ಡಾ. ಎ. ಜಯಕುಮಾರ್ ಶೆಟ್ಟಿ
ಹಣಕಾಸಿನ ವ್ಯವಹಾರ ಕಬ್ಬಿಣ, ತಾಮ್ರ, ಬೆಳ್ಳಿ, ಲೋಹ ಹೀಗೆ ಹಲವು ಹಂತಗಳನ್ನು ದಾಟಿ ಈಗ ನಾವು ಬಳಸುತ್ತಿರುವ ನಾಣ್ಯ, ನೋಟಿನ ರೂಪಕ್ಕೆ ಬಂದು ನಿಂತಿದೆ. ಮುಂದುವರಿದು ನಗದು ವ್ಯವಹಾರ ಡಿಜಿಟಲ್ ರೂಪವನ್ನು ಪಡೆದಿದೆ. ಇದೀಗ ಡಿಜಿಟಲ್ ಆರ್ಥಿಕತೆಗೆ ವೇಗ ನೀಡುವ ನಿಟ್ಟಿನಲ್ಲಿ ಹೊಸ ಯುಗವೊಂದು ಆರಂಭವಾಗುತ್ತಿದೆ. ಅದರ ಹೆಸರೇ ‘ಇ – ರುಪಿ’. ಇದನ್ನು ‘ಡಿಜಿಟಲ್ ಕರೆನ್ಸಿ’ ಎಂದೂ ಕರೆಯುತ್ತಾರೆ.
ಕೇಂದ್ರ ಸರಕಾರ ಈಗಾಗಲೇ ಬಜೆಟ್‌ನಲ್ಲಿ ಘೋಷಿಸಿದಂತೆ ‘ಇ – ರುಪಿ’ ಕುರಿತಾದ ಟಿಪ್ಪಣಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈಗಾಗಲೇ ಸುಮಾರು ನೂರು ದೇಶಗಳು ‘ಇ – ರುಪಿ’ಯ ಅನ್ವೇಷಣೆಯಲ್ಲಿ ತೊಡಗಿವೆ. ಭಾರತದಲ್ಲಿರುವ ಕರೆನ್ಸಿಗಳಿಗೆ ಹೆಚ್ಚುವರಿಯಾಗಿ ‘ಇ – ರುಪಿ’ ಸೇರಿಕೊಳ್ಳಲಿದೆ. ಆದರೆ ಇದು ಸಂಪೂರ್ಣ ಡಿಜಿಟಲ್ ಆಗಿರುವ ಕಾರಣ ಡಿಜಿಟಲ್ ವ್ಯವಹಾರ ಅತ್ಯಂತ ವೇಗವಾಗಿ ಹಾಗೂ ಸುಲಭವಾಗಿ ನಡೆಯಲಿದೆ.
ಏನಿದು ‘ಇ – ರುಪಿ’ ?
‘ಇ – ರುಪಿ’ ಹಾಲಿ ಬಳಕೆಯಲ್ಲಿರುವ ಭೌತಿಕ ಕರೆನ್ಸಿಯ ಡಿಜಿಟಲ್ ರೂಪ. ಇದನ್ನು ಆರ್‌ಬಿಐ ಸಂಪೂರ್ಣವಾಗಿ ನಿಯಂತ್ರಿಸುತ್ತದೆ. ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುವ ಡಿಜಿಟಲ್ ಕರೆನ್ಸಿಯು ಪ್ರಸ್ತುತ ಚಲಾವಣೆಯಲ್ಲಿರುವ ಭೌತಿಕ ಕರೆನ್ಸಿಯಂತೆಯೇ ವಿಶಿಷ್ಟ ಅಂಕಿಗಳನ್ನು ಹೊಂದಿರುತ್ತದೆ. ಈ ವ್ಯವಸ್ಥೆಯಲ್ಲಿ ‘ಇ – ರುಪಿ’ಯನ್ನು ಭೌತಿಕ ಕರೆನ್ಸಿಯಾಗಿಯೂ ಬದಲಾಯಿಸಿಕೊಳ್ಳಲು ಅವಕಾಶವಿರಲಿದೆ. ‘ಇ – ರುಪಿ’ ಸರಕಾರದಿಂದ ಖಾತರಿಪಡಿಸಿದ ಡಿಜಿಟಲ್ ವ್ಯಾಲೆಟ್ ಆಗಿರುತ್ತದೆ.
ಜನರು ಫೋನ್‌ನಲ್ಲಿಯೇ ಇ – ರುಪಿ ಕರೆನ್ಸಿಯನ್ನು ಹೊಂದಬಹುದು. ಈ ಕರೆನ್ಸಿಯು ಆರ್‌ಬಿಐನಲ್ಲಿಯೇ ಇರುತ್ತದೆ. ಇದನ್ನು ಆರ್‌ಬಿಐನಿಂದ ನೇರವಾಗಿ ಯಾವುದೇ ಅಂಗಡಿಗೆ ಅಥವಾ ವ್ಯಕ್ತಿಗೆ ನಿಮ್ಮ ಫೋನ್ ಮೂಲಕವೇ ವರ್ಗಾಯಿಸಲಾಗುತ್ತದೆ. ಇದಕ್ಕೆ ಸರಕಾರದ ಸಂಪೂರ್ಣ ಖಾತರಿಯೂ ಇರಲಿದೆ. ಡಿಜಿಟಲ್ ಆಗಿರುವುದರಿಂದ ಇ – ರುಪಿಯ ಬಳಕೆಯು ಸರಳ ಮತ್ತು ಅಗ್ಗವಾಗುವ ಸಾಧ್ಯತೆಯಿದೆ.
ಪ್ರಯೋಜನಗಳೇನು?
ವೇಗದ ವಹಿವಾಟುಗಳು : ಸಾಂಪ್ರದಾಯಿಕ ಹಣಕಾಸು ಸಂಸ್ಥೆಗಳ ಮೂಲಕ ನಡೆಸುವ ವ್ಯವಹಾರಗಳಿಗಿಂತ ಡಿಜಿಟಲ್ ಕರೆನ್ಸಿ ಮೂಲಕ ವೇಗವಾಗಿ ವ್ಯವಹಾರ ನಡೆಸಬಹುದು. ಉದಾಹರಣೆಗೆ, ವಿದೇಶಕ್ಕೆ ಹಣವನ್ನು ವರ್ಗಾವಣೆ ಮಾಡುವುದು ಕೆಲವೊಮ್ಮೆ ಹಣವನ್ನು ಸ್ವೀಕರಿಸುವವರ ಖಾತೆಗೆ ಸಾಂಪ್ರದಾಯಿಕ ಬ್ಯಾಂಕ್ ಮೂಲಕ ಬಿಡುಗಡೆ ಮಾಡಲು ದಿನಗಳನ್ನು ತೆಗೆದುಕೊಳ್ಳಬಹುದು, ಆದರೆ ಡಿಜಿಟಲ್ ಕರೆನ್ಸಿಗಳು ತಕ್ಷಣವೇ ಅಲ್ಲದಿದ್ದರೂ ಇದನ್ನು ಹೆಚ್ಚು ವೇಗವಾಗಿ ಮಾಡುತ್ತದೆ.
ಯಾವುದೇ ಶುಲ್ಕವಿಲ್ಲ : ನಿಮ್ಮ ಖಾತೆಯಲ್ಲಿರುವ ಹಣವು ತಾಂತ್ರಿಕವಾಗಿ ನಿಮ್ಮದೇ ಆಗಿದ್ದರೂ, ಬ್ಯಾಂಕ್‌ಗಳು ನಿಮಗೆ ಎಟಿಎಂ ಶುಲ್ಕಗಳು, ವರ್ಗಾವಣೆ ಶುಲ್ಕಗಳನ್ನು ವಿಧಿಸುತ್ತವೆ. ನಿಮ್ಮ ಹಣವನ್ನು ವಿದೇಶದಲ್ಲಿ ಖರ್ಚು ಮಾಡಲು ಶುಲ್ಕಗಳಿವೆ. ಡಿಜಿಟಲ್ ಕರೆನ್ಸಿಯಲ್ಲಿ ನೀವು ಹೆಚ್ಚುವರಿ ಶುಲ್ಕವನ್ನು ನೀಡಬೇಕಾಗಿರುವುದಿಲ್ಲ.
ಪಾವತಿಯ ಹೆಜ್ಜೆ ಗುರುತು : ಹಣದ ಚಲನೆಯ ಪಥವನ್ನು ಗುರುತಿಸಲು ಅನುಕೂಲಕರವಾದ ಪಾರದರ್ಶಕತೆಯನ್ನು ವಿಶೇಷವಾಗಿ ಕ್ರಿಪ್ಟೋಕರೆನ್ಸಿಗಳು ಬಳಸುವ ಬ್ಲಾಕ್ ಚೈನ್ ತಂತ್ರಜ್ಞಾನದಲ್ಲಿ ವಿನ್ಯಾಸಗೊಳಿಸಲಾಗಿದೆ.
ವಂಚನೆಯ ವಿರುದ್ಧ ರಕ್ಷಣೆ : ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುವಾಗ ನಿಮ್ಮ ವೈಯಕ್ತಿಕ ಮತ್ತು ಪಾವತಿ ವಿವರಗಳನ್ನು ಕಂಪನಿಗಳು ಸಂಗ್ರಹಿಸುತ್ತವೆ. ಅವುಗಳು ಇತರರ ಪಾಲಾದರೆ ನೀವು ವಂಚನೆಗೆ ಗುರಿಯಾಗಬಹುದು. ಡಿಜಿಟಲ್ ಕರೆನ್ಸಿ ವ್ಯವಹಾರವನ್ನು ನಡೆಸುವಾಗ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಕಾಗಿಲ್ಲ.
ಹಣದುಬ್ಬರವಿಲ್ಲ : ಅನೇಕ ಡಿಜಿಟಲ್ ಕರೆನ್ಸಿಗಳು ವಿನ್ಯಾಸದಿಂದ ಹಣದುಬ್ಬರಕ್ಕೆ ಒಳಪಟ್ಟಿರುವುದಿಲ್ಲ. ಉದಾಹರಣೆಗೆ, ಬಿಟ್‌ಕಾಯಿನ್ ಗರಿಷ್ಠ ಸಂಖ್ಯೆಯ ನಾಣ್ಯಗಳನ್ನು ಹೊಂದಿದೆ (21ಮಿಲಿಯನ್), ಅಂದರೆ ಸ್ಥಿರ ಪೂರೈಕೆ ಇದೆ. ಆಗ ಹಣದುಬ್ಬರವಾಗಿ ಹಣವನ್ನು ಅಪಮೌಲ್ಯಗೊಳಿಸುತ್ತದೆ. ಅದರ ಮೌಲ್ಯವು ಕುಸಿಯುತ್ತದೆ. ಮತ್ತೊಂದೆಡೆ, ಬಿಟ್‌ಕಾಯಿನ್‌ಗಳು ಮಿತಿಯನ್ನು ಸಮೀಪಿಸುತ್ತಿದ್ದಂತೆ ಕಾಲಾನಂತರದಲ್ಲಿ ಹೆಚ್ಚು ಮೌಲ್ಯಯುತವಾಗುತ್ತವೆ, ಅವುಗಳನ್ನು ಹಣದುಬ್ಬರ ಇಳಿತದ ಕರೆನ್ಸಿಯನ್ನಾಗಿ ಮಾಡುತ್ತದೆ.
ಸ್ಥಿರತೆ : ಪ್ರಸ್ತುತ, ಹೆಚ್ಚಿನ ಡಿಜಿಟಲ್ ಕರೆನ್ಸಿಗಳು ವಿಕೇಂದ್ರೀಕೃತವಾಗಿವೆ, ಆದ್ದರಿಂದ ಅವು ಸರ್ಕಾರ ಅಥವಾ ಕೇಂದ್ರ ಬ್ಯಾಂಕ್‌ನಿoದ ಬೆಂಬಲಿತವಾಗಿಲ್ಲ. ಇದರರ್ಥ ಅದು ಸ್ಥಿರವಾಗಿಲ್ಲ ಮತ್ತು ಸಾಕಷ್ಟು ಚಂಚಲತೆಗೆ ತೆರೆದುಕೊಳ್ಳುತ್ತದೆ. ಆದರೆ ‘ಇ – ರುಪಿ’ ಸರ್ಕಾರದ ನಿಯಂತ್ರಣದೊoದಿಗೆ ಸುರಕ್ಷಿತವಾಗಿರುತ್ತದೆ.
ಆತಂಕಗಳು
ಭದ್ರತಾ ಸಮಸ್ಯೆಗಳು : ಡಿಜಿಟಲ್ ಕರೆನ್ಸಿಗಳು ನಿಮ್ಮ ವೈಯಕ್ತಿಕ ವಿವರಗಳನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸುವ ಅಗತ್ಯವನ್ನು ತೆಗೆದುಹಾಕಿದರೆ, ಕರೆನ್ಸಿ ಹ್ಯಾಕ್‌ಗಳಿಗೆ ಗುರಿಯಾಗಬಹುದು. ಈ ನಿಟ್ಟಿನಲ್ಲಿ ವ್ಯಾಪಕ ಶ್ರೇಣಿಯ ಭದ್ರತೆ ನೀಡಬೇಕಾಗಿದೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ಉಪಯೋಗವಾಗದಂತೆ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಭವಿಷ್ಯದ ಅನಿಶ್ಚಿತತೆ : ‘ಇ – ರುಪಿ’ ಇನ್ನೂ ಹೊಸದು. ಅಭಿವೃದ್ಧಿಯ ಆರಂಭಿಕ ಹಂತಗಳಲ್ಲಿ ಚಲಾವಣೆಯ ಸಮಯದಲ್ಲಿ ತಾಂತ್ರಿಕ ಮತ್ತು ಸುರಕ್ಷತೆಯ ಸಮಸ್ಯೆಗಳಿವೆ. ಹಣಕಾಸು ವ್ಯವಸ್ಥೆಯ ಸ್ಥಿರತೆಯ ಮೇಲೆ ಡಿಜಿಟಲ್ ರೂಪಾಯಿ ಹೇಗೆ ಪರಿಣಾಮ ಬೀರಬಹುದು ಎಂದು ತಿಳಿದಿಲ್ಲ. ಉದಾಹರಣೆಗೆ, ಹಣಕಾಸಿನ ಬಿಕ್ಕಟ್ಟಿನ ಸಂದರ್ಭದಲ್ಲಿ, ಹಿಂಪಡೆಯುವಿಕೆಯನ್ನು ಅನುಮತಿಸಲು ಕೇಂದ್ರೀಯ ಬ್ಯಾಂಕ್ ಬಳಿ ಸಾಕಷ್ಟು ದ್ರವ್ಯತೆ ಇಲ್ಲದಿರಬಹುದು. ಹಣಕಾಸಿನ ಅಪರಾಧಗಳನ್ನು ಮೇಲ್ವಿಚಾರಣೆ ಮಾಡಲು ‘ಇ – ರುಪಿ’ಯ ಮೇಲೆ ಸಮಂಜಸವಾದ ಮಟ್ಟದ ಸರ್ಕಾರದ ನಿಯಂತ್ರಣದ ಅಗತ್ಯವಿರುತ್ತದೆ. ಕೇಂದ್ರೀಯ ಬ್ಯಾಂಕ್ ನೀಡುವ ಡಿಜಿಟಲ್ ಹಣವು ನಿಸ್ಸಂದೇಹವಾಗಿ ಅದೇ ರೀತಿಯ ಅಪರಾಧಿಗಳನ್ನು ಆಕರ್ಷಿಸಬಹುದು.
ಸವಾಲುಗಳು
ಪ್ರಾಥಮಿಕವಾಗಿ ಅರಿವಿನ ಕೊರತೆ ಮತ್ತು ಡಿಜಿಟಲ್ ಸಾಕ್ಷರತೆ ಬಹುದೊಡ್ಡ ಸವಾಲಾಗಿದೆ. ‘ಇ -ರುಪಿ’ಯು ಆರ್ಥಿಕ ಸೇರ್ಪಡೆಗೆ ಯಶಸ್ವಿ ಸಾಧನವಾಗಲು, ಮೊಬೈಲ್ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸುವುದು ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಅಂತರ್ಗತ ನ್ಯೂನತೆಗಳನ್ನು ತೊಡೆದು ಹಾಕುವುದು ಅತ್ಯಗತ್ಯ.
ಏನೇ ಆದರೂ ಮುಂದೊoದು ದಿನ ‘ಇ – ರುಪಿ’ ಜಗತ್ತಿನ ಆರ್ಥಿಕತೆಯನ್ನು ಆಳಲಿದೆ ಎಂಬುದoತೂ ಸತ್ಯ. ನಾವು ಅದಕ್ಕೆ ಸಿದ್ಧರಿರಬೇಕಾಗಿದೆ.