ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
‘ಅವನಿಗೆ ಸಾಮಾನ್ಯ ಜ್ಞಾನವೇ ಇಲ್ಲ’ ಎಂಬ ಪದ ಪ್ರಯೋಗವಾಗುವುದನ್ನು ನಾವು ಹಲವೆಡೆ, ಹಲವು ಸಂದರ್ಭಗಳಲ್ಲಿ ಕೇಳುತ್ತಿರುತ್ತೇವೆ. ‘ಸಾಮಾನ್ಯ ಜ್ಞಾನ’ ಎನ್ನುವುದು ‘ಅಸಮಾನ್ಯವಾದ ಜ್ಞಾನ’ವೇ ಆಗಿದೆ. ಇದು ಮಾನವನ ಬದುಕಿನಲ್ಲಿ ಇರಬೇಕಾದ ಅಗತ್ಯ ಗುಣಗಳಲ್ಲಿ ಒಂದಾಗಿದ್ದು ಇದನ್ನು ಬೆಳೆಸಿಕೊಳ್ಳುವಲ್ಲಿ ಹುಮ್ಮಸ್ಸು ತೋರುವವರ ಸಂಖ್ಯೆ ಬಹಳ ವಿರಳ. ಯಾಕೆಂದರೆ ಮಕ್ಕಳಿಗೆ ಇದು ಪಾಠ ಪುಸ್ತಕದಲ್ಲಿ ಲಭ್ಯವಿರುವುದಿಲ್ಲ. ಹಾಗಾಗಿ ಪರೀಕ್ಷೆಯಲ್ಲಿ ಈ ಕುರಿತು ಪ್ರಶ್ನೆಗಳು ಬರುವುದಿಲ್ಲ. ಒಂದಷ್ಟು ಜ್ಞಾನ ಸಂಪತ್ತು ತನ್ನ ಬಳಿ ಇದ್ದರೂ ‘ನನಗೆ ಏನೂ ಗೊತ್ತಿಲ’್ಲ ಎಂಬ ಭಾವನೆ ಯಾರಲ್ಲಿರುತ್ತದೆಯೋ ಅವರಿಗೆ ಮಾತ್ರ ಹೊಸದನ್ನು ಕಲಿಯುವ ಆಸಕ್ತಿ ಇರುತ್ತದೆ. ತನ್ನದೇ ಆದ ಚಿಂತನೆಗಳಿAದ, ಬೇರೊಬ್ಬರು ಹೇಳಿದ್ದನ್ನು, ಬರೆದದ್ದನ್ನು ತಿಳಿದುಕೊಳ್ಳುವ, ತನ್ನದೇ ಆದ ಜೀವನಾನುಭವಗಳ ಮೂಲಕ ಅನೇಕ ಸಲ ಬೇರೆ ಬೇರೆ ಪ್ರಶ್ನೆಗಳಿಗೆ ಉತ್ತರ ಹುಡುಕುವ ಜಿಜ್ಞಾಸೆ ಬೆಳೆಸಿಕೊಂಡವರಿಗೆ ಮಾತ್ರ ‘ಸಾಮಾನ್ಯ ಜ್ಞಾನ’ ಎನ್ನುವುದು ದಕ್ಕುತ್ತದೆ.
ಅಜ್ಞಾನಿಗೆ ತನ್ನಲ್ಲಿರುವ ಅಜ್ಞಾನ ಒಂದನ್ನು ಬಿಟ್ಟು ಬಾಕಿ ಎಲ್ಲವೂ ಗೊತ್ತಿರುತ್ತದೆ. ಆತ ಅಜ್ಞಾನದಿಂದ ಆಡಿದ ಮಾತುಗಳು ತಪ್ಪಾಗಿದ್ದರೂ ಅದನ್ನು ಒಪ್ಪಿಕೊಳ್ಳದೆ ಮತ್ತಷ್ಟು ಅಜ್ಞಾನವನ್ನು ಪ್ರದರ್ಶಿಸುತ್ತಾನೆ. ಆದರೆ ಜ್ಞಾನಿ ತನ್ನ ತಪ್ಪುಗಳನ್ನು ಒಪ್ಪಿಕೊಂಡು ತನ್ನ ಜೀವನದ ಕೊನೆಯವರೆಗೆ ಕಲಿಯುವುದರಲ್ಲಿ ಆಸಕ್ತನಾಗಿರುತ್ತಾನೆ. ಇಂಥಾ ಕಲಿಕೆ ಉಳ್ಳವನಲ್ಲಿ ಮಾತ್ರ ಬಹಳಷ್ಟು ಸಾಮಾನ್ಯ ಜ್ಞಾನ ಸಂಗ್ರಹವಾಗುತ್ತದೆ.
ಹಿoದೆ ಹಳ್ಳಿಗಳಲ್ಲಿ ಊರಿನವರು ಅವರ ಜೀವನಾನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಅದು ಕೃಷಿ ಬಗ್ಗೆ ಇರಬಹುದು, ಹಳ್ಳಿ ಮದ್ದುಗಳ ಬಗ್ಗೆ ಇರಬಹುದು, ಆ ಊರಿನ ಇತಿಹಾಸದ ಬಗ್ಗೆ ಇರಬಹುದು. ಅದನ್ನು ಕೇಳಿಸಿಕೊಂಡಾಗ ನಮಗೆ ಬಹಳಷ್ಟು ವಿಚಾರಗಳ ಅರಿವಾಗುತ್ತಿತ್ತು. ಪುಸ್ತಕ, ಪ್ರಬಂಧ, ಪ್ರವಾಸ ಕಥನ, ಕಾದಂಬರಿ ಇವೆಲ್ಲವುಗಳನ್ನು ಓದುವ ಹವ್ಯಾಸ ನಮ್ಮ ಜ್ಞಾನ ಸಂಗ್ರಹಕ್ಕೆ ಬಹಳ ಒಳ್ಳೆಯ ಸಾಧನಗಳಾಗಿವೆ. ಶಾಲೆಯಲ್ಲಿ ಹೆಚ್ಚು ಕಲಿಯದಿದ್ದರೂ, ಅವನಿಗೆ ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ಆತನಲ್ಲಿ ಹತ್ತು ಹಲವು ಮಾಹಿತಿಗಳು, ವಿಚಾರಗಳು ಇರಲು ಸಾಧ್ಯವಿದೆ. ಹಿಂದೆ ಹರಿಕಥೆ, ಕಾವ್ಯವಾಚನ, ಯಕ್ಷಗಾನ ವೀಕ್ಷಣೆಯ ಮೂಲಕ ನಮ್ಮ ಹಿರಿಯರು ರಾಮಾಯಣ, ಮಹಾಭಾರತದ ಕತೆ, ಉಪಕತೆಗಳನ್ನು ತಿಳಿದುಕೊಂಡು ದೈನಂದಿನ ಬದುಕಿನಲ್ಲಿ ಒಳ್ಳೆಯತನ, ಕೆಟ್ಟತನಗಳಿಗೆ ಅವರನ್ನು ಉದಾಹರಿಸಿ ಮಾತನಾಡುತ್ತಿದ್ದರು. ಇದು ಶಾಲೆಗೆ ಹೋಗದೆಯೂ ಜ್ಞಾನ ಸಂಪಾದಿಸುವ ಮಾರ್ಗವಾಗಿತ್ತು. ಜೊತೆಗೆ ತೀರ್ಥಯಾತ್ರೆಯ ನೆಪದಲ್ಲಿ ದಕ್ಷಿಣದಿಂದ ಹೊರಟು ಉತ್ತರ ಭಾರತದ ಎಲ್ಲಾ ಸಣ್ಣ ದೊಡ್ಡ ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತಾ ಅಲ್ಲಿಯ ಜನ ಜೀವನ, ಆಹಾರ ಪದ್ಧತಿ, ಉಡುಗೆ-ತೊಡುಗೆಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು.
ಇಂದು ಜ್ಞಾನ ಸಂಪಾದನೆಗೆ ನೂರಾರು ಮಾರ್ಗಗಳು ನಮಗೆ ಲಭ್ಯವಾಗಿವೆ. ದಿನಾಲೂ ಪತ್ರಿಕೆಗಳು, ನಾನಾ ರೀತಿಯ ಸಂಚಿಕೆಗಳು ಓದಲು ಸಿಗುತ್ತಿವೆ. ಜೊತೆಗೆ ಕನ್ನಡ ಮಾತ್ರವಲ್ಲದೆ ಹಿಂದಿ, ಇಂಗ್ಲಿಷ್ ಇತ್ಯಾದಿ ಭಾಷೆಗಳ ಪುಸ್ತಕಗಳು ಕನ್ನಡ ಭಾಷೆಗೆ ಭಾಷಾಂತರಗೊoಡು ಓದಿಗೆ ಲಭ್ಯವಿದೆ. ಸಾಹಿತ್ಯ, ಕಾವ್ಯ, ಕವನ ಪ್ರಕಾರಗಳ ಬಗ್ಗೆ ಆಸಕ್ತಿ ಇದ್ದವ ಹೊಸ ಪುಸ್ತಕಗಳಿಗಾಗಿ ಹುಡುಕಾಡುತ್ತಾನೆ. ಯಾರಲ್ಲಿ ಯಾವ ಪುಸ್ತಕ ಇದೆ ಎಂಬುದನ್ನು ಅರಿತುಕೊಂಡು ಅವರ ಮನೆ ಬಾಗಿಲಿಗೆ ಹೋಗಿ ಎರವಲು ತಂದಾದರೂ ಓದುತ್ತಾನೆ. ಆದರೆ ಎಲ್ಲದಕ್ಕೂ ಮುಖ್ಯವಾಗಿ ಬೇಕಾಗಿರುವುದು ತಿಳಿದುಕೊಳ್ಳಬೇಕೆಂಬ ಆಸಕ್ತಿ. ಕಾರುಗಳ ಬಗ್ಗೆ ಆಸಕ್ತಿ ಇದ್ದವ ಹಿಂದಿನ ಕಾಲದಿಂದ ಹಿಡಿದು ಇಂದಿನ ಅತ್ಯಾಧುನಿಕ ಕಾಲದ ಕಾರುಗಳ ಬಗ್ಗೆ ತಿಳಿದುಕೊಳ್ಳುತ್ತಾನೆ. ಹಾಗೆಯೇ ಯಂತ್ರಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಕುತೂಹಲ ಇದ್ದವ ಅದರ ಬಗ್ಗೆ ಆಸಕ್ತಿ ವಹಿಸುತ್ತಾನೆ. ಕೆಲವರಿಗೆ ತಾವು ವೈದ್ಯರಲ್ಲದಿದ್ದರೂ ಮಾನವನ ಶರೀರ, ಅದು ಕೆಲಸ ಮಾಡುವ ರೀತಿ ಇವುಗಳ ಬಗ್ಗೆ ತಿಳಿದುಕೊಳ್ಳುವ ಹುಮ್ಮಸ್ಸು ಇರುತ್ತದೆ.
ಐ.ಎ.ಎಸ್. ಮಾಡಬೇಕೆನ್ನುವವರಿಗೆ ‘ಸಾಮಾನ್ಯ ಜ್ಞಾನ’ ಅತ್ಯಗತ್ಯ. ಮನುಷ್ಯನ ಮೆದುಳು ಒಂದು ಕಂಪ್ಯೂಟರ್ ಇದ್ದಂತೆ. ಅದಕ್ಕೆ ಎಷ್ಟು ವಿಷಯಗಳನ್ನು ಕೊಡುತ್ತೇವೆಯೋ ಅವೆಲ್ಲವನ್ನೂ ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ಹಿಂದಿನ ಕಾಲದಿಂದಲೂ ರಾಜ-ಮಹಾರಾಜರ ಆಸ್ಥಾನದಲ್ಲಿ ಎಲ್ಲಾ ಪ್ರಶ್ನೆ, ಸಮಸ್ಯೆಗಳಿಗೆ ಉತ್ತರ ಹೇಳಬಲ್ಲ ಮೇಧಾವಿಗಳು ಇರುತ್ತಿದ್ದರು. ಮಾತ್ರವಲ್ಲ ಆ ಕಾಲದಲ್ಲೆ ಶತಾವಧಾನಿಗಳೂ ಇರುತ್ತಿದ್ದರು. ಶತಾವಧಾನವೂ ಮಾನವ ಮೆದುಳಿಗೊಂದು ದೊಡ್ಡ ಸವಾಲು.
ವಿದೇಶಗಳಲ್ಲಿ ಇಂಗ್ಲಿಷ್ ಭಾಷೆಗೆ ಸಂಬoಧಪಟ್ಟoತೆ ಅಕ್ಷರಗಳನ್ನು ಹೇಳುವಲ್ಲಿ ಭಾರತ ದೇಶದ ಮಕ್ಕಳೇ ಮುಂದಿದ್ದಾರೆ. ಆದರೆ ಹೊಸ ಹೊಸ ಅನ್ವೇಷಣೆಗಳಲ್ಲಿ ಅಮೇರಿಕಾದಂತಹ ಪಾಶ್ಚಾತ್ಯ ದೇಶದ ತಜ್ಞರೇ ಹೆಚ್ಚು ಸಾಧನೆಯನ್ನು ಮಾಡಿದ್ದಾರೆ. ಇದು ಅವರುಗಳಲ್ಲಿರುವ ಸಾಮಾನ್ಯ ಜ್ಞಾನದಿಂದ ಸಾಧ್ಯವಾಗಿದೆ.ಒಟ್ಟಾರೆಯಾಗಿ ‘ಸಾಮಾನ್ಯ ಜ್ಞಾನ’ ನಮ್ಮ ಬದುಕಿಗೊಂದು ಹೊಸ ಅರ್ಥವನ್ನು ನೀಡುತ್ತದೆ. ಅವುಗಳನ್ನು ಬೆಳೆಸಿಕೊಳ್ಳುವ ಪ್ರಯತ್ನದಲ್ಲಿ ನಾವೆಲ್ಲ ತೊಡಗಬೇಕಿದೆ.