ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ

ಭಜನೆ ಎನ್ನುವ ಪದವು ಮೂಲತಃ ಸಂಸ್ಕೃತದಿoದ ಬಂದಿರುವುದಾಗಿದೆ. ಸಂಸ್ಕೃತದಲ್ಲಿ ‘ಭಜ್’ ಎಂದರೆ ಪೂಜಿಸು, ಅರ್ಪಿಸು ಎನ್ನುವ ಅರ್ಥ ನೀಡುತ್ತದೆ. ಭಕ್ತಿಯಿಂದ ಹಾಡುವುದರ ಮೂಲಕ ಭಗವಂತನನ್ನು ಭಜಿಸುವುದೇ ಭಜನೆ ಆಗಿದೆ. ನಮ್ಮ ದೇಶದಲ್ಲಿ ಭಜನಾ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಮಾಯಣ, ಮಹಾಭಾರತದಲ್ಲೂ ಭಜನೆಯ ಬಗ್ಗೆ ಉಲ್ಲೇಖ ಇರುವುದು ಭಜನೆಯ ಪ್ರಾಚೀನತೆಯನ್ನು ಎತ್ತಿ ತೋರಿಸುತ್ತದೆ. ಭಜನಾ ಸಂಸ್ಕೃತಿ ನೂರಾರು ಶ್ರೇಷ್ಠ ದಾಸರನ್ನು, ಕೀರ್ತನೆಗಾರರನ್ನು, ಬರಹಗಾರರನ್ನು ಸೃಷ್ಠಿಸಿದೆ. ಹತ್ತಾರು ಕಂಠಸಿರಿಗಳನ್ನು ಪರಿಚಯಿಸಿದೆ. ಭಕ್ತಿ ಭಾವಗಳ ಸಮ್ಮಿಶ್ರಣದ ಭಜನೆ ಪರಾಕಾಷ್ಠೆಗೇರಿದಾಗ ನೃತ್ಯ ಭಜನೆಯಾಯಿತು. ಹಿಂದಿನ ಕಾಲದಲ್ಲಿ ಪ್ರತಿ ಮನೆಗಳಲ್ಲಿ, ಮಂದಿರಗಳಲ್ಲಿ ನಿತ್ಯವೂ ಭಜನೆಯಾಗುತ್ತಿತ್ತು. ಕ್ರಮೇಣ ಜೀವನ ಶೈಲಿ ಬದಲಾದಂತೆ ಭಜನಾ ಸಂಸ್ಕೃತಿಯು ಕ್ಷೀಣಿಸುತ್ತಾ ಬಂತು. ಭಜನಾ ಸಂಸ್ಕೃತಿ ಕೇವಲ ಆಧ್ಯಾತ್ಮಿಕ ಪ್ರಕ್ರಿಯೆ ಆಗದೆ ಒಂದು ಆದರ್ಶ ಸಮುದಾಯ ಜೀವನವನ್ನು ಕಲ್ಪಿಸುವ ವೇದಿಕೆಯೂ ಆಗಿದೆ. ಬಡವ-ಶ್ರೀಮಂತ, ಮೇಲು-ಕೀಳು, ಜಾತಿ, ಲಿಂಗತಾರತಮ್ಯ ಇಲ್ಲದೆ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಈ ಭಜನೆಗಿದೆ. ನಿತ್ಯವೂ ಭಜನೆ ಮಾಡುವ ಕುಟುಂಬದ ವ್ಯಕ್ತಿಗಳಲ್ಲಿ ಸಹಜವಾಗಿಯೇ ಮೌಲ್ಯಯುತ ಗುಣಸ್ವಭಾವಗಳಿರುತ್ತವೆ. ಅಂತಹ ಭಜಕರು ಬಹಳಷ್ಟು ಮಂದಿ ಒಂದು ಗ್ರಾಮದಲ್ಲಿದ್ದು, ಸಮುದಾಯ ಭಜನೆ ಆದಲ್ಲಿ ಅದು ಒಂದು ಮೌಲ್ಯಯುತ ಸಮಾಜವನ್ನೇ ಸೃಷ್ಠಿಸುತ್ತದೆ. ಭಜನೆಯು ಮಾನಸಿಕ ನೆಮ್ಮದಿ ಹಾಗೂ ಆರೋಗ್ಯವನ್ನು ನೀಡುತ್ತದೆ ಎನ್ನುವುದನ್ನು ಇತ್ತೀಚಿನ ಹಲವು ಸಂಶೋಧನೆಗಳಲ್ಲಿ ಕಂಡುಕೊಳ್ಳಲಾಗಿದೆ. ಒಟ್ಟಿನಲ್ಲಿ ಭಜನೆ ಕೇವಲ ಒಬ್ಬ ವ್ಯಕ್ತಿ ಅಥವಾ ಕುಟುಂಬಕ್ಕಷ್ಟೇ ಒಳಿತನ್ನು ಮಾಡುವುದಲ್ಲದೆ ಸಮಷ್ಠಿಗೂ ಒಳಿತನ್ನು ಉಂಟು ಮಾಡುತ್ತದೆ.
ಭಾರತೀಯ ಸಂಸ್ಕೃತಿಯ ಅಮೂಲ್ಯ ಭಾಗವಾಗಿರುವ ಈ ಭಜನೆಯನ್ನು ಉಳಿಸಿ, ಬೆಳೆಸಬೇಕೆಂದು ಪಣತೊಟ್ಟಿರುವ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಎರಡುವರೆ ದಶಕಗಳ ಹಿಂದೆಯೇ ಬಹುದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಅದುವೇ ‘ಧರ್ಮಸ್ಥಳ ಭಜನಾ ತರಬೇತಿ ಕಮ್ಮಟ’.
1999ರ ಅಕ್ಟೋಬರ್‌ನಲ್ಲಿ ಶ್ರೀ ಕ್ಷೇತ್ರದಲ್ಲಿ ಪ್ರಥಮ ಭಜನಾ ಕಮ್ಮಟವನ್ನು ಪೂಜ್ಯರು ಆರಂಭಿಸಿದರು. ಅದಕ್ಕೆ ದೊರೆತ ಪ್ರತಿಕ್ರಿಯೆ ನಿರೀಕ್ಷೆಗೂ ಮೀರಿದುದು. ಪ್ರತಿ ವರ್ಷ ರಾಜ್ಯದ ಬೇರೆ ಬೇರೆ ಕಡೆಗಳಿಂದ ಶಿಬಿರಾರ್ಥಿಗಳನ್ನು ಆಹ್ವಾನಿಸಿ ಅವರಿಗೆ ಉಚಿತವಾಗಿ ಒಂದು ವಾರಗಳ ಭಜನಾ ತರಬೇತಿ ನೀಡಿ ಕೊನೆಯ ದಿನ ಇತರ ಆಸಕ್ತಿಯುತ ಭಜನಾ ತಂಡಗಳ ಜೊತೆಗೆ ಭಜನೆಗಳಿಗೆ ಹೆಜ್ಜೆ ಹಾಕುವ ಅರ್ಥಪೂರ್ಣ ಕಾರ್ಯಕ್ರಮವಿದು. ಒಂದು ವಾರಗಳ ಕಾಲ ಪ್ರತಿನಿತ್ಯ ಭಜನೆಯ ತರಬೇತಿಯೊಂದಿಗೆ ರಾಜ್ಯದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸವನ್ನು ನೀಡಲಾಗುತ್ತದೆ. ಭಜನಾ ತರಬೇತಿ ಕಮ್ಮಟದ ಸಂದರ್ಭ ಶಿಬಿರಾರ್ಥಿಗಳಿಂದ ಸಂಜೆ ಗಂಟೆ 5.30 ರಿಂದ ಧರ್ಮಸ್ಥಳದ ಪರಿಸರದಲ್ಲಿ ನಗರ ಭಜನೆಯನ್ನು ಹಮ್ಮಿಕೊಳ್ಳಲಾಗುತ್ತದೆ.
ಭಜನಾ ಕಮ್ಮಟವನ್ನು ಯಶಸ್ವಿಗೊಳಿಸುವಲ್ಲಿ ‘ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್’ನ ಅನುಭವಿಗಳ ತಂಡವೊoದು ಜೊತೆಗಿರುತ್ತದೆ. ಇವರ ಈ ಪ್ರಯತ್ನಕ್ಕೆ ಪ್ರತಿಫಲವೆಂಬoತೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ 2014ರಲ್ಲಿ ‘ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’ಯನ್ನು ತನ್ನದಾಗಿಸಿಕೊಂಡಿದೆ. ಭಜನೆಯಲ್ಲಿ ವಿಶೇಷ ಆಸಕ್ತಿ ಹೊಂದಿದ ಮಾತೃಶ್ರೀ ಶ್ರೀಮತಿ ಹೇಮಾವತಿ. ವೀ. ಹೆಗ್ಗಡೆಯವರು ಕೂಡ ಈ ನಾಡಿನಲ್ಲಿ ಭಜನಾ ಸಂಸ್ಕೃತಿಗಾಗಿ ಪೂಜ್ಯರೊಂದಿಗೆ ಶ್ರಮಿಸುತ್ತಿದ್ದಾರೆ. ಸ್ವತಹ ತಾವೇ ಭಜನೆಗಳನ್ನು ಬರೆದು ಶುಶ್ರವ್ಯವಾಗಿ ಭಜಿಸುವಂತೆ ತರಬೇತಿ, ಮಾರ್ಗದರ್ಶನ ನೀಡುತ್ತಿದ್ದಾರೆ. ಪ್ರಾರಂಭದಲ್ಲಿ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಭಜನಾ ಕಮ್ಮಟ ಬಳಿಕ ಯುವತಿಯರನ್ನೂ ಸೇರಿಸಿಕೊಂಡು ಅಲ್ಲೂ ಸಮಾನತೆಯನ್ನು ಕಾಯ್ದುಕೊಳ್ಳಲಾಗಿದೆ. ಮಾನಸಿಕ ಭಾವನೆಗಳ ಶುದ್ಧೀಕರಣ, ಅರ್ಪಣಾ ಮನೋಭಾವ, ಸಂತೃಪ್ತಿಯ ಭಾವಗಳನ್ನು ಹೊಂದುವುದಕ್ಕೆ ಹಾಗೂ ಮೌಲ್ಯಯುತ ಜೀವನದೊಂದಿಗೆ ಇತರರೊಂದಿಗೆ ಸಹಬಾಳ್ವೆಯ ಮನೋಭಾವನೆಯನ್ನು ವ್ಯಕ್ತಿಗಳಲ್ಲಿ ಈ ಭಜನೆಯೂ ಬೆಳೆಸುತ್ತದೆ. ಕಮ್ಮಟದಿಂದಾಗಿ ಹಾಡುಗಳ ಆಯ್ಕೆ, ರಾಗ, ತಾಳಗಳ ಸುಧಾರಣೆಯಾಗಿದೆ. ಭಜನಾ ಕಮ್ಮಟದ ಸಮಾರೋಪದಂದು ಶೋಭಾಯಾತ್ರೆ ಹಾಗೂ ಭಜನೋತ್ಸವ ಕಾರ್ಯಕ್ರಮ ವಿಜೃಂಭಣೆಯಿoದ ನಡೆಯುತ್ತದೆ. ಆಹ್ವಾನಿತ ತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತವೆ. ಕಳೆದ 26 ವರ್ಷಗಳಿಂದ ೬೨೦೦ ಭಜನಾ ಮಂಡಳಿಗಳ ಸುಮಾರು 1 ಲಕ್ಷ ಮಂದಿ ಭಜಕರು ಮಂಗಳೋತ್ಸವದಲ್ಲಿ ಭಾಗವಹಿಸಿದ್ದಾರೆ. ಈವರೆಗೆ 2,834 ಭಜನಾ ಮಂಡಳಿಗಳ ಸರಿಸುಮಾರು 5,668 ಮಂದಿ ಶಿಬಿರಾರ್ಥಿಗಳು ಒಂದು ವಾರಗಳ ಕಾಲದ ಭಜನಾ ಕಮ್ಮಟದಲ್ಲಿ ಭಾಗವಹಿಸಿ ತರಬೇತಿಯನ್ನು ಪಡೆದಿದ್ದಾರೆ. ಸುಪ್ರಭಾತ, ಲಯಬದ್ಧ ಕುಣಿತ ಭಜನೆ, ನಗರ ಸಂಕೀರ್ತನೆ, ಚಾವಡಿ ಚರ್ಚೆ ಕುರಿತು ಕಮ್ಮಟದಲ್ಲಿ ಮಾಹಿತಿಯನ್ನು ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಗುತ್ತದೆ.
ಅನೇಕ ದುಶ್ಚಟಗಳಿಂದ, ಸಮೂಹ ಮಾಧ್ಯಮದ ವ್ಯಾಮೋಹದಿಂದ ಮೌಲ್ಯಯುತ ಜೀವನವನ್ನು ಕಳೆದುಕೊಳ್ಳುತ್ತಿರುವ ಯುವಜನತೆಯಲ್ಲಿ ಭಜನಾ ಅಭಿರುಚಿಯನ್ನು ಬೆಳೆಸಿ ಅರ್ಥಪೂರ್ಣ ಯುವಶಕ್ತಿಯನ್ನು ‘ಧರ್ಮಸ್ಥಳ ಭಜನಾ ತರಬೇತಿ ಕಮ್ಮಟ’ ಸೃಷ್ಠಿಸುತ್ತಿದೆ. ಈ ಭಾರಿಯ ಭಜನಾ ಕಮ್ಮಟ ಸಪ್ಟೆಂಬರ್ 14ರಂದು ಆರಂಭಗೊoಡು 21ರಂದು ಸಮಾಪನಗೊಳ್ಳಲಿದೆ. ಇಂತಹ ಕಮ್ಮಟಗಳು ಎಲ್ಲೆಡೆಯೂ ನಡೆದು ಮನೆ-ಮನಗಳಲ್ಲಿ ಭಜನೆಯ ಸಂಸ್ಕೃತಿ ಉಳಿದು ಬೆಳೆಯುವಂತಾಗಲಿ ಎಂದು ಆಶಿಸೋಣ

Facebook
Twitter
WhatsApp
LinkedIn
Telegram