ಕೆಲಸ ಮತ್ತು ಕರ್ತವ್ಯ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು

ಒಮ್ಮೆ ಒಂದು ಕೆಲಸವನ್ನು ಹಿಡಿದ ಬಳಿಕ ನಮಗೆ ನಿರಂತರವಾಗಿ ಆ ಬಗ್ಗೆ ಎಚ್ಚರಿಕೆ ಇರಬೇಕು. ಯಾಕೆಂದರೆ ಒಬ್ಬ ಡ್ರೈವರ್ ಆದವನು ಎರಡು ದಿವಸ ಒಳ್ಳೆಯ ಡ್ರೈವಿಂಗ್ ಮಾಡುತ್ತೇನೆ. ಮತ್ತೆ ಮಾಡುವುದಿಲ್ಲ ಎಂದು ಹೇಳಲು ಆಗುವುದಿಲ್ಲ. ಬಸ್ ಡ್ರೈವರ್ ನಿವೃತ್ತಿ ಆಗುವವರೆಗೆ ಎಷ್ಟು ಎಚ್ಚರದಲ್ಲಿರಬೇಕು ಎಂದರೆ ನೂರಾರು ಜನರ ಜೀವ ಅವನ ಕೈಯ್ಯಲ್ಲಿರುತ್ತದೆ. ಹಾಗೆಯೇ ನೂರಾರು ಜನರ ಭವಿಷ್ಯ ಯೋಜನೆಯ ಕಾರ್ಯಕರ್ತರ ಕೈಯಲ್ಲಿದೆ. ಹಾಗಿರುವಾಗ ಯೋಜನೆಯ ಕಾರ್ಯಕರ್ತರು ತಮ್ಮ ಪ್ರತಿದಿನದ ಕೆಲಸವನ್ನು ಸುಧಾರಣೆ ಮಾಡಿಕೊಂಡು ಹೋಗಬೇಕು. ಯಾವಾಗಲೂ ಒಬ್ಬ ವಿದ್ಯಾರ್ಥಿ ಫಸ್ಟ್ಕ್ಲಾಸ್ ಅಂಕಗಳನ್ನು ತೆಗೆದುಕೊಳ್ಳುತ್ತಾನೆ. ಮತ್ತೆ ಜನರು ಅವನಿಂದ ಫಸ್ಟ್ಕ್ಲಾಸ್ ಅಂಕಗಳನ್ನೇ ನಿರೀಕ್ಷಿಸುತ್ತಾರೆ. ಎಲ್ಲರಿಗೂ ಗಣಿತ ಕಷ್ಟ. ಒಬ್ಬ ಗಣಿತದಲ್ಲಿ ನೂರು ಅಂಕ ಪಡೆದ ಅಂದರೆ ಅವನಿಗೆ ಪ್ರತಿಸಲ ಮನೆಯವರು, ಶಾಲೆಯವರು, ವಿದ್ಯಾರ್ಥಿಗಳು ಗಣಿತ ಎಂದ ಕೂಡಲೇ ‘ಹೋ ಅವನು ಗಣಿತದಲ್ಲಿ ಹುಷಾರ್’ ಎನ್ನುತ್ತಾರೆ. ಅದನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ ಆಗುತ್ತದೆ. ಒಂದು ಬಾರಿ ಫೇಲ್ ಆದರೆ ‘ರಾಯರ ಕುದುರೆ ಕತ್ತೆ ಆಯಿತು’ ಎನ್ನುವ ಮಾತು ಬರುತ್ತದೆ. ಹಾಗಾಗಿ ಯಾವುದರಲ್ಲಿ, ಯಾವ ಕೆಲಸದಲ್ಲಿಯೇ ಆಗಲಿ ನಿರಂತರತೆ ಇರಬೇಕು ಮತ್ತು ಅದನ್ನೊಂದು ರೂಢಿ ಅಥವಾ ಹವ್ಯಾಸ ಮಾಡಿಕೊಳ್ಳಬೇಕು. ಯಶಸ್ಸು ನಮಗೆ ರೂಢಿಯಾಗಬೇಕು. ಯಶಸ್ಸು ನಮ್ಮ ಹವ್ಯಾಸ ಆಗಬೇಕು. ಆಗ ಮಾತ್ರ ಯಶಸ್ಸು ನಮ್ಮನ್ನು ಪ್ರೀತಿಸುತ್ತದೆ. ಗಣಿತ ವಿದ್ಯಾರ್ಥಿಯನ್ನು ಪ್ರೀತಿಸಲು ಆರಂಭ ಮಾಡುತ್ತದೆ. ಇಲ್ಲವಾದರೆ ವಿದ್ಯಾರ್ಥಿಯೇ ಗಣಿತದ ಹಿಂದೆ ಹೋಗಬೇಕಲ್ಲದೆ ಗಣಿತ ಅವನನ್ನು ಹಿಡಿಯುವುದಿಲ್ಲ. ಯಾವಾಗ ಓದು ಅವನಿಗೆ ಅದೊಂದು ಚಟ, ಗೀಳು ಆಗುತ್ತದೆಯೋ ಆಗ ಮಾತ್ರ ಅವನಿಗೆ ಯಶಸ್ಸು ಒಲಿಯುತ್ತದೆ.
ಧೀರೂಭಾಯ್ ಅಂಬಾನಿಯವರು ಒಂದು ಕಡೆ ಹೇಳುತ್ತಾರೆ, ‘ಶ್ರೀಮಂತರಾಗುವುದು ಏನೂ ಕಷ್ಟ ಅಲ್ಲ, ಕಷ್ಟಪಟ್ಟು ದುಡಿದರೆ ಯಾರು ಬೇಕಾದರೂ ಶ್ರೀಮಂತರಾಗಬಹುದು. ಆದರೆ ಆ ಶ್ರೀಮಂತಿಕೆಯನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ.’ ನಮ್ಮಂತಹ ದೊಡ್ಡ ಸಂಸ್ಥೆಗೆ ಇನ್ನು ಕೆಳಗೆ ಬರಲು ಸಾಧ್ಯವೇ ಇಲ್ಲ. ಎಲ್ಲರ ಜೊತೆ ನಾವು ಮೊದಲ ಸ್ಥಾನದಲ್ಲಿ ಯಾವಾಗಲೂ ಇರುತ್ತೇವೆ. ನಮ್ಮ ಕಾರ್ಯಕರ್ತರು ಯಾವಾಗಲೂ ಮೊದಲ ಸ್ಥಾನದಲ್ಲಿರುತ್ತಾರೆ. ನಮ್ಮ ಕಾರ್ಯಕ್ರಮಗಳು ಯಾವಾಗಲೂ ಮೊದಲ ಸ್ಥಾನದಲ್ಲಿರುತ್ತವೆ. ಅದು ನಮಗೆ ಹೇಳಲು ಹೆಮ್ಮೆ. ನಮ್ಮ ಪಾರದರ್ಶಕತೆ, ನಿರಂತರತೆಯನ್ನು ನಾವು ಧೈರ್ಯವಾಗಿ ಹೇಳಬೇಕು ಎಂದರೆ ಅದಕ್ಕೆ ನಿಮ್ಮೆಲ್ಲರ ಸಹಕಾರವೂ ಬೇಕಾಗುತ್ತದೆ. ಹಾಗಾಗಿ ನಮ್ಮ ಈ ದೊಡ್ಡ ಸಾಮ್ರಾಜ್ಯವನ್ನು ಉಳಿಸಿಕೊಳ್ಳುವ ಮತ್ತು ಅದನ್ನು ಮತ್ತಷ್ಟು ಬೆಳೆಸುವ ಕೆಲಸ ನಿಮ್ಮೆಲ್ಲರದಾಗಿದೆ.
ಒಂದು ಹವ್ಯಾಸ ಅಥವಾ ಒಂದು ಉದ್ಯೋಗ ಅದರಲ್ಲಿ ಪ್ರೀತಿ ಇದ್ದಷ್ಟೂ ಅದರಲ್ಲಿ ಪರಿಣತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಹವ್ಯಾಸವೂ ಅಷ್ಟೇ. ಅದು ಸಮಯವನ್ನು ಬೇಡುತ್ತದೆ. ನನ್ನದು ಫೋಟೋಗ್ರಾಫಿ ಹವ್ಯಾಸ, ನನ್ನದು ಗಾರ್ಡನಿಂಗ್ ಹವ್ಯಾಸ ಎಂದು ಮನೆಯಲ್ಲಿ ಕುಳಿತುಕೊಳ್ಳುವ ಹಾಗಿಲ್ಲ. ನಿಮ್ಮ ಸಮಯ ಅದಕ್ಕೆ ನೀಡಿದರೆ ಮಾತ್ರ ಅದನ್ನು ಬೆಳೆಸಲು ಸಾಧ್ಯವಾಗುತ್ತದೆ. ಯಾರ ಜೊತೆ ನಿಷ್ಠಾವಂತ ಜನರಿರುತ್ತಾರೆಯೋ ಅವರನ್ನು ಸುಲಭದಲ್ಲಿ ಸೋಲಿಸುವುದು ಕಷ್ಟ. ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಎಷ್ಟೊಂದು ಕಾರ್ಯಕ್ರಮಗಳು ಎಲ್ಲೆಲ್ಲಿ ಆಗುತ್ತವೆ ಎಂಬುದನ್ನು ನಮಗೆ ಪತ್ರಿಕೆಗಳಲ್ಲಿ ಓದಿದರೆ ಆಶ್ಚರ್ಯ ಆಗುತ್ತದೆ. ಅಷ್ಟೊಂದು ಕಾರ್ಯಕ್ರಮಗಳು ನಿರಂತರವಾಗಿ ಆಗುತ್ತಿರುತ್ತವೆ. ಅದರಲ್ಲಿ ನೀವೆಲ್ಲ ಭಾಗಿಯಾಗಬೇಕಾಗುತ್ತದೆ, ತಯಾರಿ ಮಾಡಬೇಕಾಗುತ್ತದೆ. ಹಾಗಾಗಿ ಸಮಯ ನೋಡಿ ಕೆಲಸ ಮಾಡಲು ಯಾರಿಗೂ ಆಗುವುದಿಲ್ಲ. ಯಾರು ಸಮಯ ನೋಡಿ ಕೆಲಸ ಮಾಡುತ್ತಾರೆಯೋ ಅವರು ಬರೀ ಕಾರ್ಮಿಕರಾಗಿ ಇರಬಹುದು, ಯಾರು ಸಮಯ ನೋಡದೆ ಕೆಲಸ ಮಾಡುತ್ತಾರೋ ಅವರು ಮಾತ್ರ ಮಾಲಿಕರಾಗಿರಲು ಸಾಧ್ಯ.
ಮೇಲಿನ ಸ್ಥಾನದವರನ್ನು ನೋಡಿ ಕೆಳಗಿನ ಸ್ಥಾನದವರು ಶಿಸ್ತು, ನಡತೆ, ಮಾತು ಕಲಿಯುತ್ತಾರೆ. ಹಾಗಾಗಿ ಮೇಲಿನ ಸ್ಥಾನದವರು ಎಚ್ಚರಿಕೆಯಿಂದಿರಬೇಕು. ‘ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ’ ಎನ್ನುವ ಮಾತಿದೆ. ಹಾಗಾಗಿ ನಿಮ್ಮ ಶಿಸ್ತು, ನಡತೆಯ ಬಗ್ಗೆ ಎಚ್ಚರದಿಂದಿರಬೇಕು. ನಿಮ್ಮನ್ನು ನೀವೇ ವಿಮರ್ಶೆ, ಮೌಲ್ಯಮಾಪನ ಮಾಡಿಕೊಳ್ಳಬೇಕು. ನಾನು ಎಲ್ಲಿ, ಯಾಕೆ, ಹೇಗೆ ತಪ್ಪಿದ್ದೇನೆ? ಯಾಕೆ ನನ್ನ ಕೆಲಸದವರು ಸರಿಯಾಗಿ ಕೆಲಸ ಮಾಡುತ್ತಾ ಇಲ್ಲ. ನಮ್ಮಲ್ಲಿ ಏನು ಕೊರತೆ ಇದೆ? ಎಂಬುದನ್ನು ನಾವು ಆಗಾಗ ಪರಿಶೀಲನೆ ಮಾಡುತ್ತಾ ಹೋದರೆ ನಿಜವಾಗಿ ಒಳ್ಳೆಯದಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಸಮಸ್ಯೆ ಬಂದಾಗ ತಕ್ಷಣ ನೀವು ಸ್ಪಂದಿಸಬೇಕು. ನಾಳೆ ನೋಡ್ವಾ, ನಾಡಿದ್ದು ನೋಡ್ವಾ ಎಂದರೆ ಸಮಸ್ಯೆ ಉಲ್ಬಣ ಆಗುತ್ತದೆ. ಗಾಯ ಸಣ್ಣದಿರುವಾಗ ಬೇಗ ಗುಣ ಆಗುತ್ತದೆ. ದೊಡ್ಡದಾದ ಮೇಲೆ ಮತ್ತೆ ಕಷ್ಟ ಆಗುತ್ತೆ. ಯಾರಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಅವರ ಬಗ್ಗೆ ನಾವು ಹೆಚ್ಚಿನ ಗೌರವವನ್ನು ಹೊಂದಿರಬೇಕು. ಹಾಗೆಯೇ ಕೆಲಸ ಮಾಡುವ ಸಂಸ್ಥೆಯ ಬಗ್ಗೆ ನೀವು ಹೆಮ್ಮೆಪಡುವಂತೆ ಆಗಬೇಕೆಂದರೆ ಆ ಸಂಸ್ಥೆಯನ್ನು ಬೆಳೆಸಬೇಕಾದವರು ನೀವೇ. ಎಲ್ಲರಿಗೂ ಶುಭವಾಗಲಿ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *