ಆಘಾತಾನಂತರದ ಒತ್ತಡದ ಅಸ್ವಸ್ಥತೆ

ಕೆಲವೊಮ್ಮೆ ಹೀಗಾಗುತ್ತದೆ. ಎಲ್ಲವೂ ತಿಳಿಯಾಗಿದೆ ಎಂದುಕೊಂಡಿರುತ್ತೇವೆ. ಆದರೆ ಎಲ್ಲೋ ಮನಸಿನ ಆಳದಿಂದ ಕೆಲವು ಮಾನಸಿಕ ಬಿಕ್ಕಟ್ಟುಗಳು ಧುತ್ತನೆ ಅನಿರೀಕ್ಷಿತವಾಗಿ ಮೇಲೆದ್ದು ಬರುತ್ತವೆ. ಮನೋಬೇನೆಯನ್ನು ತರುತ್ತವೆ. ಇಂತಹ ತೀವ್ರ ತರವಾದ ಆತಂಕ, ಒತ್ತಡಗಳಿಂದ ಕೂಡಿದ ಮನೋ ಬೇನೆಗಳಿಗೆ ಕಾರಣಗಳು ಇಂದು ನಿನ್ನೆಯದ್ದಲ್ಲ. ಬಲು ಕಾಲ ಹಿಂದಿನ ಬದುಕಿನಲ್ಲಿ ನಡೆದಿರಬಹುದಾದ ಮಾನಸಿಕ ಆಘಾತಗಳು. ಹಾಗಾಗಿ ಈ ರೀತಿಯ ಮನೋಬೇನೆಯನ್ನು ‘ಆಘಾತಾನಂತರದ ಒತ್ತಡದ ಅಸ್ವಸ್ಥತೆ’ ಎನ್ನುತ್ತೇವೆ.
ಕಾರಣಗಳು ಮತ್ತು ಲಕ್ಷಣಗಳು
ಈ ರೀತಿಯಾದ ಸಮಸ್ಯೆಗೆ ಮೂಲ ಕಾರಣಗಳು ಬಲು ದೊಡ್ಡದಾದ ಆಘಾತಗಳು. ಈ ಆಘಾತಗಳಿಂದ ವ್ಯಕ್ತಿ ತನ್ನ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಮತ್ತೆ ಮೊದಲಿನಂತಾಗಲು ತೀರ ಅಸಮರ್ಥನಾಗುತ್ತಾನೆ. ಉದಾಹರಣೆಗೆ ಸುನಾಮಿ, ಯುದ್ಧ, ಕಣ್ಣೆದುರಿಗೆ ಕಂಡ ತೀವ್ರತರವಾದ ವಾಹನ ಅಪಘಾತ, ಅಗ್ನಿ ಆಘಾತ ಇತ್ಯಾದಿಗಳು. ಇವುಗಳಲ್ಲಿ ವ್ಯಕ್ತಿ ನೇರವಾಗಿ ಬಲಿಪಶುವಾಗಿದ್ದಲ್ಲಿ, ಆ ಆಘಾತಗಳನ್ನು ಅನುಭವಿಸಿದ್ದಲ್ಲಿ ಇಂಥ ಆಘಾತಗಳನ್ನು ಪೂರ್ಣವಾಗಿ ಪರಿಹಾರ ಮಾಡಲಾಗುವುದಿಲ್ಲ. ಆದ್ದರಿಂದ ಇಂಥ ನೋವುಗಳು ಮನಸ್ಸಿನ ಆಳಕ್ಕೆ ಇಳಿದು ದಿನಕಳೆದಂತೆ, ಕೆಲವೊಮ್ಮೆ 9ತಿಂಗಳ ಬಳಿಕ ಅಥವಾ ವರ್ಷಗಳ ಬಳಿಕವೂ ‘ಒತ್ತಡದ ಅಸ್ವಸ್ಥತೆ’ಯಾಗಿ ಕಾಡುತ್ತದೆ.
ಬಾಲ್ಯದಲ್ಲಿ ಅನುಭವಿಸಿದ ಲೈಂಗಿಕ ದೌರ್ಜನ್ಯದ ಆಘಾತಗಳೂ ಹೆಚ್ಚಿನ ಸಮಯದಲ್ಲಿ ಮುಂದೆ ಅವರ ದಾಂಪತ್ಯ ಬದುಕಿನ ಕಾಲದಲ್ಲಿ ‘ಒತ್ತಡದ ಅಸ್ವಸ್ಥತೆ’ಯಾಗಿ ಕಾಣಬಹುದು. ಸಂಗಾತಿಗಳಲ್ಲಿ ಒಬ್ಬರು ಆ ಪರಿಸ್ಥಿತಿಗೆ ಬಲಿಪಶುಗಳಾಗಿದ್ದಾಗ ಈಗ ಅವು ಮಾನಸಿಕ ಸಮಸ್ಯೆಯಾಗಿ ಹಲವಾರು ವರ್ಷಗಳ ಬಳಿಕ ಅವರ ದಾಂಪತ್ಯ ಸುಖಕ್ಕೆ ಮುಳ್ಳಾಗಬಹುದು. ಅತಿಯಾದ ಕ್ರೌರ್ಯ, ಅಪರಾಧಗಳಿಗೆ, ಚಿತ್ರಹಿಂಸೆಗಳಿಗೆ ತುತ್ತಾದ ಮಂದಿಯೂ ಮುಂದಕ್ಕೆ ಇಂಥದ್ದೊ0ದು ನೋವಿಗೆ ತುತ್ತಾಗಬಹುದು.
ಒತ್ತೆಯಾಳಾಗಿ, ಚಿತ್ರಹಿಂಸೆಗಳಿಗೆ ಒಳಗಾದ ಶೋಷಿತ ವ್ಯಕ್ತಿಗಳು ಮುಂದಕ್ಕೆ ‘ಒತ್ತಡದ ಅಸ್ವಸ್ಥತೆ’ಯ ಸಮಸ್ಯೆಯಿಂದ ಬಳಲುತ್ತಾರೆ. ಬಲವಂತದ ವಲಸೆ, ಒಕ್ಕಲೆಬ್ಬಿಸುವ ಪ್ರಕ್ರಿಯೆ, ಪ್ರತಿಕೂಲ ವಾತಾವರಣಗಳು ಮುಂದಕ್ಕೆ ‘ಒತ್ತಡದ ಅಸ್ವಸ್ಥತೆ’ ಅಂತಹ ಸಮಸ್ಯೆಗೆ ಕಾರಣವಾದೀತು. ಈ ಸಮಸ್ಯೆಯ ಲಕ್ಷಣಗಳು ಈ ರೀತಿ ಇರುತ್ತವೆ. ವ್ಯಕ್ತಿಯ ಗೊಂದಲಪೂರಿತ ಚಿಂತನೆಗಳು, ಪದೇಪದೇ ರಾತ್ರಿಯಲ್ಲಿ ಕಾಡುವ ಬೆಚ್ಚಿಬೀಳಿಸುವ ದುಃಸ್ವಪ್ನಗಳು, ಅತಿಯಾದ ಆತಂಕ, ಆಘಾತಕ್ಕೆ ಸಂಬ0ಧಿಸಿದ0ತೆ ಪ್ರಚೋದಕ ವಸ್ತುಗಳನ್ನೇ ವ್ಯಕ್ತಿ ತೀರ ತಪ್ಪಿಸಲು ಪ್ರಯತ್ನಿಸುತ್ತಾನೆ. (ಉದಾಹರಣೆಗೆ ವಾಹನ ಅಪಘಾತ, ಆಘಾತಕ್ಕೊಳಗಾದ ವ್ಯಕ್ತಿ ಮತ್ತೆಂದೂ ವಾಹನ ಏರಲಾರ. ಹತ್ತಿದರೂ ತಲೆ ತಿರುಗುವಿಕೆ, ಅತಿಯಾದ ನಡುಕ ಹೀಗೆ ಅಪಸಾಮಾನ್ಯ ವರ್ತನೆ ಕಂಡುಬರುತ್ತದೆ.
ಇವರಲ್ಲಿ ನಿದ್ರಾಹೀನತೆ, ಅನಾರೋಗ್ಯಕರ ಒತ್ತಡ, ಖಿನ್ನತೆ, ದುರ್ಬಲ ನೆನಪಿನ ಶಕ್ತಿಯಂತಹ ಲಕ್ಷಣಗಳು ಗೋಚರಿಸುತ್ತವೆ.
ಪರಿಹಾರ ಮಾರ್ಗೋಪಾಯಗಳು
ಸಮಸ್ಯೆಗೆ ಕಾರಣವಾದ ಆಘಾತದ ಕಾರಣಗಳನ್ನು ಮೊದಲಿಗೆ ಗುರುತಿಸುವುದೇ ಇಲ್ಲಿ ದೊಡ್ಡ ಸವಾಲು. ಯಾಕೆಂದರೆ ಆಘಾತವಾಗಿ ವರ್ಷಗಳೇ ಉರುಳಿದ ಬಳಿಕ ಈ ಸಮಸ್ಯೆ ಆರಂಭವಾಗಿರಬಹುದು. ಉದಾಹರಣೆಗೆ ಬಾಲ್ಯದಲ್ಲಿನ ಲೈಂಗಿಕ ಶೋಷಣೆ ಅನೇಕ ವರ್ಷಗಳ ಬಳಿಕ ಮದುವೆಯಾದ ನಂತರ ಸಮಸ್ಯೆಯನ್ನು ಉಂಟುಮಾಡುತ್ತದೆ. ಹಾಗಾಗಿ ಇಂತಹ ಸಮಸ್ಯೆಗೆ ಕಾರಣಗಳನ್ನು ಸರಿಯಾಗಿ ಗುರುತಿಸಿ ಅದಕ್ಕೆ ಸರಿಯಾದ ಚಿಕಿತ್ಸಾ ತಂತ್ರವನ್ನು ರೂಢಿಸಿಕೊಳ್ಳಬೇಕು. ಹಾಗಾಗಿ ಮನೋತಜ್ಞರ ಭೇಟಿ ಇಲ್ಲಿ ಅವಶ್ಯಕ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates