ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಯೋಗವನ್ನು ಜಗತ್ತಿಗೆ ಕೊಡುಗೆಯಾಗಿ ನೀಡುವ ಮೂಲಕ ಭಾರತವು ಇಂದು ವಿಶ್ವಗುರುವಾಗಿದೆ. ಭಾರತದಿಂದ ಪ್ರೇರಿತವಾದ ಯೋಗ ಜಗತ್ತಿನಾದ್ಯಂತ ಪಸರಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಯೋಗದಿಂದ ಯಾವುದೇ ವೆಚ್ಚವಿಲ್ಲದೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಪಡೆಯಲು, ದೇಹ, ಮನಸ್ಸು ಮತ್ತು ಇಂದ್ರಿಯಗಳ ಮೇಲೆ ಹತೋಟಿ ಹೊಂದಲು ಸಾಧ್ಯವಿದೆ. ಯೋಗವು ದೇಹ ಮತ್ತು ಮನಸ್ಸನ್ನು ಕೂಡಿಸುವ ಕೆಲಸವನ್ನು ಮಾಡುತ್ತದೆ. ಯೋಗಾಭ್ಯಾಸ ಅಂದರೆ ಕೇವಲ ವ್ಯಾಯಾಮ ಅಲ್ಲ. ದೇಹ, ಮನಸ್ಸು ಮತ್ತು ಇಂದ್ರಿಯಗಳ ಹತೋಟಿಯೊಂದಿಗೆ ನೆಮ್ಮದಿಯ ಸಾರ್ಥಕ ಜೀವನವು ಯೋಗದಿಂದ ಲಭಿಸುತ್ತದೆ. ಯೋಗವು ಚಿಕಿತ್ಸಾತ್ಮಕ ವಿದ್ಯೆಯಾಗಿದ್ದು ಯಾವುದೇ ಜಾತಿ, ಮತ, ಧರ್ಮ ಹಾಗೂ ಭಾಷೆಗೆ ಸೀಮಿತವಾಗದೆ ವಿಶ್ವಮಾನ್ಯವಾಗಿದೆ.
‘ಯೋಗಃ ಚಿತ್ತ ವೃತ್ತಿ ನಿರೋಧಃ’ ಎಂದು ಪತಂಜಲಿ ಯೋಗ ಸೂತ್ರವು ತಿಳಿಸುತ್ತದೆ. ಅಂದರೆ ಚಿತ್ತದ ವೃತ್ತಿಗಳನ್ನು ಅಥವಾ ಬಯಕೆಗಳನ್ನು ತಡೆದು ನಿಲ್ಲಿಸಿ ಏಕಾಗ್ರತೆ ಸಾಧಿಸುವುದೇ ಯೋಗ ಎಂದು ಇದರ ಅರ್ಥ. ಯೋಗದ ಮೂಲಪುರುಷನೆಂದೇ ಗುರುತಿಸಲ್ಪಡುವ ಪತಂಜಲಿ ಋಷಿಗಳು ಯೋಗವನ್ನು ಎಂಟು ವಿಭಾಗಗಳ ಮೂಲಕ ಸುಲಭವಾಗಿ ತಿಳಿಯುವಂತೆ ಪ್ರಸ್ತುತ ಪಡಿಸಿದ್ದಾರೆ. ಅವುಗಳೆಂದರೆ; ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ ಮತ್ತು ಸಮಾಧಿ.
ಇಂದು ಯೋಗವು ಭಾರತ ಮಾತ್ರವಲ್ಲದೆ ವಿಶ್ವದ ಅನೇಕ ರಾಷ್ಟçಗಳಲ್ಲಿ ಪ್ರಚಾರ ಪಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಯರು ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಯೋಗವನ್ನು ಕಲಿಯಲು ಭಾರತಕ್ಕೆ ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈಗಿನ ಆಧುನಿಕ ಸಮಾಜದಲ್ಲಿ ಸೌಲಭ್ಯಗಳು ಹೆಚ್ಚಿವೆ. ಬೆಳಗ್ಗೆ ಎದ್ದ ಸಮಯದಿಂದ ಹಿಡಿದು ರಾತ್ರಿ ಮಲಗುವವರೆಗೆ ಆಧುನಿಕ ಸೌಕರ್ಯಗಳನ್ನೇ ಬಳಕೆ ಮಾಡುವುದು ಹೆಚ್ಚಾಗಿದೆ. ಇದರಿಂದ ದೈಹಿಕ ವ್ಯಾಯಾಮದ ಕೊರತೆ ಉಂಟಾಗಿ ಅನಾರೋಗ್ಯಕ್ಕೀಡಾಗುವ ಸಂದರ್ಭಗಳೇ ಹೆಚ್ಚು.
ಇಂದು ಯಾವುದನ್ನು ಬೇಕಾದರೂ ಆನ್‌ಲೈನ್ ಮೂಲಕ ಖರೀದಿಸಬಹುದು. ಆದರೆ ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ. ನಿತ್ಯವೂ ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದೊಂದಿಗೆ ಇಂದ್ರಿಯಗಳ ನಿಯಂತ್ರಣವೂ ಆಗುತ್ತದೆ. ಯೋಗದಿಂದ ರಕ್ತದೊತ್ತಡ, ಮಧುಮೇಹದಿಂದ ಮುಕ್ತಿ ಹೊಂದಬಹುದಾಗಿದೆ.
ಏಕಾಗ್ರತೆ ಗಿಟ್ಟಿಸಿಕೊಳ್ಳುವ ಸುಲಭ ದಾರಿಯಲ್ಲಿ ಯೋಗ ಕೂಡ ಒಂದು. ಏಕಾಗ್ರತೆಯ ಸಾಧನೆಯ ಜೊತೆಗೆ ಜೀವನದ ಗುರಿಯನ್ನು ತಲುಪಲು ಯೋಗ ಮೆಟ್ಟಿಲಾಗಿದೆ. ‘ಹಲವಾರು ಜನ್ಮಗಳನ್ನು ಹೊತ್ತು ಸಾಧಿಸುವುದನ್ನು ಒಂದೇ ಜನ್ಮದಲ್ಲಿ ಅಥವಾ ಕೆಲವೇ ತಿಂಗಳುಗಳಲ್ಲಾಗಲಿ, ದಿನಗಳಲ್ಲಾಗಲಿ ಸಾಧಿಸುವುದಕ್ಕೆ ಉಪಯುಕ್ತವಾಗುವ ಸಾಧನ ಯೋಗ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ.
ಕೆರೆಗೆ ಕಲ್ಲೆಸೆದಾಗ ತಳದಲ್ಲಿರುವ ವಸ್ತುಗಳು ಕಾಣಲಾರವು. ಅಲೆಗಳು ಶಾಂತವಾದಾಗ ಮಾತ್ರ ತಳಭಾಗವನ್ನು ನೋಡಲು ಸಾಧ್ಯ. ಮನುಷ್ಯನ ಮನಸ್ಸಿನಲ್ಲಿಯೂ ಅಲೆಗಳು ಏಳುತ್ತಿರುತ್ತವೆ. ಅವುಗಳನ್ನು ನಿಗ್ರಹಿಸುವ, ಏಕಾಗ್ರತೆ ಸಾಧಿಸುವ ಕೆಲಸವನ್ನು ಯೋಗ ಮಾಡುತ್ತದೆ. ಧ್ಯಾನ ಮತ್ತು ಸಮಾಧಿ ಸ್ಥಿತಿಯ ಮೂಲಕ ಜೀವಾತ್ಮವು ಪರಮಾತ್ಮನನ್ನು ಒಂದಾಗುವುದೇ ನಿಜವಾದ ಯೋಗ. ಯೋಗ ಸಾಧಕರೆನಿಸಬೇಕಾದರೆ ಪ್ರಪ್ರಥಮವಾಗಿ ಬೇಕಾದದ್ದೆ ಮನೋನಿಗ್ರಹ. ಮೊದಲು ಇದನ್ನು ಸಾಧಿಸಿ ನಂತರ ಯೋಗಾಸನಗಳನ್ನು ಕಲಿಯಬೇಕು. ಅದನ್ನು ನಿತ್ಯ ಬದುಕಿನಲ್ಲಿ ಆಳವಡಿಸಬೇಕು.
ಇಂದು ಜಾಗತಿಕÀ ಮಟ್ಟದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ವಿಶಿಷ್ಟ ಆಚಾರ ವಿಚಾರಗಳ ಬಗ್ಗೆ ವ್ಯಾಪಕವಾಗಿ ಆಸಕ್ತಿ ಕುತೂಹಲ ಬೆಳೆಯುತ್ತಿದ್ದು ದೇಶ ವಿದೇಶಗಳಲ್ಲಿ ಇವುಗಳ ಬಗ್ಗೆ ಅಧ್ಯಯನ, ಅಧ್ಯಾಪನ, ಸಂಶೋಧನೆಗಳು ನಡೆಯುತ್ತಿರುವುದು ಸಂತೋಷದ ವಿಚಾರವಾಗಿದೆ. ಯೋಗ, ಧ್ಯಾನ, ಪ್ರಾಣಾಯಾಮ ಮೊದಲಾದವುಗಳನ್ನು ಮನೋವಿಜ್ಞಾನಿಗಳು, ವೈದ್ಯರು ಆರೋಗ್ಯ ಪೂರ್ಣ ಜೀವನಕ್ಕೆ ಪೂರಕವೆಂದು ಶಿಫಾರಸ್ಸು ಮಾಡತೊಡಗಿದ್ದಾರೆ. ಪ್ರಾಚೀನ ಕಾಲದ ಋಷಿಮುನಿಗಳ ಅನುಭವ, ಅಭ್ಯಾಸ, ಮಾರ್ಗದರ್ಶನದಿಂದ ರೂಪುಗೊಂಡ ಯೋಗ ಮಾರ್ಗವು ಇಂದು ಸ್ವಸ್ಥ ಶರೀರ ಮತ್ತು ಆರೋಗ್ಯಪೂರ್ಣ ಮನಸ್ಸು ಇವುಗಳ ನಡುವೆ ಸೂಕ್ತ ಸಮತೋಲನ ಉಂಟು ಮಾಡುವಲ್ಲಿ ಯಶಸ್ವಿಯಾಗಬಲ್ಲದು ಎಂಬುದು ಸಾಬೀತಾಗಿದೆ. ಒತ್ತಡಗಳ ನಡುವೆ ಜೀವನ ಮಾಡುವಂತಹ ಅಸಹ್ಯಕರ ಸನ್ನಿವೇಶ ಇಂದು ಎಲ್ಲೆಡೆ ನಿರ್ಮಾಣವಾಗಿದೆ. ರಾಜಕೀಯ, ಸಾಮಾಜಿಕ, ಆರ್ಥಿಕ, ವ್ಯವಹಾರಿಕ ರಂಗಗಳಲ್ಲಿ ನೈತಿಕ ಮೌಲ್ಯಗಳು ಕುಸಿತವನ್ನು ಕಂಡಿದೆ. ಇಂತಹ ಸನ್ನಿವೇಶದಲ್ಲಿ ಜನಸಾಮಾನ್ಯರಲ್ಲಿ ಔಚಿತ್ಯ ಪ್ರಜ್ಞೆಯನ್ನು ಜಾಗೃತಿಗೊಳಿಸಿ ಸದಾಚಾರ ಸಂಪನ್ನವಾದ, ಸುಸಂಸ್ಕಾರಯುಕ್ತವಾದ ನೂತನ ಸಮಾಜವೊಂದನ್ನು ರೂಪಿಸುವ ದೃಷ್ಠಿಯಿಂದ ಯೋಗಮಾರ್ಗವು ಅತ್ಯುತ್ತಮವಾಗಿದೆ ಎಂಬುದನ್ನು ಇಂದು ಎಲ್ಲರೂ ಅರ್ಥಮಾಡಿಕೊಂಡಿದ್ದಾರೆ. ವಿಶೇಷವಾಗಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ವಿಶ್ವಮಟ್ಟದಲ್ಲಿ ಯೋಗವನ್ನು ಪ್ರಚಾರ ಪಡಿಸುತ್ತಿರುವುದು ಹೆಮ್ಮೆಯ ವಿಷಯ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸುಮಾರು ೨೫ ವರ್ಷಗಳ ಹಿಂದೆಯೇ ಯೋಗ, ಪ್ರಕೃತಿ ಚಿಕಿತ್ಸೆ ಮತ್ತು ಆಯುರ್ವೇದ ಚಿಕಿತ್ಸೆಗಳನ್ನು ಆರಂಭಿಸಲಾಗಿತ್ತು. ಕಾಲೇಜು ಮತ್ತು ಆಸ್ಪತ್ರೆಗಳ ಮೂಲಕ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವ ಕಾರ್ಯ ಆರಂಭವಾಗಿತ್ತು. ಹಲವು ವರ್ಷಗಳ ನಮ್ಮ ಪರಿಶ್ರಮ ಹಾಗೂ ಪ್ರಯತ್ನದ ಫಲವಾಗಿ ಅವುಗಳಿಗೆಲ್ಲಾ ಸರಕಾರವು ಮಾನ್ಯತೆ ನೀಡಿದೆ ಹಾಗೂ ಅಂತಹ ಕಾರ್ಯಗಳಿಗೆ ಪ್ರೇರಣೆ ನೀಡುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂಬುದು ಸಂತೋಷದ ವಿಚಾರ. ಯೋಗವೆಂದರೆ ಬರೀ ದೇಹ ದಂಡನೆಯಲ್ಲ. ಅದು ನಮ್ಮ ಜೀವನಕ್ರಮವೆಂದರೆ ತಪ್ಪಾಗಲಾರದು. ನಮ್ಮ ಬಹುತೇಕ ಹಿರಿಯರೆಲ್ಲ ಪಾರಂಪರಿಕವಾಗಿ ಯೋಗ ಕಲಿತವರಲ್ಲ. ಆದರೂ ಅವರಿಗೆ ಯೋಗದ ಬಗ್ಗೆ ಅರಿವು ಇತ್ತು. ಮಹತ್ವ ಗೊತ್ತಿತ್ತು. ಹಾಗಾಗಿಯೇ ಅದನ್ನು ತಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಂಡು ಯೋಗವನ್ನೇ ಜೀವನಕ್ರಮವನ್ನಾಗಿಸಿಕೊಂಡಿದ್ದರು ಎನ್ನಬಹುದು.
ಯೋಗದಲ್ಲಿ ಹಲವು ವಿಭಾಗಗಳಿದ್ದು ಇವು ಮಾನವ ಜೀವನವನ್ನು ಉನ್ನತೀಕರಿಸಲು ಸಹಕರಿಸುತ್ತವೆ. ನಮ್ಮ ನಿತ್ಯಕರ್ಮಗಳು, ಸಮಾಜದಲ್ಲಿ ನಡೆದುಕೊಳ್ಳಬೇಕಾದ ರೀತಿ-ನೀತಿ, ಉಪಾಸನೆ, ದೇಹದಂಡನೆ, ವಿಶ್ರಾಂತಿ ಹೀಗೆ ಹಲವು ವಿಚಾರಗಳನ್ನು ತಿಳಿಸುವ ಮೂಲಕ ಯೋಗವು ಜ್ಞಾನ ವಿಕಾಸಕ್ಕೆ ಸಹಕಾರಿಯಾಗಿದೆೆ. ಯೋಗದ ಕುರಿತಾಗಿ ಕೆಲವು ಅಂತೆ-ಕAತೆ ಸುದ್ದಿಗಳು ಇದ್ದು, ಅವೆಲ್ಲವನ್ನು ನಂಬದೆ ಯೋಗದಿಂದ ದೊರಕುವ ಪ್ರಯೋಜನಗಳನ್ನು ಪಡೆಯುವ ಬಗ್ಗೆ ಗಮನಹರಿಸಬೇಕಾದ ಅನಿವಾರ್ಯತೆಯಿದೆ.
‘ಯೋಗ’ ಇದು ಒಂದು ದಿನ ಮಾಡುವ ಕಾರ್ಯವಲ್ಲ. ಪ್ರತಿದಿನವೂ ಯೋಗಾಭ್ಯಾಸವನ್ನು ಪಾಲಿಸಿಕೊಂಡು ಬಂದರೆ ಜೀವನವನ್ನು ಇನ್ನಷ್ಟು ಸುಂದರಗೊಳಿಸಬಹುದು. ಇಂದಿನ ಯಾಂತ್ರಿಕ ಬದುಕಿನಲ್ಲಿ ಯೋಗವನ್ನು ಅಳವಡಿಸಿಕೊಳ್ಳಲು ಕಷ್ಟಸಾಧ್ಯವಾಗುತ್ತದೆ ಎನ್ನುವವರು ಕೂಡಾ ಯೋಗದ ಮಹತ್ವವನ್ನು ಅರಿತು ದಿನಕ್ಕೆ ಒಮ್ಮೆಯಾದರೂ ಯೋಗಾಭ್ಯಾಸ ಮಾಡಿದರೆ ಉತ್ತಮವಾದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹೊಂದಲು ಸಾಧ್ಯವಿದೆ.