ಶ್ರೀಮತಿ ಹೇಮಾವತಿ ಹೆಗ್ಗಡೆಯವರು
ವಾಟ್ಸಪ್, ಫೇಸ್ಬುಕ್, ಇ – ಮೇಲ್, ಟ್ವಿಟ್ಟರ್, ಇನ್ಸ್ಟಾಗ್ರಾಂನoತಹ ತಂತ್ರಜ್ಞಾನಗಳಿoದಾಗಿ ಇಂದು ಪತ್ರಗಳನ್ನು ಬರೆಯುವವರ ಸಂಖ್ಯೆ ವಿರಳವಾಗುತ್ತಿದೆ ಎನ್ನುವುದು ಸತ್ಯ. ಆದರೆ ಪತ್ರಗಳನ್ನು ಓದಿದಾಗ ಸಿಗುವಷ್ಟು ಸಂತೋಷ ಸಾಮಾಜಿಕ ಜಾಲತಾಣಗಳ ಮೂಲಕ ಓದಿದಾಗ ಸಿಗಲಾರದು.
ಈ ಹಿಂದೆ ‘ನಿರಂತರ’ ಪತ್ರಿಕೆಯಲ್ಲಿ ಪ್ರಕಟವಾಗುವ ‘ಗೆಳತಿ’ ಅಂಕಣವನ್ನು ಓದಿ ಓದುಗರು ಪೋಸ್ಟ್ಕಾರ್ಡ್ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಇದರಿಂದಾಗಿ ನನ್ನ ಲೇಖನಗಳಿಂದ ಆಗುವ ಪ್ರಯೋಜನ, ಸಾಮಾಜಿಕ ಬದಲಾವಣೆಗಳ ಬಗ್ಗೆಯೂ ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಕಳೆದೆರಡು ವರ್ಷಗಳಿಂದ ಓದುಗರು ವಾಟ್ಸಪ್, ವೆಬ್ಸೈಟ್, ಮೆಸೇಜ್ಗಳ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ತಿಂಗಳು ಆಯ್ದ ಒಂದೆರಡು ಅಭಿಪ್ರಾಯಗಳನ್ನು ಮಾತ್ರ ಪತ್ರಿಕೆಯಲ್ಲಿ ಪ್ರಕಟಿಸಲು ಸಾಧ್ಯವಾಗುತ್ತಿದೆ.
ಪತ್ರ ಬರೆಯುವ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ‘ಅಮ್ಮನಿಗೊಂದು’ ಪತ್ರ ಎಂಬ ಒಂದು ವಿನೂತನ ಪ್ರಯತ್ನವನ್ನು ಕಳೆದ ಒಂದು ತಿಂಗಳ ಹಿಂದೆ ಜ್ಞಾನವಿಕಾಸ ಕಾರ್ಯಕ್ರಮದ ನಿರ್ದೇಶಕರಾದ ವಿಠಲ ಪೂಜಾರಿಯವರು ಹಮ್ಮಿಕೊಂಡಿದ್ದಾರೆ. ಇದರಿಂದಾಗಿ ನನಗೆ ದಿನಾಲೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಪತ್ರಗಳು ಬರಲಾರಂಭಿಸಿವೆ. ಈ ಎಲ್ಲ ಪತ್ರಗಳನ್ನು ಓದಿ ಇವರೆಲ್ಲರಿಗೆ ಒಂದೇ ಪತ್ರದಲ್ಲಿ ಉತ್ತರ ಬರೆಯಬೇಕೆಂದು ಚಿಂತಿಸಿ ಇದೀಗ ‘ಗೆಳತಿ’ ಅಂಕಣದ ಮೂಲಕ ಇವರೆಲ್ಲರಿಗೆ ಉತ್ತರಿಸಲು ಹೊರಟಿದ್ದೇನೆ.
ಜ್ಞಾನವಿಕಾಸದಿಂದಾಗಿ ತಮ್ಮ ಅರಿವನ್ನು ವಿಸ್ತರಿಸಿಕೊಂಡದ್ದು, ಬದುಕನ್ನು ರೂಪಿಸಿಕೊಂಡದ್ದು, ಮನೆ ಕಟ್ಟಿದ್ದು, ಮಕ್ಕಳಿಗೆ ವಿದ್ಯೆ ಕೊಡಿಸಿದ್ದು, ಸ್ವ ಉದ್ಯೋಗದಿಂದ ಸ್ವಂತ ಕಾಲಲ್ಲಿ ನಿಂತದ್ದು, ಕೌಟುಂಬಿಕ ಸಾಮರಸ್ಯವನ್ನು ಕಾಪಾಡಿಕೊಂಡದ್ದು ಮಾತ್ರವಲ್ಲ ಒಳ್ಳೆಯ ಮಾತುಗಾರ್ತಿ, ಬರಹಗಾರ್ತಿ ಆಗಿದ್ದು, ನಿರಂತರದ ಓದು, ಪ್ರವಾಸ, ಚಲನಚಿತ್ರ ವೀಕ್ಷಣೆ, ಕೇಂದ್ರದಲ್ಲಿ ಸಿಗುವ ಎಲ್ಲಾ ಮಾಹಿತಿಗಳು ಈ ಬಗ್ಗೆ ಎಲ್ಲರೂ ಬರೆದಿದ್ದಾರೆ. ಆಟೋಟ ಸ್ಪರ್ಧೆಗಳಲ್ಲಿ ಭಾಗಿಗಳಾಗಿ ಮಕ್ಕಳಂತೆ ಖುಷಿಪಟ್ಟಿದ್ದು, ಬಹುಮಾನ ಗಿಟ್ಟಿಸಿಕೊಂಡದ್ದು ಈ ಎಲ್ಲಾ ವಿಚಾರಗಳ ಬಗ್ಗೆಯೂ ಸವಿಸ್ತಾರವಾಗಿ ಮನತುಂಬಿ ಬರೆದುಕೊಂಡಿದ್ದಾರೆ. ಹಾಗಾಗಿ ನನಗೆ ಕುಳಿತಲ್ಲಿಂದಲೇ ಎಲ್ಲಾ ಜ್ಞಾನವಿಕಾಸ ಸಂಘಗಳನ್ನೊಮ್ಮೆ ಸಂದರ್ಶಿಸಿ ಬಂದ ಹಾಗೆ ಅನುಭವ ಆಗಿದೆ.
ಓರ್ವ ಮಹಿಳೆ ಮರದ ರೂಪಕವನ್ನು ಮುಂದಿಟ್ಟುಕೊoಡು “ನಾನಿಲ್ಲದೆ ನಿನಗೆ ಜೀವನವೇ ಇಲ್ಲ, ಯಾಕೆ ನೀನೇ ಇಲ್ಲ, ಹಾಗಾಗಿ ನನ್ನನ್ನು ಉಳಿಸಿಕೋ. ಆ ಮೂಲಕ ನಿನ್ನನ್ನು ಉಳಿಸಿಕೋ” ಎಂದು ಮರಗಳಿಗೆ ಹೇಳುವ ಮಾತಿದೆ. ಹಾಗೆ ಮಹಿಳೆಯರಿಲ್ಲದೆ ಸಮಾಜವೇ ಇಲ್ಲ. ಮನೆಯಲ್ಲಿ ಸುವ್ಯವಸ್ಥೆ ಇಲ್ಲ. ಮಕ್ಕಳ ಬದುಕಲ್ಲಿ ಬೆಳಕಿಲ್ಲ. ಹಾಗಾಗಿ ಮಹಿಳೆಯರನ್ನು ಗೌರವಿಸುವ, ಅವಳಿಗೆ ಬೆಂಗಾವಲಾಗಿ ನಿಲ್ಲುವ ಸಮಾಜ, ವ್ಯಕ್ತಿಗಳು ಬೇಕು ಎಂಬುದೂ ಸತ್ಯ. ‘ಮದ್ದೂರಮ್ಮ ದೇವಿ‘ ಕೇಂದ್ರದ ಸದಸ್ಯೆ ಈ ಪತ್ರದ ಜತೆ ಒಂದು ಸುಂದರ ಚಿತ್ರವನ್ನು ಪೆನ್ಸಿಲ್ ಆರ್ಟ್ನಲ್ಲಿ ಮಾಡಿ ಕಳುಹಿಸಿದ್ದಾರೆ. ‘ಶ್ರದ್ಧಾ’ ಕೇಂದ್ರದ ಸದಸ್ಯೆ ರುಡ್ಸೆಟ್ ಸಂಸ್ಥೆಯಿoದ ತರಬೇತಿ ಪಡೆದು ರೂ. 1.50 ಲಕ್ಷ ಸಾಲದೊಂದಿಗೆ ಫ್ಯಾನ್ಸಿ ಸ್ಟೋರ್, ಝೆರಾಕ್ಸ್ ಮಿಷನ್, ಸೋಪು, ಫಿನಾಯಿಲ್ ತಯಾರಿ ಮಾಡುತ್ತಿದ್ದಾರೆ. ದೊಡ್ಡಬಳ್ಳಾಪುರದ ಶಾರದಾ ತಮ್ಮ ಬಡತನದ ನಡುವೆ ಕೇಂದ್ರದಿoದ ಎಷ್ಟೆಲ್ಲಾ ಮಾಹಿತಿ ಪಡೆದು ಬುದ್ಧಿವಂತಳಾಗಿದ್ದೇನೆ. ಜಮೀನು ಖರೀದಿಸಿ, ಕೃಷಿ ಹೊಂಡ, ರಾಸುಗಳಿಗೆ ಮೇವು ಬೆಳೆಸಿ ತಾಳ್ಮೆಯಿಂದ ಬದುಕು ರೂಪಿಸಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದರೆ ‘ಸಿರಿ’ ಕೇಂದ್ರದ ಶಾಂತಮ್ಮ ಅವರು ಶುದ್ಧಗಂಗಾ ಘಟಕದ ನೀರು ಬಳಕೆ ಮಾಡುತ್ತಿರುವ ಬಗ್ಗೆ ಮಾತ್ರವಲ್ಲ ಮಕ್ಕಳ ಹುಟ್ಟುಹಬ್ಬವನ್ನು ಪರಿಸರ ದಿನವಾಗಿ ಆಚರಿಸುತ್ತಿರುವ ಬಗ್ಗೆ ತಿಳಿಸಿದ್ದಾರೆ. ‘ಜ್ಞಾನಗಂಗಾ’ ಕೇಂದ್ರದ ಸರೋಜ ತಾನು ಗ್ರಂಥಪಾಲಕಿಯಾಗಿ, ಸಿ.ಎಸ್.ಸಿ.ಯಲ್ಲಿ ವಿ.ಎಲ್.ಇ. ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಮತ್ತು ಜ್ಞಾನವಿಕಾಸ ಕೇಂದ್ರ ಆಟೋಟ ಸ್ಪರ್ಧೆಗಳ ಮೂಲಕ ಸಮಾನತೆಯೊಂದಿಗೆ ಮಾನಸಿಕ ನೆಮ್ಮದಿಯನ್ನು ತಂದಿದೆ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ. ‘ಇಂಚರ’ ಜ್ಞಾನವಿಕಾಸ ಕೇಂದ್ರದ ಎಲ್ಲಾ ಸದಸ್ಯರು ಪುಸ್ತಕ ಓದಿ ಇದೀಗ ವಿಮರ್ಶೆ ಮಾಡುವಷ್ಟರ ಮಟ್ಟಿಗೆ ಪ್ರಬುದ್ಧರಾಗಿದ್ದಾರೆಂದು ಹೇಳಿಕೊಂಡರೆ, ನೆಲಮಂಗಲದ ‘ಸೂರ್ಯಕಾಂತಿ’ ಕೇಂದ್ರದ ಪುಷ್ಪ ಅವರು ಹೆಣ್ಣು ಮಕ್ಕಳಿಗೆ ವಿದ್ಯೆಯ ಅನಿವಾರ್ಯತೆ ಬಗ್ಗೆ ಮತ್ತು ಸರ್ಕಾರಿ ಸೌಲಭ್ಯದ ಬಗ್ಗೆ ತಿಳಿದುಕೊಂಡಿದ್ದು, ರೂ. 2.20 ಲಕ್ಷ ಪ್ರಗತಿನಿಧಿಯಿಂದ ಹಾಳೆ ತಟ್ಟೆ ಘಟಕ ಮಾಡಿ ಮದುವೆ ಮನೆ, ಹೋಟೆಲ್ಗಳಿಗೆ ಮಾರಾಟ ಮಾಡಿ ಬದುಕು ಕಟ್ಟಿಕೊಂಡ ಬಗ್ಗೆ ತಿಳಿಸಿದ್ದಾರೆ. ರಾಮದೇವನಹಳ್ಳಿಯ ‘ಶ್ರೀಲಕ್ಷ್ಮೀ ಸಂಘದ ಹೇಮಾವತಿಯವರಂತೂ ಪೂರ್ತಿ ಕಾವ್ಯಮಯವಾದ ಕಾಗದವನ್ನೆ ಬರೆದು ತಮ್ಮ ಪ್ರತಿಭೆಯ ಅನಾವರಣ ಮಾಡಿದ್ದಾರೆ. ‘ಜೇನುಗೂಡು’ ಜ್ಞಾನವಿಕಾಸ ಸಂಘದವರು (ಹೆಸರಿಲ್ಲ) ರಂಗವಿಜ್ಞಾನದಲ್ಲಿ ತರಬೇತಿ ಪಡೆದು ಏಕಪಾತ್ರಾಭಿನಯ ಮಾಡಿದ ಬಗ್ಗೆ ಬರೆದಿದ್ದು ‘ಹೇಳಲು ಇನ್ನೂ ತುಂಬಾ ವಿಷಯ ಇದೆ. ಒಂದು ಪುಸ್ತಕ ಸಾಲಲ್ಲ’ ಎಂದು ತಮ್ಮ ಮನಸ್ಸಿನ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ‘ಭೂಮಿಕಾ’ ಜ್ಞಾನವಿಕಾಸ ಕೇಂದ್ರದ ಗೀತಾಮಣಿ ‘ಸಂಸಾರ ಸಾಗರದಲ್ಲಿ ಈಜುತ್ತಿದ್ದವರಿಗೆ ಜ್ಞಾನವಿಕಾಸ ಹಾಡು, ನೃತ್ಯ, ಆಟ ರಂಗೋಲಿ, ಕೋಲಾಟ, ಭಕ್ತಿಗೀತೆ ಹೀಗೆ ಮನಸ್ಸಿಗೆ ಮುದಕೊಡುವ ಹತ್ತು ಹಲವು ಕಾರ್ಯಕ್ರಮಗಳು ಸಿಕ್ಕಿದವು’ ಅಂದಿದ್ದಾರೆ. ‘ಗಾಯತ್ರಿ ಮಹಾಗಣಪತಿ ಕೇಂದ್ರದ ಸದಸ್ಯೆ ‘ನನ್ನಂಥ ಕತ್ತಲಲ್ಲಿದ್ದ ಸಾವಿರಾರು ಅಬಲೆ ಹೆಣ್ಣು ಮಕ್ಕಳ ಕುಟುಂಬಕ್ಕೆ ಜ್ಞಾನವಿಕಾಸ ಅಂತರoಗದ ಕದವನ್ನು ತಟ್ಟಿ ಬಾಳಿಗೆ ಬೆಳಕಾಗಿದೆ’ ಎಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ‘ಹೇಮಾವತಿ ಪ್ರಕೃತಿ’ ಜ್ಞಾನವಿಕಾಸ ಕೇಂದ್ರದವರು ಜ್ಞಾನವಿಕಾಸದ ಶಿಸ್ತು ‘ಚಪ್ಪಾಳೆಯಿಂದ – ಚಪ್ಪಲಿ ತನಕ’ ಎಂಬ ಮಾತಿನೊಂದಿಗೆ ‘ಗೆಳತಿ’ ಲೇಖನಗಳಿಂದ ಮಹಿಳೆಯರ ಸ್ಥಾನಮಾನ, ಆರೋಗ್ಯ, ಕಷ್ಟ ಬಂದಾಗ ಎದುರಿಸುವ ಛಲ, ಜತೆಗೇ ಸ್ವಚ್ಛತೆ, ವಿದ್ಯಾಭ್ಯಾಸಗಳ ಬಗ್ಗೆ ಅಗಾಧವಾದ ಮಾಹಿತಿ ಸಿಕ್ಕಿದೆ. 11 ಗಂಟೆಗೆ ರೆಡಿ ಆಗಿ ದೇವಸ್ಥಾನಕ್ಕೆ ಹೊರಟಂತೆ ಖುಷಿಯಾಗಿ ಕೇಂದ್ರಕ್ಕೆ ಹೋಗುವ ಬಗ್ಗೆ ತಿಳಿಸಿದ್ದಾರೆ. ರಾಯಚೂರಿನ ‘ಜ್ಞಾನನಿಧಿ’ ಕೇಂದ್ರದ ಸಂಗೀತಾ ಅವರು ಮೌನಗೌರಿಯಾಗಿದ್ದ ನಾನು ಇಂದು ಸಾವಿರಾರು ಜನರೆದುರು ಮಾತಾಡುವ ಧೈರ್ಯ ತಂದುಕೊAಡಿದ್ದೇನೆ. ‘ಮಾತುಗಾರಿಕೆ ಕಲಿಸಿ ಕೊಟ್ಟ ನನ್ನ ಕೇಂದ್ರ ನನ್ನ ಹೆಮ್ಮೆ’ ಎಂಬ ಮಾತನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಮುದಗಲ್ ತಾಲೂಕು ಶರಣಮ್ಮ ಗಂಡ ಕುಡಿತದ ಪರಿಣಾಮವಾಗಿ ಇಹಲೋಕ ತ್ಯಜಿಸಿದ ನಂತರ ಮೂರು ಮಕ್ಕಳನ್ನು ಓದಿಸಿ, ಮನೆ ಕಟ್ಟಿಸಿ ನಾಲ್ಕು ಜನರಿಗೆ ಉಪಕಾರಿಯಾಗಿ ಬಾಳ್ವೆ ಮಾಡಿದ ಬಗ್ಗೆ ಹೇಳಿಕೊಂಡಿದ್ದಾರೆ. ಶಿರವಾಡ ತಾಲ್ಲೂಕಿನ ಮಂಜುಳಾ ಅನ್ನುವವರು ಹೆಣ್ಣು ಮಕ್ಕಳಿಗೆ ಧೈರ್ಯ-ಸ್ಥೈರ್ಯ, ಆತ್ಮವಿಶ್ವಾಸ ತುಂಬಿದ ಕೇಂದ್ರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಕೊಪ್ಪಳದ ‘ಮಹಾಲಕ್ಷ್ಮೀ’ ಕೇಂದ್ರದ ಕವಿತಾ ಪ್ರಗತಿನಿಧಿ ಪಡೆದು 6 ಹೊಲಿಗೆಯಂತ್ರ ಖರೀದಿಸಿ ಇತರರಿಗೆ ತರಬೇತಿ ಕೊಡುತ್ತಿರುವ ಬಗ್ಗೆ, ಅಂಗಡಿ ವ್ಯವಹಾರದ ಬಗ್ಗೆ ಬರೆದಿದ್ದಾರೆ. ‘ಶ್ರುತಿ ದಾರಿದೀಪ’ ಕೇಂದ್ರದವರು “ನುಡಿದರೆ ಮುತ್ತಿನ ಹಾರದಂತಿರಬೇಕು” ಎಂಬoತೆ ನಮ್ಮ ನಡೆ – ನುಡಿ, ಮಾತು ಗೌರವದಿಂದ ಕೂಡಿರಬೇಕೆಂಬ ಅರಿವು ಬಂದಿದೆ ಎಂದಿದ್ದಾರೆ. ‘ಶ್ರೀ ಸಾಯಿ ಕೇಂದ್ರ’ದ ಪ್ರೇಮ ಎನ್ನುವವರು ರೂ. 5 ಲಕ್ಷ ಸಿಡ್ಬಿ ಸಾಲ ಪಡೆದು ರೊಟ್ಟಿ ಮೆಷಿನ್, ಶ್ಯಾವಿಗೆ ಮೆಷಿನ್, ಹಿಟ್ಟು ಕಲಸುವ ಮೆಷಿನ್ ಇಟ್ಟುಕೊಂಡು
ಸ್ವಉದ್ಯೋಗ ಮಾಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಪ್ರೇಮಾ ಅವರು ‘ಸ್ಫೂರ್ತಿ ಕೇಂದ್ರ’ದ ಸದಸ್ಯೆಯಾಗಿ ಅಬಲೆಯರನ್ನು ಸಬಲೆಯರನ್ನಾಗಿಸುವ, ಅವರಲ್ಲಿ ಆತ್ಮವಿಶ್ವಾಸ ತುಂಬಿ ಮುಖ್ಯ ವಾಹಿನಿಗೆ ತರುವ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಪತ್ರಗಳನ್ನು ಓದಿ ನನಗಂತೂ ಇಷ್ಟೂ ಕೇಂದ್ರಗಳನ್ನು ಸುತ್ತಿ ಸದಸ್ಯರನ್ನು ನೋಡಿ ಬಂದoತಾಯ್ತು. ಇಲ್ಲಿ ಸದಸ್ಯರ ಪತ್ರಗಳಿಂದ ಆಯ್ದ ಕೆಲವು ವಿಚಾರಗಳನ್ನಷ್ಟೇ ಪ್ರಸ್ತಾಪಿಸಿದ್ದೇನೆ. ಅವರ ಪತ್ರಗಳು ಸುದೀರ್ಘವಾಗಿದ್ದು ಜ್ಞಾನವಿಕಾಸದಲ್ಲಿ ಕೊಡುವ ಎಲ್ಲಾ ಮಾಹಿತಿಗಳು, ಅವುಗಳ ಉಪಯುಕ್ತತೆ ಬಗ್ಗೆ ಎಲ್ಲರೂ ಬರೆದಿದ್ದಾರೆ. ನಿರಂತರದಲ್ಲಿ ಪ್ರಕಟಗೊಳ್ಳುತ್ತಿರುವ ‘ಗೆಳತಿ’ ಲೇಖನದ ಬಗ್ಗೆ, ಪ್ರವಾಸ, ಚಲನಚಿತ್ರ, ಯೂಟ್ಯೂಬ್ ಹೀಗೆ ಹತ್ತು ಹಲವು ವಿಷಯಗಳ ಪ್ರಸ್ತಾಪ ಮಾಡಿದ್ದಾರೆ ಮತ್ತು ಈ ಕಾರ್ಯಕ್ರಮ ರೂಪಿಸಿದ್ದಕ್ಕಾಗಿ ಎಲ್ಲಾ ರೀತಿಯ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. ಪತ್ರ ಬರೆದ ಎಲ್ಲರಿಗೂ ಧನ್ಯವಾದಗಳು. ಕೇಂದ್ರದಲ್ಲಿ ನಿಮ್ಮ ಭಾಗವಹಿಸುವಿಕೆ, ಆ ಮೂಲಕ ಜ್ಞಾನ ಸಂಪಾದನೆ ನಿರಂತರವಾಗಿರಲಿ. ‘ಜ್ಞಾನವಿಕಾಸ’ ಎಲ್ಲರ ಬದುಕಿಗೆ ಬೆಳಕು ತೋರಲಿ ಎಂದು ಹಾರೈಸುತ್ತೇನೆ.