ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು
ಪೂಜ್ಯ ಶ್ರೀ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಗೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭ್ಯವಾಗಿವೆ. ದೇಶದ ಒಂದು ಪ್ರತಿಷ್ಠಿತ ಸ್ವಯಂಸೇವಾ ಸಂಸ್ಥೆಯಾಗಿ ಅನೇಕ ಸಾಮಾಜಿಕ ಸೇವೆಗಳನ್ನು ಸಲ್ಲಿಸುವುದರ ಜೊತೆಗೆ ಆರ್ಥಿಕ ಸಬಲೀಕರಣವನ್ನು ಕೈಗೊಂಡಿರುವ ಏಕೈಕ ಹಾಗೂ ವಿಶಿಷ್ಟ ಸಂಸ್ಥೆ ಇದು ಎಂದರೆ ತಪ್ಪಾಗಲಾರದು.
ಬ್ಯಾಂಕ್‌ಗಳ ಬಿ.ಸಿ. (ವ್ಯವಹಾರ ಪ್ರತಿನಿಧಿ)ಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿ, ಅವುಗಳನ್ನು ಆರ್ಥಿಕ ಸೇರ್ಪಡೆಗೊಳಿಸುವ ಮೂಲಕ ಬಡವರ ಆರ್ಥಿಕ ಸಬಲೀಕರಣಕ್ಕಾಗಿ ಶ್ರೇಷ್ಠ ಸಾಧನೆಗೈದ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಗೆ ಸ್ಕಾಚ್ ಗ್ರೂಪ್ಸ್ ನಿಂದ ಕೊಡಮಾಡುವ 2025ನೇ ಸಾಲಿನ ರಾಷ್ಟ್ರದ ಪ್ರತಿಷ್ಠಿತ ‘ಸ್ಕಾಚ್ ಆರ್ಥಿಕ ಸೇರ್ಪಡೆ ಪ್ರಶಸ್ತಿ’ ದೊರೆತಿರುತ್ತದೆ.
ದೆಹಲಿಯ ಹೆಬಿಟೆಟ್ ಸೆಂಟರ್ ಸಭಾಭವನದಲ್ಲಿ ಜನವರಿ 10, 2029ರಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅನಿಲ್ ಕುಮಾರ್ ಎಸ್.ಎಸ್. ಮತ್ತು ಯೋಜನೆಯ ಮುಖ್ಯ ಹಣಕಾಸು ಅಧಿಕಾರಿಗಳಾದ ಶಾಂತರಾಮ್ ಆರ್. ಪೈಯವರು ಸ್ಕಾಚ್ ಗ್ರೂಪ್ಸ್ನ ಮುಖ್ಯಸ್ಥರಾದ ಸಮೀರ್ ಕೋಚ್ಚಾರ್‌ರವರಿಂದ ಪ್ರ‍್ರಶಸ್ತಿಯನ್ನು ಸ್ವೀಕರಿಸಿದರು. ಇದೇ ಸಂದರ್ಭ ಆರ್ಥಿಕ ಸೇರ್ಪಡೆಯಲ್ಲಿ ವಿಶಿಷ್ಟ ಸಾಧನೆಗೈದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್, ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ, ತಮಿಳುನಾಡು ಸರಕಾರ ಮತ್ತು ಇತರ ಇಲಾಖೆ ಮತ್ತು ಸಂಸ್ಥೆಗಳನ್ನು ಗೌರವಿಸಲಾಯಿತು.
ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ‘ಆರ್ಥಿಕ ಸೇರ್ಪಡೆ’ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಳ್ಳಿಗಳಿಂದಲೇ ಸ್ವರೂಪವನ್ನು ಪಡೆದಿರುವ ನಮ್ಮ ದೇಶಕ್ಕಂತೂ ಆರ್ಥಿಕ ಸೇರ್ಪಡೆ ಅತೀ ಅಗತ್ಯವಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕ ಮುಖ್ಯವಾಹಿನಿಯ ಅನುಸೂಚಿತ ಹಾಗೂ ಇತರ ಬ್ಯಾಂಕುಗಳ ಸಂಪರ್ಕವನ್ನು ಕಲ್ಪಿಸಿ, ವೈಯಕ್ತಿಕ ಹಾಗೂ ಇತರ ಖಾತೆಗಳ ವ್ಯವಸ್ಥೆಯೊಂದಿಗೆ ಆರ್ಥಿಕ ವ್ಯವಹಾರ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಆರ್ಥಿಕ ಸಶಕ್ತತೆಯನ್ನು ಸಾಧಿಸುವುದು ಆರ್ಥಿಕ ಸೇರ್ಪಡೆಯ ಸಾಮಾನ್ಯ ಉದ್ದೇಶವಾಗಿದೆ.
ಬ್ಯಾಂಕುಗಳು ಹಳ್ಳಿ ಹಳ್ಳಿಗೂ ತಮ್ಮ ಸೇವಾಜಾಲವನ್ನು ವಿಸ್ತರಿಸುವುದು ಕಷ್ಟಕರವಾಗಿರುವುದರಿಂದ ಬ್ಯಾಂಕುಗಳು ಕೆಲವು ಎನ್‌ಜಿಒ, ಟ್ರಸ್ಟ್ ಹಾಗೂ ಸಂಸ್ಥೆಗಳನ್ನು ತಮ್ಮ ‘ಬ್ಯಾಂಕಿಂಗ್ ಬಿಸಿನೆಸ್ ಕರೆಸ್ಪಾಂಡೆಂಟ್’ ಆಗಿ ನಿಯೋಜನೆ ಮಾಡಿಕೊಂಡು ಹಳ್ಳಿ ಹಳ್ಳಿಗಳಿಗೂ ಬ್ಯಾಂಕಿನ ಆರ್ಥಿಕ ಸೌಲಭ್ಯವನ್ನು ಒದಗಿಸುವ ಅವಕಾಶವನ್ನು ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ವು ಕಲ್ಪಿಸಿದೆ. ಈ ವ್ಯವಸ್ಥೆಯಲ್ಲಿ ದೇಶದ ಪ್ರಮುಖ ಬ್ಯಾಂಕುಗಳು ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಯನ್ನು ಈ ಸೇವೆಗೆ ನಿಯೋಜನೆ ಮಾಡಿವೆ. ಬಡವರಿಗೆ ದಾನದ ಬದಲಿಗೆ ಸ್ವಾವಲಂಬನೆಯ ಬೀಜಮಂತ್ರವನ್ನು ಬಿತ್ತಿ, ಆರ್ಥಿಕ ವ್ಯವಸ್ಥೆಯ ಮುಖ್ಯವಾಹಿನಿಗೆ ಬಡವರನ್ನು ತರಲು ಪ್ರಯತ್ನಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅತ್ಯಪೂರ್ವ ಕಾರ್ಯದಲ್ಲಿ ತೊಡಗಿಕೊಂಡಿದ್ದು ೬ ಲಕ್ಷಕ್ಕೂ ಮಿಕ್ಕಿದ ಸ್ವಸಹಾಯ ಸಂಘಗಳನ್ನು ರಚಿಸಿದೆ. ದೇಶದ ಆರು ಪ್ರಮುಖ ಬ್ಯಾಂಕ್‌ಗಳಿಗೆ ಬಿ.ಸಿ. (ವ್ಯವಹಾರ ಪ್ರತಿನಿಧಿ) ಸಂಸ್ಥೆಯಾಗಿ ಅತೀ ಕಡಿಮೆ ಬಡ್ಡಿದರ ಅಂದರೆ ಬ್ಯಾಂಕಿನಿಂದ ಶೇ. 14 ರಿಂದ ಶೇ. 15 ವಾರ್ಷಿಕ ಬಡ್ಡಿದರದಲ್ಲಿ ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಾಲ ಸೌಲಭ್ಯ ದೊರೆಯುತ್ತಿದ್ದು ಇಲ್ಲಿ ಕಡಿತ ಬಡ್ಡಿದರದ ವ್ಯವಸ್ಥೆ ಇರುವುದರಿಂದ ಮತ್ತು ವಾರದ ಮರುಪಾವತಿಯಿಂದಾಗಿ ಅತೀ ಕಡಿಮೆ ಬಡ್ಡಿ ವಿಧಿಸಿದಂತಾಗುವುದು. ರೂ. 1 ಲಕ್ಷ ಸಾಲಕ್ಕೆ 50 ವಾರ (ಒಂದು ವರ್ಷದ ಅವಧಿಗೆ)ಗಳಿಗೆ ರೂ. 2,146 ವಾರದ ಕಂತು ಆಗಿದ್ದು ಇದರನ್ವಯ ರೂ. 1 ಲಕ್ಷಕ್ಕೆ ಒಂದು ವರ್ಷಕ್ಕೆ ಒಟ್ಟು ಪಾವತಿಸುವ ಬಡ್ಡಿ ಕೇವಲ ರೂ. 7,246 ಆಗಿರುತ್ತದೆ. ಇದು ಅತ್ಯಂತ ಕಡಿಮೆ ಬಡ್ಡಿದರದ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಲ್ಲಿ ಸ್ವಸಹಾಯ ಸಂಘದ ಸದಸ್ಯರು ಯಾವುದೇ ಆಸ್ತಿಗಳನ್ನು ಅಡಮಾನವಾಗಿ ಇಡಬೇಕಾಗಿಲ್ಲ. ಮೂರನೇ ವ್ಯಕ್ತಿಯ ಗ್ಯಾರೆಂಟಿ ಬೇಕಾಗಿಲ್ಲ. ಅದ್ಯಾವುದರ ಅಗತ್ಯವಿಲ್ಲದೆ ಸುಲಭವಾಗಿ ತಮ್ಮ ಗ್ರಾಮದ ಪ್ರದೇಶದಲ್ಲೆ ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದು ಆರ್ಥಿಕ ಸೇರ್ಪಡೆಯ ಅತಿ ದೊಡ್ಡ ವರದಾನವಾಗಿದೆ. ಇದೀಗ ಯೋಜನೆಯ ಮೂಲಕ ನಮ್ಮ ರಾಜ್ಯದ 22 ಸಾವಿರ ಹಳ್ಳಿಗಳಿಗೂ ಈ ಸೇವೆಯನ್ನು ನೀಡಲಾಗುತ್ತಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ರಾಜ್ಯದ ಹಳ್ಳಿ ಹಳ್ಳಿಗಳಿಗೂ ಸ್ವಸಹಾಯ ಸಂಘದ ಮಾದರಿ ಆಯಾಮದಲ್ಲಿ ಬ್ಯಾಂಕ್‌ಗಳಿಂದ ಆರ್ಥಿಕ ಸಾಲ ಸೌಲಭ್ಯವನ್ನು ಇಷ್ಟೊಂದು ತಳಮಟ್ಟದ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದಲ್ಲಿ ದೊರಕಿಸಿಕೊಟ್ಟಿರುವುದು ಆರ್ಥಿಕ ಸೇರ್ಪಡೆ ವ್ಯವಸ್ಥೆಯಲ್ಲಿ ಬಹುದೊಡ್ಡ ಸಾಧನೆಯಾಗಿರುತ್ತದೆ.
