ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಿ

ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಲು ಅವರಿಗೆ ಪ್ರೇರಣೆ ನೀಡಿದ ಅಂಶಗಳನ್ನಷ್ಟೇ ಅವರ ಭಾಷಣದಿಂದ ಆಯ್ದು ಇಲ್ಲಿ ನೀಡಲಾಗಿದೆ.
ನನ್ನ ಬಾಲ್ಯವನ್ನು ನಾನು ಕವಿ ರತ್ನಾಕರವರ್ಣಿಯ ಮೂಡುಬಿದಿರೆಯಲ್ಲಿ ಕಳೆದೆ. ನನ್ನ ತಂದೆಯವರು ಸಂಸ್ಕೃತ, ಪ್ರಾಕೃತ ಮತ್ತು ಕನ್ನಡದ ವಿದ್ವಾಂಸರಾಗಿದ್ದರು. ಅವರು ನನಗೆ ಬಾಲ್ಯದಲ್ಲಿ ಪಂಪ, ರನ್ನ ಮತ್ತು ಸಂಸ್ಕೃತದ ಇತರ ಕಾವ್ಯಗಳ ಜೊತೆಗೆ ಕನ್ನಡದ ಅಮರಕೋಶ ವ್ಯಾಕರಣವನ್ನೂ ಸಹ ಬಾಯಿಪಾಠ ಮಾಡಿಸುತ್ತಿದ್ದರು. ನನ್ನ ತಾಯಿ ನನಗೆ ಪಾರಮಾರ್ಥಿಕ ವಿಚಾರಗಳ ಜೊತೆಗೆ ರತ್ನಾಕರವರ್ಣಿಯ ಭರತೇಶ ವೈಭವ, ಶತಕತ್ರಯ ಇತ್ಯಾದಿಗಳನ್ನು ಕಲಿಸುತ್ತಿದ್ದರು. ನಮ್ಮ ದೊಡ್ಡಮ್ಮ, ಚಿಕ್ಕಮ್ಮ ಮತ್ತು ಅಮ್ಮ ಮೂರೂ ಜನ ರಾತ್ರಿ ದೀಪದ ಬೆಳಕಿನಲ್ಲಿ ಭರತೇಶ ವೈಭವ ಓದಿ ಅದರ ಅರ್ಥವನ್ನು ಹೇಳುತ್ತಿದ್ದರೆ ನಿಜವಾಗಿ ಅವರ ಇಂಪಾದ ರಾಗ ಮತ್ತು ಅರ್ಥ ವಿಸ್ತಾರ ನನ್ನನ್ನು ಸೆಳೆಯುತ್ತಿತ್ತು. ಇದು ನನ್ನಲ್ಲಿ ಸಾಹಿತ್ಯಿಕ ಮತ್ತು ಆತ್ಮೋನ್ನತಿಯ ವಿಕಾಸಕ್ಕೂ ಕಾರಣವಾಯಿತು. ಆಗ ನಮಗೆ ಕನ್ನಡ ಶಾಲೆಗಳೆಂದರೆ ಒಂದು ರೀತಿಯ ಪುಳಕ. ಅಲ್ಲಿ ನಾವು ಕಲಿತ ಅನೇಕ ಮಕ್ಕಳ ಗೀತೆಗಳು, ಬಸವಣ್ಣ, ಕನಕದಾಸ, ಸರ್ವಜ್ಞರ ವಚನಗಳು ಇವುಗಳಲ್ಲಿ ಬಾಲ್ಯವನ್ನು ಅರಳಿಸಬಲ್ಲ ಶಕ್ತಿಯಿತ್ತು. ಕನ್ನಡ ರಾಜ್ಯೋತ್ಸವದಂದು ಹಾಡುತ್ತಿದ್ದ ‘ಬಾರಿಸು ಕನ್ನಡ ಡಿಂಡಿಮವ’ ಅಥವಾ ‘ಹಚ್ಚೇವು ಕನ್ನಡದ ದೀಪ’ ಇವೆಲ್ಲ ಹಾಡುಗಳು ನಮ್ಮ ಮೈನವಿರೇಳಿಸುವಂತೆ ಮಾಡುತ್ತಿದ್ದವು. ಒಂದನೇ ತರಗತಿಯಲ್ಲಿ ಆರಂಭವಾಗುತ್ತಿದ್ದ ರಾಮಾಯಣ, ಮಹಾಭಾರತದ ಕಥೆಗಳು ಬಹುಶಃ ನಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಯುವವರೆಗೂ ಇರುತ್ತಿತ್ತು. ಅದರಲ್ಲಿ ಬರುವ ಕಥೆ, ಉಪಕಥೆ, ವ್ಯಕ್ತಿ ಚಿತ್ರಣಗಳು ನಮ್ಮೊಳಗಿನ ಕಲ್ಪನಾ ಜಗತ್ತನ್ನು ವಿಸ್ತರಿಸುವ ಕೆಲಸವನ್ನು ಮಾಡುತ್ತಿದ್ದವು. ಬಾಲ್ಯದಲ್ಲಿ ಯಕ್ಷಗಾನ, ತಾಳಮದ್ದಲೆ, ಭೂತಾರಾಧನೆಯನ್ನು ನೋಡುವ, ಕೇಳುವ ಅವಕಾಶ ಸಿಗುತ್ತಿತ್ತು. ಅದರ ಜೊತೆಗೆ ಒಕ್ಕಲು ಮಕ್ಕಳು ಹೇಳುತ್ತಿದ್ದ ಹಳ್ಳಿಯ ಜನಪದ ಕಥೆ, ಗೀತೆಗಳು, ಗಾದೆ ಮಾತುಗಳು, ಒಗಟುಗಳು ರಾತ್ರಿ ನಮಗೆ ಸಮಯ ಕಳೆಯುವ ಸಾಧನವಾಗಿತ್ತು. ಕೃಷಿ ಕುಟುಂಬದಲ್ಲಿ ಜನಿಸಿದ ನಮಗೆ ಅದು ಕೇವಲ ಹೊಟ್ಟೆ ಹೊರೆಯುವ ಸಾಧನ ಮಾತ್ರ ಆಗಿರದೆ ಬದುಕನ್ನು ಶ್ರೀಮಂತಗೊಳಿಸುವ ಸಾಂಪ್ರದಾಯಿಕ ಆಚರಣೆಗಳಾದ ಗೋಪೂಜೆ, ಗದ್ದೆಪೂಜೆ, ಬದುಕಿನ ಭಾಗವಾದ ಕೃಷಿ ಉಪಕರಣಗಳಿಗೆ, ದನ, ಎತ್ತುಗಳಿಗೆ, ಭೂತಾಯಿಗೆ ಗೌರವ ಸಲ್ಲಿಸುವ ಒಂದು ಅನನ್ಯ ಆಚರಣೆಯಾಗಿತ್ತು. ಈ ಆಚರಣೆಗಳು ಅಂದಿನ ಕೃಷಿ ಬದುಕಿನ ಶ್ರೀಮಂತಿಕೆಯನ್ನು ನೆನಪಿಸುತ್ತಿತ್ತು.
ಹಿಂದೆ ಗದ್ದೆ ಬಿತ್ತುವ, ಕೊಯ್ಯುವ ಪ್ರಕ್ರಿಯೆಯಿಂದ ಹಿಡಿದು ಅನ್ನ ಆಗುವವರೆಗಿನ ಎಲ್ಲ ಕ್ರಿಯೆಗಳು ಮನೆಯಂಗಳದಲ್ಲೇ ನಡೆಯತ್ತಿದ್ದುದರಿಂದ ದಿನಾಲೂ ಒಂದು ರೀತಿಯ ಸಂಭ್ರಮ ಅಲ್ಲಿ ಸೃಷ್ಟಿಯಾಗುತ್ತಿತ್ತು. ಜೊತೆಗೆ ಸಂಧಿ, ಪಾಡ್ದನಗಳು ಕಿವಿ ತುಂಬುತ್ತಿದ್ದವು. ಆಗಿನ ಕಾಲದಲ್ಲಿ ನನಗೆ ಮಾತ್ರವಲ್ಲ. ನನ್ನಂಥ ಅನೇಕ ವಿದ್ಯಾರ್ಥಿನಿಯರಿಗೆ ಭಾವಗೀತೆಗಳನ್ನು ಕೇಳುವ, ಕೇಳಿದ್ದನ್ನು ಬರೆದಿಡುವ ಹವ್ಯಾಸವಿತ್ತು. ಆಗಿನ ಕಾಲದ ಜನಪ್ರಿಯ ಕಾದಂಬರಿಕಾರರಾದ ತ್ರಿವೇಣಿ, ಎಂ. ಕೆ. ಇಂದಿರಾ, ಅನುಪಮ ನಿರಂಜನ, ತ.ರಾ.ಸು., ಮಾಸ್ತಿ, ಕಾರಂತರು ಇವರ ಕಾದಂಬರಿಗಳನ್ನು ಓದದ ಹೆಣ್ಣು ಮಕ್ಕಳೇ ಇರಲಿಕ್ಕಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ಇದನ್ನೆಲ್ಲ ಯೋಚಿಸುವಾಗ ಇಂದಿನ ಮಕ್ಕಳು ಏನೆಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರವಾಗುತ್ತದೆ. ‘ಈ ನಾಡು ಕನ್ನಡ, ಈ ಬೀಡು ಕನ್ನಡ, ನೀ ಹಾಡು ಕನ್ನಡ’ ಅಂತ ಈಗಿನ ಇಂಗ್ಲೀಷ್ ಮೀಡಿಯಂನ ಮಕ್ಕಳು ತರಗತಿಯ ಒಳಗೆ ಹೋದರೆ ಅಲ್ಲಿ ಒಳಗೆ ಹೋದ ಬಳಿಕ ಅಲ್ಲಿ ಕನ್ನಡ ಮಾತನಾಡಿದರೆ ಪೆಟ್ಟು ಸಿಗುತ್ತದೆ. ಹಾಗಾಗಿ ಈಗಿನ ಮಕ್ಕಳು ಒಂದು ರೀತಿಯಲ್ಲಿ ಪ್ರಾದೇಶಿಕ ಭಾಷೆಯನ್ನು ಬಿಟ್ಟು ಬೇರಿಲ್ಲದ ಮರದಂತೆ, ತಾಯಿ ಇಲ್ಲದ ಕಂದಮ್ಮನAತೆ ತಬ್ಬಲಿಗಳಾಗಿ ಕಾಣುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತದೆ. ನನ್ನ ಕಾಲದ ಪ್ರಾಥಮಿಕ ಶಿಕ್ಷಣದ ಶಿಶು ಗೀತೆಗಳು ಇಂದಿಗೂ ನಮ್ಮ ಬಾಲ್ಯವನ್ನು ನೆನಪಿಸುತ್ತದೆ. ಬೊಳುವಾರು ಮುಹಮ್ಮದ್ ಕುಂಞರವರ ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಎಂಬ ಹೆಸರಿನ ಶಿಶುಗೀತೆಗಳನ್ನು ಸಂಗ್ರಹಿಸಿ ಅವುಗಳನ್ನು ಸೇರಿಸಿ ಜನರಿಗೆ ಕೊಟ್ಟಿರುವುದು ದೊಡ್ಡ ಕೊಡುಗೆ ಎಂದು ನಾನು ಭಾವಿಸುತ್ತೇನೆ. ಮುಂದೆ ಪ್ರೌಢಶಾಲೆಯಲ್ಲಿ ಅನೇಕ ಹಳೆಗನ್ನಡ ಪದ್ಯಗಳು, ವಚನಗಳು, ತ್ರಿಪದಿಗಳು, ಹೊಸಗನ್ನಡ ಕಾವ್ಯ, ಕವನ, ಕೀರ್ತನೆಗಳು ಕಿವಿದುಂಬುತ್ತಿದ್ದವು. ಹಳೆಗನ್ನಡದ ಕಾವ್ಯಗಳನ್ನು ಅರ್ಥ ವಿಸ್ತರಿಸಿ ಹೇಳಬಲ್ಲ ಪಂಡಿತರಾದoತಹ ಕನ್ನಡ ಅಧ್ಯಾಪಕರು ನಮಗಿದ್ದರು. ಅವೆಲ್ಲ ಆಗ ಮುಂಗೈಗೆ ಬಿದ್ದ ಪಾಯಸದಂತೆ. ಮತ್ತೆ ದೊಡ್ಡವರಾದ ಮೇಲೂ ಅದರ ರುಚಿಯನ್ನು ಹಿಡಿದು ನಾವು ಅದರ ಹಿಂದೆ ಹೋಗುವ ಹಾಗೆ ಮಾಡುತ್ತಿತ್ತು. ಧರ್ಮಸ್ಥಳಕ್ಕೆ ಬಂದ ನಂತರವoತೂ ಇಲ್ಲಿ ನಿರಂತರವಾಗಿ ನಡೆಯುವ ಸಾಹಿತ್ಯ ಸಮ್ಮೇಳನಗಳು, ಅದರಲ್ಲಿ ಭಾಗವಹಿಸುವ ಕವಿಗಳನ್ನು ನೋಡುವ, ಕೇಳುವ
ಒಂದು ಅವಕಾಶ ನಿರಾಯಾಸವಾಗಿ ಲಭ್ಯವಾಗುತ್ತಿತ್ತು. ದ.ರಾ. ಬೇಂದ್ರೆ, ಮಾಸ್ತಿ, ತರಾಸು, ಎಂ.ಕೆ. ಇಂದಿರಾ, ಗೋಪಾಲಕೃಷ್ಣ ಅಡಿಗ, ರಾಜರತ್ನಂ ಹೀಗೆ ಕವಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಬೇಂದ್ರೆಯವರು ಬಂದಾಗೆಲ್ಲ ಮಾತನಾಡಿಸುವ, ಉಪಚರಿಸುವ ಸಂದರ್ಭವನ್ನು ನಾವು ತಪ್ಪಿಸಿಕೊಳ್ಳುತ್ತಿರಲಿಲ್ಲ.
ಒಮ್ಮೆ ಬೇಂದ್ರೆಯವರಿಗೆ ಕುಡಿಯಲು ಮಜ್ಜಿಗೆಯನ್ನು ತಂದುಕೊಟ್ಟಾಗ ಇದಕ್ಕೆ ‘ಮಜ್ಜಿಗೆ’ ಅಂತ ಯಾಕಂತಾರೆ ಅಂತ ನಮ್ಮಲ್ಲಿ ಕೇಳಿದರು. ನಾವು ಮಾತು ಸೋತು ನಿಂತಾಗ ಮೊಸರು ಕಡಿಯಬೇಕಾದರೆ ಗಡಿಗೆಯಿಂದ ಜಿಗಿದು ಜಿಗಿದು ಇದು ಮಜ್ಜಿಗೆಯಾಯಿತು ಎಂದು ಹೇಳಿದರು. ಇದು ಸಮಯ ಸ್ಫೂರ್ತಿ. ‘ಮಣ್ಣಿನಿಂದ ರಚಿಸಿದನು ಬ್ರಹ್ಮ ಸೃಷ್ಟಿ. ಕವಿಗೆ ಮಣ್ಣೂ ಬೇಡ.. ಎಲ್ಲವೂ ದೃಷ್ಟಿ.’ ಎಂದು ಹೇಳುವ ಮಾತು ಸತ್ಯ ಎಂದು ನನಗೆ ಅನ್ನಿಸುತ್ತದೆ. ಕಳೆದ 60 ವರ್ಷಗಳಿಂದ ಕ್ಷೇತ್ರದಲ್ಲಿ ಪ್ರತಿ ವರ್ಷ ಎರಡು ತಿಂಗಳುಗಳ ಕಾಲ ನಡೆಯುವ ಕಾವ್ಯ ವಾಚನಕ್ಕೆ ಹೊಸ ಹುರುಪು, ಚಿಂತನೆಗಳನ್ನು ಸೇರಿಸುತ್ತಾ ಅದು ಜನಾಕರ್ಷಕವಾಗುವತ್ತ ಮಾಡುವ ಚಿಂತನೆ ನಮ್ಮದಾಗಿದೆ. ಹಾಗೆಯೇ ಕ್ಷೇತ್ರದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳೂ, ಶಾಸ್ತಿçÃಯ ಸಂಗೀತ, ಹರಿಕಥೆ, ನಾಟಕ, ಭಜನೆ ಇವೆಲ್ಲ ಜೀವನೋತ್ಸಾಹವನ್ನು ತುಂಬುವ ಕೆಲಸವನ್ನು ಮಾಡುತ್ತವೆ. ಮತ್ತು ನಮ್ಮ ಕಲ್ಪನಾ ಸಾಮ್ರಾಜ್ಯವನ್ನು ವಿಸ್ತರಿಸಿದೆ. ಆದ್ದರಿಂದಲೇ ತುಳು ಸಮ್ಮೇಳನದಲ್ಲಿ ತುಳುಗ್ರಾಮ, ಬಾಹುಬಲಿ ಮಸ್ತಕಾಭಿಷೇಕದಲ್ಲಿ ಹೀಗೆ ವರ್ಷದಿಂದ ವರ್ಷಕ್ಕೆ ಹೊಸತನವನ್ನು ತರುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ. ಈ ವರ್ಷದ ಪಂಚ ಮಹಾವೈಭವದಲ್ಲಿ ಆದಿನಾಥನಿಂದ ಹಿಡಿದು ಭರತ ಬಾಹುಬಲಿಯವರೆಗಿನ ಕಥೆಯನ್ನು ಮಹಾಪುರಾಣ, ಆದಿಪುರಾಣ, ಭರತೇಶ ವೈಭವದಿಂದ ವಿದ್ವಾಂಸರ ಮೂಲಕ ಬರೆಯಿಸಿ ಇದನ್ನು ನಾಟಕ ರೂಪಕ್ಕೆ ತರಲಾಯಿತು. ಇಡೀ ಧರ್ಮಸ್ಥಳ ಅಯೋಧ್ಯೆಯಾಗಿ ಕಂಗೊಳಿಸುತ್ತಿತ್ತು. ಮೂರು ಸಾವಿರ ಜನ ಸೇರಿದ ಈ ಅದ್ಭುತ, ಪೌರಾಣಿಕ ಮತ್ತು ಧಾರ್ಮಿಕ ನಾಟಕ ಸೇರಿದ ಜನರ ಮನಗೆದ್ದಿತು. ಇಂತಹ ಅವಕಾಶಗಳು ನಾವು ಕ್ಷೇತ್ರದಲ್ಲಿ ಇರುವುದರಿಂದ ನಮಗೆ ಲಭ್ಯವಾಗಿದೆ ಎಂದು ನಾನು ಭಾವಿಸುತ್ತೇನೆ.
ಇದರಿಂದಾಗಿ ಮುಂದೆ ಸಾಂಸ್ಕೃತಿಕ ವೇದಿಕೆ, ಸಮೂಹ ರೂಪುಗೊಂಡಿತು ಮತ್ತು ಉಜಿರೆಯ ಜನರಿಗೆ ಅನೇಕ ಅವಕಾಶಗಳನ್ನು ನೋಡುವ ಅವಕಾಶ ಲಭಿಸಿತು. ಹಾಗೆಯೇ ಧರ್ಮಸ್ಥಳದಲ್ಲಿ ‘ರಂಗಶಿವ’ ಎಂಬ ಹೆಸರಿನ ಸಂಸ್ಥೆ ಆರಂಭವಾಗಿ ಅನೇಕ ರಂಗ ಪ್ರಯೋಗಗಳ ಪ್ರಾಕಾರಕ್ಕೆ ವೇದಿಕೆಯಾಯಿತು.
ಕನ್ನಡದ ಸಂಸ್ಕೃತಿ ಸಂಶೋಧನಾ ಕೇಂದ್ರಕ್ಕೆ ನಿರಂತರ ಭೇಟಿ ನೀಡಿ ಅಲ್ಲಿರುವ ಅಪರೂಪದ ಪುಸ್ತಕಗಳನ್ನು ಓದಿ ಬರೆದಿಡುವ ಹವ್ಯಾಸ ನನ್ನದಾಗಿತ್ತು. ಆಗ ವಿದ್ವಾಂಸರಾದ ಉಮಾಪತಿ ಶಾಸ್ತಿç, ಮಹಾಬಲ ಭಟ್ ಮತ್ತು ರಘುನಾಥ ರೈ ನನಗೆ ಗುರುಗಳಾಗಿ ಮಾರ್ಗದರ್ಶನ ನೀಡಿದರು. ಈ ಪುಸ್ತಕಗಳನ್ನು ಇಂದಿಗೂ ಓದಿದಾಗ ಅಲ್ಲೊಂದು ಹೊಸ ಹೊಳಪು ಗೋಚರಿಸುತ್ತದೆ. ಬೆಳಿಗ್ಗೆ ಎದ್ದು ಚಾವಡಿಗೆ ಹೋದರೆ ಒಂದೆರಡು ಹೊಸ ಪುಸ್ತಕ ಚಾವಡಿಯಲ್ಲಿ ಇದ್ದೇ ಇರುತ್ತದೆ. ಇದು ಕ್ಷೇತ್ರದಲ್ಲಿ ಮಾತ್ರ ಸಾಧ್ಯವಾಗಬಲ್ಲ ವಿಶೇಷ ಎಂದು ನಾನು ಭಾವಿಸುತ್ತೇನೆ. ಸುಸಜ್ಜಿತ ಗ್ರಂಥಾಲಯ ಮತ್ತು ಹಸ್ತಪ್ರತಿಗಳು ಕಾವ್ಯಗಳ ಪರಂಪರೆಯ ಒಂದು ದ್ಯೋತಕವಾಗಿದೆ. ಎಲ್ಲಾ ಪ್ರಕಾರದ ಪುಸ್ತಕಗಳನ್ನು ವಿಂಗಡಿಸಿ, ಬೇಕಾದಾಗ ತರಿಸಿ ಓದುವ ಅವಕಾಶ ಇಲ್ಲಿ ಇದೆ. ಆದರೂ ಗ್ರಂಥಾಲಯದ ಎದುರು ನಿಂತು ನೋಡಿದಾಗ ನಾವು ಓದಿದ್ದು ಎಷ್ಟು ಅಲ್ಪ ಎನ್ನುವಂಥದ್ದು ನಮ್ಮ ಮನಸ್ಸಿಗೆ ಬಂದೇ ಬರುತ್ತದೆ. ಜೊತೆಗೆ ಕ್ಷೇತ್ರದ ಮಂಜೂಷಾ ವಸ್ತು ಸಂಗ್ರಹಾಲಯ ಅಂದಿನ ಜನಜೀವನ, ಕೃಷಿ, ಸಂಸ್ಕೃತಿ, ವೈಜ್ಞಾನಿಕ ಬೆಳವಣಿಗೆಯನ್ನು ಬಿಂಬಿಸುವಲ್ಲಿ ಮಹತ್ವದ ಕೊಡುಗೆಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ. ನಮಗೆ ಅಂದಿನ ವಿಚಾರಗಳು ಗೊತ್ತು. ಅವಿಭಕ್ತ ಕುಟುಂಬದಲ್ಲಿದ್ದು ಅಲ್ಲಿ ಯಾವ ರೀತಿಯ ಸಲಕರಣೆಗಳು ಇರುತ್ತಿದ್ದವು ಎಂದು ಗೊತ್ತು. ಇಂದಿನ ಒಂದೆರಡು ಜನ ಇರುವ ಕುಟುಂಬದಲ್ಲಿ ಏನೆಲ್ಲ ಇರುತ್ತದೆ ಎಂಬುದು ನಮಗೆ ಗೊತ್ತು. ಈ ಸಂಕ್ರಮಣ ಕಾಲದಲ್ಲಿ ನಮಗೆ ಅಂದು ಇಂದುಗಳ ಅನುಭವ ಅರಿವು ಆಗುತ್ತದೆ ಎಂದು ನಾನು ಭಾವಿಸುತ್ತೇನೆ.
ಚಿಕ್ಕಂದಿನಲ್ಲಿ ನನಗೆ ಓದುವ ಹವ್ಯಾಸ ಇತ್ತು. ಆದರೆ ಬರವಣಿಗೆಗೆ ಇಳಿದಿರಲಿಲ್ಲ. ಆದರೆ ಮಂಜುವಾಣಿಯಲ್ಲಿ ಅಮ್ಮ ಬರೆಯುತ್ತಿದ್ದ ‘ಮಗಳಿಗೊಂದು ಪತ್ರ’ ಅವರ ನಂತರದಲ್ಲಿ ನಾನು ಮುಂದುವರಿಸಬೇಕಾಗಿ ಬಂತು. ಹಾಗೆಯೇ ‘ನಿರಂತರ’ ಪತ್ರಿಕೆಯಲ್ಲಿ ಗೌರವ ಸಂಪಾದಕಿಯಾಗಿದ್ದು ಹಳ್ಳಿಯ ಮಹಿಳೆಯರಿಗೆ ಬೇಕಾದ ಅಗತ್ಯ ಮಾಹಿತಿಗಳುಳ್ಳ ಲೇಖನಗಳನ್ನು ಬರೆಯಬೇಕಾಯಿತು. ಇದು ನನ್ನ ಓದಿನ ಜೊತೆಗೆ ಬರವಣಿಗೆಯ ಹವ್ಯಾಸ ಮುಂದುವರಿಯುವAತೆ ಮಾಡಿತು. ನಾನು ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ತೊಡಗಿಸಿಕೊಂಡ ಮೇಲೆ ಹಳ್ಳಿಯ ಮಹಿಳೆಯರ ಬದುಕಿನ ಬವಣೆಯನ್ನು ನೋಡುವ ಮತ್ತು ಕೇಳುವ ಅವಕಾಶ ಸಿಕ್ಕಿತು. ಇದು ನನ್ನ ಮಹಿಳಾ ಪರ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರಿಯಾಯಿತು. ನಮ್ಮ ಹಳ್ಳಿಯ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ 2,200ಕ್ಕೂ ಹೆಚ್ಚು ಗ್ರಂಥಾಲಯಗಳಿದ್ದು ನಮ್ಮ ಹಳ್ಳಿಯ ಮಹಿಳೆಯರು ಈ ಗ್ರಂಥಾಲಯಗಳಲ್ಲಿ ಓದಿ ಅದರ ಬಗ್ಗೆ ಚರ್ಚಿಸುತ್ತಾರೆ. ಅದರ ಜೊತೆಗೆ ಚಲನಚಿತ್ರ ವೀಕ್ಷಣೆ, ಬೀದಿನಾಟಕ ಈ ಎಲ್ಲಾ ಕಾರ್ಯಕ್ರಮಗಳು
ಅವರಿಗೆ ಲಭ್ಯವಾಗುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿ ಮಹಿಳೆಯ ಕುಟುಂಬದ ಹಿಂದೆ ಅದೆಷ್ಟೋ ಕಥೆಗಳಿವೆ. ಕೇಳುವ ಕಿವಿಗಳಿದ್ದರೆ, ಅರಿಯುವ ಮನಸ್ಸಿದ್ದರೆ ಅದೇ ಸಾವಿರ ಪುಟಗಳ ಒಂದು ದೊಡ್ಡ ಕವನ ಸಂಕಲನವೇ ಆದೀತು. ಅವು ನಮ್ಮೊಳಗಿನ ಸಂವೇದನೆಗಳನ್ನು ಜೀವಂತವಾಗಿಡಬಲ್ಲ ವಾತ್ಸಲ್ಯ, ಕರುಣೆಗಳ ಒರತೆಯನ್ನು ಚಿಮ್ಮಿಸಬಲ್ಲ ನಿಜವಾದ ಜೀವಂತ ಸಾಹಿತ್ಯ. ಸಾಹಿತಿಗಳು ಮಾತ್ರ ಇಂತಹವರ ಬದುಕಿನಲ್ಲಿ ಪರಕಾಯ ಪ್ರವೇಶ ಮಾಡಿ ತಮ್ಮ ಭಾಷಿಕ ಆಕೃತಿಗಳ ಮೂಲಕ ಇದನ್ನು ರಚಿಸುವುದಕ್ಕೆ ಸಾಧ್ಯ ಎಂದು ನಾನು ಭಾವಿಸುತ್ತೇನೆ.

ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *