ಬೆಳ್ತಂಗಡಿ ತಾಲೂಕಿನ ನಡ ಕನ್ಯಾಡಿ ‘ಶೌರ್ಯ ವಿಪತ್ತು ನಿರ್ವಹಣಾ ಘಟಕ’ದ ಸ್ವಯಂಸೇವಕರ ಕುರಿತು ಯಶೋಗಾಥೆಯನ್ನು ತಯಾರಿಸಬೇಕೆಂದು ನಡ ಗ್ರಾಮಕ್ಕೆ ಹೋದಾಗ ಶೌರ್ಯ ತಂಡದ ಸಂಯೋಜಕಿ ಕು| ವಸಂತಿ ಕೆ.ಯವರು ನಡಿಬೆಟ್ಟು ಅಶೋಕ್ ಗೌಡ ಮತ್ತು ರೂಪವತಿ ದಂಪತಿಗಳ ಮನೆಗೆ ಕರೆದುಕೊಂಡು ಹೋದರು.
ಅವರದು ಸಿಮೆಂಟ್ ಇಟ್ಟಿಗೆ ಮತ್ತು ಶೀಟ್ನಿಂದ ನಿರ್ಮಿಸಿದ ಪುಟ್ಟ ಮನೆ. ಮನೆ ತುಂಬಾ ಬಡತನವಿದ್ದರೂ ಗಂಡ – ಹೆಂಡತಿ ಇಬ್ಬರೂ ದುಡಿದು ಹೇಗೋ ಜೀವನ ನಿರ್ವಹಣೆ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಕೆಲಸಬಿಟ್ಟು ಮನೆಗೆ ಬಂದು ಕುಳಿತ ಅಶೋಕ್ರವರಿಗೆ ಎದ್ದು ನಿಲ್ಲುವುದಕ್ಕೆ ಸಾಧ್ಯವಾಗಲಿಲ್ಲ. ಎಷ್ಟೇ ಚಿಕಿತ್ಸೆ ಕೊಡಿಸಿದರೂ ಅದ್ಯಾವುದೂ ಫಲ ನೀಡಲಿಲ್ಲ. ಬಲಗೈ ಮತ್ತು ಕಾಲು ತನ್ನ ಶಕ್ತಿಯನ್ನು ಕಳೆದುಕೊಂಡ ಪರಿಣಾಮ ಅಶೋಕ್ರವರು ಹಾಸಿಗೆ ಹಿಡಿದರು. ಗಂಡನ ಚಾಕರಿ ರೂಪವತಿಯ ಹೆಗಲೇರಿತು. ತಿಂಗಳಿಗೆ ಸುಮಾರು ಹದಿನೈದು ಸಾವಿರ ರೂಪಾಯಿ ಔಷಧಿ ವೆಚ್ಚ ತಗಲುತ್ತಿತ್ತು. ಅವರ ಸಹೋದರ ಒಂದಷ್ಟು ಸಹಾಯ ಮಾಡಿದ ಕಾರಣ ಅಶೋಕ್ರವರ ಔಷಧಿ ನಿಲ್ಲಲಿಲ್ಲ.
ಇದೀಗ ಅಶೋಕ್ರವರಿಗೆ ಯಾವ ಕೆಲಸವನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಕಷ್ಟಪಟ್ಟು ಮನೆಯೊಳಗಷ್ಟೇ ನಡೆದಾಡುತ್ತಿದ್ದಾರೆ. ಕೆಲವೊಮ್ಮೆ ಬಲಗೈಯಲ್ಲಿ ಊಟ ಮಾಡುವುದು ಕಷ್ಟವಾಗುತ್ತಿದೆ. ಪುಟಾಣಿಗಳಿಬ್ಬರು ಐದು ಮತ್ತು ನಾಲ್ಕನೆ ತರಗತಿಯಲ್ಲಿ ಓದುತ್ತಿದ್ದಾರೆ. ಪತ್ನಿ ನಿತ್ಯ ದುಡಿದರಷ್ಟೇ ಇವರ ಹೊಟ್ಟೆ ತುಂಬುತ್ತಿದೆ.
ಇವರ ಈ ಕಷ್ಟದ ದಿನಗಳನ್ನು ಹತ್ತಿರದಿಂದ ಕಂಡ ನಡ – ಕನ್ಯಾಡಿಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಇವರ ಮುಂದಿನ ಜೀವನಕ್ಕಾಗಿ ಇವರ ಜಮೀನಿನಲ್ಲಿ ಅಡಕೆ ಗಿಡಗಳನ್ನು ನೆಟ್ಟು ಬೆಳೆಸಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಶೌರ್ಯ ತಂಡದ ಸದಸ್ಯರಾದ ಎನ್.ಬಿ. ಹರಿಶ್ಚಂದ್ರ ಮತ್ತು ಒಲ್ವಿನ್ ಡಿಸೋಜ ನೂರು ಅಡಕೆ ಗಿಡಗಳನ್ನು ಉಚಿತವಾಗಿ ನೀಡಿದರೆ, ಉಜಿರೆ ಘಟಕದ ಪ್ರತಿನಿಧಿ ರವೀಂದ್ರ, ನಡ ಕನ್ಯಾಡಿ ಘಟಕದ ಮುಂಜುನಾಥ್, ಒಲ್ವಿನ್ ಡಿಸೋಜಾ, ಹರಿಶ್ಚಂದ್ರ, ಕಾರ್ತಿಕ್, ಮೋಹನ್, ಅನಿಲ್ ಡೇಸಾ, ಜೀವನ್ ಡಿಸೋಜಾ, ಜಯರಾಮ್, ಗೋಪಾಲ್, ಆರ್ವಿನ್, ಮಿರಾಂದ, ಕೇಶವ, ಲೀಲಾ, ಪುಷ್ಪಲತಾ ಹೀಗೆ ಹದಿನಾಲ್ಕು ಮಂದಿ ಸೇರಿ ಒಂದೇ ದಿನದಲ್ಲಿ ಗುಂಡಿ ತೆಗೆದು, ಗೊಬ್ಬರ ಹೊತ್ತು ಹಾಕಿ ನೂರು ಅಡಕೆ ಗಿಡಗಳನ್ನು ನೆಟ್ಟಿದ್ದಾರೆ. ಗಿಡಗಳ ನಿರ್ವಹಣೆಯನ್ನು ತಂಡದ ಸದಸ್ಯರೇ ಮಾಡಿದ್ದಾರೆ. ಆದರೆ ಸರಿಯಾದ ನೀರಿನ ವ್ಯವಸ್ಥೆಗಳು ಇಲ್ಲಿಲ್ಲದ ಪರಿಣಾಮ ಕಳೆದ ಬೇಸಿಗೆಯ ಬೇಗೆಗೆ ಕೆಲವೊಂದು ಗಿಡಗಳು ಒಣಗಿವೆ. ಅದಕ್ಕೆ ಬದಲಿ ಗಿಡ ನೆಡುವ ಮೂಲಕ ಅಶೋಕ್ರವರ ಮುಂದಿನ ಬದುಕಿಗೆ ನೆರವಾಗಬೇಕು ಎನ್ನುತ್ತಾರೆ ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಕು| ವಸಂತಿ ಕೆ. ಮತ್ತು ಘಟಕ ಪ್ರತಿನಿಧಿಗಳಾದ ಮಂಜುನಾಥ್ ಮತ್ತು ಮೋಹನ್.
ಇವರಿಗೆ ಕೈಲಾದ ಸಹಾಯವನ್ನು ಮಾಡಬೇಕೆನ್ನುವವರಿಗೆ ಅವರ ಬ್ಯಾಂಕ್ ಖಾತೆ : 01202250009502, IFSC : CNRB0010120. ಅಶೋಕ್ ಗೌಡರವರ ಮೊಬೈಲ್ ನಂಬರ್ : 9972771114.
ಸದಸ್ಯರ ನೆರವಿಗೆ ಪ್ರತ್ಯೇಕ ಬ್ಯಾಂಕ್ ಖಾತೆ
ಈವರೆಗೆ ಮಾಡಿದ ಎಲ್ಲ ಸಮಾಜಮುಖಿ ಕೆಲಸಗಳ ಛಾಯಾಚಿತ್ರ ಸಹಿತ ದಾಖಲೆ ಇವರಲ್ಲಿದೆ. ಶೌರ್ಯ ತಂಡಗಳ ಪೈಕಿ ತಾಲೂಕು ಮತ್ತು ಜಿಲ್ಲೆಯಲ್ಲಿ ಪ್ರಥಮ ಸ್ಥಾನ, ರಾಜ್ಯದಲ್ಲಿ ಹದಿಮೂರನೇ ಸ್ಥಾನವನ್ನು ಇವರು ಪಡೆದಿದ್ದಾರೆ. ಇವರ ಕೆಲಸಗಳಿಗೆ ಪಂಚಾಯತ್ ಕೂಡಾ ಕೈಜೋಡಿಸುತ್ತಿದೆ.
ತಂಡದ ಸದಸ್ಯರಿಗೆ ನೆರವಾಗುವ ನಿಟ್ಟಿನಲ್ಲಿ ೨೪ ಜನರು ಸೇರಿ ಸ್ವಯಂ ಪ್ರೇರಣೆಯಿಂದ ಪ್ರತ್ಯೇಕ ಬ್ಯಾಂಕ್ ಖಾತೆಯೊಂದನ್ನು ತೆರೆದಿದ್ದಾರೆ. ಕಳೆದ ಒಂದು ವರ್ಷದಿಂದ ತಿಂಗಳಿಗೆ ಪ್ರತಿ ಸದಸ್ಯರು ರೂ. 100 ರಂತೆ ಮಾಡಿದ ಉಳಿತಾಯ ಈಗ ರೂ. 25,000 ಕ್ಕೆ ತಲುಪಿದೆ. ಇತ್ತೀಚೆಗೆ ತಂಡದ ಸ್ವಯಂ ಸೇವಕರೋರ್ವರಿಗೆ ಅಪಘಾತವಾದಾಗ ಈ ಖಾತೆಯಿಂದ ರೂ. ೫,೦೦೦ ತುರ್ತು ನೆರವನ್ನು ನೀಡಿದ್ದಾರೆ. ಈ ಪ್ರಯತ್ನ ರಾಜ್ಯದಲ್ಲೆ ಪ್ರಥಮ ಎನ್ನುವುದರಲ್ಲಿ ಎರಡು ಮಾತಿಲ್ಲ.