ಗೋಮಾತೆ

ಇಟ್ಟರೆ ಸೆಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೇ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರಿ ಗೋವು ನಾನು.
ಎಸ್. ಜಿ. ನರಸಿಂಹಾಚಾರ್‌ರವರ ಈ ಕವಿತೆಯ ಮೂಲಕ ಗೋವುಗಳಿಂದಾಗುವ ಪ್ರಯೋಜನಗಳ ಅರಿವು ನಮಗಾಗುತ್ತದೆ. ಹಾಲು, ಮೊಸರು ಕಡೆದಾಗ ಬರುವ ಬೆಣ್ಣೆಯಿಂದ ತುಪ್ಪವಾಗಿ, ಕೃಷಿಕರಿಗೆ ಸೆಗಣಿ ಮತ್ತು ಗೊಬ್ಬರವಾಗಿ, ಉಳುಮೆಗೆ ಎತ್ತುವಾಗಿ, ಋಷಿ ಮುನಿಗಳಿಗೆ ಧಾರ್ಮಿಕ ಕ್ರಿಯಾ ವಿಧಾನಗಳಿಗೆ, ವಿಭೂತಿಯಾಗಿ ಹೀಗೆ ಗೋವುಗಳಿಂದಾಗುವ ಪ್ರಯೋಜನಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ.
ದನದ ಹಾಲನ್ನು ಅಮೃತಕ್ಕೆ ಸಮಾನವಾಗಿ ಹೋಲಿಸಲಾಗುತ್ತದೆ. ಯಾಕೆಂದರೆ ಮಗು ತಾಯಿಯ ಎದೆ ಹಾಲು ಕುಡಿಯುವುದನ್ನು ನಿಲ್ಲಿಸಿದ ನಂತರ ಪ್ರಥಮವಾಗಿ ಕುಡಿಯುವುದು ದನದ ಹಾಲನ್ನು. ತಾಯಿಯ ಹಾಲು ದೊರೆಯದ ಎಷ್ಟೋ ಮಕ್ಕಳಿಗೆ ದನದ ಹಾಲನ್ನೇ ನೀಡುತ್ತಾರೆ. ಯಾಕೆಂದರೆ ದನದ ಹಾಲು ತಾಯಿಯ ಹಾಲಿಗೆ ಸಮಾನವಾಗಿದೆ. ಆದ್ದರಿಂದ ಹಾಲನ್ನು ನೀಡುವ ಗೋವುಗಳಿಗೂ ಪೂಜನೀಯ ಸ್ಥಾನವಿದೆ.. ದೇವರ ಅಭಿಷೇಕ, ಪೂಜೆ ಪುನಸ್ಕಾರಗಳಿಗೆ ಹಾಲು ಬೇಕೆ ಬೇಕು. ನಾಗದೇವರಿಗಂತೂ ಹಾಲು ಬಹುಪ್ರಿಯ. ಹಿಂದೂ ಧರ್ಮದಲ್ಲಿ ಗೃಹಪ್ರವೇಶದ ಸಂದರ್ಭದಲ್ಲಿ ಮೊದಲು ಗೋವನ್ನು ಮನೆಯೊಳಗೆ ಕರೆತರುವ, ಹೊಸ ಮನೆಯಲ್ಲಿ ಪ್ರಥಮವಾಗಿ ಹಾಲು ಉಕ್ಕಿಸುವ ಪದ್ಧತಿ ಇದೆ. ಮದುವೆಯ ಧಾರೆಯ ಸಂದರ್ಭದಲ್ಲಿ ಹಾಲು ಮತ್ತು ನೀರನ್ನು ಸೇರಿಸಿ ಧಾರೆಯೆರೆದು ಕೊಡುತ್ತಾರೆ. ಅಂದರೆ ಅವರ ಮುಂದಿನ ಬದುಕು ಹಾಲು ಜೇನಿನಂತೆ ಸುಖವಾಗಿರಲಿ ಎಂಬುವುದು ಇದರ ತಾತ್ಪಾರ್ಯ. ಕುಡಿಯಲು, ಶುಭಕಾರ್ಯಗಳಿಗೆ, ಆರೋಗ್ಯ ವೃದ್ಧಿಗೆ, ಔಷಧವಾಗಿ ಹೀಗೆ ಮಕ್ಕಳಿಂದ ವೃದ್ಧರವರೆಗೆ ಹಾಲು ಬೇಕೆ ಬೇಕು.
ಗೋವುಗಳನ್ನು ‘ಮಾತೆ’ಯೆಂದು ಪೂಜಿಸುವ ಸಂಸ್ಕೃತಿ ನಮ್ಮದು. ರಾಮಾಯಣ, ಮಹಾಭಾರತ, ಪುರಾಣಗಳಲ್ಲೂ ಗೋವುಗಳ ಕುರಿತಂತೆ ಉಲ್ಲೇಖವಿದೆ. ಇನ್ನು ಗೋವು ಸಾಧು ಪ್ರಾಣಿ ಎಂಬುವುದಕ್ಕೆ ‘ಧರಣಿ ಮಂಡಲ’ ಹಾಡು ಸಾಕ್ಷಿಯಾಗಿದೆ. ಹಿಂದಿನ ಕಾಲದಲ್ಲಿ ರಾಜರು – ಋಷಿಮುನಿಗಳಿಗೆ ಗೋವುಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವಿತ್ತು. ಗೋವು ಸಾಕಣೆ ನಿತ್ಯ ಆದಾಯವನ್ನು ನೀಡುವ ಕಸುಬಾಗಿಯೂ ಗುರುತಿಸಿಕೊಂಡಿದೆ. ಹೈನುಗಾರಿಕೆಗೆ ರಾಜ್ಯದಲ್ಲಿ ವಿಫುಲ ಅವಕಾಶಗಳು ತೆರೆದುಕೊಂಡಿವೆ. ಹಾಲು ಸಂಸ್ಕರಣೆ ಮತ್ತು ಮಾರಾಟಕ್ಕಾಗಿ ಕೆ.ಎಂ.ಎಫ್.ನoತಹ ಸಂಸ್ಥೆಗಳು ಹಾಲಿಗೆ ‘ನಂದಿನಿ’ ಎಂಬ ಬ್ರಾö್ಯಂಡ್ ಅನ್ನೇ ಸೃಷ್ಟಿಸಿ ಇಂದು ಲಾಭದತ್ತ ಮುನ್ನಡೆಯುತ್ತಿವೆ.
ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಮೂಲಕ ಗ್ರಾಮಗಳ ಅಭಿವೃದ್ಧಿಯೊಂದಿಗೆ ಜನ ಸಾಮಾನ್ಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಾ ಬರುತ್ತಿದೆ. ಹಲವಾರು ವರ್ಷಗಳಿಂದ ಹೈನುಗಾರಿಕೆಯ ಕುರಿತಂತೆ ತರಬೇತಿ, ಆರೋಗ್ಯ ಶಿಬಿರಗಳು, ಅಧ್ಯಯನ ಪ್ರವಾಸದ ಮೂಲಕ ಪ್ರೇರಣೆಯನ್ನು ನೀಡಿದ್ದಲ್ಲದೆ ಪ್ರಗತಿಬಂಧು – ಸ್ವ ಸಹಾಯ ಸಂಘಗಳ ಮೂಲಕ ಹಸು ಖರೀದಿಗಾಗಿ ಆರ್ಥಿಕ ನೆರವನ್ನು ನೀಡಲಾಗಿದೆ. ಇದುವರೆಗೆ ರಾಜ್ಯದಲ್ಲಿ ಒಟ್ಟು 4,651ಹಾಲು ಉತ್ಪಾದಕ ಸಹಕಾರಿ ಸಂಘಗಳ ಕಟ್ಟಡ ಹಾಗೂ ಸಲಕರಣೆಗಳಿಗಾಗಿ ರೂ. 30.53 ಕೋಟಿ ಮೊತ್ತದ ಅನುದಾನವನ್ನು ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ 66000 ಕ್ಕೂ ಅಧಿಕ ಜಾನುವಾರುಗಳಿದ್ದು ದಿನವಹಿ 1,15,000 ಲೀ. ಹಾಲು ಉತ್ಪಾದನೆಯಾಗುತ್ತಿದ್ದು ಜಿಲ್ಲೆಯ ಒಟ್ಟು ಸರಾಸರಿ ಉತ್ಪಾದನೆಯ ಶೇ. 40 ರಷ್ಟು ಹಾಲು ಬೆಳ್ತಂಗಡಿ ತಾಲೂಕುವೊಂದರಿoದಲೇ ಪೂರೈಕೆಯಾಗುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಇದುವರೆಗೆ ಬೆಳ್ತಂಗಡಿ ತಾಲೂಕಿನ 87 ಹಾಲು ಸಂಘಗಳಿಗೆ ರೂ. 53 ಲಕ್ಷ ಮೊತ್ತದ ಅನುದಾನವನ್ನು ನೀಡಲಾಗಿದೆ. ಹೀಗೆ ರಾಜ್ಯದ ಒಟ್ಟು ಹಾಲು ಉತ್ಪಾದನೆಗೆ ಗ್ರಾಮಾಭಿವೃದ್ಧಿ ಯೋಜನೆಯು ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಬರದ ನಾಡಾದ ಉತ್ತರ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ, ಅವರುಗಳನ್ನು ಸ್ವಉದ್ಯೋಗಿಗಳನ್ನಾಗಿಸುವ ನಿಟ್ಟಿನಲ್ಲಿ ಶ್ರೀ ಹೆಗ್ಗಡೆಯವರು ತನ್ನ ಸಂಸದರ ನಿಧಿಯಿಂದ ರೂ. 2.50 ಕೋಟಿ ಮೊತ್ತವನ್ನು ಕಟ್ಟಡ ನಿರ್ಮಾಣ, ಅಗತ್ಯ ಸಲಕರಣೆ, ಪೀಠೋಪಕರಣಗಳ ಖರೀದಿಗೆ ವಿನಿಯೋಗಿಸಿರುವುದನ್ನು ನಾವಿಲ್ಲಿ ಉಲ್ಲೇಖಿಸಬಹುದಾಗಿದೆ.
ಇತ್ತೀಚಿನ ದಿನಗಳ ಅಗತ್ಯತೆಗಳನ್ನು ಗಮನಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಮಂಗಳೂರು ಇವರಿಗೆ 45 ದ್ರವಸಾರಜನಕ ಜಾಡಿಗಳನ್ನು ನೀಡಲಾಗಿದೆ. ಇದನ್ನು ಕೃತಕಾ ಗರ್ಭಧಾರಣೆಯಲ್ಲಿ ಉಪಯೋಗಿಸಲ್ಪಡುತ್ತದೆ. ದ್ರವಸಾರಜನಕ ಜಾಡಿಯನ್ನು ಪಶುವೈದ್ಯರು, ಪಶು ವೈದ್ಯಕೀಯ ಪರೀಕ್ಷಕರು, ಕೃತಕ ಗರ್ಭಧಾರಣಾ ಕಾರ್ಯಕರ್ತರು ತಮ್ಮ ದ್ವಿಚಕ್ರ ವಾಹನದಲ್ಲಿ ರೈತರ ಮನೆಬಾಗಿಲಿಗೆ ಸುಲಭವಾಗಿ ಹೊಯ್ಯಬಹುದಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕೃತಕಾ ಗರ್ಭಧಾರಣೆಯಲ್ಲಿ ಉಪಯೋಗಿಸಲ್ಪಡುವ ವೀರ್ಯನಳಿಕೆಯ ಗುಣಮಟ್ಟವು ಹೆಚ್ಚಿ ಉತ್ತಮ ಗರ್ಭಧಾರಣಾ ಫಲಿತಾಂಶ ದೊರೆಯಲಿದೆ.
ಜಾನುವಾರು ಮತ್ತು ಕೃಷಿ ಒಂದೇ ನಾಣ್ಯದ ಎರಡು ಮುಖಗಳು. ಕೃಷಿ ಸಂಪದ್ಭರಿತವಾದರೆ ರಾಜ್ಯದ ಜನತೆಯು ನೆಮ್ಮದಿಯಿಂದಿರಬಹುದಾಗಿದೆ. ಈ ನಿಟ್ಟಿನಲ್ಲಿ ಸಾಧ್ಯ ಇರುವ ಕಡೆಗಳಲ್ಲಿ ಹೈನುಗಾರಿಕೆಗಳನ್ನು ಕೈಕೊಳ್ಳಬಹುದಾಗಿದೆ. ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನಿಸೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates