ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಉಡುಗೊರೆಗಳೆಂದರೆ ಎಲ್ಲರಿಗೂ ಇಷ್ಟ. ಮಕ್ಕಳಂತೂ ಹುಟ್ಟುಹಬ್ಬದ ಉಡುಗೊರೆಗಾಗಿ ವರ್ಷವಿಡೀ ಕಾಯುತ್ತಿರುತ್ತಾರೆ. ಹಾಗೆಯೇ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದರೆ, ಒಳ್ಳೆಯ ಕೆಲಸ ಮಾಡಿದ್ರೆ ‘ಶಹಬ್ಬಾಸ್ ಗಿರಿ’ಯ ಜೊತೆಗೆ ಒಂದು ಚಿಕ್ಕ ಉಡುಗೊರೆಯ ನಿರೀಕ್ಷೆಯೂ ಇದ್ದೆ ಇರುತ್ತದೆ. ಮನೆ ಮಂದಿಯ ಹುಟ್ಟುಹಬ್ಬ, ಮದುವೆಗೆ ಬರುವ ಉಡುಗೊರೆಗಳ ಪೇಪರ್ ಅನ್ನು ತೆರೆದು ಅವುಗಳನ್ನು ನೋಡುವ ತವಕ ಎಲ್ಲರಲ್ಲೂ ಇರುತ್ತದೆ. ಕೆಲವೊಮ್ಮೆ ನಮ್ಮ ಮನೆ ಪಕ್ಕದವರು, ಹತ್ತಿರದ ಸಂಬoಧಿಕರು, ಆತ್ಮೀಯ ಸ್ನೇಹಿತರು ಕೊಟ್ಟ ದೊಡ್ಡ ಉಡುಗೊರೆಯೂ ಸಣ್ಣದೆಂದೆನಿಸುವುದಿದೆ. ‘ನಾನೇನೋ ಆತ ಒಳ್ಳೆಯ ಉಡುಗೊರೆಯೇ ಕೊಡುತ್ತೇನೆ ಅಂದುಕೊoಡಿದ್ದೆ. ಆದರೆ ಆತ ಕೊಟ್ಟಿದ್ದು ನೋಡು’ ಎಂದು ಬೇಸರ ಪಡುತ್ತೇವೆ.
ಅಜ್ಜಿಗೆ ಮೊಮ್ಮಕ್ಕಳ ಕೈಲಿ ಬರೆದು ಕಳುಹಿಸಿದ ಶುಭಾಶಯವೇ ದೊಡ್ಡ ಉಡುಗೊರೆ. ಅದನ್ನು ಜೋಪಾನವಾಗಿ ತೆಗೆದಿಟ್ಟು ಮೊಮ್ಮಕ್ಕಳಿಗೆ ತನ್ನ ಮೇಲೆ ಎಷ್ಟು ಪ್ರೀತಿ ಎಂದುಕೊoಡು ನೆನೆದು ಹಿಗ್ಗುವುದಿದೆ.
ಇತ್ತೀಚೆಗಂತೂ ಉಡುಗೊರೆಗಳನ್ನು ಮಾಲ್, ಮಳಿಗೆಗಳು, ಆನ್ಲೈನ್ಗಳಿಂದ ಖರೀದಿಸುವವರೆ ಜಾಸ್ತಿ. ಅದರಲ್ಲಿ ನಮ್ಮ ಪ್ರೀತಿಯ ಮಾತುಗಳ ಬದಲಾಗಿ ಯಾರದ್ದೋ ಯೋಚನೆ, ಚಿಂತನೆಗಳಿರುತ್ತವೆ. ಅವುಗಳನ್ನು ಆಕರ್ಷಕ ಕಾರ್ಡ್ಗಳಲ್ಲಿ ಮೂಡಿಸಿರುತ್ತಾರೆ. ಚಂದದ ಶಬ್ದಗಳನ್ನು ಸೇರಿಸಿ ಮಾಡಿದ ಗ್ರೀಟಿಂಗ್ ಕಾರ್ಡ್ ಆಯಾ ಸಂದರ್ಭಗಳಿಗೆ ತಕ್ಕಂತೆ ತಯಾರಾಗುತ್ತದೆ.
ಹುಟ್ಟುಹಬ್ಬ ಅಥವಾ ಇತರ ಯಾವುದೇ ಶುಭದಿನಗಳು, ಸಮಾರಂಭಗಳಿರಲಿ ಅಂಗಡಿಯಿoದ ಒಂದು ಸಿಹಿತಿಂಡಿ ಪೊಟ್ಟಣವನ್ನು ಖರೀದಿಸಿ ಕೊಟ್ಟರೆ ಅಲ್ಲಿಗೆ ಮುಗಿಯಿತು. ಆದರೆ ಹಿಂದೆ ಹಾಗಿರಲಿಲ್ಲ. ಅಮ್ಮನೋ, ಅಜ್ಜಿಯೋ, ಅತ್ತಿಗೆಯೋ ಅಂತೂ ಎಲ್ಲರೂ ಸೇರಿ ಮನೆಯಲ್ಲೆ ಚಕ್ಕುಲಿ, ಕೋಡುಬಳೆ, ಚಿರೋಟಿ ಇತ್ಯಾದಿ ತಯಾರಿಸಿಕೊಂಡು ಹೋಗಿ ಕೊಡುವುದರಲ್ಲಿ ಬಹಳ ಆನಂದ ಇರುತ್ತಿತ್ತು. ಮನೆಮಗಳಿಗೆ ತಾಯಿ ಮನೆಯಿಂದ ಬಂದ ತಿಂಡಿ ಅಂದರೆ ಹೆಮ್ಮೆ ಮತ್ತು ರುಚಿ. ಗುರುಗಳನ್ನು, ಮನೆಯ ಹಿರಿಯರನ್ನು, ರೋಗಿಗಳನ್ನು, ಬಸುರಿ ಹೆಣ್ಣುಮಕ್ಕಳನ್ನು, ಸಣ್ಣ ಮಕ್ಕಳನ್ನು ನೋಡಲು ಹೋಗುವಾಗ ಉಡುಗೊರೆಗಳಿಲ್ಲದೆ ಬರಿಗೈಲಿ ಹೋಗಬಾರದೆನ್ನುವುದು ಅಲಿಖಿತ ಸಂಪ್ರದಾಯವೇ ಇದೆ. ಮಗಳು, ಸೊಸೆ ಹೀಗೆ ಯಾರಿಗಾದರೂ ಮಗು ಜನಿಸಿದರೆ ಮನೆಮಂದಿಗೆಲ್ಲಾ ದೊಡ್ಡ ಉಡುಗೊರೆ ಸಿಕ್ಕಷ್ಟು ಸಂಭ್ರಮ. ಮಕ್ಕಳಿಗೆ ಹೆಚ್ಚು ಅಂಕ ಬಂದರೆ ಅಪ್ಪ-ಅಮ್ಮನಿಗೆ ಅದೇ ಒಂದು ಉಡುಗೊರೆ.
ದೇವರು ನಮ್ಮನ್ನು ಭೂಮಿಗೆ ಕಳುಹಿಸುವುದರ ಜೊತೆಗೆ ನಮ್ಮ ಬದುಕಿಗೆ ಬೇಕಾದಷ್ಟು ಉಡುಗೊರೆಗಳನ್ನು ನಮ್ಮ ಜೊತೆಗೆ ಕಳುಹಿಸುತ್ತಾರೆ. ಆದರೆ ಕೆಲವೊಮ್ಮೆ ನಾವು ಅದನ್ನು ಬಿಚ್ಚದೆ ಮೂಲೆಗೆ ಸೇರಿಸಿರುತ್ತೇವೆ. ಕೆಲವರಿಗೆ ಲೇಖನ, ಕಥೆ, ಕವನ ಬರೆಯುವ ಸಾಮರ್ಥ್ಯವನ್ನು ಕೊಟ್ಟಿದ್ರೆ, ಕೆಲವರಿಗೆ ಒಳ್ಳೆಯ ಮಾತುಗಾರಿಕೆ, ಬುದ್ಧಿವಂತಿಕೆ ಜೊತೆಗೆ ಹತ್ತಾರು ಕೌಶಲ್ಯಗಳನ್ನು ಕೊಟ್ಟಿರುತ್ತಾನೆ. ಕೆಲವರು ಒಳ್ಳೆಯ ಚಿತ್ರಕಾರರಾದರೆ ಕೆಲವರು ಚಿತ್ರಗಳನ್ನು ಬಟ್ಟೆಯಲ್ಲಿ ಹೆಣಿಗೆಯ ಮೂಲಕ ಪ್ರಸ್ತುತಪಡಿಸಬಲ್ಲವರು ಆಗಿರುತ್ತಾರೆ. ಕೆಲವರಿಗೆ ಒಳ್ಳೆಯ ಕಂಠ ಕೊಟ್ಟಿದ್ರೆ ಮತ್ತೆ ಕೆಲವರಿಗೆ ನೃತ್ಯ, ಅಭಿನಯಗಳೆಂಬ ಉಡುಗೊರೆ. ನಮಗೆ ದೇವರು ಕೊಟ್ಟಿರುವ ಉಡುಗೊರೆಗಳೇನು? ಎಂಬುದನ್ನು ಅರಿತುಕೊಂಡು ಅದನ್ನು ವೃದ್ಧಿಸಿಕೊಳ್ಳುವುದು ನಮ್ಮ ಕೆಲಸ. ಯಾವುದಾದರೊಂದು ನೈಪುಣ್ಯತೆ ಇಲ್ಲದ ಮನುಷ್ಯರೇ ಇಲ್ಲ.
ಕಾಡಿನಲ್ಲಿರುವ ಸೊಪ್ಪು, ಬೇರು, ಹೂವು, ಹಣ್ಣುಗಳಲ್ಲೂ ಏನಾದರೊಂದು ವಿಶೇಷತೆ, ಪ್ರಯೋಜನ ಇದ್ದೆ ಇದೆ. ಅದನ್ನು ಗುರುತಿಸುವ ಕಣ್ಣು ಬೇಕು ಅಷ್ಟೆ. ಒಂದು ದಿನ ಕಾಡಿನಲ್ಲಿ ಬೆಳೆದ ಬಿದಿರಿನ ಗಿಡಕ್ಕೆ ತನ್ನ ಬಗ್ಗೆ ಬೇಸರವಾಯಿತಂತೆ ಎಲ್ಲಾ ಮರಗಳು ಹೂ, ಹಣ್ಣು ಬಿಡುತ್ತವೆ. ಮನುಷ್ಯನಿಗೆ ಉಪಕಾರಿಯಾಗಿವೆ. ನೋಡಲು ಚಂದ ಇವೆ. ಆದರೆ ನಾನು ಯಾವುದಕ್ಕೂ ಪ್ರಯೋಜನವಿಲ್ಲ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾ ಅಳುತ್ತಿತ್ತಂತೆ. ಆಗ ದೇವರು ಪ್ರತ್ಯಕ್ಷವಾಗಿ ಹೇಳ್ತಾರೆ; ‘ನನ್ನ ಸೃಷ್ಟಿಯಲ್ಲಿ ಯಾವುದೂ ಅಪ್ರಯೋಜಕವಲ್ಲ. ನೀನಂತೂ ತೊಟ್ಟಿಲಿನಿಂದ ಚಟ್ಟದವರೆಗೂ ಬೇಕು. ಬಡವರ ಮನೆ ಹಂಚು ಹಾಕಲು, ಚಪ್ಪರ ಹಾಕುವುದಕ್ಕೆ, ಪಕ್ಷಿಗಳಿಗೆ ನೀರಿಡುವುದಕ್ಕೆ, ಬುಟ್ಟಿ ಹೆಣೆಯುವುದಕ್ಕೆ, ದೇವರ ರಥಕ್ಕೆ, ಎಲ್ಲಕ್ಕಿಂತ ಮುಖ್ಯವಾಗಿ ಕೃಷ್ಣನ ಕೈಯಲ್ಲಿರುವ ಕೊಳಲು ನಿನ್ನಿಂದ ಆಗಿದೆ’ ಅಂದಾಗ ಬಿದಿರಿಗೂ ನನ್ನ ಅಗತ್ಯತೆಯ ಅರಿವಾಯಿತಂತೆ. ಹಾಗೆಯೇ ನಮ್ಮ ಪ್ರಯೋಜನ, ಸಾಮರ್ಥ್ಯದ ಬಗ್ಗೆ ನಾವೇ ತಿಳಿದುಕೊಳ್ಳಬೇಕಾಗಿದೆ.
ದೇವರು ಪ್ರಕೃತಿಯಲ್ಲಿ ಎಲ್ಲಾ ಜೀವಿಗಳಿಗೆ ಅದರದ್ದೇ ಆದ ಸೌಂದರ್ಯ, ವೈಶಿಷ್ಟತೆಗಳನ್ನು ಕೊಟ್ಟಿದ್ದಾರೆ. ನವಿಲಿಗೆ ನಾಟ್ಯ, ಕೋಗಿಲೆಗೆ ಕಂಠ, ವೈವಿಧ್ಯಮಯ ಬಣ್ಣಗಳು ಹೀಗೆ ಒಂದರoತೆ ಒಂದಿಲ್ಲದoತೆ ದೇವರ ಸೃಷ್ಟಿಯಿದೆ. ಆನೆಯ ಗಾಂಭೀರ್ಯ, ಸಿಂಹದ ರಾಜತೇಜಸ್ಸು, ಜಿಂಕೆಯ ಚುರುಕು ನೋಟ, ಓಟ ಹೀಗೆ ಸೂಕ್ಷ್ಮವಾಗಿ ಪ್ರಕೃತಿಯನ್ನು ವೀಕ್ಷಿಸಿದರೆ ಸೃಷ್ಟಿಯ ಬಗ್ಗೆ ಅಪಾರವಾದ ಗೌರವ, ವಿಸ್ಮಯಗಳು ಮೂಡುತ್ತವೆ.
ಕೆಲವೊಮ್ಮೆ ಕೆಟ್ಟ ಕೆಲಸ ಮಾಡಿದ್ದಕ್ಕೂ ‘ಉಡುಗೊರೆ’ ಎಂಬ ಪದ ಬಳಕೆಯಾಗುತ್ತದೆ. ಮಗ ಏನಾದರೂ ಕೆಟ್ಟ ಕೆಲಸ ಮಾಡಿದರೆ, ಮಗಳು ಹೇಳದೆ ಕೇಳದೆ ಮನೆ ಬಿಟ್ಟು ಹೋದರೆ ‘ಆಯ್ತಲ್ಲಾ ಇಷ್ಟು ವರ್ಷ ಹೆತ್ತು ಹೊತ್ತು ಸಾಕಿದ್ದಕ್ಕೆ ಒಳ್ಳೆಯ ಉಡುಗೊರೆ ಕೊಟ್ಟು ಹೋದ್ಳು’ ಅನ್ನುವುದಿದೆ.
ಊರಿಗೊಂದು ಶಾಲೆ ಬಂದರೆ ವಿದ್ಯಾರ್ಥಿಗಳ ಪಾಲಿಗೆ ಅದೊಂದು ದೊಡ್ಡ ಉಡುಗೊರೆ. ಹಾಗೇಯೆ ವ್ಯಾಪಾರ ವ್ಯವಹಾರಗಳಿಗೆ ರಸ್ತೆ, ಬಸ್ ಸಂಪರ್ಕ, ಕೃಷಿಕರಿಗೆ ಊರಿಗೊಂದು ಕೆರೆ ಇವೆಲ್ಲಾ ಬಹಳ ದೊಡ್ಡ ಕೊಡುಗೆಗಳೇ ಆಗಿವೆ. ಮನೆಗೆ ವಿದ್ಯುತ್, ನಳ್ಳಿ ನೀರಿನ ವ್ಯವಸ್ಥೆ ಹೆಣ್ಣು ಮಕ್ಕಳ ಪಾಲಿಗೆ ಅಗತ್ಯ ಉಡುಗೊರೆಗಳಾಗಿವೆ.
ಒಟ್ಟಿನಲ್ಲಿ ಉಡುಗೊರೆ ದೊಡ್ಡದಾಗಿರಲಿ, ಸಣ್ಣದೇ ಆಗಿರಲಿ, ಅದರ ಹಿಂದೆ ಕೊಟ್ಟವರ ಪ್ರೀತಿ, ಅಭಿಮಾನ ಇದ್ದಾಗ ಅದಕ್ಕೊಂದು ವಿಶೇಷವಾದ ಸ್ಥಾನವಿರುತ್ತದೆ. ನಮಗೆ ದೇವರು ನೀಡಿದ ಉಡುಗೊರೆಗಳನ್ನು ಸರಿಯಾಗಿ ಬಳಸಿಕೊಳ್ಳೋಣ.
