ಚಂದ್ರಹಾಸ್ ಚಾರ್ಮಾಡಿ
ಊರಿನಲ್ಲಿ ದೊರೆಯುವ ಕಲ್ಲುಗಳಿಂದ ಗೋಡೆಕಟ್ಟಿ ಏಳು ಅಡಿ ಉದ್ದ, ಮೂರು ಅಡಿ ಅಗಲದ ಮನೆ ನಿರ್ಮಿಸಲು ಸಾಧ್ಯನಾ? ಗೂಡಿನ ಗಾತ್ರದ ಈ ಮನೆಯಲ್ಲಿ ವಾಸಿಸುವುದಾದರೂ ಹೇಗೆ? ಕಲ್ಲುಗಳು ಜರಿದು ಬೀಳಲ್ವಾ! ಗಾಳಿಗೆ ತಗಟುಶೀಟು ಹಾರಿ ಹೋಗಲ್ವಾ? ಮಳೆ ನೀರು ಒಳಗೆ ಬರಲ್ವಾ? ಅಡುಗೆ, ಮಲಗುವ, ದಿನಸಿಗಳ ಸಂಗ್ರಹಣೆ ಎಲ್ಲಿ ಮಾಡುತ್ತಾರೆ? ಹೀಗೆ ಹತ್ತಾರು ಪ್ರಶ್ನೆಗಳು ನಿಮ್ಮಲ್ಲಿರಬಹುದಲ್ಲವೇ? ಈ ಎಲ್ಲ ಸಮಸ್ಯೆಗಳ ಮಧ್ಯೆ ಕಳೆದ ಹದಿನಾರು ವರ್ಷಗಳಿಂದ ಗೂಡಿನ ಗಾತ್ರದ ಮನೆಯಲ್ಲಿ ಬದುಕು ಸಾಗಿಸಿದ ಯಲ್ಲವ್ವರವರನ್ನು ‘ನಿರಂತರ’ ತಂಡ ಮಾತನಾಡಿಸಿದೆ. ಅವರ ಬದುಕಿನ ಚಿತ್ರಣವನ್ನು ಬರಹದ ಮೂಲಕ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
ಯಲ್ಲವ್ವ ರಾಮದುರ್ಗ ತಾಲೂಕಿನ ಮಡ್ಡಿ ಓಣಿಯವರು. ಬಾಗಿದ ದೇಹ, ನೆರಿಕಟ್ಟಿದ ಮುಖ, ಹಣ್ಣುಕೂದಲಿನ ಲೆಕ್ಕಾಚಾರದಲ್ಲಿ ಹೇಳುವುದಾದರೆ ಅಂದಾಜು 70 ರಿಂದ 75 ವರ್ಷ ಪ್ರಾಯ. ಶಾಲೆಯ ಮೆಟ್ಟಿಲು ಹತ್ತುವ ಭಾಗ್ಯ ಇವರಿಗೆ ಒದಗಿ ಬಂದಿಲ್ಲ. ಇವರದ್ದು ಬಾಲ್ಯವಿವಾಹ. ಗಂಡ ಕಲ್ಲು ಒಡೆಯುವ ಕೆಲಸವನ್ನು ಮಾಡುತ್ತಿದ್ದರು. ಅಂತೂ ಮೂರು ಹೊತ್ತಿನ ಊಟಕ್ಕೆ ಕಡಿಮೆಯಾಗದಂತೆ ಜೀವನ ಸಾಗುತ್ತಿತ್ತು. ಇದ್ದ ಒಬ್ಬಳು ಮಗಳನ್ನು ಮದುವೆ ಮಾಡಿಕೊಟ್ಟರು. ಅವರು ಕೂಡಾ ಸ್ಥಿತಿವಂತರಲ್ಲ.
ಕಳೆದ ನಲುವತ್ತೆöÊದು ವರ್ಷದ ಹಿಂದೆ ಅನ್ನದ ಬಟ್ಟಲಿಗೆ ಆಸರೆಯಾಗಿದ್ದ ಗಂಡ ಬಾರದ ಲೋಕಕ್ಕೆ ಪಯಣಿಸಿದರು. ಯಲ್ಲವ್ವ ಏಕಾಂಗಿಯಾದರು. ಮುಂದಿನದು ಮುಳ್ಳಿನ ಮೇಲಿನ ಬದುಕು. ಗಂಡ ಇರುವಾಗ ಇದ್ದ ಮನೆಯನ್ನು ವರುಣ ಕಣ್ಮರೆಮಾಡಿಬಿಟ್ಟ. ಸೂರಿಗಾಗಿ ಯಲ್ಲವ್ವ ಗೂಡಿನಂತಹ ಮನೆಯೊಂದನ್ನು ನಿರ್ಮಿಸಿಕೊಂಡರು. ಒಂದೆರಡು ಮಳೆ ಬಂದರೂ ಮನೆಯೊಳಗಡೆ ಪೂರ್ತಿ ನೀರು ತುಂಬಿ ಮನೆ ಈಜುಕೊಳವಾಗುತ್ತಿತ್ತು. ಸುಮಾರು ಹದಿನಾರು ವರ್ಷಗಳ ಕಾಲ ಯಲ್ಲವ್ವ ಮಳೆಗಾಲದಲ್ಲಿ ಹತ್ತಿರದ ದೇವಾಲಯವೊಂದರಲ್ಲಿ ಮಲಗುತ್ತಿದ್ದರು. ಹಿಂದೆ ಒಂದು ಬಾರಿ ಮನೆಯೊಳಗೆ ಮಲಗಿದ್ದಾಗ ಗೋಡೆಯ ಕಲ್ಲು ಕೈಗೆ ಬಿದ್ದು ಗಾಯ ಕೂಡಾ ಆಗಿತ್ತು. ಆದ್ದರಿಂದ ಮುಂದೆ ಮಳೆ ಆರಂಭವಾದೊಡನೆ ಮನೆಯನ್ನು ತೊರೆಯುತ್ತಿದ್ದರು.
ಒಟ್ಟಾರೆಯಾಗಿ ರಾತ್ರಿ ಮಲಗಿದರೆ ಬೆಳಗ್ಗೆ ಎದ್ದೇಳಬಹುದು ಎಂಬ ನಂಬಿಕೆಯಿಲ್ಲದ ಮನೆಯಿದು. ಮನೆಯನ್ನು ಕೆಡವಿ ಅಚ್ಚುಕಟ್ಟಾದ ಹೊಸ ಮನೆ ನಿರ್ಮಿಸಬೇಕೆಂದರೆ ಕಡಿಮೆಯೆಂದರೂ ರೂ. 1 ಲಕ್ಷ ಬೇಕು. ಇಷ್ಟು ಹಣವನ್ನು ಯಲ್ಲವ್ವ ಈವರೆಗೆ ನೋಡಿ ಕೂಡಾ ಇಲ್ಲ. ಗಂಡ ತೀರಿದ ಹಲವು ವರ್ಷಗಳ ನಂತರ ಮಾಸಿಕ ವಿಧವಾವೇತನ ಬರಲು ಆರಂಭವಾಯಿತು. ಈ ಹಣದಿಂದಾಗಿ ಮೂರು ಹೊತ್ತಿನ ಊಟಕ್ಕೆ ಸಮಸ್ಯೆಯಾಗಿಲ್ಲ. ಆದರೆ ಆಗಾಗ ಬರುವ ಕೆಮ್ಮು, ಜ್ವರಗಳಿಗೆ ಔಷಧಕ್ಕಾಗಿ ಆಸ್ಪತ್ರೆ ಮೆಟ್ಟಿಲು ಹತ್ತಲು ಇವರ ಕೈಯಲ್ಲಿ ಹಣವಿರಲಿಲ್ಲ. ಆದ್ದರಿಂದ ಜ್ವರ ಬಂದು ಬಿಡುವವರೆಗೂ ಮನೆಯೊಳಗೆ ಮಲಗಿರುವುದು ಸಾಮಾನ್ಯವಾಗಿತ್ತು.
ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಾಶನ : ಯಲ್ಲವ್ವರವರ ಪರಿಸ್ಥಿತಿಯನ್ನು ಹತ್ತಿರದಿಂದ ಕಂಡ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಇದನ್ನು ಶ್ರೀ ಹೆಗ್ಗಡೆ ದಂಪತಿಗಳ ಗಮನಕ್ಕೆ ತಂದರು. ಅವರಿಗೆ ಯೋಜನೆಯಿಂದ ಪ್ರತಿ ತಿಂಗಳು ಮಾಸಾಶನದ ವ್ಯವಸ್ಥೆಯಾಯಿತು. ಈ ಹಣ ಯಲ್ಲವ್ವರವರಿಗೆ ತರಕಾರಿ, ಔಷಧ ಹೀಗೆ ನಿತ್ಯದ ಅಗತ್ಯಗಳಿಗೆ ನೆರವಾಯಿತು.
ವಾತ್ಸಲ್ಯ ಮನೆ ನಿರ್ಮಾಣ : ಯಲ್ಲವ್ವರವರ ಬದುಕಿನ ಕಥೆಯನ್ನು ತಿಳಿದುಕೊಂಡ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಅವರಿಗೊಂದು ‘ವಾತ್ಸಲ್ಯ ಮನೆ’ಯನ್ನು ಕಟ್ಟಿಕೊಡುವಂತೆ ಯೋಜನೆಯ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು. ಇದೀಗ ಕಳೆದ ವರ್ಷ ಯಲ್ಲವ್ವರವರಿಗೆ ಯೋಜನೆಯ ಮೂಲಕ ‘ವಾತ್ಸಲ್ಯ’ ಮನೆಯೊಂದನ್ನು ನಿರ್ಮಿಸಿಕೊಡಲಾಗಿದೆ. ಮನೆಗೆ ಪ್ರಥಮ ಬಾರಿಗೆ ವಿದ್ಯುತ್ ಸಂಪರ್ಕವನ್ನೂ ಕಲ್ಪಿಸುವ ಮೂಲಕ ಯಲ್ಲವ್ವರ ಬಾಳು ಬೆಳಗಿದೆ.
ಧರ್ಮಸ್ಥಳದ ಪ್ರಯತ್ನದ ಫಲವಾಗಿ ಯಲ್ಲವ್ವ ಬದುಕಿನ ಸಂಧ್ಯಾಕಾಲದಲ್ಲಿ ಸ್ವಂತ ಸೂರಿನಡಿ ಬೆಚ್ಚಗೆ ಮಲಗುತ್ತಿದ್ದಾರೆ. ಮಳೆಗಾಲದ ದೇವಾಲಯದಲ್ಲಿನ ವಾಸಕ್ಕೂ ಮುಕ್ತಿ ದೊರೆತಂತಾಗಿದೆ. ಅವರ ಬದುಕು ಸುಂದರವಾಗಿರಲಿ ಎಂಬ ಆಶಯ ನಮ್ಮದು.