ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಒಂದು ಕಾಲ ಇತ್ತು, ಸಾಧಾರಣ ನನ್ನ ಅಮ್ಮನ ಕಾಲ ಅಂದರೆ ಸುಮಾರು 60-70 ವರ್ಷಗಳ ಹಿಂದೆ. ಆಗ ನಾವಿಬ್ಬರು ನಮಗಿಬ್ಬರು ಎಂಬ ಘೋಷಣೆ ಇರಲಿಲ್ಲ. ಮಾತ್ರವಲ್ಲ, ಅದಕ್ಕೆ ಬೇಕಾದ ವ್ಯವಸ್ಥೆಗಳೂ ಇರಲಿಲ್ಲ. ಹಾಗಾಗಿ ಹೆಂಗಸರು ಎರಡು ವರ್ಷಕ್ಕೊಮ್ಮೆ ಬಸರಿ-ಬಾಣಂತನದ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತಿತ್ತು. ಆಗ ಅವಿಭಕ್ತ ಕುಟುಂಬಗಳೂ ಇದ್ದುದರಿಂದ ಅಕ್ಕ-ತಂಗಿಯರು ಹೆರಿಗೆಗೆ ಬಂದರೆ ಅಪ್ಪನ ಜತೆ ಅಣ್ಣ-ತಮ್ಮಂದಿರು ಪೂರ್ಣ ಹೊಣೆಗಾರಿಕೆ ವಹಿಸಿಕೊಳ್ಳುತ್ತಿದ್ದರು. ಹೆಚ್ಚಿನ ಪ್ರಪಂಚ ಜ್ಞಾನವಿಲ್ಲದೆ ಅಮ್ಮ ಬಾಣಂತಿಯ ಎಣ್ಣೆ ನೀರು, ಪಥ್ಯದ ಆಹಾರದ ವ್ಯವಸ್ಥೆ ಅಷ್ಟನ್ನೇ ನೋಡಿಕೊಂಡರೆ, ಸಹೋದರರು ಆಗಾಗ ಡಾಕ್ಟರ್ ಅನ್ನು ಕರೆಸಿ ತಾಯಿ ಮಗುವಿನ ಆರೈಕೆಗೆ ಬೇಕಾದ ವ್ಯವಸ್ಥೆಯನ್ನು ಮಾಡ್ತಾ ಇದ್ರು. ಮೊದಲ ಹೆರಿಗೆ ತಾಯಿ ಮನೆಯಲ್ಲಿ ಎಂಬ ಮಾತಿದ್ರೂ ದೊಡ್ಡ ಮನೆಗಳಲ್ಲಿ ಎಲ್ಲಾ ಹೆರಿಗೆಯು ತವರು ಮನೆಯಲ್ಲೇ ನಡೀತಿತ್ತು ಎನ್ನುವುದೂ ಸತ್ಯ. ಒಂದು ರೀತಿ ಬಸರಿಗೆ, ಬಾಣಂತಿಗೆ ಸಂಪೂರ್ಣ ವಿಶ್ರಾಂತಿ ಬೇಕು. ಅದಕ್ಕೆಲ್ಲಾ ತವರು ಮನೇನೇ ವಾಸಿ. ಆದ್ರೆ ಅಂಥ ಸಂದರ್ಭಗಳಲ್ಲಿ ಅಣ್ಣ-ತಮ್ಮಂದಿರ ಸಹಕಾರ, ಪ್ರೀತಿ ಬೇಕೆ ಬೇಕು. ದಕ್ಷಿಣ ಕನ್ನಡದ ಅಳಿಯ ಕಟ್ಟು ಪದ್ಧತಿಯಿಂದಾಗಿ ಹೆಣ್ಣು ಹಕ್ಕಿನಿಂದ ತವರು ಮನೆಗೆ ಹೋಗುತ್ತಾಳೆ. ಆದ್ರೆ ಹಕ್ಕು ಎಷ್ಟೇ ಇರಲಿ, ಪ್ರೀತಿ ಇಲ್ಲ ಅಂದ ಮೇಲೆ ಹೋಗೋದು ಕಷ್ಟವೇ. ಮಗು ಹುಟ್ಟಿದ ಮೇಲೆಯೂ ಅಷ್ಟೇ, ಅಣ್ಣ-ತಮ್ಮಂದಿರು ಸುತ್ತ ಕುಳಿತು ತಮ್ಮ ಅಳಿಯನ ಅಂದ-ಚ0ದ, ತುಂಟತನದ ಬಗ್ಗೆ ಹೊಗಳ್ತಾ ಇದ್ರೆ ಅಕ್ಕನ ಮುಖ ಇಷ್ಟಗಲ ಆಗೋದಂತೂ ಸತ್ಯ.
ಆಕೆ ಬಾಣಂತನ ಮುಗಿಸಿ ಗಂಡನ ಮನೆಗೆ ಬಂದ ಬಳಿಕ ಅಲ್ಲಿ ಆ ಮಗುವಿನ ಅಣ್ಣ-ಅಕ್ಕಂದಿರಿಗೆ ಹೊಸ ಜವಾಬ್ದಾರಿ ಬಂದAತೆ. “ಮಗು ಅಳ್ತಾ ಇದೆ ನೋಡೋ, ಮಗುವಿಗೆ ಹೊದಿಕೆ ಸರಿ ಮಾಡು. ಬಟ್ಟೆ ಒದ್ದೆ ಆಗಿದ್ಯಾ ನೋಡು, ತೊಟ್ಟಿಲು ತೂಗೋಕ್ಕಾಗಲ್ವಾ! ಸ್ವಲ್ಪ ಹೊತ್ತು ಎತ್ತಿಕೊಂಡು ತಿರುಗಾಡು’’ ಹೀಗೆ ತೊಟ್ಟಿಲ ಮಗುವಿಂದ ಶುರು ಆದ್ರೆ ಮುಂದೆ ಅಂಬೆಗಾಲಿಕ್ಕಿ ನಡೆದಾಡೋ ಸಮಯದಲ್ಲಿ ಅಣ್ಣ-ಅಕ್ಕಂದಿರಿಗೆ ಮತ್ತೂ ಕೆಲ್ಸ ಜಾಸ್ತಿ. ಮಗು ಬಿದ್ರೂ, ಎದ್ರೂ, ಕಿರುಚಾಡಿದ್ರೂ, ತಿನ್ನದೇ ಇದ್ರೂ, ಕೈಕಾಲು, ಬಟ್ಟೆ ಗಲೀಜು ಮಾಡ್ಕೊಂಡ್ರೂ ಎಲ್ಲದಕ್ಕೂ ಅಮ್ಮ ಬೈಯೋದು ದೊಡ್ಡ ಮಕ್ಕಳನ್ನೇ. ಹೀಗೆ ಪ್ರತಿಯೊಂದು ವಿಚಾರದಲ್ಲಿ ಚಿಕ್ಕಂದಿನಿAದ ಸಣ್ಣ ತಮ್ಮ-ತಂಗಿಯರನ್ನು ನೋಡ್ಕೊಳ್ಳೋದು ನನ್ನ ಜವಾಬ್ದಾರಿ ಎಂಬ ಭಾವವೇ ಮುಂದೆ ಒಳ್ಳೆಯ ಬಾಂಧವ್ಯಕ್ಕೆ ಕಾರಣವಾಗುತ್ತದೆ. ಶಾಲೆಗೆ ಹೋಗುವಾಗಲಂತೂ ಚಿಕ್ಕವರನ್ನು ರೆಡಿ ಮಾಡ್ಸಿ ಜತೆಗೆ ಕೈ ಹಿಡಿದು ಕರ್ಕೊಂಡು ಹೋಗೋದು, ಬರುವಾಗ ಜೋಪಾನವಾಗಿ ಕರ್ಕೊಂಡು ಬರೋ ಜವಾಬ್ದಾರೀನೂ ಅವರದ್ದೇ. ಮನೇಲಿ ಎಷ್ಟೇ ಜಗಳ ಕಾಯ್ಲಿ ಶಾಲೆಯಲ್ಲಿ, ದಾರಿಯಲ್ಲಿ ಯಾರಾದ್ರೂ ತನ್ನ ತಮ್ಮನ ಬಗ್ಗೆ, ಅಕ್ಕನ ಬಗ್ಗೆ ಕೆಟ್ಟದ್ದು ಮಾತಾಡಿದ್ರೆ ಎಲ್ಲಿಲ್ಲದ ಸಿಟ್ಟು ಒಡ ಹುಟ್ಟಿದ ಅಣ್ಣನಿಗೆ.
ಕೆಲವೊಮ್ಮೆ ನೀಟಾಗಿ ಡ್ರೆಸ್ ಮಾಡ್ಕೊಂಡ ಚಿಕ್ಕ ತಮ್ಮಂದೋ, ತಂಗೀದೋ ಕೈ ಹಿಡ್ಕೊಂಡು ಹೋಗೋದಂದ್ರೆ ಅಣ್ಣನಿಗೆ ಹೆಮ್ಮೆ ಎನಿಸಿದ್ರೆ, ಕೆಲವೊಮ್ಮೆ ಇವರಿಂದಾಗಿ ಫ್ರೆಂಡ್ ಜತೆ ಮಾತಾಡ್ತಾ, ಓಡ್ತಾ ಹೋಗಲಿಕ್ಕಾಗುದಿಲ್ಲವೆಂದು ಸಿಟ್ಟು ಬರುದೂ ಇದೆ. ಹಗಲಿಡೀ ಎಷ್ಟೇ ಜಗಳವಾಡಿದ್ರೂ ರಾತ್ರಿ ಮಲಗುವಾಗ ಅಕ್ಕನ ಅಥವಾ ಅಣ್ಣನ ಪಕ್ಕ ಬೇಕೇ ಬೇಕು. ಅವರಿದ್ದರೆ ಭಯವಿಲ್ಲ. ಮುಂದೆ ಅದೇ ತಂಗಿ ಜಗಳ ಆಡ್ತಾ, ಪ್ರೀತಿ ಮಾಡ್ತಾ ದೊಡ್ಡವಳಾಗಿ ಮದ್ವೆಗೆ ತಯಾರಾಗಿದ್ದಾಳೆ ಅಂದಾಗ ಮದ್ವೆ ತಯಾರಿಗೆ ಓಡಾಡೋನು ಅಣ್ಣನೇ. ಆಕೆ ಹೊರಟು ನಿಂತಾಗ ತನ್ನದೇನನ್ನೋ ಕಳೆದುಕೊಂಡAತೆ ಒಳಗೊಳಗೆ ಕೊರಗುವವನೂ ಅವನೇ. ಆಗಾಗ ತವರು ಮನೆಗೆ ಬರೋ ತಂಗಿಯನ್ನು ತಮಾಷೆ ಮಾಡ್ತಾ, ಗೋಳಾಡಿಸ್ತಾ ಅವಳ ಬಯಕೆಗಳನ್ನು ಪೂರೈಸುವವನೂ ಅವನೇ. ಹೆಣ್ಣಿಗೆ ತವರು ಮನೆ ಅಪ್ಪ, ಅಮ್ಮನೇ ಮುಖ್ಯ. ಅದರ ಜತೆ ಅಷ್ಟೇ ಪ್ರೀತಿಸೋ ಅಣ್ಣ ತಮ್ಮಂದಿರೂ ಬಹಳ ಮುಖ್ಯ. ಗಂಡನ ಮನೇಲಿ ಎಷ್ಟೇ ಸವಲತ್ತು, ಐಶ್ವರ್ಯ ಪ್ರೀತಿಗಳಿರಲಿ ತವರು ಮನೆಯ ಸಲುಗೆ ಮನಬಿಚ್ಚಿ ಮಾತಾಡೋ ಮುಕ್ತ ವಾತಾವರಣ ಅಲ್ಲಿ ಸಿಗಲ್ಲ. ವಿಶೇಷವಾಗಿ ಬಾಲ್ಯದ ನೆನಪುಗಳ ಗೂಡು ಈ ತವರು ಮನೆ. ಅಲ್ಲಿ ಬಂದಾಗ ಮತ್ತೆ ಮಗುವಿನಂಥ ನಿರಾಳತೆ. ಹೊಟ್ಟೆ ತುಂಬಾ ಹಸಿವು, ಕಣ್ ತುಂಬಾ ನಿದ್ದೆ ಜೊತೆಗೆ ಅಪ್ಪ-ಅಮ್ಮ, ಅಣ್ಣ-ತಮ್ಮಂದಿರ ಜೊತೆ ಚಕ್ಕಂದದಲ್ಲಿ ದಿನ ಹೋದದ್ದೇ ಗೊತ್ತಾಗೋದಿಲ್ಲ. ಈಗ ಒಂದೋ ಎರಡೋ ಮಕ್ಕಳಿರುವಲ್ಲಿ ಚಿಕ್ಕಂದಿನಿAದಲೇ ಪರಸ್ಪರ ಜವಾಬ್ದಾರಿ ತಗೊಳ್ಳೋ ಕಷ್ಟ ಇರೋದಿಲ್ಲ. ಪ್ರತಿಯೊಬ್ಬರಿಗೂ ಅವರವರ ಕೋಣೆ, ಮಂಚ, ಕಪಾಟುಗಳು, ಓದುವ ಮೇಜು, ಕುರ್ಚಿ, ಶಾಲಾ ಬಸ್‌ಗಳು, ಶಾಲೆಯಲ್ಲೇ ಟಿಫಿನ್ ಹೀಗಾಗಿ ಅವಲಂಬನೆ ಇಲ್ಲ. ಜವಾಬ್ದಾರಿನೂ ಇರುವುದಿಲ್ಲ.
ಹೆಣ್ಣು ಮಕ್ಕಳಿಗೆ ಈ ಸಹೋದರರ ಸಂಬAಧವಿದ್ದಲ್ಲಿ ಅವಳಿಗೆ ಹತ್ತಾನೆ ಬಲ ಬಂದAತೆ. ಅವನೆಂದರೆ ಹೆಮ್ಮೆ. ಈ ಬಾಂಧವ್ಯ ಅವಳ ಬದುಕಿಗೆ ಬಹಳ ಮುಖ್ಯ. ಗಂಡನು ತನ್ನ ಮನೆ ಬಗ್ಗೆ ಮಾತ್ರ ಚಿಂತಿಸಿದರೆ ಹೆಣ್ಣಿನ ಮನಸ್ಸು ಎರಡು ಮನೆಗಳಲ್ಲಿ ನಡೆಯುವ ಸಿಹಿ-ಕಹಿ ಘಟನೆಗಳೆರಡರ ಮಧ್ಯೆಯೂ ಸಂತೋಷ, ದುಃಖಗಳ ಅನುಭವ ಪಡೀತಿರುತ್ತದೆ. ತವರು ಮನೆ, ಮನೆಯವರ ಸಾಧನೆ, ಕೀರ್ತಿ, ಜನಮನ್ನಣೆ ಬಗ್ಗೆ ಉಬ್ಬಿ ಹೋಗೋ ಹೆಣ್ಣಿನ ಮನಸ್ಸು ಅಲ್ಲಿ ನಡೆಯೋ ಯಾವುದೇ ಅಶುಭ ಸಮಾಚಾರ, ದುರಂತ, ಸೋಲುಗಳಿಗೆ ಕುಗ್ಗಿ ಹೋಗುತ್ತದೆ. ತವರು ಮನೆಗೆ ಒಳಿತಾಗಲಿ ಎಂಬ ಪ್ರಾರ್ಥನೆ, ಹಾರೈಕೆ ಸದಾ ಹೆಣ್ಣಿನ ಮನಸ್ಸಿನಲ್ಲಿರುತ್ತದೆ. ಆದರೆ ಗಂಡಿಗೆ ತನ್ನ ಮನೆ ಬಗ್ಗೆ ಮಾತ್ರ ಕಾಳಜಿ, ಚಿಂತೆ.
ಈಗಿನ ಕಾಲದಲ್ಲಿ ನನ್ನ ಸಂಸಾರ ಅಂದರೆ ನಾನು, ನನ್ನ ಹೆಂಡತಿ, ಮಕ್ಕಳು ಅಷ್ಟೇ. ಅಪ್ಪ-ಅಮ್ಮ, ಅಕ್ಕ-ತಂಗಿ ಯಾರಿಗೂ ಎಡೆ ಇಲ್ಲ. ಇಂಥಾ ಉಸಿರುಗಟ್ಟಿಸುವ ಸಂಕುಚಿತ ವಲಯದೊಳಗೆ ಬೆಳೆದ ಮಕ್ಕಳು ನಾಳೆ ಹೇಗಾದಾರು? ಯಾರಿಗಾದರು? ಈ ದೃಷ್ಟಿಯಿಂದಲಾದರೂ ನಾವು ನಮ್ಮ ಮನಸ್ಸನ್ನು ಸ್ವಲ್ಪ ವಿಶಾಲಗೊಳಿಸಿದರೆ ಮಕ್ಕಳಿಗೂ ಇವರೆಲ್ಲರೂ ತನ್ನವರೆಂಬ ಭಾವ ಬರುತ್ತದೆ. ಅವರಲ್ಲೂ ಹೃದಯ ಶ್ರೀಮಂತಿಕೆ ಬೆಳೆಯುತ್ತದೆ. ಆಗ ಮಾತ್ರ ನಾಳೆ ಅಪ್ಪ-ಅಮ್ಮ, ತಮ್ಮ ಮಕ್ಕಳ ಆಶ್ರಯದಲ್ಲಿ ಬದುಕುವಂತಾಗಬಹುದು. ಇಲ್ಲೊಂದು ಸಣ್ಣ ಕಥೆ ನೆನಪಾಗುತ್ತದೆ. ಮಾರ್ಗದ ಬದಿಯಲ್ಲಿ ಚಿಕ್ಕ ಹುಡುಗಿಯೊಬ್ಬಳು ತನಗಿಂತ ಚಿಕ್ಕ ತಮ್ಮನನ್ನು ಎತ್ತಿಕೊಂಡು ನಿಂತಿದ್ರೆ ದಾರಿಹೋಕ ಕೇಳ್ತಾನೆ, ‘ಭಾರ ಆಗಲ್ವಾ?’. ತಕ್ಷಣ ಆಕೆ ಹೇಳ್ತಾಳೆ, ‘ಇದು ಭಾರ ಅಲ್ಲ. ಇವ ನನ್ನ ತಮ್ಮ.’ ಇದು ಸಹೋದರ ಬಾಂಧವ್ಯ.
ತನ್ನ ತಮ್ಮ ಯಶೋವರ್ಮ ಈ ಸೋದರ ಸಂಬAಧಕ್ಕೆ ಒಳ್ಳೆಯ ಉದಾಹರಣೆಯಾಗಿ ನಿಲ್ಲ ಬಲ್ಲ ವ್ಯಕ್ತಿ. ಸದಾ ಅಕ್ಕ-ತಂಗಿಯರ ಬಗ್ಗೆ ಚಿಂತೆ. ಪ್ರತಿ ಸಂಭ್ರಮದಲ್ಲೂ ನಾವಿರಬೇಕು. ಅನಾರೋಗ್ಯವಾದಲ್ಲಿ ತಕ್ಷಣ ಅವನಲ್ಲಿಗೆ ಹೋದರೆ ಸಾಕು ದಂಪತಿಗಳ ಎಲ್ಲಾ ರೀತಿಯ ಪ್ರೀತಿ, ಉಪಾಚಾರ, ಆರೈಕೆಯೊಂದಿಗೆ ಗುಣಮುಖರಾಗಿ ಹಿಂದೆ ಬರುತ್ತಿದ್ದೆವು. ಹೆಣ್ಣಿನ ಬದುಕಿಗೆ ಇಂಥಾ ಅಣ್ಣ-ತಮ್ಮಂದಿರು ಬೇಕು. ಆಗ ಬದುಕು ಹಗುರ, ನಿರಾಳವೆನಿಸುತ್ತದೆ.
ತಂದೆ ಸತ್ತ ಬಳಿಕ ಅಣ್ಣನೇ ತಂದೆ ಸ್ಥಾನ ತುಂಬುವವನು. ಸುಖ-ಕಷ್ಟ ವಿಚಾರಿಸುವವನು, ಅಕ್ಕ-ತಂಗಿಯರ ಮಕ್ಕಳನ್ನು ಮಾವನಾಗಿ ಮುದ್ದಿಸುವವನು. ಈ ಭಾಗ್ಯ ಎಲ್ಲ ಹೆಣ್ಣು ಮಕ್ಕಳಿಗೂ ಸಿಗುವಂತಾಗಲಿ. ಎಷ್ಟೇ ಶ್ರೀಮಂತಿಕೆ ಬಡತನಗಳಿದ್ದರೂ ಅಣ್ಣನೊಬ್ಬ ಇದ್ದಾನೆಂಬ ಭರವಸೆ ಹೆಣ್ಣಿನ ಬದುಕಿಗೆ ಬೆಳಕು, ಉಸಿರು ತುಂಬಲು ಅತೀ ಅಗತ್ಯ. ಅಣ್ಣ ಅಂದ್ರೆ ಏನು ಅನ್ನೋದನ್ನು ಜನಪದರು ವರ್ಣಿಸುವ ರೀತಿಯೇ ವೈಶಿಷ್ಟವಾದದ್ದು.
ಹೆಣ್ಣಿನ ಜನುಮಕೆ ಅಣ್ಣ ತಮ್ಮರು ಬೇಕು
ಬೆನ್ನು ಕಟ್ಟುವರು ಸಭೆಯೊಳಗೆ
ಸಾವಿರ ಹೊನ್ನು ಕಟ್ಟುವರು ಉಡಿಯೊಳಗೆ.