ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು
ಹಿಂದಿನ ಸಂಚಿಕೆಯಲ್ಲಿ ಸಂಘದ ಸದಸ್ಯರಿಂದಲೇ ಪ್ರಗತಿನಿಧಿ ಸಾಲ ಮಂಜೂರಾತಿ ಕೈಗೊಳ್ಳುವುದು ಹಾಗೂ ಅವುಗಳ ವಿವಿಧ ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಂಡಿದ್ದೇವೆ.
ಸ್ವಸಹಾಯ ಸಂಘಗಳು ಬ್ಯಾಂಕಿನಿಂದ ನೇರವಾಗಿ ಸಾಲ ಸೌಲಭ್ಯವನ್ನು ಪಡೆಯುವ ನಿರ್ಧಾರವನ್ನು ಸ್ವಸಹಾಯ ಸಂಘಗಳೇ ಕೈಗೊಳ್ಳುವುದಾದರೂ ಕೂಡ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಸದಾ ಮುಂಜಾಗ್ರತೆ ಮತ್ತು ಮಾರ್ಗದರ್ಶನವನ್ನು ನೀಡುತ್ತಾರೆ. ಸದಸ್ಯರು ಯಾವ ಉದ್ದೇಶಕ್ಕಾಗಿ ಸಾಲದ ಬೇಡಿಕೆ ನೀಡಿದ್ದಾರೆ ಎನ್ನುವುದಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಬಹುತೇಕ ಸಾಲಗಳು ಉತ್ಪಾದಕ ಹಾಗೂ ಆರ್ಥಿಕ ಚಟುವಟಿಕೆಗಳ ಉದ್ದೇಶವನ್ನು ಹೊಂದಿರುತ್ತವೆ. ಏಕೆಂದರೆ ಯೋಜನೆಯ ಬಿ.ಸಿ. ವ್ಯವಸ್ಥೆಯಲ್ಲಿ ಉತ್ಪಾದಕ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಎಲ್ಲಿಲ್ಲದ ಪ್ರಾಶಸ್ತ್ಯವನ್ನು ನೀಡಲಾಗಿದೆ. ಸ್ವಸಹಾಯ ಸಂಘಗಳ ಸದಸ್ಯರಿಗೆ ನಿರಂತರ ಹಾಗೂ ಸುಸ್ಥಿರ ಆದಾಯ ತರುವಂತಹ ಚಟುವಟಿಕೆಗಳನ್ನು ಕೈಗೊಳ್ಳಲು ಮಾರ್ಗದರ್ಶನ ನೀಡಲಾಗುತ್ತದೆ. ಕೃಷಿ ಅಭಿವೃದ್ಧಿ ಚಟುವಟಿಕೆಗಳು, ಹೈನುಗಾರಿಕೆ, ಪಶುಸಂಗೋಪನೆ, ಸ್ವ ಉದ್ಯೋಗಗಳು, ಗುಡಿಕೈಗಾರಿಕೆಗಳು, ಸಣ್ಣ ಹಾಗೂ ಕಿರು ಉದ್ಯಮಗಳು, ಸಣ್ಣ ವ್ಯಾಪಾರಗಳು, ಕಿರು ಸೇವಾ ಚಟುವಟಿಕೆಗಳು, ಕಿರು ಉತ್ಪಾದಕ ಚಟುವಟಿಕೆಗಳು ಮುಂತಾದ ಅನೇಕ ಉತ್ಪಾದಕ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಪ್ರಥಮ ಆದ್ಯತೆಯನ್ನು ನೀಡಲಾಗುತ್ತದೆ. ಇಂತಹ ಚಟುವಟಿಕೆಗಳನ್ನು ಕೈಗೊಂಡು ಉತ್ತಮ ಆದಾಯವನ್ನು ಗಳಿಸಿ, ಆ ಆದಾಯದ ಅಲ್ಪ ಭಾಗದಿಂದ ಅವರ ಸಾಲದ ಮರುಪಾವತಿಯನ್ನು ಸದಸ್ಯರು ಸುಲಭವಾಗಿ ಮಾಡಲು ಸಾಧ್ಯವಿದೆ. ಸದಸ್ಯರು ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡು, ಅವರ ಬದುಕನ್ನು ಕಟ್ಟಿಕೊಳ್ಳುವುದೇ ಈ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಮಕ್ಕಳ ಶಿಕ್ಷಣದ ಉದ್ದೇಶಕ್ಕಾಗಿಯೂ ಕೂಡಾ ಪ್ರಥಮ ಆದ್ಯತೆ ನಿಡಲಾಗುತ್ತದೆ. ಉತ್ತಮ ಶಿಕ್ಷಣವನ್ನು ಪಡೆದ ಗ್ರಾಮೀಣ ಭಾಗದ ಮಕ್ಕಳು ಮುಂದೆ ಆ ಕುಟುಂಬದ ಮತ್ತು ಸಮಾಜದ ಆಸ್ತಿ ಆಗಲಿ ಎಂಬುದು ಈ ಆದ್ಯತೆಯ ಆಶಯವಾಗಿದೆ. ಆಟೋ ರಿಕ್ಷಾ ಖರೀದಿ, ಬಾಡಿಗೆ ಉದ್ದೇಶಕ್ಕೆ ವಾಹನ ಖರೀದಿ, ಕ್ಯಾಟರಿಂಗ್ ವ್ಯವಸ್ಥೆ, ಮೊಬೈಲ್ ಕ್ಯಾಟರಿಂಗ್ ಮುಂತಾದ ಉದ್ದೇಶಗಳಿಗೆ ಸಾಲವನ್ನು ಒದಗಿಸಲಾಗುತ್ತಿದೆ. ಆದಾಯ ಗಳಿಸುವ ಕಾರಣದಿಂದ ವಾಹನ ಖರೀದಿಗೂ ಪ್ರಾಧಾನ್ಯತೆ ನೀಡಲಾಗುತ್ತದೆ.
ಸ್ವಸಹಾಯ ಸಂಘದ ಮಹಿಳೆಯರು ತಮ್ಮ ಮನೆ ಅಥವಾ ಊರಿನಲ್ಲಿ ಅನೇಕ ಸ್ವ ಉದ್ಯೋಗಗಳನ್ನು ಕೈಗೊಳ್ಳಲು ಈ ವ್ಯವಸ್ಥೆ ಪ್ರೇರಣೆ ನೀಡಿದೆ. ಒಟ್ಟಿನಲ್ಲಿ ಸದಸ್ಯರ ಸುಸ್ಥಿರ ಹಾಗೂ ನಿರಂತರ ಆದಾಯವನ್ನು ತರುವಂತಹ ಚಟುವಟಿಕೆಗಳಿಗೆ ಎಲ್ಲಿಲ್ಲದ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಇಂತಹ ಆದಾಯ ತರುವ ಚಟುವಟಿಕೆಗಳನ್ನು ಉತ್ತಮವಾಗಿ ನಿರ್ವಹಿಸಿದ ನಂತರ ಇತರ ಉದ್ದೇಶಗಳಿಗೆ ಬ್ಯಾಂಕಿನ ಸಾಲ ಮಂಜೂರಾತಿಯನ್ನು ಪರಿಗಣಿಸಲಾಗುತ್ತದೆ. ಪ್ರಮುಖವಾಗಿ ಮನೆ ನಿರ್ಮಾಣ, ಮನೆ ದುರಸ್ತಿ, ಮದುವೆ, ವಾಹನ ಖರೀದಿ, ಚಿನ್ನಾಭರಣ, ಗೃಹೋಪಯೋಗಿ ವಸ್ತುಗಳ ಖರೀದಿ ಮುಂತಾದ ಉದ್ದೇಶಗಳಿಗೆ ನೀಡಲಾಗುತ್ತದೆ. ಅನುತ್ಪಾದಕ ಉದ್ದೇಶಗಳಿಗೆ ತೀರಾ ಅಗತ್ಯವಿದ್ದಲ್ಲಿ ಮಾತ್ರ ಸಾಲ ಸೌಲಭ್ಯವು ದೊರೆಯುತ್ತದೆ. ದುಂದು ವೆಚ್ಚಕ್ಕೆ, ದುರ್ಬಳಕೆಗೆ, ಜೂಜಾಟಕ್ಕೆ ಯಾವುದೇ ಕಾರಣಕ್ಕೂ ಯೋಜನೆಯ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಬ್ಯಾಂಕಿನಿಂದ ಸಾಲ ಸೌಲಭ್ಯ ದೊರೆಯುವುದಿಲ್ಲ. ಸಾಲ ಸೌಲಭ್ಯದ ಮಂಜೂರಾತಿಯಲ್ಲಿ ಸ್ವಸಹಾಯ ಸಂಘದ ಸದಸ್ಯರು, ಯೋಜನೆಯ ಕಾರ್ಯಕರ್ತರು ವಿಶೇಷ ನಿಗಾ ಹಾಗೂ ಮುತುವರ್ಜಿ ವಹಿಸಿ, ಒಳ್ಳೆಯ ಉದ್ದೇಶಗಳಿಗೆ ಮಂಜೂರಾತಿ ಮಾತ್ರ ಆಗುವಂತೆ ನೋಡಿಕೊಳ್ಳುತ್ತಾರೆ. ಹೀಗೆ ಸಂಘದ ನಿರ್ಣಯದಿಂದ ಮಂಜೂರಾತಿಯಾದ ಸಾಲಗಳು ಬ್ಯಾಂಕಿನಲ್ಲಿ ಸ್ವಸಹಾಯ ಸಂಘದ ಸಿ.ಸಿ. ಖಾತೆಯಿಂದ (ಸಾಲದ ಖಾತೆ) ನೇರವಾಗಿ ಸದಸ್ಯರ ವೈಯಕ್ತಿಕ ಉಳಿತಾಯ ಖಾತೆಗೆ ಜಮೆಯಾಗುತ್ತದೆ. ಹೀಗೆ ಬಿಡುಗಡೆಗೊಂಡ ಸಾಲದ ಮೊತ್ತವನ್ನು ತನ್ನ ಖಾತೆಯಿಂದ ಆ ಸದಸ್ಯರು ನಗದೀಕರಣಗೊಳಿಸಿ (ವಿತ್‍ಡ್ರಾವಲ್) ತಾವು ಯಾವ ಉದ್ದೇಶಕ್ಕೆ ಬೇಡಿಕೆಯನ್ನು ಸಲ್ಲಿಸಿದ್ದರೋ, ಅದೇ ಉದ್ದೇಶಕ್ಕೆ ವಿನಿಯೋಗಿಸುತ್ತಾರೆ. ಯೋಜನೆಯ ಕಾರ್ಯಕರ್ತರು ಒಂದು ತಿಂಗಳೊಳಗೆ ಆ ಸದಸ್ಯರಲ್ಲಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತಾರೆ. ಇದನ್ನು ವಿನಿಯೋಗ ಪರಿಶೀಲನೆ ಎಂದು ಕರೆಯಲಾಗುತ್ತದೆ. ತಾವು ಪರಿಶೀಲನೆ ನಡೆಸಿ, ಆ ಸದಸ್ಯರ ಸಾಲದ ವಿನಿಯೋಗ ಪರಿಶೀಲನಾ ವರದಿಯನ್ನು ಸಲ್ಲಿಸುತ್ತಾರೆ. ಈ ವರದಿಯ ಮಾಹಿತಿಯನ್ನು ಯೋಜನೆಯು ಬ್ಯಾಂಕ್‍ಗೆ ಸಲ್ಲಿಸುತ್ತದೆ. ಒಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವ್ಯವಸ್ಥೆ ಸದಸ್ಯರ ಆರ್ಥಿಕ ಸಬಲೀಕರಣದ ಉದ್ದೇಶವನ್ನು ಇಟ್ಟುಕೊಂಡು, ಆರ್ಥಿಕ ಹಾಗೂ ಉತ್ಪಾದಕ ಚಟುವಟಿಕೆಗಳಿಗೇ ಹೆಚ್ಚಾಗಿ ಸಾಲ ಪಡೆಯಲು ಅವಕಾಶ ನೀಡಿದೆ. ಅಂತಹ ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡು ಸದಸ್ಯರ ನೈಜ ಹಾಗೂ ಅರ್ಥಪೂರ್ಣ ಆರ್ಥಿಕ ಸಬಲೀಕರಣವನ್ನು ಸಾಧಿಸುತ್ತಿದೆ.
ಇನ್ನಷ್ಟು ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.