ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು
ಗ್ರಾಮಾಭಿವೃದ್ಧಿ ಯೋಜನೆಯ ‘ಸಿಎಸ್ಸಿ ಕೇಂದ್ರ’ಗಳ ಮೂಲಕ ರಾಜ್ಯಾದ್ಯಂತ ಸರಕಾರಿ ಸೇವೆಗಳು ಹಾಗೂ ಇತರೇ ಸಿಎಸ್ಸಿ ಸೇವೆಗಳನ್ನು ಗ್ರಾಮಮಟ್ಟದಲ್ಲಿ ಒದಗಿಸಲಾಗುತ್ತಿದೆ. ಯೋಜನೆಯ ಆರಂಭದ ದಿನದಿಂದಲೂ ಸರಕಾರಿ ಸೇವೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ, ಜನರಲ್ಲಿ ಸೂಕ್ತ ಅರಿವನ್ನು ಮೂಡಿಸಬೇಕೆಂಬುದು ಪೂಜ್ಯ ಶ್ರೀ ಹೆಗ್ಗಡೆಯವರ ಆಶಯ ಮತ್ತು ಮಾರ್ಗದರ್ಶನವಾಗಿತ್ತು. ಅಂದಿನ ಕಾರ್ಯಕರ್ತರು ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅರ್ಜಿಯನ್ನು ಭರ್ತಿ ಮಾಡಿಸುವುದರಿಂದ ಹಿಡಿದು ಅವುಗಳನ್ನು ಕಚೇರಿಗೆ ಕೊಂಡುಹೋಗಿ ಆ ಕಾರ್ಯಕ್ರಮಗಳು ಅಥವಾ ಸವಲತ್ತುಗಳು ಅವರಿಗೆ ದೊರೆಯುವಂತೆ ಮಾಡುತ್ತಿದ್ದರು. ಇಂದು ಪೂಜ್ಯರ ಈ ಆಶಯ ಕೇವಲ ಅರಿವು ಮೂಡಿಸುವುದಕ್ಕಷ್ಟೇ ಸೀಮಿತವಾಗಿರದೆ, ಆಯ್ದ ಸರಕಾರಿ ಸೇವೆಗಳನ್ನು ಯೋಜನೆಯ ‘ಗ್ರಾಮೀಣ ಸೇವಾ ಕೇಂದ್ರ’ (ಸಿಎಸ್ಸಿ)ಗಳ ಮೂಲಕ ಜನಸಾಮಾನ್ಯರಿಗೆ ನೇರವಾಗಿ ದೊರಕಿಸಿಕೊಡುವಂತಹ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ. ಕೇಂದ್ರ ಸರಕಾರದ ಇ-ಗವರ್ನೆನ್ಸ್ ಇಂಡಿಯಾ ಲಿಮಿಟೆಡ್ (ಮಿನಿಸ್ಟಿç ಆಫ್ ಎಲೆಕ್ಟಾçನಿಕ್ ಆ್ಯಂಡ್ ಇನ್ಫಾರ್ಮೇಶನ್ ಟೆಕ್ನಾಲಜಿ) ಇವರು ಯೋಜನೆಯ ಕಾರ್ಯಕ್ಷಮತೆಯನ್ನು ಗಮನಿಸಿ ಕೇಂದ್ರ ಸರಕಾರ ಮತ್ತು ಸಿಎಸ್ಸಿ ಸೇವೆಗಳನ್ನು ಕರ್ನಾಟಕ ರಾಜ್ಯಾದ್ಯಂತ ನೀಡುವ ಪಾಲುದಾರಿಕೆ ಒಪ್ಪಂದವನ್ನು ಮಾಡಿಕೊಂಡಿದ್ದು, ಪ್ರಸ್ತುತ ರಾಜ್ಯಾದ್ಯಂತ ಅನೇಕ ಸೇವೆಗಳನ್ನು ನೀಡುತ್ತಿದೆ. ಇಂತಹ ಸೇವೆಗಳಲ್ಲಿ ‘ಡಿಜಿಪೇ’ ಸೇವೆಯು ಅತ್ಯಂತ ಮಹತ್ವದ್ದಾಗಿದೆ. ಹಳ್ಳಿಯ ಜನರು ತಮ್ಮ ಖಾತೆಯಿಂದ ಹಣವನ್ನು ನಗದೀಕರಿಸಲು (ಕ್ಯಾಶ್ ವಿತ್ಡ್ರಾ) ದೂರದ ಪೇಟೆಗೆ ಹೋಗುವುದರಿಂದ ಅವರ ದಿನದ ದುಡಿಮೆಯ ಸಮಯವು ವ್ಯರ್ಥವಾಗುವುದಲ್ಲದೇ, ಹೋಗಿ ಬರಲು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಿತ್ತು. ಇದೀಗ ಗ್ರಾಮೀಣ ಜನರಿಗೆ ಅವರಿರುವ ಪ್ರದೇಶದಲ್ಲಿಯೇ ಅವರ ಖಾತೆಯಿಂದ ಹಣವನ್ನು ನಗದೀಕರಿಸುವ (ಕ್ಯಾಶ್ ವಿತ್ಡ್ರಾ) ಸಿಎಸ್ಸಿಯ ‘ಡಿಜಿಪೇ’ ವ್ಯವಸ್ಥೆಯನ್ನು ಗ್ರಾಮಾಭಿವೃದ್ಧಿ ಯೋಜನೆಯು ಸಿಎಸ್ಸಿ ಕೇಂದ್ರಗಳ ಮೂಲಕ ವ್ಯವಸ್ಥೆಗೊಳಿಸಿದೆ. ‘ಡಿಜಿಪೇ’ NPCI ಸಹಯೋಗದೊಂದಿಗೆ ಸಿಎಸ್ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ಪ್ರಾರಂಭಿಸಿದ ಸೇವೆಯಾಗಿದ್ದು ೨೦೨೩ರಲ್ಲಿ ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಈ ವ್ಯವಸ್ಥೆಗೆ ಉತ್ತಮ ಸ್ಪಂದನೆ ದೊರೆತು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪ್ರಸ್ತುತ ತುಮಕೂರು, ಹಾವೇರಿ, ಕೆ.ಆರ್.ನಗರ, ಉಡುಪಿ ಜಿಲ್ಲೆಗಳಲ್ಲೂ ‘ಮೈಕ್ರೋ ಎಟಿಎಂ’ (ಡಿಜಿಪೇ) ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಈಗಾಗಲೇ 1,41,824 ಮಂದಿ ಇದರ ಪ್ರಯೋಜನವನ್ನು ಪಡೆಯುವ ಮೂಲಕ ಈ ವ್ಯವಸ್ಥೆಯನ್ನು ಜನ ನೆಚ್ಚಿಕೊಂಡಿದ್ದಾರೆ.
ಗ್ರಾಮೀಣ ಭಾಗದ ಜನರು ತಮ್ಮ ಖಾತೆಯಿಂದ ಹಣವನ್ನು ಪಡೆಯಲು ಬ್ಯಾಂಕ್ಗೆ ಅಥವಾ ಎಟಿಎಂಗೆ ತೆರಳದೆ ತಮ್ಮ ಗ್ರಾಮದ ಗ್ರಾಮಾಭಿವೃದ್ಧಿ ಯೋಜನೆಯ ಸಿಎಸ್ಸಿ ಕೇಂದ್ರದಲ್ಲೇ ಪಡೆಯುವ ಅವಕಾಶ ಇದಾಗಿದ್ದು ‘ಡಿಜಿಪೇ’ ಮೂಲಕ ನಗದೀಕರಣ (ಕ್ಯಾಶ್ ವಿತ್ಡ್ರಾ) ಸೇವೆ ಅಲ್ಲದೆ ಬ್ಯಾಲೆನ್ಸ್ ಪರಿಶೀಲನೆ ಹಾಗೂ ಮಿನಿ ಸ್ಟೇಟ್ಮೆಂಟ್ ಅನ್ನು ಪಡೆದುಕೊಳ್ಳಬಹುದಾಗಿದೆ.
ನಿಮ್ಮೂರಿನಲ್ಲಿರುವ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಎಸ್.ಸಿ. ಕೇಂದ್ರಗಳಲ್ಲಿ ವಾರದ ಹಣ ಸಂಗ್ರಹಣೆಯ ದಿನದಂದು ಈ ಸೇವೆ ಲಭ್ಯ. ನೀವು ಸಿ.ಎಸ್.ಸಿ. ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಖಾತೆಯಿಂದ ರೂ. 500 ರಿಂದ ರೂ. 10 ಸಾವಿರದಷ್ಟು ಮೊತ್ತವನ್ನು ಪಡೆಯಬಹುದಾಗಿದೆ. ಹಣವನ್ನು ಪಡೆಯಲು ಇಚ್ಚಿಸುವವರು ತಮ್ಮ ಎಟಿಎಂ ಕಾರ್ಡ್ನ ಮೂಲಕ ಎಟಿಎಂನಿ0ದ ಕ್ಯಾಶ್ ವಿತ್ಡ್ರಾ ಮಾಡಿದಂತೆಯೆ ಡಿಜಿಪೇಯ ಮೈಕ್ರೋ ಎಟಿಎಂನ ಮೂಲಕವು ಕ್ಯಾಶ್ ವಿತ್ಡ್ರಾ ಮಾಡಬಹುದಾಗಿದೆ. ಒಂದು ವೇಳೆ ಎಟಿಎಂ ಇಲ್ಲದಿದ್ದರೂ ತಮ್ಮ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆಯನ್ನು ಉಳಿತಾಯ ಖಾತೆ ಸಂಖ್ಯೆ ಹೊಂದಿರುವ ಹೆಸರಿನ ಮೂಲಕ ಫಲಾನುಭವಿಯೂ ಬೆರಳಚ್ಚನ್ನು (ಆಧಾರ್ ಅಥೆಂಟಿಕೇಶನ್) ನೀಡುವ ಮೂಲಕ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ಮೇಲಿನ ವಿಷಯಗಳಲ್ಲದೆ ಈ ಕೆಳಗಿನ ವಿಶೇಷತೆಗಳನ್ನು ಗಮನಿಸಬಹುದಾಗಿದೆ.
ಬ್ಯಾಂಕ್ ವ್ಯವಸ್ಥೆ ಸೌಲಭ್ಯಗಳಿಲ್ಲದ ಪ್ರದೇಶಗಳಿಗೆ ‘ಡಿಜಿಪೇ’ ಹಣಕಾಸಿನ ಸೇವೆಯನ್ನು ನೀಡುತ್ತದೆ.
ಆಧಾರ್ ದೃಢೀಕರಣದೊಂದಿಗೆ ತನ್ನ ವಹಿವಾಟನ್ನು ಸುಲಭಗೊಳಿಸಿದೆ.
ಆಧಾರ್ ದೃಢೀಕರಣ ಇರುವುದರಿಂದ ವಂಚನೆಯ ಪ್ರಮಾಣ ಕಡಿಮೆಯಾಗುತ್ತದೆ.
ಹಣವನ್ನು ಪಡೆಯಲು ಗ್ರಾಹಕರು ಎಟಿಎಂಗಳಿಗೆ ಹೋಗುವ ಅಗತ್ಯವಿಲ್ಲ.
ಗ್ರಾಹಕರು ಬ್ಯಾಂಕ್ ಹಾಗೂ ಎಟಿಎಂನಲ್ಲಿ ಹಣ ಪಡೆಯಲು ವ್ಯರ್ಥ ಮಾಡುತ್ತಿದ್ದ ಸಮಯ ಹಾಗೂ ವೆಚ್ಚಗಳು ಉಳಿತಾಯವಾಗಿ ಅವರ ಗ್ರಾಮದಲ್ಲೆ ಈ ಸೇವೆಯನ್ನು ಪಡೆಯಬಹುದಾಗಿದೆ.
‘ಡಿಜಿಪೇ’ ವ್ಯವಸ್ಥೆಯನ್ನು ಬಹಳ ಸುರಕ್ಷತೆಯಿಂದ ಸದ್ಬಳಕೆ ಮಾಡಲು ನಾವು ವಿನಂತಿಸಿಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ತಮ್ಮ ಎಟಿಎಂ ಪಿನ್ ಅಥವಾ ಪಾಸ್ವರ್ಡ್ ಅನ್ನು ಬೇರೆಯವರಿಗೆ ನೀಡಬಾರದು. ಹಣ ನಗದೀಕರಣದ ಎಟಿಎಂ ಕಾರ್ಡ್ ಅನ್ನು ಇತರರಿಗೆ ವರ್ಗಾಯಿಸಬಾರದು. ಮೊಬೈಲ್ ಪಾಸ್ವರ್ಡ್, ಒಟಿಪಿ ನಂಬರ್ ಅನ್ನು ಬೇರೆಯವರಿಗೆ ತಿಳಿಸಬಾರದು. ತಾವು ನಗದೀಕರಿಸಿದ ಮೊತ್ತ ಸರಿಯಾಗಿದೆ ಎಂದು ಖಚಿತಪಡಿಸಿಕೊಂಡ ನಂತರವೇ ಕಚೇರಿಯಿಂದ ತೆರಳುವುದು. ಯಾವುದೇ ದೂರವಾಣಿ ಕರೆಗಳನ್ನು ಸ್ವೀಕರಿಸಿ, ಪಿನ್ ನಂಬರ್ಗಳನ್ನು ನೀಡಿ ವಂಚನೆಗೊಳಗಾಗಬಾರದು. ಇಂತಹ ಎಲ್ಲಾ ಸುರಕ್ಷತ ಕ್ರಮಗಳನ್ನು ಕೈಗೊಂಡು ಉತ್ತಮ ರೀತಿಯಲ್ಲಿ ಈ ‘ಡಿಜಿಪೇ’ ಸೌಲಭ್ಯದ ಸದ್ವಿನಿಯೋಗ ರಾಜ್ಯದ ಜನತೆ ಮಾಡುವಂತಾಗಲಿ ಎಂಬ ಆಶಯ ನಮ್ಮದು.
