ಹಿಂದಿನ ಸಂಚಿಕೆಯಲ್ಲಿ ಯೋಜನೆಯ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ‘ಕಂತು ವಸೂಲಾತಿ’ ಪ್ರಕ್ರಿಯೆಗೆ ಆಸ್ಪದ ಕೊಡದೆ ಪ್ರತೀ ಸದಸ್ಯರು ಜವಾಬ್ದಾರಿಯಿಂದ ಸಮರ್ಪಕವಾಗಿ ‘ಮರುಪಾವತಿ’ ಮಾಡುತ್ತಾರೆಂದು ತಿಳಿಸಲಾಗಿತ್ತು.
ಈ ಜವಾಬ್ದಾರಿಯುತ ವ್ಯವಸ್ಥೆಯನ್ನು ಸದಸ್ಯರೇ ಕಾಪಾಡಿಕೊಳ್ಳಲು ಮುಖ್ಯವಾದ ಕಾರಣಗಳು ಯೋಜನೆಯ ಸ್ವಸಹಾಯ ಸಂಘಗಳು ಉತ್ತಮ ಆರ್ಥಿಕ ಶಿಸ್ತನ್ನು ಮೂಡಿಸುವ ಒಂದು ಪರಿಣಾಮಕಾರಿ ವೇದಿಕೆ ಆಗಿರುವುದಾಗಿದೆ. ಸ್ವಸಹಾಯ ಸಂಘಗಳು ರಚನೆಯಾದ ಪ್ರಾರಂಭದಿoದಲೇ 6 ಪ್ರಮುಖ ವಿಸ್ತೃತವಾದ ತರಬೇತಿಗಳನ್ನು ನೀಡುವುದರ ಮೂಲಕ ಸಂಘಕ್ಕೆ ಗಟ್ಟಿಯಾದ ಅಡಿಪಾಯವನ್ನು ಹಾಕಲಾಗುತ್ತದೆ. ಆ ತರಬೇತಿಗಳ ವಿವರಗಳನ್ನು ಹಿಂದಿನ ಸಂಚಿಕೆಯಲ್ಲಿ ವಿವರಿಸಿದ್ದೆವು. ತರಬೇತಿಯನ್ನು ಪಡೆದುಕೊಂಡ ಪ್ರತೀ ಸದಸ್ಯರು ತಮ್ಮ ಸಂಘಗಳ ವಾರದ ಸಭೆಯಲ್ಲಿ ಶಿಸ್ತುಬದ್ಧವಾಗಿ ವ್ಯವಹಾರಗಳನ್ನು ನಿರ್ವಹಿಸಿಕೊಂಡು ಹೋಗುತ್ತಾರೆ. ಪ್ರತೀ ವಾರಕ್ಕೊಮ್ಮೆ ನಡೆಯುವ ಸಂಘದ ಸಭೆಯು ಸದಸ್ಯರಿಗೆ ಅನೇಕ ಮಾಹಿತಿಗಳನ್ನು ತಿಳಿದುಕೊಳ್ಳಲು ಅವಕಾಶ ಮಾಡಿಕೊಡುವುದಷ್ಟೇ ಅಲ್ಲದೇ ಅನೇಕ ಇತರ ಕಲೆಗಳನ್ನು ಕರಗತ ಮಾಡಿಕೊಳ್ಳಲು ವೇದಿಕೆಯಾಗಿದೆ. ಸ್ವಸಹಾಯ ಸಂಘಗಳ ವಾರದ ಸಭೆಗಳಲ್ಲಿ ವೃತ್ತಾಕಾರವಾಗಿ ಸದಸ್ಯರು ಕುಳಿತುಕೊಂಡು ಪ್ರಾರ್ಥನೆ, ಸ್ವಾಗತಗಳೊಂದಿಗೆ ವಾರದ ಸಭೆಯು ಪ್ರಾರಂಭವಾಗುತ್ತದೆ. ಆ ವಾರದ ಸಭೆಗಾಗಿಯೇ ಓರ್ವರನ್ನು ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಯೋಜನೆಯ ಯಾವುದಾದರೂ ಪ್ರಮುಖ ವಿಷಯ, ಸ್ವಸಹಾಯ ಸಂಘದ ವಿಷಯ, ಕಾರ್ಯಕ್ರಮಗಳು ಅಥವಾ ಊರಿನ ಆಗುಹೋಗುಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸುತ್ತಾರೆ. ಹಾಗೆಯೇ ಸ್ವಸಹಾಯ ಸಂಘದ ವ್ಯಾವಹಾರಿಕ ವಿಷಯಗಳಾದ ವಾರದ ಮರುಪಾವತಿಯನ್ನು ನಿರ್ಣಯ ಪುಸ್ತಕದೊಂದಿಗೆ ತಾಳೆ ನೋಡುವುದು, ಯಾವುದಾದರೂ ಸದಸ್ಯರಿಗೆ ಪ್ರಗತಿನಿಧಿ ಸಾಲದ ಬೇಡಿಕೆಯ ಅಗತ್ಯ ಇದ್ದಲ್ಲಿ ನಿರ್ಣಯ ಕೈಗೊಳ್ಳುವುದು, ಯೋಜನೆಯ ಇತರ ಕಾರ್ಯಕ್ರಮಗಳಲ್ಲಿ ಏನಾದರೂ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕಿದ್ದಲ್ಲಿ ನಿರ್ಣಯಗಳನ್ನು ಕೈಗೊಳ್ಳುವ ಕೆಲಸವನ್ನು ವಾರದ ಸಭೆಯಲ್ಲಿ ಮಾಡಲಾಗುತ್ತದೆ. ಪ್ರಸ್ತುತ ವಾರದ ಉಳಿತಾಯ ಹಾಗೂ ಕಂತು ಮರುಪಾವತಿಯ ಮೊತ್ತಗಳನ್ನು ಸರಿಯಾಗಿ ನಮೂದಿಸಿ ಎಲ್ಲ ಸದಸ್ಯರ ಸಹಿ ಪಡೆದುಕೊಂಡು ವಾರದ ಸಭೆಯ ನಿರ್ಣಯವನ್ನು ಮುಕ್ತಾಯಗೊಳಿಸುತ್ತಾರೆ. ನಂತರ ಸಭಾಧ್ಯಕ್ಷರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾರೆ. ವಂದನಾರ್ಪಣೆಯೊoದಿಗೆ ಆ ವಾರದ ಸಭೆಯು ಕೊನೆಗೊಳ್ಳುತ್ತದೆ. ಹಿಂದೆ ನಾಲ್ಕು ಗೋಡೆಗಳೊಳಗಿದ್ದ ಮಹಿಳೆ ಇಂದು ಸಭಾಧ್ಯಕ್ಷರಾಗಿದ್ದಾರೆ. ಹಿಂದಿನ ಎಲ್ಲಾ ವಾರದ ಸಭೆ, ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯೋಜನೆಯ ಮೂಲಕ ಅನೇಕ ವಿಷಯಗಳನ್ನು ತಿಳಿದುಕೊಂಡ ಪರಿಣಾಮವಾಗಿ ಇಂದು ಆ ಮಹಿಳೆ ಅಧ್ಯಕ್ಷೀಯ ಭಾಷಣ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಯಾವುದೇ ಅಳುಕಿಲ್ಲದೆ, ವ್ಯತ್ಯಯಗಳಿಲ್ಲದೆ, ನಿರರ್ಗಳವಾಗಿ ಮಾತನಾಡುತ್ತಾರೆ. ಯೋಜನೆಯ ಸ್ವಸಹಾಯ ಸಂಘದಲ್ಲಿರುವ ಮಹಿಳೆಯರು ಹೊರಗಿನ ಆಗುಹೋಗುಗಳ ಬಗ್ಗೆ, ಸರಕಾರದ ಕಾರ್ಯಕ್ರಮಗಳು ಮತ್ತು ಸೌಲಭ್ಯಗಳ ಬಗ್ಗೆ, ಸಾಮಾನ್ಯ ಕಾನೂನಿನ ಬಗ್ಗೆ ಅರಿವನ್ನು ಹೊಂದಿರುತ್ತಾರೆ. ಆದ್ದರಿಂದ ಸರಕಾರದ ಕಾರ್ಯಕ್ರಮಗಳಾಗಲೀ ಅಥವಾ ಇತರ ಯಾವುದೇ ಯೋಜನೆ ಇರಲಿ ಅವುಗಳ ಸದ್ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ಇರುವುದರಿಂದ ಆ ಕಾರ್ಯಕ್ರಮಗಳ ಸದ್ಬಳಕೆ ಮಾಡುವುದರಲ್ಲಿ ಯೋಜನೆಯ ಸಂಘಗಳ ಸದಸ್ಯರು ಮೊದಲಿಗರಾಗಿರುತ್ತಾರೆ. ಒಂದೆರಡು ದಶಕಗಳ ಹಿಂದೆ ಮನೆಯ ಯಜಮಾನನು ತಾಲೂಕು ಕಚೇರಿ ಮುಂತಾದ ಸರಕಾರಿ ಕಚೇರಿಗಳಿಗೆ ಯಾವುದೋ ಕೆಲಸದ ನಿಮಿತ್ತ ಹೋಗುವ ಮೊದಲು, ತನ್ನ ಹೆಂಡತಿಯನ್ನು ಕರೆದು ಬಟ್ಟೆಗಳನ್ನು ಶುಭ್ರವಾಗಿಸಿ, ಸರಿಯಾಗಿ ಇಸ್ತಿç ಹಾಕಲು ಆದೇಶ ನೀಡುತ್ತಿದ್ದರು. ಈಗ ಅದೇ ವ್ಯಕ್ತಿ ಆ ಕಚೇರಿಗಳಿಗೆ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗಿ ಅಧಿಕಾರಿಗಳೊಂದಿಗೆ ಸರಿಯಾಗಿ, ಸಮರ್ಪಕವಾಗಿ ಚರ್ಚಿಸಿ ತನಗೆ ಆಗಬೇಕಾದ ಕೆಲಸವನ್ನು ಮಾಡಿಕೊಳ್ಳುತ್ತಿದ್ದಾನೆ. ಸರಕಾರದಿಂದ ಯಾವೆಲ್ಲ ಯೋಜನೆಗಳಿವೆಯೋ ಅವುಗಳ ಉದ್ದೇಶಗಳ ಮಾಹಿತಿ ಅಥವಾ ಸಾಮಾನ್ಯ ಕಾನೂನುಗಳ ಮಾಹಿತಿ, ಉತ್ತಮ ಮಾತುಗಾರಿಕೆಯ ಕಲೆ ಮೊದಲಾದ ಎಲ್ಲ ವಿಚಾರಗಳಲ್ಲಿಯೂ ಸ್ವಸಸಹಾಯ ಸಂಘಗಳ ತಾಯಂದಿರು ಒಂದು ಕೈ ಮೇಲೆ ಇದ್ದಾರೆ. ಇವುಗಳಿಗೆಲ್ಲ ಮೂಲ ಕಾರಣ ಯೋಜನೆಯ ವ್ಯವಸ್ಥೆಯಲ್ಲಿ ನಿರ್ವಹಿಸಲ್ಪಡುತ್ತಿರುವ ವಾರದ ಸಭೆ, ಒಕ್ಕೂಟ ಸಭೆ, ಜ್ಞಾನವಿಕಾಸ ಕಾರ್ಯಕ್ರಮಗಳು, ಮಹಿಳಾ ಸಮಾವೇಶಗಳು, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಧನಾ ಸಮಾವೇಶ ಮುಂತಾದ ಹತ್ತು ಹಲವು ಕಾರ್ಯಕ್ರಮಗಳಾಗಿವೆ. ಯೋಜನೆಯ ಸಭೆಗಳಾಗಲೀ, ಕಾರ್ಯಕ್ರಮಗಳಾಗಲೀ ನಡೆಯುತ್ತಿದೆ ಎಂಬುವುದು ಸಭಾಂಗಣದ ಹೊರಭಾಗದಲ್ಲಿಯೇ ಸುಲಭವಾಗಿ ತಿಳಿಯುತ್ತದೆ. ಏಕೆಂದರೆ, ಅಷ್ಟು ಶಿಸ್ತುಬದ್ಧವಾಗಿ ಒಂದೇ ಸಾಲಿನಲ್ಲಿ ಹೊರಗಡೆ ಚಪ್ಪಲಿಗಳನ್ನು ಬಿಟ್ಟಿರುತ್ತಾರೆ. ಏಕರೂಪದ ಶಿಸ್ತುಬದ್ಧವಾದ ಚಪ್ಪಾಳೆ ಒಳಗಡೆಯಿಂದ ಕೇಳಿಸುತ್ತದೆ. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಗಳ ಆಯೋಜನೆ ಆಗುತ್ತದೆ. ಎಲ್ಲವೂ ಶಿಸ್ತುಬದ್ಧವಾಗಿರುತ್ತದೆ. ಶಿಸ್ತಿಗೆ ಇನ್ನೊಂದು ಹೆಸರು ಯೋಜನೆ ಎಂದರೂ ತಪ್ಪಾಗಲಾರದು. ಈ ಶಿಸ್ತೇ ಸದಸ್ಯರ ಜೀವನದ ಶಿಸ್ತಿಗೂ ಪ್ರೇರಣೆಯಾಗಿದೆ. ಯೋಜನೆಯ ಸದಸ್ಯರ ಜೀವನವು ಈ ಎಲ್ಲ ಪ್ರೇರಣೆಗಳಿಂದಾಗಿ ಶಿಸ್ತುಬದ್ಧವಾಗಿ ಸಾಗುತ್ತಿದೆ. ಮನೆಯ ಸುತ್ತಮುತ್ತಲಿನ ವಾತಾವರಣದ ಸ್ವಚ್ಛತೆ, ಮನೆಗೆ ಬಂದ ಅತಿಥಿಗಳನ್ನು ಗೌರವಯುತವಾಗಿ ಸ್ವಾಗತಿಸುವುದು, ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಮಹತ್ವ ಕೊಡವುದು, ಕೃಷಿ, ವ್ಯಾಪಾರ ಅಥವಾ ಇತರ ಯಾವುದೇ ಆದಾಯ ತರುವ ಚಟುವಟಿಕೆಗಳನ್ನು ಉತ್ಸಾಹದಿಂದ ಕೈಗೊಳ್ಳುವುದು, ದುಂದುವೆಚ್ಚ ಮಾಡದೆ ಉಳಿತಾಯ ಮಾಡುವುದು, ಬಂಡವಾಳಗಳನ್ನು ಸದ್ವಿನಿಯೋಗ ಮಾಡುವುದು, ಕುಟುಂಬ, ಬಂಧುಬಳಗ, ನೆರೆಹೊರೆಯವರೊಡನೆ ಉತ್ತಮ ಬಾಂಧವ್ಯ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು, ಊರಿನ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಒಳ್ಳೆಯ ಕೆಲಸಗಳಿಗೆ ಬೆಂಬಲ ನೀಡುವುದು, ಓರ್ವ ಜವಾಬ್ದಾರಿಯುತ ಸಜ್ಜನನಾಗಿ ಸಹಬಾಳ್ವೆಯಿಂದ ಜೀವನ ನಡೆಸುವುದು ಮುಂತಾದ ಅನೇಕ ಗುಣ ವ್ಯಕ್ತಿತ್ವಗಳನ್ನು ಯೋಜನೆಯ ಸದಸ್ಯರು ಯೋಜನೆಯ ಪ್ರೇರಣೆಯಿಂದ ಮೈಗೂಡಿಸಿಕೊಂಡಿದ್ದಾರೆ. ತನ್ಮೂಲಕ ಸದೃಢ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸದಸ್ಯರನ್ನು ಆರ್ಥಿಕ ಸಬಲೀಕರಣ ಮಾಡುವುದು ಯೋಜನೆಯ ಒಂದು ಪ್ರಮುಖ ಗುರಿ ಆಗಿರುತ್ತದೆ. ಸಾಮಾಜಿಕವಾಗಿ ಸಬಲೀಕರಣ ಮಾಡುವುದು ಮತ್ತೊಂದು ಪ್ರಮುಖ ಗುರಿಯಾಗಿರುತ್ತದೆ. ಇವುಗಳು ಒಂದು ನಾಣ್ಯದ ಎರಡು ಮುಖಗಳಂತೆ ನಮ್ಮ ಸದಸ್ಯರ ಬದುಕಿಗೆ ಮೌಲ್ಯವನ್ನು ತುಂಬಿದೆ.
ಮುoದಿನ ಸಂಚಿಕೆಯಲ್ಲಿ ಮತ್ತಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ.