ೧,೮೭,೪೯೦ ಸ್ವಚ್ಛತಾ ಕಾರ್ಯಕ್ರಮಗಳು ನಡೆದಿವೆ.
ಈ ವಿನೂತನ ಕಲ್ಪನೆಯಿಂದಾಗಿ ಗಿಡ-ಗಂಟಿಗಳಿಂದ ತುಂಬಿದ್ದ ನೂರಾರು ಶ್ರದ್ಧಾಕೇಂದ್ರಗಳು ಕಂಗೊಳಿಸಿವೆ. ನಿತ್ಯ ಪೂಜೆ ನಡೆಯದ ಎಷ್ಟೋ ಕಡೆಗಳಲ್ಲಿ ಇದೀಗ ದಿನದ ಮೂರು ಹೊತ್ತು ಜಾಗಟೆಯ ನಾದ ಮೊಳಗುತ್ತಿದೆ. ಊರಿನ ಹೆಚ್ಚಿನ ಶ್ರದ್ಧಾಕೇಂದ್ರಗಳು ಭಕ್ತಿಯ ತಾಣಗಳಾಗಿವೆ. ಒಟ್ಟಾರೆಯಾಗಿ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಸ್ವಚ್ಛತೆಯ ಶಿಸ್ತನ್ನು ಮೈಗೂಡಿಸಿಕೊಳ್ಳುವುದಷ್ಟೇ ಅಲ್ಲದೆ ಆ ಶಿಸ್ತನ್ನು ನಾಡಿಗೆ ಪಸರಿಸಿದೆ. ಎಲ್ಲೆಂದರಲ್ಲಿ ಕಸ, ಪ್ಲಾಸ್ಟಿಕ್, ಬಾಟಲಿಗಳನ್ನು ಎಸೆಯುವವರ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ. ಸ್ವಚ್ಛತೆಯ ಕುರಿತು ಅರಿವು ಮೂಡಿದೆ. ಶ್ರದ್ಧಾಕೇಂದ್ರಗಳ ಸ್ವಚ್ಛತೆ ಎಂಬುವುದು ಆ ಊರ ಮಂದಿಯ ಕರ್ತವ್ಯವಾಗಿ ಮುಂದುವರಿದಿದೆ. ಇದೀಗ ಸಾಕಷ್ಟು ಶ್ರದ್ಧಾಕೇಂದ್ರಗಳು ಹೊಸ ಮೆರುಗನ್ನು ಪಡೆದಿರುವುದು, ಹಬ್ಬ ಹರಿದಿನ, ವಿಶೇಷ ದಿನಗಳಂದು ಸ್ವಯಂ ಪ್ರೇರಿತರಾಗಿ ಊರವರೆಲ್ಲ ಸೇರಿ ಶ್ರದ್ಧಾಕೇಂದ್ರಗಳನ್ನು ಸ್ವಚ್ಛಗೊಳಿಸುತ್ತಿರುವುದು ಈ ಕಾರ್ಯಕ್ರಮಕ್ಕೆ ಸಂದ ಯಶಸ್ಸು ಎನ್ನುವುದರಲ್ಲಿ ಎರಡು ಮಾತಿಲ್ಲ.
ಸ್ವಚ್ಛ ಭಾರತದ ಕಲ್ಪನೆಯ ಸಹಕಾರದತ್ತ ಶ್ರದ್ಧಾಕೇಂದ್ರಗಳ ಸ್ಚಚ್ಛತಾ ಅಭಿಯಾನ ಒಂದು ವಿಶೇಷ ಮೈಲುಗಲ್ಲು ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ. ಈ ಪ್ರಯತ್ನ ಇತರ ಸಂಘ ಸಂಸ್ಥೆಗಳಿಗೂ ಪ್ರೇರಣೆಯಾಗಿ ಅವರಿಂದಲೂ ಇಂತಹ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ.
ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.

Facebook
Twitter
WhatsApp
LinkedIn
Telegram