ಚಳಿಗಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ

ಡಾ| ಸಂದೀಪ್ ಹೆಚ್. ಎಸ್

ಶೀತ ಜ್ವರ : ಇದು ಬದಲಾದ ಹವಾಮಾನ, ತಂಗಾಳಿ, ಪ್ರಯಾಣಗಳಿಂದ ಹೆಚ್ಚು ಹರಡುವ ಅತಿ ಸರ್ವೇಸಾಮಾನ್ಯವಾದ ಸಮಸ್ಯೆ. ಹೆಚ್ಚಾಗಿ ಹೈನೋವೈರಸ್ ಮೊದಲಾದ ವೈರಾಣುಗಳಿಂದ ಗಾಳಿಯ ಮುಖಾಂತರ ಹಾಗೂ ಅಶುದ್ಧವಾದ ಕೈಗಳಿಂದ ಬಾಯಿ, ಕಣ್ಣುಗಳನ್ನು ಮುಟ್ಟಿಕೊಳ್ಳುವುದರಿಂದ ಹರಡಬಲ್ಲದು. ಇವುಗಳ ಸಹೋದರನೆ ಕೋವಿಡ್ ಮಹಾಮಾರಿ. ಒಣಕೆಮ್ಮು, ಚಳಿಜ್ವರ, ಮೈ ಕೈ ನೋವು, ಸುಸ್ತು, ಕಣ್ಣು ಕೆಂಪಾಗುವುದು, ತಲೆನೋವು, ಗಂಟಲು ಕೆರೆತ, ಶೀತ/ಮೂಗು ಕಟ್ಟುವುದು ಇದರ ಲಕ್ಷಣ. ಹೆಚ್ಚಾಗಿ ವೈರಾಣುವಿನ ಕಾಯಿಲೆಯಾದ್ದರಿಂದ ಆ್ಯಂಟಿ ಬಯಾಟಿಕ್ ಔಷಧದ ಅವಶ್ಯಕತೆ ಇರದು. 3 ರಿಂದ 7 ದಿನಗಳಲ್ಲಿ ಕಡಿಮೆಯಾಗುವುದು. ಸೂಕ್ತ ಪ್ರಮಾಣದ ನೀರು, ವಿಶ್ರಾಂತಿ, ಅಗತ್ಯವಿದ್ದಲ್ಲಿ ಜ್ವರದ ಮದ್ದನ್ನು ತೆಗೆದುಕೊಳ್ಳಬೇಕು. ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವಿಕೆ ಮೊದಲಾದ ಮನೆ ಮದ್ದಿನಿಂದಲೂ ಗುಣಮುಖವಾಗಬಹುದು. ಆದರೆ ಒಮ್ಮೊಮ್ಮೆ ಗಂಟಲು ಮತ್ತು ಟಾನ್ಸಿಲ್‌ಗಳಲ್ಲಿ ಸ್ಕೆçಪ್ಟೋಕಾಕ್ಕಿಯೆಂಬ ಬ್ಯಾಕ್ಟೀರಿಯಾಗಳು ಮನೆ ಮಾಡಿ ಇದೇ ರೀತಿಯ ಸಮಸ್ಯೆಗಳು ಕಾಣಬಹುದು. ಆದರೆ ಇದರಲ್ಲಿ ಜ್ವರದ ತೀವ್ರತೆ ಹೆಚ್ಚಾಗಿದ್ದು, ಜ್ವರ ಹೆಚ್ಚುತ್ತಲೇ ಹೋಗಬಹುದು ಹಾಗೂ ಬೇಗ ಗುಣವಾಗುವಂತೆ ಕಾಣದು. ಕೆಲವೊಮ್ಮೆ ಕಫಕ್ಕೆ ತಿರುಗಬಹುದು. ಅಂತಹ ಸಮಯದಲ್ಲಿ ತಡ ಮಾಡದೆ ವೈದ್ಯರನ್ನು ಕಾಣಬೇಕು.
ಮಂಡಿ, ಕೀಲು, ಗಂಟು ನೋವು : ಚಳಿಗಾಲದಲ್ಲಿ ಸಂಧಿವಾತ ಸಮಸ್ಯೆ ಇರುವ ಹಿರಿಯರಿಗೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳುವುದು. ಇದಕ್ಕೆ ತೂಕದ ಇಳಿಕೆ, ಸೂಕ್ತಪ್ರಮಾಣದ ವ್ಯಾಯಾಮ, ಯೋಗಗಳನ್ನು ಮಾಡುವುದು ಉತ್ತಮ.
ಅಸ್ತಮಾ ಕಾಯಿಲೆ ಉಲ್ಬಣ : ಅಸ್ತಮಾ, ಅಲರ್ಜಿ ಮೊದಲಾದ ತೊಂದರೆ ಇರುವವರಿಗೆ ಚಳಿಗಾಲದಲ್ಲಿ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇರುತ್ತದೆ. ಕೆಲವರಿಗೆ ಇಬ್ಬನಿ, ತಣ್ಣೀರು ಸ್ನಾನ, ತಂಪು ಪಾನೀಯ, ಸಿಗರೇಟಿನ ಸೇವನೆ ಮೊದಲಾದವುಗಳಿಂದ ಅಲರ್ಜಿಯಾಗುವುದಾದರೆ ಅವುಗಳಿಂದ ದೂರವಿರಬೇಕು. ದಮ್ಮು ಉಲ್ಬಣವಾದಾಗ ಯಾವ ಔಷಧಗಳನ್ನು ಸೇವಿಸಬೇಕೆಂದು ವೈದ್ಯರಲ್ಲಿ ಕೇಳಿ ತೆಗೆದುಕೊಳ್ಳಬೇಕು. ಅತಿವೇಗದಲ್ಲಿ ಬೆಳೆಯುತ್ತಿರುವ ಆಧುನಿಕ ವಿಜ್ಞಾನದಲ್ಲಿ ಇಂದು ಅಲರ್ಜಿ, ಅಸ್ತಮಾ ಸಮಸ್ಯೆಗಳಿಗೆ ಅತ್ಯುತ್ತಮ ಔಷಧಗಳು ಲಭ್ಯವಿದೆ.
ಒಣ ಚರ್ಮ : ವ್ಯಾಸಲೀನ್ ಅಥವಾ ಕೊಬ್ಬರಿ ಎಣ್ಣೆಯನ್ನು ಸೂಕ್ತವಾಗಿ ಬಳಸಿಕೊಳ್ಳಬಹುದು.
ಕಫ – ನ್ಯೂಮೋನಿಯಾ : ಸಾಧಾರಣವಾಗಿ ಕೂಡಾ ಶೀತ ಕೆಮ್ಮು ಒಮ್ಮೊಮ್ಮೆ ತೀವ್ರ ಕಫ – ನ್ಯೂಮೋನಿಯಾಕ್ಕೆ ತಿರುಗಬಹುದು. ಅಂತಹ ಸಂದರ್ಭದಲ್ಲಿ ತಡಮಾಡದೆ ವೈದ್ಯರನ್ನು ಕಂಡು ಸೂಕ್ತ ಮಾಹಿತಿ, ಮದ್ದುಗಳನ್ನು ಪಡೆಯಬೇಕು.
ಸೈನಸ್ ಸಮಸ್ಯೆ : ಮೂಗು ಕಟ್ಟಿ ತಲೆ ನೋವು, ತಲೆಭಾರ, ಜ್ವರ ತೋರುವುದು ಸೈನಸ್ ಸಮಸ್ಯೆಯ ಲಕ್ಷಣಗಳು. ಜ್ವರ ಅಲ್ಪ ಪ್ರಮಾಣದ್ದಾಗಿದ್ದು, 3 ದಿನದ ಒಳಗೆ ಇದು ಕಡಿಮೆಯಾಗುತ್ತಲಿದ್ದರೆ ಬಿಸಿ ನೀರಿನ ಹಬೆಯನ್ನು ಸೇವಿಸುವುದು, ಬೆಚ್ಚನೆಯ ನೀರು ಕುಡಿಯುವುದು, ಜ್ವರದ ಮದ್ದು ಸೇವಿಸುವುದು ಹೀಗೆ ಮೊದಲಾದ ಮನೆ ಔಷಧಿಗಳಿಂದ ನಿಯಂತ್ರಣ ಮಾಡಬಹುದು. ಏಕೆಂದರೆ ಹೆಚ್ಚಾಗಿ ಇದು ವೈರಾಣುಗಳಿಂದ ಉಂಟಾಗುವ ಸಮಸ್ಯೆ. ಆದರೆ ಪದೇ ಪದೇ ಇಂತಹ ಸಮಸ್ಯೆಗಳು ಕಂಡುಬರುವುದು, ತೀವ್ರ ಜ್ವರ (102 ಡಿಗ್ರಿಗಿಂತ ಜಾಸ್ತಿ), ಮೂರು ದಿನಕ್ಕೂ ಬಿಡದ ಜ್ವರ ಇದ್ದರೆ ಕೂಡಲೇ ವೈದ್ಯರಲ್ಲಿ ತಪಾಸಣೆ ಮಾಡುವುದು ಉತ್ತಮ.
ಚಳಿಗಾಲದಲ್ಲಿ ಸಹಜವಾಗಿ ರಕ್ತನಾಳಗಳು ಸಂಕುಚಿತಗೊoಡಾಗ ಈಗಾಗಲೇ ಕೊಬ್ಬಿನ ಅಂಶ ತುಂಬಿಕೊoಡಿರುವ ರಕ್ತನಾಳಗಳಲ್ಲಿ ರಕ್ತ ಸಂಚಾರ ಕಡಿಮೆಯಾಗಿ ಅಥವಾ ಸ್ಥಗಿತಗೊಂಡು ಎದೆನೋವು, ಹೃದಯಾಘಾತಗಳಾಗುವ ಸಂಭವ ಹೆಚ್ಚು. ಬೀಡಿ – ಸಿಗರೇಟ್ ಬಿಡುವುದಕ್ಕೆ, ಅತಿ ಮದ್ಯಪಾನ ಬಿಡುವುದಕ್ಕೆ, ಮಾದಕ ವಸ್ತುಗಳಿಂದ ಮುಕ್ತರಾಗುವುದಕ್ಕೆ, ರಕ್ತದೊತ್ತಡ, ಮಧುಮೇಹ, ಹೆಚ್ಚಿದ ಕೊಬ್ಬಿನಾಂಶ – ಈ ಮೂರು ಅಪಾಯಗಳಿಗೆ ಸೂಕ್ತ ಔಷಧ, ಅದಕ್ಕೆ ಸರಿಯಾದ ಜೀವನಶೈಲಿಯನ್ನು ರೂಪಿಸಿಕೊಳ್ಳುವುದಕ್ಕೆ ಚಳಿಗಾಲಕ್ಕಿಂತ ಸೂಕ್ತ ಸಮಯ ಬೇರೊಂದಿಲ್ಲ.
ಮರೆಯದಿರಿ. ಸೂರ್ಯನ ಕಿರಣಗಳು ದೂರವಾದಾಗ ನಮ್ಮ ದೇಹದಲ್ಲಿ ಡಿ – ಜೀವಸತ್ವದ ಕೊರತೆಯಾಗಬಹುದು. ಅಷ್ಟೇ ಅಲ್ಲ, ರುಚಿ ಶುಚಿಯಾದ ಕಾಯಿಪಲ್ಲೆಗಳನ್ನು ಸೇವಿಸದೇ ಇದ್ದರೆ ಇತರ ಜೀವಸತ್ವಗಳ, ಖನಿಜಾಂಶಗಳ ಕೊರತೆಯಾಗಬಹುದು. ಹಾಗಾಗದಿರುವಂತೆ ಜಾಗ್ರತೆ ವಹಿಸೋಣ. ದೈಹಿಕ ಶ್ರಮ, ಮಾನಸಿಕ ವಿಶ್ರಾಂತಿ ಎಂದಿಗೂ ಇರಲಿ. ನಮ್ಮ ಆರೋಗ್ಯಕ್ಕೆ ನಾವೇ ಹೊಣೆಗಾರರಲ್ಲವೇ?

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates